ಆ್ಯಪ್ನಗರ

ಮೈ ವೀಕೆಂಡ್: ಪ್ರಶಾಂತತೆಗೆ ಹಂಬಲಿಸುವ ಮನ

ಜವಾಬ್ದಾರಿ ದೊಡ್ಡದಾದಷ್ಟೂ ವೀಕೆಂಡ್ ವಿರಾಮ ಚಿಕ್ಕದಾಗುತ್ತದೆ. ನನ್ನದೂ ಅದೇ ಕಥೆ. ಆದ್ದರಿಂದ ಜವಾಬ್ದಾರಿಯ ಜತೆಯಲ್ಲಿಯೇ ವೀಕೆಂಡ್ ಮೋಜು ಅನುಭವಿಸುವುದನ್ನು ರೂಢಿಸಿಕೊಂಡಿದ್ದೇನೆ

Vijaya Karnataka Web 13 Mar 2016, 4:17 am
ಜವಾಬ್ದಾರಿ ದೊಡ್ಡದಾದಷ್ಟೂ ವೀಕೆಂಡ್ ವಿರಾಮ ಚಿಕ್ಕದಾಗುತ್ತದೆ. ನನ್ನದೂ ಅದೇ ಕಥೆ. ಆದ್ದರಿಂದ ಜವಾಬ್ದಾರಿಯ ಜತೆಯಲ್ಲಿಯೇ ವೀಕೆಂಡ್ ಮೋಜು ಅನುಭವಿಸುವುದನ್ನು ರೂಢಿಸಿಕೊಂಡಿದ್ದೇನೆ. ಕೆಲಸದಲ್ಲಿ ಶ್ರದ್ಧೆ ಹೆಚ್ಚಿದಷ್ಟೂ ಮನಸ್ಸು ಮುದಗೊಳ್ಳುತ್ತದೆ. ಅದಕ್ಕೆ ಬೇಕಾದ ಮನಸ್ಥಿತಿ ರೂಢಿಸಿಕೊಳ್ಳಬೇಕಷ್ಟೇ. ಈ ಹಿನ್ನೆಲೆಯಲ್ಲಿ ನೋಡಿದಾಗ ವಾರಾಂತ್ಯದ ಉಲ್ಲಾಸವು ವಿರಾಮ ಅಥವಾ ಸುತ್ತಾಟದ ಮೂಲಕವೇ ದಕ್ಕುತ್ತದೆ ಎನ್ನುವ ತಿಳಿವಳಿಕೆ ರೂಢಿಯಿಂದ ಬಂದದ್ದು ಎನಿಸುತ್ತದೆ. ಇದು ನನ್ನ ಖಾಸಗಿ ಗ್ರಹಿಕೆ ಇರಬಹುದು. ಆದರೆ ಅದಷ್ಟಕ್ಕೆ ನಮ್ಮಂಥ ಕುಟುಂಬಸ್ಥ ಅಧಿಕಾರಿಗಳ ಜವಾಬ್ದಾರಿಯ ಯಾನ ಕೊನೆಗೊಳ್ಳುವುದಿಲ್ಲ. ಕುಟುಂಬ ಸದಸ್ಯರ ಬೇಕು-ಬೇಡಗಳತ್ತಲೂ ಗಮನ ಹರಿಸಬೇಕಾದದ್ದು ಅನಿವಾರ್ಯ.
Vijaya Karnataka Web my weekend
ಮೈ ವೀಕೆಂಡ್: ಪ್ರಶಾಂತತೆಗೆ ಹಂಬಲಿಸುವ ಮನ


ನನಗೆ ಸಿಕ್ಕುವ ಬಿಡುವಿನ ಸಂದರ್ಭಗಳನ್ನು ಪತ್ನಿ ಮತ್ತು ಮಕ್ಕಳ ಜತೆ ಕಳೆಯುತ್ತೇನೆ. ನನ್ನ ಪತ್ನಿಯೂ ಕೆಲಸದಲ್ಲಿರುವುದರಿಂದ ಅವರಿಗೂ ರೆಸ್ಟ್ ಅಗತ್ಯ. ಇಬ್ಬರು ಸೇರಿಯೇ ಬಿಡುವಿನ ಘಳಿಗೆಗಳನ್ನು ಕ್ವಾಲಿಟೇಟಿವ್ ಆಗಿ ಕಳೆಯಲು ಪ್ಲಾನ್ ರೂಪಿಸುತ್ತೇವೆ. ಸಾಧ್ಯವಾದರೆ ಸಿನಿಮಾ ನೋಡುತ್ತೇವೆ. ವೈಯಕ್ತಿಕವಾಗಿ ನನಗೆ ಇಂಗ್ಲಿಷ್ ಸಿನಿಮಾ ಇಷ್ಟ. ಆದರೆ ನಮ್ಮದು ತೆಲುಗು ಕುಟುಂಬವಾದ್ದರಿಂದ ಬಹುಮತದ ಮೇರೆಗೆ ತೆಲುಗು ಸಿನಿಮಾಗಳಿಗೆ ಹೋಗುತ್ತೇವೆ. ಒಳ್ಳೆಯ ಕನ್ನಡ ಸಿನಿಮಾ ಬಂದರೆ ಮಿಸ್ ಮಾಡುವುದಿಲ್ಲ. ಸದ್ಯಕ್ಕೆ ನಮ್ಮ ಮನೆಯಲ್ಲಿ ಅಂತಹ ವೀಕೆಂಡ್ ಮೋಜಿಗೆ ವಿರಾಮ ಬಿದ್ದಿದೆ. ಯಾರೂ ಮನೆಯಿಂದ ಕದಲುವುದಿಲ್ಲ. ಯಾಕೆಂದರೆ ನನ್ನ ಮಗಳೀಗ ಸೆಕೆಂಡ್ ಪಿಯು ಪರೀಕ್ಷೆ ಬರೆಯುತ್ತಿದ್ದಾಳೆ. ಆಕೆಯ ಓದಿಗೆ ನೆರವಾಗುತ್ತಿದ್ದೇವೆ. ನಾಲ್ಕು ವರ್ಷದ ಮಗ ಮಾತ್ರ ಮನೆ ತುಂಬ ಓಡಾಡಿಕೊಂಡು ಎಂಜಾಯ್ ಮಾಡುತ್ತಾನೆ.

ಒಂದು ಅಥವಾ ಎರಡು ದಿನದ ಬಿಡುವು ಲಭಿಸಿದರೆ ಈ ಬೆಂಗಳೂರಿನ ಗೌಜುಗದ್ದಲದಿಂದ ದೂರ ಹೋಗುವುದಕ್ಕೆ ನನ್ನ ಮೊದಲ ಆದ್ಯತೆ. ಪ್ರಶಾಂತ ಪರಿಸರ ಇಷ್ಟ . ನಗರದ ಸುತ್ತಮುತ್ತ ಅಂತಹ ಅನೇಕ ತಾಣಗಳಿವೆ. ಕಬಿನಿಯಂತಹ ಕಡೆ ಹೋಗಿ ಸಾಧ್ಯವಾದರೆ ಒಂದು ರಾತ್ರಿ ತಂಗಿ ಬಂದರೆ ಮನಸ್ಸು ಚೈತನ್ಯಶೀಲಗೊಳ್ಳುತ್ತದೆ. ವಾರ ಕಾಲದ ಬಿಡುವೇನಾದರೂ ಲಭಿಸಿದರೆ ರಾಜ್ಯದ ವಿವಿಧೆಡೆ ಇರುವ ನಿಸರ್ಗ ರಮಣೀಯ ಸ್ಥಳಗಳೇ ನನ್ನ ಫೇವರಿಟ್. ಜನಜಂಗುಳಿ, ವಾಹನ ದಟ್ಟಣೆ ಇರಬಾರದಷ್ಟೇ. ಕೇರಳ, ಕಾಶ್ಮೀರ, ಸಿಕ್ಕಿಂ, ಹಿಮಾಚಲಪ್ರದೇಶದಂತಹ ನಿಸರ್ಗ ರಮ್ಯತೆಯ ರಾಜ್ಯಗಳನ್ನು ಸುತ್ತಿದ್ದೇನೆ. ಅಮೆರಿಕ, ಇಂಗ್ಲೆಂಡ್‌ನಂತಹ ದೇಶಗಳಿಗೂ ಹೋಗಿ ಬಂದಿದ್ದೇನೆ. ಆದರೆ ನನಗೆ ಹೆಚ್ಚು ಇಷ್ಟವಾದದ್ದು ಫ್ರಾನ್ಸ್.

ನಾನು ಹಾಸ್ಟೆಲ್‌ಗಳಲ್ಲಿಯೇ ಓದಿ, ಯುಪಿಎಸ್‌ಸಿ ಪರೀಕ್ಷೆ ಬರೆದು ಐಪಿಎಸ್ ಅಧಿಕಾರಿಯಾದ ವ್ಯಕ್ತಿ. ಸಹಜವಾಗಿಯೇ ನನಗೆ ಗೆಳೆಯರ ಜತೆ ಕಾಲ ಕಳೆಯುವುದೆಂದರೆ ತುಂಬ ಇಷ್ಟ. ನನ್ನ ರಾಜ್ಯವಾದ ಆಂಧ್ರದಲ್ಲಿ ಆತ್ಮೀಯರೆನಿಸಿದ ಅನೇಕ ಗೆಳೆಯರಿದ್ದಾರೆ. ಕರ್ನಾಟಕದಲ್ಲೂ ಇದ್ದಾರೆ. ತಿಂಗಳಿಗೊಮ್ಮೆ ಅಥವಾ ಯಾವಾಗಲಾದರೂ ಬಿಡುವು ಸಿಕ್ಕರೆ ಅವರೊಂದಿಗೆ ಸೇರಿ ಹರಟುತ್ತೇನೆ. ಆಡುತ್ತೇವೆ. ಗಾಲ್ಫ್ ನನ್ನ ಇಷ್ಟದ ಕ್ರೀಡೆ.

-ಕೆ.ಎಸ್.ಆರ್. ಚರಣ್ ರೆಡ್ಡಿ ಎಡಿಜಿಪಿ

ನಿರೂಪಣೆ: ಸೋಮಶೇಖರ ಕಿಲಾರಿ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ