ಆ್ಯಪ್ನಗರ

ನಾಲಗೆ ಚಪಲದ ಹಿಂದಿದೆ ಪೌಷ್ಠಿಕಾಂಶ ಕೊರತೆಯ ಗುಟ್ಟು

ಯಾವ್ಯಾವ ಆಹಾರದ ಬಯಕೆಯ ಹಿಂದೆ ಏನೇನು ಸೂಚನೆ ಇರುತ್ತದೆ? ಇಲ್ಲಿದೆ ವಿವರ.

Vijaya Karnataka Web 5 Apr 2019, 7:35 pm
ಬಾಯಿ ಚಪಲ ಇಲ್ಲದವರು ಯಾರು ಹೇಳಿ. ಸಾಮಾನ್ಯವಾಗಿ ಎಲ್ಲರಿಗೂ ಅದಿರುತ್ತದೆ. ಕೆಲವರಿಗೆ ಮಾವಿನ ಹಣ್ಣು ತಿನ್ನುವ ಆಸೆ. ಮತ್ತೆ ಕೆಲವರಿಗೆ ಕರಿದ ತಿಂಡಿಗಳನ್ನು ತಿನ್ನುವ ಆಸೆ. ಮತ್ತೆ ಕೆಲವರಿಗೆ ಸಿಹಿ ತಿಂಡಿ, ಇನ್ನು ಕೆಲವರಿಗೆ ಮಾಂಸಾಹಾರವೆಂದರೆ ನೀರೂರುತ್ತದೆ.
Vijaya Karnataka Web Food 1


ಹೀಗೆ ಅನ್ನಿಸುವುದು ಸುಮ್ಮ ಸುಮ್ಮನೆ ಅಲ್ಲ. ಅದರ ಹಿಂದೆ ದೇಹದ ಸೂಚನೆ ಇರುತ್ತದೆ ಎನ್ನುತ್ತದೆ ವಿಜ್ಞಾನ. ಹೊತ್ತಲ್ಲದ ಹೊತ್ತಿನಲ್ಲಿ ಏನೇನೋ ತಿನ್ನುವ ಬಯಕೆಯಾಗುವುದರ ಹಿಂದೆ ಕೂಡ ಕಾರಣವಿರುತ್ತದೆ. ಅದು ನಾವು ಸೇವಿಸುತ್ತಿರುವ ಆಹಾರ ಸಮತೋಲದಲ್ಲಿಲ್ಲ, ನಮಗೆ ಕೆಲವು ಪೌಷ್ಠಿಕಾಂಶಗಳ ಕೊರತೆ ಇದೆ ಎನ್ನುವುದರ ಸಂಕೇತ. ನಿರ್ದಿಷ್ಟ ತಿಂಡಿಯ ಬಯಕೆಯ ಹಿಂದೆ ನಿರ್ದಿಷ್ಟ ಕೊರತೆಯ ಕಾರಣವಿರುತ್ತದೆ ಎನ್ನುತ್ತಾರೆ ತಜ್ಞರು.

ಯಾವ್ಯಾವ ಆಹಾರದ ಬಯಕೆಯ ಹಿಂದೆ ಏನೇನು ಸೂಚನೆ ಇರುತ್ತದೆ? ಇಲ್ಲಿದೆ ವಿವರ.


ಖಾರದ ತಿಂಡಿ: ಆಲೂಗಡ್ಡೆ ಚಿಫ್ಸ್‌ನಂತಹ ಖಾರದ ತಿಂಡಿಗಳನ್ನು ಸೇವಿಸಬೇಕು ಅನಿಸಿದರೆ ನಿಮ್ಮ ದೇಹಕ್ಕೆ ಕ್ಯಾಲ್ಶಿಯಂನ ಅಗತ್ಯವಿದೆ ಎಂದರ್ಥ. ನಿಜಕ್ಕಾದರೆ ದೇಹವು ಈ ಖಾರದ ತಿಂಡಿಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿರುವ ಸೋಡಿಯಂ ಅನ್ನು ಕ್ಯಾಲ್ಶಿಯಂ ಎಂದು ಗೊಂದಲಕ್ಕೊಳಗಾಗಿ ಅವನ್ನೇ ಬಯಸುತ್ತದೆ. ಆದರೆ, ಅಧಿಕ ಸೋಡಿಯಂ ದೇಹಕ್ಕೆ ಹಾನಿಕರ. ಇವುಗಳ ಬದಲಾಗಿ ಕ್ಯಾಲ್ಶಿಯಂ ಹೆಚ್ಚು ಇರುವ ಹಾಲು, ಚೀಸ್‌ ಮತ್ತು ಕೆಲವು ತರಕಾರಿಗಳನ್ನು ಸೇವಿಸಿ.

ಚಾಕೊಲೇಟ್‌
: ನಿಮಗೆ ಚಾಕೊಲೇಟ್‌ ತಿನ್ನಬೇಕೆಂದು ಆಸೆಯಾಗುತ್ತಿದೆಯಾ? ಹಾಗಿದ್ದಲ್ಲಿ, ನಿಮಗೆ ನಿಜಕ್ಕೂ ಬೇಕಾಗಿರುವುದು ಚಾಕೊಲೇಟ್‌ ಅಲ್ಲ, ಮೆಗ್ನೇಷಿಯಂ. ಚಾಕೊಲೇಟ್‌ನಲ್ಲಿ ಅಧಿಕ ಪ್ರಮಾಣದ ಮೆಗ್ನೇಷಿಯಂ ಇದೆ. ಹೀಗಾಗಿ ನೀವು ಕಾಳು, ತರಕಾರಿ, ಹಣ್ಣುಗಳನ್ನು ಹೆಚ್ಚಾಗಿ ಸೇವಿಸಬೇಕಿದೆ.

ಸಕ್ಕರೆ: ಎಲ್ಲೋ ಅಲ್ಲಲ್ಲಿ ಸಿಹಿತಿಂಡಿ ತಿಂದರೆ ಸರಿ. ಆದರೆ, ಸಕ್ಕರೆಯಿಂದಲೇ ಮಾಡಿದ ಸಿಹಿತಿಂಡಿ ಅಥವಾ ಸಕ್ಕರೆಯನ್ನೇ ಸೇವಿಸಬೇಕೆಂದು ನಿಮಗೆ ಅನ್ನಿಸಿದಲ್ಲಿ ಅದರರ್ಥ ನಿಮ್ಮ ದೇಹಕ್ಕೆ ಕ್ರೋಮಿಯಂ, ಕಾರ್ಬನ್‌ ಫಾಸ್ಫರಸ್‌, ಸಲ್ಫರ್‌ ಕೊರತೆಯಾಗಿದೆ ಎಂದು. ಇವುಗಳೆಲ್ಲ ಮಿದುಳಿನ ಆರೋಗ್ಯಕ್ಕೆ ಅತ್ಯವಶ್ಯಕವಾದವು. ಹೀಗಾಗಿ ಸಿಹಿತಿಂಡಿಯ ಬದಲಾಗಿ ಹೆಚ್ಚು ಹೆಚ್ಚು ಬ್ರೋಕೋಲಿ, ದ್ರಾಕ್ಷಿ, ಚಿಕನ್‌, ಹಣ್ಣುಗಳು, ಒಣಹಣ್ಣುಗಳು, ಬಾದಾಮಿ, ವಾಲ್ನಟ್‌, ಪಾಲಕ್‌ ಸೊಪ್ಪು ಇತ್ಯಾದಿಗಳನ್ನು ಸೇವಿಸಿ.

ಬ್ರೆಡ್‌, ಪಾಸ್ತಾ
: ಇದು ಕಾರ್ಬೊಹೈಡ್ರೇಟ್‌ ಅಧಿಕವಾಗಿ ಉಳ್ಳ ಆಹಾರ. ಬ್ರೆಡ್‌ನಿಂದ ಮಾಡಿದ ಪಿಝ್ಝಾದಂತಹ ತಿನಿಸು ಸೇವಿಸಬೇಕೆಂದು ನಿಮಗೆ ಬಲವಾಗಿ ಅನಿಸಿದಲ್ಲಿ ನಿಮ್ಮ ದೇಹಕ್ಕೆ ಈಗ ನೈಟ್ರೋಜನ್‌ನ ಅಗತ್ಯವಿದೆ ಎಂದರ್ಥ. ಹೀಗಾಗಿ ಸ್ಯಾಂಡ್‌ವಿಚ್‌, ಬರ್ಗರ್‌ ತಿನ್ನುವ ಬದಲು ಪ್ರೊಟೀನ್‌ ಅಧಿಕವಾಗುಳ್ಳ ಮಾಂಸಾಹಾರ, ಮೀನು, ಆ್ಯಪಲ್‌, ಪೀರ್‌ ಹಣ್ಣುಗಳನ್ನು ಸೇವಿಸಿ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ