ಆ್ಯಪ್ನಗರ

ರಂಜಾನ್‌ ಹಬ್ಬಕ್ಕೆ ಭರ್ಜರಿ ಶಾಪಿಂಗ್‌

ಬೆಂಗಳೂರಿನಲ್ಲಿ ರಂಜಾನ್‌ ಹಬ್ಬದ ಸಂಭ್ರಮ ...

Vijaya Karnataka 15 Jun 2018, 5:00 am
ಬೆಂಗಳೂರಿನಲ್ಲಿ ರಂಜಾನ್‌ ಹಬ್ಬದ ಸಂಭ್ರಮ ಗರಿಗೆದರಿದೆ. ಹಬ್ಬದ ಖರೀದಿಯೂ ಜೋರಾಗಿದೆ. ನಗರದ ಪ್ರಮುಖ ಮಾರ್ಕೆಟ್‌ಗಳಲ್ಲಿ ಬಣ್ಣ ಬಣ್ಣದ ಉಡುಪುಗಳು, ಟೋಪಿ, ಹೊಳೆಯುವ ಆಭರಣಗಳು, ಮೆಹೆಂದಿ, ಪಾದರಕ್ಷೆ, ಖರ್ಜೂರ, ಡ್ರೈಫ್ರೂಟ್ಸ್‌, ಸಿಹಿ ತಿಂಡಿಗಳಿಗೆ ಬೇಡಿಕೆ ಹೆಚ್ಚಿದೆ.
Vijaya Karnataka Web ramzan shopping-2


ಬಬಿತಾ ಎಸ್‌.

ಯಾವುದೇ ಹಬ್ಬ ಶಾಪಿಂಗ್‌ ಇಲ್ಲದೆ ಕಂಪ್ಲೀಟ್‌ ಆಗುವುದಿಲ್ಲ. ಇದಕ್ಕೆ ರಂಜಾನ್‌ ಹಬ್ಬವೂ ಹೊರತಾಗಿಲ್ಲ. ಈ ಹಬ್ಬಕ್ಕೂ ಮಾರುಕಟ್ಟೆಗಳಲ್ಲಿ ಜನರು ಭರ್ಜರಿ ಶಾಪಿಂಗ್‌ ಮಾಡುತ್ತಾರೆ. ಹಬ್ಬಕ್ಕೆ ಎರಡು ವಾರವಿರುವಾಗಲೇ ಶಾಪಿಂಗ್‌ ಆರಂಭವಾಗುತ್ತದೆ. ಹಬ್ಬದ ಮೊದಲೆರಡು ದಿನವಂತು ಜನರು ರಾತ್ರಿ ಹಗಲೆನ್ನದೆ ಶಾಪಿಂಗ್‌ನಲ್ಲಿ ನಿರತರಾಗುತ್ತಾರೆ.

ಖರೀದಿ ಅಡ್ಡಾ

ಬೆಂಗಳೂರಿನಲ್ಲಿ ಕಮರ್ಷಿಯಲ್‌ ಸ್ಟ್ರೀಟ್‌, ಶಿವಾಜಿ ನಗರ, ಫ್ರೇಜರ್‌ ಟೌನ್‌, ಸಿಟಿ ಮಾರ್ಕೆಟ್‌, ಮೆಜೆಸ್ಟಿಕ್‌, ಗೋರಿಪಾಳ್ಯ, ಸುಲ್ತಾನ್‌ಪೇಟೆ, ಚಿಕ್ಕಪೇಟೆ ಇತ್ಯಾದಿ ಪ್ರದೇಶಗಳು ರಂಜಾನ್‌ ಶಾಪಿಂಗ್‌ಗೆ ಹೇಳಿ ಮಾಡಿಸಿದಂತಿವೆ. ಅತ್ಯಂತ ಕಡಿಮೆ ಬೆಲೆಯಲ್ಲಿ ಉತ್ತಮ ವಸ್ತುಗಳನ್ನು ಇಲ್ಲಿ ಖರೀದಿ ಮಾಡಬಹುದು. ಚೀಪ್‌ ಆ್ಯಂಡ್‌ ಬೆಸ್ಟ್‌ ವಸ್ತುಗಳನ್ನು ಇಷ್ಟಪಡುವವರು ಇಲ್ಲಿ ಸ್ಟೋನ್‌ ವರ್ಕ್‌, ಎಂಬ್ರಾಯ್ಡರಿ ವರ್ಕ್‌ ಮಾಡಿರುವ ಸೀರೆ, ಸಲ್ವಾರ್‌ ಕಮೀಜ್‌, ಮಸ್ತಾನಿ ಗೌನ್‌, ದುಪಟ್ಟಾ, ಸ್ಕಾರ್ಫ್‌ ಖರೀದಿಸಬಹುದು.

ವೆರೈಟಿ ಶಾಪಿಂಗ್‌

ಪುರುಷರಿಗೆ ಬಗೆ ಬಗೆಯ ಕುರ್ತಾ, ಶೆರ್ವಾನಿ, ಪೈಜಾಮ, ಹರಳುಗಳನ್ನು ಪೋಣಿಸಿದ ಟೋಪಿ, ಚಪ್ಪಲಿಗಳಲ್ಲಿ ಹಲವಾರು ವೆರೈಟಿಗಳಿವೆ. ಈ ಮಾರ್ಕೆಟ್‌ಗಳಲ್ಲಿ ಮಹಿಳೆಯರು ಉಡುಪುಗಳ ಜೊತೆಗೆ ಹೊಳೆಯುವ ಬಳೆಗಳು, ನೆಕ್ಲೇಸ್‌, ಕಿವಿಯೋಲೆ, ಚಪ್ಪಲಿ, ಸ್ಯಾಂಡಲ್‌, ಸುಗಂಧ ದ್ರವ್ಯಗಳು, ನೇಲ್‌ಪಾಲಿಷ್‌, ಕಾಡಿಗೆ, ಬ್ಯಾಗ್‌, ಪರ್ಸ್‌, ಗೃಹಾಲಂಕಾರ ವಸ್ತುಗಳು, ಉಡುಗೊರೆ ಬಾಕ್ಸ್‌ಗಳನ್ನು ಕಡಿಮೆ ಬೆಲೆಗೆ ಖರೀದಿಸಬಹುದು. ಈ ಹಬ್ಬದ ಸೀಸನ್‌ನಲ್ಲಿ ಕೆಲವು ಶಾಪಿಂಗ್‌ ಮಳಿಗೆಗಳು ನೈಟ್‌ ಮಾರ್ಕೆಟ್‌ ಶಾಪಿಂಗ್‌ಗೂ ಅನುವು ಮಾಡಿಕೊಡುತ್ತಿವೆ.

ಇತ್ತರ್‌ ಮತ್ತು ಸುರ್ಮ ಘಮ

ರಂಜಾನ್‌ ಹಬ್ಬಕ್ಕೆ ಪರಿಮಳ ಬೀರುವ ಇತ್ತರ್‌ ಮತ್ತು ಕಣ್ಣಿಗೆ ಹಚ್ಚುವ ಸುರ್ಮ ಇತ್ಯಾದಿಗಳಿಗೆ ಸಿಕ್ಕಾಪಟ್ಟೆ ಬೇಡಿಕೆ ಇದೆ. ನಗರದಲ್ಲಿರುವ ಪ್ರಮುಖ ಸುಗಂಧ ದ್ರವ್ಯ ಅಂಗಡಿಗಳು ಈಗಾಗಲೇ ಗ್ರಾಹಕರಿಗೆ ಹಲವು ರೀತಿಯ ಇತ್ತರ್‌ ಮತ್ತು ಸುರ್ಮಗಳನ್ನು ಮಾರಾಟ ಮಾಡುತ್ತಿವೆ. ಸಣ್ಣ ಮಕ್ಕಳಿಗೆ ಫ್ಯಾಷನ್‌ ಉಡುಪುಗಳ ಆಯ್ಕೆ ಸಾಕಷ್ಟಿದ್ದು, ಗೃಹಿಣಿಯರು ಹೊಸ ಡಿಸೈನ್‌ಗಳ ಡಿನ್ನರ್‌ ಸೆಟ್‌, ಕರ್ಟನ್ಸ್‌, ಟೇಬಲ್‌ವೇರ್‌ಗಳಲ್ಲಿ ಹೊಸ ವಿನ್ಯಾಸಗಳನ್ನು ಆಯ್ಕೆ ಮಾಡಬಹುದು.

ಡ್ರೈಫ್ರೂಟ್ಸ್‌ಗೆ ಡಿಮಾಂಡ್‌

ಹಬ್ಬಕ್ಕೆ ಉಡುಗೊರೆ ಕೊಡಲು ಮತ್ತು ವಿವಿಧ ಸಿಹಿ ಖಾದ್ಯಗಳಿಗೆ ಬಳಸಲು ಗೋಡಂಬಿ, ಪಿಸ್ತಾ, ದ್ರಾಕ್ಷಿ, ಬಾದಾಮಿ, ಅಂಜೂರ ಮುಂತಾದ ಡ್ರೈಫ್ರೂಟ್ಸ್‌ ಖರೀದಿಗೆ ಜನರು ಮುಗಿಬೀಳುತ್ತಿದ್ದಾರೆ. ಖರ್ಜೂರ, ವಿವಿಧ ರೀತಿಯ ತಾಜಾ ಹಣ್ಣುಗಳು, ತೆಳು ಶಾವಿಗೆ, ಮಸಾಲೆ ಸಾಮಗ್ರಿ ಅತ್ಯಧಿಕ ಪ್ರಮಾಣದಲ್ಲಿ ಮಾರಾಟವಾಗುತ್ತಿವೆ.

ರಂಜಾನ್‌ ಹಬ್ಬಕ್ಕೆ ಈ ಸಲ ನಾನು ಶರಾರ ಜರಾರ ಡ್ರೆಸ್‌ ಖರೀದಿಸಿದ್ದೇನೆ. ಕಮರ್ಷಿಯಲ್‌ ಸ್ಟ್ರೀಟ್‌ನಲ್ಲಿ ಸಿಕ್ಕಾಪಟ್ಟೆ ಶಾಪಿಂಗ್‌ ಮಾಡಿದ್ದೇನೆ. ರಂಜಾನ್‌ ಹಬ್ಬಕ್ಕೆ ಅಲ್ಲಿ ವೆರೈಟಿ ಕಲೆಕ್ಷನ್‌ ಬಂದಿರುತ್ತದೆ. ಈಗಾಗಲೇ ಅಲ್ಲಿ ಕಾಲಿಡಲು ಜಾಗವೇ ಇಲ್ಲ.

-ಸಹೇರಾ ಅಫ್ಜ, ನಟಿ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ