ಆ್ಯಪ್ನಗರ

ಕುತೂಹಲ ಕೆರಳಿಸುವ ಕೊಲೋನ್‌

ಜರ್ಮನಿಯ ಕೊಲೋನ್‌ 2000 ವರ್ಷದಷ್ಟು ಹಳೆಯ ಮತ್ತು ಜರ್ಮನಿಯ ಸಾಂಸ್ಕೃತಿಕ ಮಹತ್ವದ ನಗರವೂ ಹೌದು.

Vijaya Karnataka 11 Aug 2019, 5:00 am
* ಎಸ್‌.ಪಿ.ವಿಜಯಲಕ್ಷ್ಮಿ
Vijaya Karnataka Web cologne cathedral attractions
ಕುತೂಹಲ ಕೆರಳಿಸುವ ಕೊಲೋನ್‌


ಜರ್ಮನಿ ಪ್ರವಾಸಿಗರ ಸ್ವರ್ಗ. ಇಲ್ಲಿನ ರೈನ್‌ ನದಿಯ ಸುತ್ತಮುತ್ತಲಿನ ಪ್ರದೇಶಗಳು ಸುಂದರವಾಗಿದ್ದು, ಯಥೇಚ್ಛವಾಗಿ ನೋಡುಗರನ್ನು ಸೆಳೆಯುತ್ತದೆ. ಅವುಗಳಲ್ಲಿ ಕೊಲೋನ್‌ ಕೂಡ ಮುಖ್ಯವಾದದ್ದು. ಇದು ಪ್ರಾಕೃತಿಕ ಹಾಗೂ ಕೃತಕ ಆಕರ್ಷಣೆಗಳೊಂದಿಗೆ ಬೆರಗು ಮೂಡಿಸುತ್ತದೆ.

ಜರ್ಮನಿಯ ಕೊಲೋನ್‌ 2000 ವರ್ಷದಷ್ಟು ಹಳೆಯ ಮತ್ತು ಜರ್ಮನಿಯ ಸಾಂಸ್ಕೃತಿಕ ಮಹತ್ವದ ನಗರವೂ ಹೌದು. ರೈನ್‌ ನದಿ ದಡದಲ್ಲಿ ಅರಳಿರುವ ಅನೇಕ ಮಹಾನಗರಗಳಲ್ಲಿ ಇದೇ ದೊಡ್ಡದು ಎನ್ನುತ್ತಾರೆ.

ಆಕರ್ಷಣೆ

ಇಲ್ಲಿ ಹಲವಾರು ಮ್ಯೂಸಿಯಂಗಳು, ಪಿಕಾಸ್ಸೊ ವರ್ಣಚಿತ್ರಗಳ ಗ್ಯಾಲರಿಗಳು, ಯೂನಿವರ್ಸಿಟಿಗಳಿವೆ. ಸಿಟಿ ಹಾಲ್‌, ಸಿಟಿ ಗೇಟ್‌, ಪುರಾತನ ಬಿಲ್ಡಿಂಗ್‌ಗಳು ನೋಡಬಹುದಾದ ತಾಣಗಳು ಎಂದೆನಿಸಿವೆ. ರೈನ್‌ ನದಿಯ ಸೇತುವೆಗಳು, ನದಿಯ ಸುತ್ತಮುತ್ತಲಿನ ಪ್ರದೇಶಗಳ ಸೌಂದರ‍್ಯ ಅದ್ಭುತವಾಗಿವೆ. 'ಕೊಲೋನ್‌ ಕಾರ್ನಿವಲ್‌' ತುಂಬಾ ಪ್ರಸಿದ್ಧವಾದ ಜಾತ್ರೆ. ಇಲ್ಲಿನ ಮುಖ್ಯ ಆಕರ್ಷಣೆ ಕೊಲೋನ್‌ ಕೆಥೆಡ್ರಲ್‌.

ಕೊಲೋನ್‌ ಕೆಥೆಡ್ರಲ್‌ ಚರ್ಚ್‌ ಐನೂರು ವರ್ಷ ಹಳೆಯದು. ಭವ್ಯವಾಗಿ ಮುಗಿಲೆತ್ತರ ನಿಂತಿರುವ ಇದರ ಎತ್ತರ ಸುಮಾರು 515ಅಡಿ. ಯೂರೋಪಿನ ಅವಳಿ ಗೋಪುರದ ಕೆಥೆಡ್ರಲ್‌ನಲ್ಲಿ ಇದು ಮೂರನೆಯ ಎತ್ತರದ ಸ್ಥಾನದಲ್ಲಿದೆ. ಇದು ಬಹಳ ಕಲಾತ್ಮಕವಾಗಿದೆ. ಗಾಳಿ, ಮಳೆ, ಬಿಸಿಲುಗಳ ಧಾಳಿಗೆ, ಮಳೆಯಲ್ಲಿನ ಸಲ್ಯೂರಿಕ್‌ ಆಸಿಡ್‌ ಕಾರಣಕ್ಕೆ ಈ ಸ್ಯಾಂಡ್‌ಸ್ಟೋನ್‌ ಕಟ್ಟಡದ ಹೊರ ಮೈ ಕಪ್ಪಾಗಿದ್ದರೂ, ಗೋಥಿಕ್‌ ಶೈಲಿಯ ವಿನ್ಯಾಸದ ಇದರ ಅಂದ ಆ ಕಪ್ಪು ಬಣ್ಣವನ್ನೂ ಮೀರಿ ಆಕರ್ಷಕವಾಗಿದೆ. ಈ ನಿರ್ಮಾಣ ಆರಂಭವಾದದ್ದು 13ನೇ ಶತಮಾನದಲ್ಲಾದರೂ, ಸಂಪೂರ್ಣವಾಗಿದ್ದು 1880ರಲ್ಲಿ. 8000ಚ.ಮೀ.ನಲ್ಲಿ ಹರಡಿ ನಗರದ ಯಾವುದೇ ಛಾವಣಿ, ಚಿಮಣಿ, ಗೋಪುರಗಳಾಚೆಗೂ ಮೀರಿದ ಎತ್ತರದಲ್ಲಿ ನಿಂತು, ನಗರದ ಯಾವುದೇ ಭಾಗದಿಂದ ನೋಡಿದರೂ ಕಾಣಿಸುವಂಥ ಧಿಶ್ರೀಮಂತಿಕೆಯಲ್ಲಿ ನಿಂತಿರುವ ಈ ಚರ್ಚ್‌ ಜರ್ಮನಿಯ ಹೆಮ್ಮೆ.

ಚರ್ಚ್‌ನ ಹೊರಾವರಣ ವಿಶಿಷ್ಟ ವಿನ್ಯಾಸದ ಗೋಪುರಗಳು, ಹಂತಹಂತದ ರಚನೆಗಳ ನಡುವಣ ಜೋಡಣಾ ಶೈಲಿಗಳು, ಎಲ್ಲ ಕಡೆ ಅರಳಿ ನಿಂತ ಚಿತ್ರಗಳು, ಪ್ರಾಣಿ, ಪಕ್ಷಿಗಳು, ಸಂತರ ಮುದ್ದಾದ ವಿಗ್ರಹಗಳು, ಪ್ರಕೃತಿಯ ಚಿತ್ರಣಗಳಲ್ಲಿ ಸುಂದರವಾಗಿದ್ದರೆ ಒಳಗಣ ಹಾಲ್‌ಗಳೂ ಅಷ್ಟೇ ಭವ್ಯವಾಗಿ ಅಲಂಕೃತವಾಗಿವೆ. ವಿಶಾಲವಾದ ಒಳಾಂಗಣ, ಎತ್ತರದ ಗೋಳಾಕಾರದ ಛಾವಣಿ, ಕಂಬಗಳು, ವಿಗ್ರಹಗಳು, 11 ಪವಿತ್ರ ಬೆಲ್‌ಗಳು ಅಪೂರ್ವವಾಗಿವೆ. ಇವುಗಳಲ್ಲಿ ಬೆಲ್‌ ಆಫ್‌ ಸೈಂಟ್‌ ಪೀಟರ್‌ ಎನ್ನುವ ಬೆಲ್‌ 24000 ಕಿಲೋಗ್ರಾಂ ತೂಕವಿದ್ದು, ಅದರ ನಾಲಿಗೆಯೇ 600 ಕಿಲೋಗ್ರಾಂ ತೂಕವಿದ್ದು, ಇಂದೂ ತೂಗುವ ಸುಸ್ಥಿತಿಯಲ್ಲಿದೆ. ಇದು ವಿಶ್ವದಲ್ಲೇ ಎರಡನೆಯ ಅತಿ ದೊಡ್ಡ ಬೆಲ್‌. ಇನ್ನು ಒಳಗಡೆ ಸುಳಿಸುಳಿಯಾಗಿ ಏರುವ 553 ಸ್ಪೈರಲ್‌ ಮೆಟ್ಟಿಲುಗಳಿದ್ದು, ಈ ಮೂಲಕ ಪ್ರವಾಸಿಗರು ಕಟ್ಟಡದ 330ಅಡಿ ಮೇಲೇರಿ ಅಲ್ಲಿರುವ ಅಟ್ಟಣದಿಂದ ಕೊಲೋನ್‌ ನಗರದ ಸೌಂದರ್ಯ, ರೈನ್‌ ನದಿಯ ವಿಹಂಗಮ ದೃಶ್ಯ ನೋಡಬಹುದು. ಇಲ್ಲಿಯ ಮುಖ್ಯ ಆಲ್ಟರ್‌ ಒಂದರಲ್ಲಿ ಮೂವರು ಪ್ರಖ್ಯಾತ ಸಂತ ದೊರೆಗಳ ದೇಹಾವಶೇಷವನ್ನು ಸಂರಕ್ಷಿಸಿಟ್ಟಿರುವುದರಿಂದ ಇದು ಯಾತ್ರಾಸ್ಥಳವೂ ಹೌದು. ಹಿಂದೆ ಜರ್ಮನಿಯ ಯಾವುದೇ ದೊರೆ ಪದಗ್ರಹಣ ಸ್ವೀಕಾರದ ನಂತರ ಈ ಅವಶೇಷಗಳ ದರ್ಶನಕ್ಕೆ ಬರುತ್ತಿದ್ದರು. ತಮ್ಮ ರಾಜ್ಯಾಧಿಕಾರ ನಿರ್ವಿಘ್ನವಾಗಿ ನೆರವೇರಿ ದೀರ್ಘಕಾಲ ಉಳಿಯಲೆಂದು ಕಾಣಿಕೆಗಳರ್ಪಿಸಿ ಪ್ರಾರ್ಥಿಸಿಕೊಳ್ಳುತ್ತಿದ್ದರು. ಇಂದೂ ಈ ಕೆಥೆಡ್ರಲ್‌ ಕೆಥೋಲಿಕ್‌ ಕ್ರೈಸ್ತರ ಯಾತ್ರಾಸ್ಥಳವೇ ಹೌದು.

ಈ ಕೆಥೆಡ್ರಲ್‌ 2ನೇ ವಿಶ್ವಯುದ್ಧದಲ್ಲಿ 14 ಬಾರಿ ಬಾಂಬ್‌ ದಾಳಿಗೀಡಾಗಿ ಸಾಕಷ್ಟು ಹಾನಿಗೊಂಡಿತ್ತು. ಆದರೆ ಹಿಂದೆ ಹೇಳಿದಂತೆ ಜರ್ಮನ್ನರು ಅದನ್ನು ಹಂತಹಂತವಾಗಿ ಪುನರುತ್ಥಾನ ಮಾಡುತ್ತ ಸುಸ್ಥಿತಿಗೆ ತಂದೇಬಿಟ್ಟರು. ಒಳಗೆಲ್ಲಾ ವರ್ಣಮಯ ಸ್ಟೈನ್‌ ಗ್ಲಾಸ್‌ ಅಳವಡಿಸಿ ಮತ್ತಷ್ಟು ಆಕರ್ಷಕವಾಗಿ ಅಲಂಕರಿಸಿದರು. ಇತ್ತೀಚೆಗೆ ಈ ಪುರಾತನ ಭವ್ಯಕಟ್ಟಡಕ್ಕೆ ಕೆಲವು ಆತಂಕಕಾರಿ ಬೆದರಿಕೆ ಉಂಟಾಯ್ತು. ಸುತ್ತಮುತ್ತ ನಡೆದ ಗಗನಚುಂಬಿ ಕಟ್ಟಡಗಳ ಪ್ಲಾನ್‌. ಹೀಗಾದರೆ ಕೆಥೆಡ್ರಲ್‌ನ ಅಸ್ತಿತ್ವಕ್ಕೆ ಅಪಾಯ ಎಂದು ಮನಗಂಡ ಆಡಳಿತವು ತನ್ನ ಆಸ್ತಿಯನ್ನು ಸಂರಕ್ಷಿಸಲು, ಸುತ್ತಮುತ್ತ ಇಂತಿಷ್ಟು ಜಾಗದಲ್ಲಿ ಎತ್ತರದ ನಿರ್ಮಾಣಗಳು ನಡೆಯಬಾರದೆಂದು ನಿರ್ಬಂಧ ತಂದಿದೆ.

ನದಿಯಾನ
ಇಲ್ಲಿಗೆ ಭೇಟಿ ನೀಡಿದರೆ ರೈನ್‌ ನದಿಯಾನವನ್ನು ಮಾತ್ರ ತಪ್ಪಿಸಬಾರದು. ಈ ನದಿಯಾನದಲ್ಲಿ ಸುತ್ತಲಿನ ಪರ್ವತ, ಕಾಡುಗಳ ರಮಣೀಯ ಸೌಂದರ್ಯ ಮತ್ತೇರಿಸುವಂತಹುದು. ಸುತ್ತಮುತ್ತ ನೋಡತಕ್ಕಂತಹ ಜರ್ಮನಿಯ ಸೊಬಗಿನ ಊರುಗಳಿವೆ. ಇಲ್ಲೆಲ್ಲ ಒಂದು ಅಸಾಧಾರಣ ಪ್ರತಿಭೆಯ ಆಕರ್ಷಕ ಸಂಗತಿಯೊಂದನ್ನು ಗಮನಿಸಲೇಬೇಕು. ಈ ಪುರಾತನ ಆಕರ್ಷಣೆಗಳ ಮುಂದೆ ಕೆಲವು ಮಂದಿ ಆಯಾ ಸ್ಥಳಗಳ ಚಾರಿತ್ರಿಕ ಪಾತ್ರಗಳ ವೇಷಭೂಷಣ ಧರಿಸಿ ಎತ್ತರದ ಸ್ಟೂಲ್‌ ಮೇಲೆ ಎದ್ದು ಕಾಣುವಂತೆ ಅಲ್ಲಾಡದೇ ನಿಂತಿರುತ್ತಾರೆ. ಮುಖ ಕೈಗೆಲ್ಲ ಬೆಳ್ಳಿಯ ಅಥವಾ ಚಿನ್ನವರ್ಣದ ಪೈಂಟ್‌ ಬಳಿದುಕೊಂಡು ಪಕ್ಕಾ ಸೀಸರ್‌, ಆಂಟೋನಿಯೋ, ಕ್ಲಿಯೋಪಾತ್ರಾ, ನೆಪೋಲಿಯನ್‌ ಹೀಗೆ ಬೇರೆಬೇರೆ ಪಾತ್ರಗಳಾಗಿ ವಿಗ್ರಹದಂತೆ ದಿನವಿಡೀ ಬಿಸಿಲು, ಚಳಿಮಳೆಗಳ ಲೆಕ್ಕಿಸದೆ ನಿಲ್ಲುವ ಇವರು, ಶ್ರೀಮಂತ ಚಾರಿತ್ರಿಕ ಪಾತ್ರಗಳಂತೆ ನಿಂತ ಭಿಕ್ಷ ುಕರು ಅಷ್ಟೆ.

ಯಾವುದಕ್ಕೆ ಫೇಮಸ್‌?
ಯೂ ಡಿ ಕೊಲೋನ್‌ ಎನ್ನುವ ಪರ್‌ಫ್ಯೂಮ್‌ ಬಹಳ ಪ್ರಸಿದ್ಧ. ಆಲೂ ಪ್ಯಾನ್‌ ಕೇಕ್‌, ನೂಡಲ್ಸ್‌, ಪಿಜ್ಜಾ, ಆಪಲ್‌ ಕೇಕ್‌, ಚಾಕೋಲೇಟ್ಸ್‌, ಕಾಫಿ ಇಲ್ಲಿ ಫೇಮಸ್‌.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ