Please enable javascript.ನಿದ್ದೆ ಕಿತ್ತುಕೊಂಡ... - ನಿದ್ದೆ ಕಿತ್ತುಕೊಂಡ... - Vijay Karnataka

ನಿದ್ದೆ ಕಿತ್ತುಕೊಂಡ...

Vijaya Karnataka Web 6 Oct 2013, 4:58 am
Subscribe

ಒಳಗಿನದೆಲ್ಲವ ಖಾಲಿ ಮಾಡಿ, ಕುಂತ ನನ್ನೊಳಗೆ ಏನಿದೆ ಹೇಳಿ?, ಇಗೋ ಈ ಕಣ್ಣು ಕೊಡಲೇ?, ಈ ಕಿವಿ ಈ ಮೂಗು ಈ ನಾಲಿಗೆ ಈ ಚರುಮ?

ನಿದ್ದೆ ಕಿತ್ತುಕೊಂಡ...
ನಿದ್ದೆ ಕಿತ್ತುಕೊಂಡ ಉರಿ ನೆನಪುಗಳೇ
ಅಷ್ಟೂ ಒಳ ಜೀವಗಳೇ-

ಒಳಗಿನದೆಲ್ಲವ ಖಾಲಿ ಮಾಡಿ
ಕುಂತ ನನ್ನೊಳಗೆ ಏನಿದೆ ಹೇಳಿ?
ಇಗೋ ಈ ಕಣ್ಣು ಕೊಡಲೇ?
ಈ ಕಿವಿ ಈ ಮೂಗು ಈ ನಾಲಿಗೆ ಈ ಚರುಮ?

ದುಃಖದ ಆಸಾಮಿ ನಾ-
ನಕ್ಕಿದ್ದು ನೆನಪಿಲ್ಲ.
ಹೌದು, ಪೊಗರು ತುಂಬಿದೆ ಕಣ್ಣಲ್ಲಿ:
ನೀವು ಕೊಟ್ಟುದೇ.
ಸಿಟ್ಟು-ಸೆಡವಿದೆ: ನೀವು ಅಣಿ ಮಾಡಿಹುದೇ.
ಮೊಂಡುತನ- ನಿಮ್ಮುಡುಗೊರೆಯೇ.

ಸುಡಿ! ನಿಮ್ಮದೆನ್ನುವ ಈ ಹಗಲನು.
ಉರಿಹಚ್ಚಿ ಬರುವ ಇರುಳಿಗೂ.
ಉರುಬಿಬಿಡಿ ಉಷೆಯ; ಮುಸ್ಸಂಜೆಯ ಮುರುಟಿಬಿಡಿ!
ನೀವು ತಾನೆ ಜಗದೊಡೆಯರು?

ಕಸುಬು ಕಿತ್ತುಕೊಂಡವರೆ ಕರಿಬಣ್ಣ ಬಿಟ್ಟಿರಿ ಹಾಗೆ!
ಇಗೋ ಆಡಿ ಚೆಂಡಾಟವ ನನ್ನ ರುಂಡದಿಂದ.
ದೂರ ಹೋದುದ ನಾನೇ ಎತ್ತಿ ತಂದುಕೊಡುವೆ-
ನಿಮ್ಮಪ್ಪಣೆಯಂತೆ.
ಆಡಿ ಆಟ. ಈ ಬಯಲು ನಿಮ್ಮದೇ; ಕಾಲ ಕೂಡ.
ನಾನು ಒಬ್ಬ ಮಾತ್ರವೇ ಅಲ್ಲ-
ನೂರಾರು ತಲೆಮಾರು.

* ಕೆ ಪಿ ಮೃತ್ಯುಂಜಯ
ಕಾರ್ಕಳ ತಾಲೂಕು ಸರಕಾರಿ ಪದವಿಪೂರ್ವ ಕಾಲೇಜಿನಲ್ಲಿ ಕನ್ನಡ ಉಪನ್ಯಾಸಕರು. ಇದುವರೆಗೆ ಐದು ಕವನ ಸಂಕಲನ ಹೊರತಂದಿದ್ದಾರೆ. ಆರನೇ ಸಂಕಲನದ ಹಸ್ತಪ್ರತಿಗೆ ಇತ್ತೀಚೆಗೆ ‘ವಿಭಾ’ ಪ್ರಶಸ್ತಿ ಲಭಿಸಿದೆ.
ಕಾಮೆಂಟ್‌ ಮಾಡಿ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ