ಆ್ಯಪ್ನಗರ

ಎರೆ ಮಣ್ಣಿನಲ್ಲಿ ಸುಭದ್ರ ಅಡಿಪಾಯ

ಕಟ್ಟಡ ನಿರ್ಮಾಣದ ಮೊದಲ ಹೆಜ್ಜೆಯೆಂದರೆ ನಿವೇಶನ ಖರೀದಿ. ಆದರೆ ಕೆಲವರು ಅನಿವಾರ್ಯ ಪರಿಸ್ಥಿತಿಯಲ್ಲಿ ಎರೆ ಮಣ್ಣು ಅಂದರೆ ಜೇಡಿ ಮಣ್ಣಿನಲ್ಲಿರುವ ನಿವೇಶನ ಕೊಳ್ಳಬೇಕಾಗುತ್ತದೆ.

Vijaya Karnataka Web 6 Apr 2019, 4:24 pm
ಎರೆ ಮಣ್ಣಿನಲ್ಲಿರುವ ನಿವೇಶನ (ಜೇಡಿ ಮಣ್ಣು) ಖರೀದಿಸಿ ಕಟ್ಟಡ ನಿರ್ಮಿಸುವಾಗ ಕೆಲವೊಂದು ಎಚ್ಚರ ವಹಿಸಬೇಕು. ಈ ಕುರಿತು ಸ್ಟ್ರಕ್ಚರಲ್‌ ಎಂಜಿನಿಯರ್‌ ಡಾ. ಜಿ. ಆರ್‌. ಮಂಜುನಾಥ ಇಲ್ಲಿ ವಿವರ ನೀಡಿದ್ದಾರೆ.
Vijaya Karnataka Web home


ಕಟ್ಟಡ ನಿರ್ಮಾಣದ ಮೊದಲ ಹೆಜ್ಜೆಯೆಂದರೆ ನಿವೇಶನ ಖರೀದಿ. ಆದರೆ ಕೆಲವರು ಅನಿವಾರ್ಯ ಪರಿಸ್ಥಿತಿಯಲ್ಲಿ ಎರೆ ಮಣ್ಣು ಅಂದರೆ ಜೇಡಿ ಮಣ್ಣಿನಲ್ಲಿರುವ ನಿವೇಶನ ಕೊಳ್ಳಬೇಕಾಗುತ್ತದೆ. ಬೇರೆ ವಿಧದ ಮಣ್ಣಿಗೆ ಹೋಲಿಸಿದರೆ ಎರೆ ಮಣ್ಣಿನಲ್ಲಿ ದುಪ್ಪಟ್ಟು ಅಡಿಪಾಯ ಹಾಕಿ ದುಬಾರಿ ವೆಚ್ಚ ಮಾಡಬೇಕಾಗುತ್ತದೆ. ಇದಕ್ಕೆ ಪರಿಹಾರವಾಗಿ ಈಗ ಬಂದಿದೆ ಮಣ್ಣು ಬದಲಾವಣೆ ಕ್ರಮ.

ಅಡಿಪಾಯಕ್ಕೆ ಆದ್ಯತೆ
ಎರೆ ಮಣ್ಣು ಕೃಷಿಗೆ ವರದಾನವೆಂಬುದೇನೋ ನಿಜ. ಆದರೆ ಇಲ್ಲಿ ಸರಿಯಾದ ರೀತಿಯಲ್ಲಿ ಕಟ್ಟಡ ನಿರ್ಮಿಸದೆ ಇದ್ದರೆ ಕೆಲವೇ ದಿನಗಳಲ್ಲಿ ಗೋಡೆಗಳಲ್ಲಿ ಬಿರುಕು ಕಾಣಿಸಿಕೊಳ್ಳುವ ಅವಕಾಶ ಹೆಚ್ಚಿರುತ್ತದೆ. ಆದ್ದರಿಂದ ಎರೆ ಮಣ್ಣಿನಲ್ಲಿ ಕಟ್ಟಡ ನಿರ್ಮಿಸುವಾಗ ಅಡಿಪಾಯಕ್ಕೆ ಹೆಚ್ಚಿನ ಆದ್ಯತೆ ನೀಡಬೇಕಾಗುತ್ತದೆ.

ಸಾಮಾನ್ಯವಾಗಿ ಇಂತಹ ಮಣ್ಣಿನಲ್ಲಿ ಸಾಂಪ್ರದಾಯಿಕವಾಗಿ ಅಡಿಪಾಯಕ್ಕೆ ಗುರುತು ಹಾಕಿದ ನಂತರ ಮಣ್ಣು ಅಗೆತ ಆರಂಭವಾಗುತ್ತದೆ. ಗಟ್ಟಿ ಪದರ ದೊರೆಯುವ ತನಕ ಅಂದರೆ ಸುಮಾರು 6-7 ಅಡಿ ಅಗೆಯಬೇಕಾಗುತ್ತದೆ. ಆದರೆ ಇತರ ನಮೂನೆ ಮಣ್ಣಿನಲ್ಲಿ ಇದು ಮೂರರಿಂದ ಮೂರೂವರೆ ಅಡಿಗಳಾಗಿರುತ್ತದೆ.

ಮುಂದಿನ ಪ್ರಕ್ರಿಯೆ
ಅಗೆತ ಪೂರ್ಣಗೊಂಡ ನಂತರ ಕಬ್ಬಿಣದ ಸರಳುಗಳನ್ನು ಬಳಸಿ ಸುಮಾರು ಐದು ಇಂಚು ದಪ್ಪದ ಹಾಸು ಹಾಕಲಾಗುತ್ತದೆ. ಬಳಿಕ ದಪ್ಪನಾದ ಆಕಾರವಿಲ್ಲದ ಕಲ್ಲುಗಳು, ಸಿಮೆಂಟ್‌ ಹಾಗೂ ಮರಳನ್ನು ಲೆಕ್ಕಾಚಾರವಿಲ್ಲದೆ ಸುರಿದು ಕಲ್ಲಿನ ಅಡಿಪಾಯ ಆರಂಭಿಸಿ ಬಿಡಲಾಗುತ್ತದೆ. ಸುಮಾರು ಎರಡೂವರೆ ಮೂರು ಅಡಿಗಳಾದ ಬಳಿಕ ಮತ್ತೊಂದು ಸುತ್ತು ಕಾಂಕ್ರೀಟ್‌ ಹಾಸು ಹಾಕುವ ಪದ್ದತಿ ಇದೆ.

ಇದಾದ ಬಳಿಕ ಸೈಜುಗಲ್ಲುಗಳನ್ನು ಹಾಕಿ ಅಡಿಪಾಯ ಕಾರ್ಯ ಮುಂದುವರಿಯುತ್ತದೆ. ಈ ಪ್ರಕ್ರಿಯೆ ಭೂ ಮಟ್ಟದ ಒಂದು-ಒಂದೂವರೆ ಅಡಿ ಬರುವಲ್ಲಿಗೆ ಆರು ಅಥವಾ ಏಳು ಕೋರ್ಸ್‌ಗಳಾಗಿರುತ್ತವೆ. ಕೊನೆಯ ಹಂತವಾಗಿ ಪ್ಲಿಂತ್‌ ಕಾಂಕ್ರೀಟ್‌ ಕಬ್ಬಿಣ ಉಪಯೋಗಿಸಿ ಮಾಡಲಾಗುತ್ತದೆ. ಆ ವೇಳೆಗಾಗಲೇ ಕೂಡಿಟ್ಟ ಹಣದಲ್ಲಿ ಬಹುತೇಕ ಖಾಲಿಯಾಗಿ ಯಾಕಾದರೂ ಇಲ್ಲಿ ನಿವೇಶನ ಖರೀದಿಸಿದ್ದೇವೆಯೋ ಎನ್ನುವ ಹತಾಶೆ ಮಾಲೀಕರಲ್ಲಿ ಮೂಡಿರುತ್ತದೆ.

ಕಾಂಕ್ರೀಟ್‌ ಕಂಬ ಹಾಗೂ ತೊಲೆಯನ್ನು ಬಳಸಿ ಕಟ್ಟಡದ ಅಡಿಪಾಯ ನಿರ್ಮಿಸುವುದು ಕಾಲಂ-ಬೀಮ್‌ ವೈಶಿಷ್ಟ್ಯ. ಇದರಿಂದ ಕಟ್ಟಡ ಸುಭದ್ರವಾಗುತ್ತದೆ ಎಂಬುದರಲ್ಲಿ ಸಂದೇಹವಿಲ್ಲ. ಆದರೆ ಇದು ಕೂಡ ದುಬಾರಿ ವಿಧಾನ ಆಗಿರುತ್ತದೆ.

ಅಗ್ಗದ ವಿಧಾನ
ಇದಕ್ಕೆ ಪರ್ಯಾಯವಾಗಿ ಈಗ ಬಂದಿರುವುದೇ ಮಣ್ಣು ಬದಲಾವಣೆ ಕ್ರಮ. ಈ ವಿಧಾನದಲ್ಲಿ ಎರೆ ಮಣ್ಣಿನ ನಿವೇಶನದಲ್ಲಿ ಗುರುತು ಮಾಡಿದ ನಂತರ ಗೋಡೆಗಳು ಹೊರುವ ಭಾರದ ಲೆಕ್ಕಾಚಾರದ ಮೇಲೆ ಅಡಿಪಾಯದ ಆಳವನ್ನು ನಿರ್ಧರಿಸಲಾಗುತ್ತದೆ. ಈ ನಿರ್ಧರಿತ ಆಳ ತಲುಪಿದ ಬಳಿಕ ಒಟ್ಟು ಆಳದ ಶೇ. 40ರಿಂದು 50ರಷ್ಟು ಭಾಗವನ್ನು ಗುಂಡು ಕಲ್ಲು (ಗ್ರಾವೆಲ್‌) ಮಿಶ್ರಿತ ಮಣ್ಣು ಅಥವಾ ಕಂಕರ್‌ ಮರಳು ಮಣ್ಣಿನಿಂದ ಪದರ ಪದರವಾಗಿ ತುಂಬಲಾಗುತ್ತದೆ.

ಹೀಗೆ ತುಂಬುವಾಗ ಮಣ್ಣಿನ ಲೆಕ್ಕಾಚಾರವನ್ನು ಅರಿತು ನೀರನ್ನು ಮಿಶ್ರ ಮಾಡಿ ತಜ್ಞರು ಹೇಳಿದ ಪ್ರಕಾರ ಧಮ್ಮಿಸ್ಸಿನಿಂದ ಒತ್ತಲಾಗುವುದು. ಈ ಕಾರ್ಯ ಮುಗಗಿದ ನಂತರ ದಪ್ಪ ಜೆಲ್ಲಿ ಕಾಂಕ್ರೀಟ್‌ ಹಾಸನ್ನು ಹಾಕಲಾಗುವುದು. ನಂತರ ಸೈಜುಗಲ್ಲಿನ ಕಟ್ಟಡವನ್ನು ಇತರೆ ಮಣ್ಣಿನಲ್ಲಿ ನಿರ್ಮಿಸುವಂತೆಯೇ ನಿರ್ಮಾಣ ಮಾಡಲಾಗುತ್ತದೆ. ಇದರಿಂದ ಗೋಡೆ ಕುಸಿಯುವುದು ಅಥವಾ ಬಿರುಕು ಬಿಡುವ ಸಮಸ್ಯೆ ಎದುರಾಗುವುದಿಲ್ಲ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ