ಆ್ಯಪ್ನಗರ

ಶ್ರೇಯೋಭಿವೃದ್ಧಿಗೆ ವಾಸ್ತು ನಿಯಮ

ಪಂಚಭೂತಗಳಾದ ಆಕಾಶ, ಗಾಳಿ, ನೀರು, ಅಗ್ನಿ ಮತ್ತು ನೆಲ ಮನುಷ್ಯನ ಮನಸ್ಸು ಮತ್ತು ದೇಹವನ್ನು ನಿಯಂತ್ರಿಸಿ ಆರೋಗ್ಯ, ಸಂಪತ್ತು ವೃದ್ಧಿಸುವಂತೆ ಮಾಡುತ್ತದೆ. ಅದಕ್ಕಾಗಿ ವಾಸ್ತು ನಿಯಮಗಳನ್ನು ಸರಿಯಾಗಿ ಪಾಲಿಸಬೇಕಾಗುತ್ತದೆ. ಈ ನಿಟ್ಟಿನಲ್ಲಿ ಕೆಲವೊಂದು ನಿಯಮಗಳ ಕುರಿತು ಇಲ್ಲಿದೆ ವಿವರ.

Vijaya Karnataka Web 1 Apr 2017, 4:00 am

ಆನಂದ ಸಾಗರ

ಪಂಚಭೂತಗಳಾದ ಆಕಾಶ, ಗಾಳಿ, ನೀರು, ಅಗ್ನಿ ಮತ್ತು ನೆಲ ಮನುಷ್ಯನ ಮನಸ್ಸು ಮತ್ತು ದೇಹವನ್ನು ನಿಯಂತ್ರಿಸಿ ಆರೋಗ್ಯ, ಸಂಪತ್ತು ವೃದ್ಧಿಸುವಂತೆ ಮಾಡುತ್ತದೆ. ಅದಕ್ಕಾಗಿ ವಾಸ್ತು ನಿಯಮಗಳನ್ನು ಸರಿಯಾಗಿ ಪಾಲಿಸಬೇಕಾಗುತ್ತದೆ. ಈ ನಿಟ್ಟಿನಲ್ಲಿ ಕೆಲವೊಂದು ನಿಯಮಗಳ ಕುರಿತು ಇಲ್ಲಿದೆ ವಿವರ.

ದೇಹ ಮತ್ತು ಮನಸ್ಸನ್ನು ನಿಯಂತ್ರಿಸುವುದು ಭೂಮಿ, ಆಕಾಶ, ಗಾಳಿ, ನೀರು ಮತ್ತು ಅಗ್ನಿ. ಇವುಗಳು ಸರಿಯಾಗಿ ಮನೆಯಲ್ಲಿರಬೇಕಾದರೆ ಅದಕ್ಕೆ ಸೂಕ್ತವಾದ ವಾಸ್ತು ನಿಯಮಗಳನ್ನು ಪರಿಪಾಲಿಸಲೇಬೇಕು. ಇದರಿಂದ ಜೀವನದಲ್ಲಿ ಸಾಮರಸ್ಯ ಸಾಧಿಸಲು ಸಾಧ್ಯವಾಗುತ್ತದೆ. ಹಾಗಾದರೆ ಹೊಸ ಮನೆ ಖರೀದಿ ಅಥವಾ ನವೀಕರಣಗೊಳಿಸಿದ ಬಳಿಕ ಇದನ್ನು ಯಾವ ರೀತಿ ಸರಿಯಾದ ರೀತಿಯಲ್ಲಿ ಅಳವಡಿಸಿಕೊಳ್ಳಬೇಕು ?

ಅಗಾಧ ಜ್ಞಾನ: ವಾಸ್ತು ಶಾಸ್ತ್ರವು ಬಹುದೊಡ್ಡ ಜ್ಞಾನ ಭಂಡಾರ. ಮನುಷ್ಯನ ಸ್ವಯಂ ಪ್ರಯತ್ನದಿಂದ ಯಾವ ರೀತಿ ಮನೆಯಲ್ಲಿ ನೆಮ್ಮದಿ, ಶಾಂತಿ, ಆರೋಗ್ಯ, ಸಂಪತ್ತು ಮನೆ ಮಾಡುವಂತೆ ಮಾಡಿಕೊಳ್ಳಬಹುದು ಎಂಬುದನ್ನು ಇದರಲ್ಲಿ ಇಂಚಿಂಚಾಗಿ ವಿವರಿಸಲಾಗಿದೆ. ಪ್ರಕೃತಿಯ ಜೊತೆಗಿನ ಹೊಂದಾಣಿಕೆಯ ಮೂಲಕವೇ ಯಾವುದೇ ಶ್ರೇಯಸ್ಸು, ಅಭಿವೃದ್ಧಿಯನ್ನು ಕಾಣಲು ಸಾಧ್ಯವಾಗುತ್ತದೆ. ವಾಸ್ತು ನಿಯಮಗಳು ಸರಳವಾಗಿದ್ದರೂ ಅತ್ಯಂತ ಪ್ರಬಲವಾಗಿವೆ. ಹೀಗಾಗಿ ಈಗಾಗಲೇ ಮನೆ ಮಾಡಿದ್ದರೂ ಅದನ್ನು ಧ್ವಂಸಗೊಳಿಸದೆ ವಾಸ್ತು ನಿಯಮಗಳನ್ನು ಅಳವಡಿಸಿಕೊಂಡರೆ, ಅದರಲ್ಲಿ ಮತ್ತೆ ನೆಮ್ಮದಿ ಮನೆ ಮಾಡುವಂತೆ ಮಾಡಬಹುದು.

ಖರೀದಿಗೆ ಮುನ್ನ: ಮನೆಯೊಂದನ್ನು ಖರೀದಿಸಲು ನಿರ್ಧರಿಸಿದರೆ, ಅಂತಿಮ ತೀರ್ಮಾನ ತೆಗೆದುಕೊಳ್ಳುವ ಮೊದಲು ವಾಸ್ತುವನ್ನು ಪರೀಕ್ಷಿಸಬೇಕು. ಅದರಲ್ಲೂ ಮುಖ್ಯ ದ್ವಾರ ಯಾವ ದಿಕ್ಕಿನಲ್ಲಿದೆ ಎಂಬುದಕ್ಕೆ ಮೊದಲ ಪ್ರಾಶಸ್ತ್ಯ ನೀಡಬೇಕು. ಯಾವಾಗಲೂ ಪೂರ್ವ ಮತ್ತು ಉತ್ತರ ದಿಕ್ಕಿನಲ್ಲಿ ಪ್ರವೇಶ ದ್ವಾರವಿದ್ದರೆ ಶುಭಕರ. ಪೂರ್ವ ದಿಕ್ಕು ಯಶಸ್ಸು, ಸಂಪತ್ತು ಮತ್ತು ಲಾಭವನ್ನು ತಂದುಕೊಡುತ್ತದೆ ಎಂದು ಹೇಳಲಾಗುತ್ತದೆ. ಆದರೂ ಪೂರ್ವ ದಿಕ್ಕಿನಿಂದಾಗಿ ಅಗ್ನಿ ಅನಾಹುತ, ಅಪಘಾತ ಮತ್ತು ಅನಿರೀಕ್ಷಿತ ನಷ್ಟಗಳನ್ನು ಮಾಲೀಕರು ಎದುರಿಸುವಂತಾಗುತ್ತದೆ ಎಂದು ಹೇಳುತ್ತಾರೆ 25 ವರ್ಷಗಳಿಂದ 12,000ಕ್ಕೂ ಹೆಚ್ಚು ವಾಸ್ತು ಶಾಸ್ತ್ರಕ್ಕೆ ಸಂಬಂಧಪಟ್ಟ ಪ್ರಕರಣಗಳನ್ನು ಅಧ್ಯಯನ ಮಾಡಿದ ಮಹಾವಾಸ್ತು ಸಂಸ್ಥಾಪಕ ಡಾ. ಕುಶದೀಪ್‌ ಬನ್ಸಾಲ್‌. ದಕ್ಷಿಣ ಅಥವಾ ಆಗ್ನೇಯ ತುಂಬಾ ಶ್ರೇಯಸ್ಸನ್ನು ತಂದುಕೊಟ್ಟರೂ, ದಕ್ಷಿಣ ದಿಕ್ಕಿ ಕುಟುಂಬದಲ್ಲಿರುವ ಮಕ್ಕಳ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ. ಆದ್ದರಿಂದ ಸಾಮಾನ್ಯವಾಗಿ ಈಶಾನ್ಯ, ದಕ್ಷಿಣ ಮತ್ತು ಪಶ್ಚಿಮ ದಿಕ್ಕಿನಲ್ಲಿ ಪ್ರವೇಶ ದ್ವಾರವಿರುವುದು ನಿವಾಸಿಗಳಿಗೆ ಉತ್ತಮ ಎಂದು ಬನ್ಸಾಲ್‌ ಸಲಹೆ ನೀಡುತ್ತಾರೆ.

ಪ್ರಮುಖ ಕೊಠಡಿ: ಶೌಚಾಲಯವು ಯಾವಾಗಲೂ ಈಶಾನ್ಯ ದಿಕ್ಕಿನಲ್ಲಿ ಇರಲೇಬಾರದು. ಅಡುಗೆ ಮನೆ ಅಗ್ನಿ ಸೂಚಕವಾಗಿದ್ದರಿಂದ ಆಗ್ನೇಯ ದಿಕ್ಕಿನಲ್ಲಿರಬೇಕು. ನೀರಿನ ಸಂಪು ಇದ್ದರೆ ಅದು ಯಾವಾಗಲೂ ಉತ್ತರ, ಈಶಾನ್ಯ, ಪೂರ್ವ ಮತ್ತು ಪಶ್ಚಿಮ ಭಾಗದಲ್ಲಿರಲಿ. ಬೆಡ್‌ ರೂಂಗೆ ದಕ್ಷಿಣ ಭಾಗ ಅತ್ಯುತ್ತಮ. ಆದರೂ ಹೊಸದಾಗಿ ಮದುವೆಯಾದ ನವದಂಪತಿಯಾಗಿದ್ದರೆ ಉತ್ತರ ಅಥವಾ ವಾಯುವ್ಯ ಭಾಗಕ್ಕೆ ಹೆಚ್ಚು ಗಮನ ನೀಡುವುದು ಉತ್ತಮ. ಮಕ್ಕಳ ಕೊಠಡಿ ಪೂರ್ವ, ಈಶಾನ್ಯ, ಪಶ್ಚಿಮ ಅಥವಾ ನೈರುತ್ಯ ಭಾಗದಲ್ಲಿರುವುದು ಉತ್ತಮ ಎಂದು ಬನ್ಸಾಲ್‌ ವಿವರಿಸುತ್ತಾರೆ.

ಕಚೇರಿಗೆ ವಾಸ್ತು: ಕಚೇರಿಯಾದರೆ ಪ್ರವೇಶ ದ್ವಾರವು ಉತ್ತರ, ಈಶಾನ್ಯ ಅಥವಾ ವಾಯುವ್ಯ ದಿಕ್ಕಿನಲ್ಲಿರಬೇಕು. ಇದು ಅದೃಷ್ಟ ಮತ್ತು ಪಾಸಿಟಿವ್‌ ಎನರ್ಜಿಯನ್ನು ತರುತ್ತದೆ. ಮುಖ್ಯ ದ್ವಾರವು ಯಾವಾಗಲೂ ಉತ್ತರ ಅಥವಾ ಪೂರ್ವ ದಿಕ್ಕಿನಲ್ಲಿರಬೇಕು. ರಿಸೆಪ್ಶನ್‌ ಕೊಠಡಿ ಪೂರ್ವ ಅಥವಾ ಈಶಾನ್ಯ ಭಾಗದಲ್ಲಿರಬೇಕು. ಕಚೇರಿಯಲ್ಲಿ ಶೌಚಾಲಯವು ದಕ್ಷಿಣ ಅಥವಾ ನೈರುತ್ಯ ದಿಕ್ಕಿನಲ್ಲಿದ್ದು, ಶೌಚಾಲಯ ಸೀಟ್‌ ದಕ್ಷಿಣದಿಂದ ಉತ್ತರ ಅಥವಾ ಪಶ್ಚಿಮಮದಿಂದ ಪೂರ್ವದ ದಿಕ್ಕಿನಲ್ಲಿರುವಂತೆ ನೋಡಿಕೊಳ್ಳಬೇಕು. ಆಹಾರ ವಸ್ತುಗಳನ್ನಿಡುವ ಕೊಠಡಿ ಕಟ್ಟಡದ ಆಗ್ನೇಯ ಮೂಲೆ ಅಥವಾ ವಲಯದಲ್ಲಿರಬೇಕು.

ಸುಲಭ ಪರಿಹಾರ: ಇದಲ್ಲದೆ ಕೆಲವೊಂದು ಸರಳ ಕ್ರಮಗಳಿಂದ ಕೂಡ ಮನೆಯ ವಾಸ್ತು ನ್ಯೂನತೆಯನ್ನು ಸರಿಪಡಿಸಲು ಸಾಧ್ಯವಿದೆ ಎಂದು ಬನ್ಸಾಲ್‌ ಹೇಳುತ್ತಾರೆ. ಪ್ರಮುಖವಾಗಿ ಮುಖ್ಯ ದ್ವಾರದ ಬಣ್ಣವನ್ನು ಬದಲಾಯಿಸುವುದು, ನಿರ್ದಿಷ್ಟ ಭಾಗದಲ್ಲಿ ಪಂಚಭೂತಗಳ ಸಮತೋಲನವನ್ನು ಕಾಯ್ದುಕೊಳ್ಳುವ ರೀತಿಯ ಬಣ್ಣಗಳ ಬಳಕೆ, ಒಳ ನುಗ್ಗುವ ಭಾಗದಲ್ಲಿರುವ ಬೆಡ್‌ ತೆಗೆದು ಬೇರೆಡೆಗೆ ಸ್ಥಳಾಂತರಿಸುವುದು, ಶೌಚಾಲಯದ ದಿಕ್ಕನ್ನು ಬದಲಾಯಿಸುವುದು ಮೊದಲಾದ ಸರಳ ಕ್ರಮಗಳಿಂದ ಮನೆಯಲ್ಲಿ ನೆಮ್ಮದಿ, ಶಾಂತಿ, ಸಾಮರಸ್ಯ ನೆಲೆಸುವಂತೆ ಮಾಡಬಹುದು. ಮನೆಯಿರಲಿ, ಕಚೇರಿಯಿರಲಿ ಉತ್ತರ ಭಾಗದಲ್ಲಿ ಹಸಿರು ದೃಶ್ಯಗಳ ಪೇಟಿಂಗ್‌ ತೂಗು ಹಾಕಿದರೆ ಪ್ರಗತಿ ಮತ್ತು ಹೊಸ ಅವಕಾಶಗಳು ಕೈಬೀಸಿ ಕರೆಯುತ್ತವೆ. ಒಟ್ಟಿನಲ್ಲಿ ಮನೆಯ ಈಶಾನ್ಯ ಭಾಗವು ಒಟ್ಟಾರೆ ನಿವಾಸಿಗಳ ಜೀವನದ ಬಗ್ಗೆ ನಿರ್ಣಾಯಕ ಚಿತ್ರಣ ನೀಡುತ್ತದೆ. ಜೀವನದಲ್ಲಿ ಸಾಮರಸ್ಯ ಮತ್ತು ನೆಮ್ಮದಿಯೇ ಪ್ರಮುಖವಾದುದು. ಆದ್ದರಿಂದ ವಾಸ್ತು ನಿಯಮಗಳಲ್ಲಿ ಆದ ನ್ಯೂನತೆಗಳನ್ನು ಸರಿಪಡಿಸಿಕೊಂಡರೆ ಸುಖ ಜೀವನ ನಿಮ್ಮದಾಗುತ್ತದೆ ಎಂದು ಹೇಳುತ್ತಾರೆ ಬನ್ಸಾಲ್‌.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ