ಆ್ಯಪ್ನಗರ

ಕಲರ್‌ಫುಲ್‌ ಪ್ರವಾಸಕ್ಕೆ ಷಾಂಘೈ

ಷಾಂಘೈ ಪ್ರವಾಸಕ್ಕೆ ಪ್ಲಾನ್‌ ಮಾಡಿದ್ದರೆ ಗಗನಚುಂಬಿ ಕಟ್ಟಡಗಳ ಸೌಂದರ‍್ಯ, ಪ್ರಾಕೃತಿಕ ವೈಭವದ ಜತೆ ಶಾಪಿಂಗ್‌ ಸೇರಿದಂತೆ ಇತರೇ ಸಂಗತಿಗಳಲ್ಲಿ ಮೋಜುಮಸ್ತಿ ಮಾಡುವುದನ್ನು ಮರೆಯಬೇಡಿ.

Vijaya Karnataka 12 Jan 2019, 5:01 pm
*ಎಸ್‌. ಪಿ. ವಿಜಯಲಕ್ಷ್ಮಿ
Vijaya Karnataka Web shanghai travel guide
ಕಲರ್‌ಫುಲ್‌ ಪ್ರವಾಸಕ್ಕೆ ಷಾಂಘೈ

ನಿಮ್ಮ ವಿದೇಶಿ ಪ್ರವಾಸ ಕಲರ್‌ಫುಲ್‌ ಆಗಿರಬೇಕು ಅಂದರೆ ಷಾಂಘೈ ಗೆ ಹೋಗಿ ಬನ್ನಿ. ಚೀನಾದ ಪ್ರತಿಷ್ಠಿತ, ಹೆಚ್ಚು ಜನನಿಬಿಡ, ಸಖತ್‌ ಕಲರ್‌ಫುಲ್‌ ಸಿಟಿ ಎಂದೆನಿಸಿಕೊಂಡಿರುವ ಇದು ಪ್ರವಾಸಿಗರನ್ನು ಯಥೇಚ್ಛವಾಗಿ ಸೆಳೆಯುತ್ತದೆ. ಇಲ್ಲಿಯ ಹಗಲು ನ್ಯೂಯಾರ್ಕಿನಂತೆ, ಇರುಳಿನ ಗುಂಗು ಪ್ಯಾರಿಸ್‌ನಂತೆ. ಮಾಯಾನಗರಿಯಂತೆ ಯಾಂಗ್‌ಸೀ ನದಿಯ ಪ್ರದೇಶದಲ್ಲಿರುವ ಈ ನಗರವನ್ನು ಮೊದಲ ಓಪಿಯಮ್‌ ವಾರ್‌ನಲ್ಲಿ ಬ್ರಿಟನ್‌ ಚೀನಾ ವಿರುದ್ಧ ಯಶ ಸಾಧಿಸಿ, ತನ್ನ ಹಿಡಿತಕ್ಕೆ ತೆಗೆದುಕೊಂಡಿತ್ತು. 1949ರ ಕ್ರಾಂತಿಯಲ್ಲಿ ಮತ್ತೆ ಚೀನಾ ವಶಪಡಿಸಿಕೊಂಡಿತು. 700ವರ್ಷಗಳ ಹಿಂದೆ ಹಳ್ಳಿಯಾಗಿದ್ದು ನೂರು ವರ್ಷದ ಹಿಂದೆ ನಗರವಾಗಿ ಈಗ 22 ವರ್ಷಗಳಿಂದೀಚೆಗೆ ಅತ್ಯಾಧುನಿಕವಾಗಿ ಸರ್ವಾಂಗಸುಂದರವಾಗಿದೆ. ಈ ನೂರು ವರ್ಷ ಹಳೆಯ ಭಾಗವನ್ನು ಪುಶಿ ಎಂದು, ಇಪ್ಪತ್ತೆರಡು ವರ್ಷದೀಚೆಗೆ ಬೆಳೆದ ಭಾಗವನ್ನು ಪುಡೋಂಗ್‌ ಎನ್ನುತ್ತಾರೆ. ಈ ಪುಡೋಂಗ್‌ ಏರಿಯಾ ಅತ್ಯಾಧುನಿಕ ಗಗನಚುಂಬಿ ಕಟ್ಟಡಗಳಿಂದ ಅತ್ಯಾಕರ್ಷಕ. ಇಲ್ಲಿ ಉಪನದಿ ಹುವಾಂಕು ಹರಿಯುತ್ತಿದ್ದು ಈ ದಡದ ಸುತ್ತ ಸುಂದರ ವಿನ್ಯಾಸದ ಕಟ್ಟಡಗಳನ್ನು ನಿರ್ಮಿಸಿ, ಷಾಂNೖನಗರಿಗೊಂದು ಅಂತಾರಾಷ್ಟ್ರೀಯ ಸ್ಥಾನಮಾನದ ಗರಿಯನ್ನು ಹಚ್ಚಿದೆ ಚೀನಾ.
ಆಕರ್ಷಣೆ
ಬ್ರಿಟಿಷರು ವಸಾಹತು ಸ್ಥಾಪಿಸಿಕೊಂಡ ಬಂಡ್‌ ಏರಿಯಾ ಬಹಳ ಪ್ರಸಿದ್ಧ. ಇಬ್ಬದಿಯ ದಡಗಳಲ್ಲಿ ಸುಂದರ ವಿನ್ಯಾಸದ ಬಿಲ್ಡಿಂಗ್‌ಗಳಿದ್ದು, ಇಲ್ಲಿಯ ನದಿಯ ಇರುಳಿನ ನೌಕಾಯಾನ ಪ್ರವಾಸಿಗರನ್ನು ವಿಶೇಷವಾಗಿ ಸೆಳೆಯುತ್ತದೆ. ನದಿಯ ಕೆಳಗಿನ ಟನಲ್‌ನಲ್ಲಿ ಎಲೆಕ್ಟ್ರೋ ಮೊಬೈಲ್‌ ರೈಡ್‌ ಎನ್ನುವ ರೈಲು ಆಕರ್ಷಣೆಯೊಂದಿದೆ. ಫ್ರೆಂಚರ ವಸಾಹತೂ ಇದ್ದುದರಿಂದ ಇವರ ರೊಮ್ಯಾಂಟಿಕ್‌ ಶೈಲಿಯ ಫ್ರೆಂಚ್‌ ವಿಲೇಜ್‌ ಎಂಬ ವಿಶೇಷ ಕಾಲೋನಿಯೊಂದಿದೆ. ಇಲ್ಲಿ ಬಂದರೆ, ಫ್ರಾನ್ಸಿನ ಊರಿನಲ್ಲಿದ್ದಂತೆ ಭಾಸವಾಗುವುದು.
ಪುಡೋಂಗ್‌ನ ಸೌಂದರ್ಯ
ಪುಡೋಂಗ್‌ ಏರಿಯಾ ತುಂಬಾ ಎತ್ತರದ, ವೈಭವಯುತ ಕಟ್ಟಡಗಳ ಸಮೂಹ ಹೊಂದಿದೆ. 101 ಅಂತಸ್ತಿನ ವರ್ಲ್ಡ್‌ ಫೈನಾನ್ಷಿಯಲ್‌ ಸೆಂಟರ್‌ನ 96ನೇ ಅಂತಸ್ತಿನಲ್ಲಿ ವರ್ತುಲಾಕಾರದ ಪಾರದರ್ಶಕ ಗಾಜಿನ ಗೋಡೆಯಿದ್ದು, ರಾತ್ರಿ ಇಲ್ಲಿಂದ ಷಾಂಘೈ ಸಿಟಿಯ ವೈಭವ ನೋಡಬೇಕು. ಇಲ್ಲಿಯ ಜಿನ್‌ ಮಾವೋ ಟವರ್‌, ಷಾಂಘೈ ವರ್ಲ್ಡ್‌ ಫೈನಾನ್ಷಿಯಲ್‌ ಸೆಂಟರ್‌, ಪರ್ಲ್‌ ಟಿವಿ ಟವರ್‌, ಮ್ಯೂಸಿಯಂ ಸುಂದರವಾಗಿದೆ.
ಉದ್ಯಾನದ ವೈಶಿಷ್ಟ್ಯ
ಯೂ ಯೋನ್‌ ಗಾರ್ಡನ್‌. ಇದೊಂದು 500ವರ್ಷಗಳ ಹಿಂದಿನ ಗಾರ್ಡನ್‌. ಧಾರಾಳವಾಗಿ ಮೇಪಲ್‌ ಮರಗಳು, ಹೇರಳವಾದ ಸಸ್ಯಗಳಿದ್ದು, ಪ್ರಶಾಂತವಾಗಿ ಧ್ಯಾನಕ್ಕೆ ಯೋಗ್ಯವಾಗಿದೆ. ಇಲ್ಲಿಗೆ ಹೋಗುವ ಹಾದಿ ಸುಂದರವಾದ ಬಜಾರ್‌ ಸ್ಟ್ರೀಟ್‌. ಈ ಜಾಗದಲ್ಲಿ ಎಲ್ಲ ಕಟ್ಟಡಗಳೂ ಚೀನೀ ಮಾದರಿಯ ಸುಂದರವಿನ್ಯಾಸದ ಕಟ್ಟಡಗಳಾಗಿ ಶಾಪಿಂಗ್‌ಗೆ ಪ್ರಶಸ್ತವಾಗಿದೆ.
ಜೇಡ್‌ಬುದ್ಧ ಟೆಂಪಲ್‌ 1882ರಲ್ಲಿ ನಿರ್ಮಿಸಲ್ಪಟ್ಟ ಈ ದೇಗುಲ ಅತಿ ಮನೋಹರ. ಬಜಾರ್‌ರಸ್ತೆಯಲ್ಲಿದ್ದೂ ಒಳಗೆ ಪ್ರಶಾಂತವಾಗಿದೆ. ಬೌದ್ಧಗುರುವೊಬ್ಬರು ಬರ್ಮಾದಿಂದ ತಂದ ಎರಡು ಜೇಡ್‌ ಬುದ್ಧನ ಮೂರ್ತಿಗಳಿಗಾಗಿ ಕಟ್ಟಿದ ದೇಗುಲವಿದು. ಹಾಲು ಬಿಳುಪಿನ ಜೇಡ್‌ನಿಂದ ರಚಿಸಿದ ಎರಡು ಮೂರ್ತಿಗಳಲ್ಲಿ ಒಂದು ಕುಳಿತಿರುವ ಭಂಗಿಯದು, 190ಸೆಂಟಿಮೀಟರ್‌ ಎತ್ತರವಿದ್ದು ಎಮರಾಲ್ಡ್‌ ಮತ್ತು ಅಗೇಟ್‌ನಂಥ ಅಮೂಲ್ಯ ಹರಳುಗಳಿಂದ ಅಲಂಕೃತವಾಗಿದೆ. ಮಲಗಿರುವ ಬುದ್ಧ 96ಸೆಂಟಿಮೀಟರ್‌ ಉದ್ದವಿರುವ ಸುಂದರ ಶಾಂತಮೂರ್ತಿ. ಇದಲ್ಲದೆ ಆ ಕಾಲದ ಪೈಂಟಿಂಗ್‌ಗಳು, ಬುದ್ದಿಸ್ಟ್‌ ಸ್ಕ್ರಿಪ್ಟ್‌ಗಳನ್ನೂ ಕಾಣಬಹುದು.
ವೇಗದ ರೈಲುಮಾರ್ಗ
ಇಲ್ಲಿ ವಿಶ್ವದಲ್ಲೆ ಪ್ರಪ್ರಥಮವಾದ ಗಂಟೆಗೆ 430ಕಿ.ಮೀ. ಓಡುವ ಮ್ಯಾಗ್ಲೀವ್‌ ರೈಲು ಮಾರ್ಗವಿದೆ. ಅಲ್ಲದೆ ಅರ್ಬನ್‌ ಪ್ಲಾನ್ನಿಂಗ್‌ ಮ್ಯೂಸಿಯಂ ಎಂಬ ಅದ್ಭುತ ವಿನ್ಯಾಸದ ಕಟ್ಟಡದಲ್ಲಿನ ಆಕ್ರೋಬ್ಯಾಟಿಕ್‌ ಶೋ ಮೋಡಿ ಮಾಡುತ್ತದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ