ಆ್ಯಪ್ನಗರ

ಸರ್ವಿಕಲ್‌ ಸ್ಪಾಂಡಿಲೋಸಿಸ್‌ಗೆ ಪ್ರಕೃತಿ ಚಿಕಿತ್ಸೆ

ಸರ್ವಿಕಲ್‌ ಸ್ಪಾಂಡಿಲೋಸಿಸ್‌ನಿಂದ ಕಾಡುವ ನೋವಿನಿಂದ ಪಾರಾಗಲು ನ್ಯಾಚರೋಪಥಿಯಲ್ಲಿ ಹಲವು ಚಿಕಿತ್ಸೆಗಳಿವೆ.

Vijaya Karnataka Web 29 Dec 2018, 10:13 am
ಸ್ಪಾಂಡಿಲೋಸಿಸ್‌ ಸಮಸ್ಯೆ ವಯಸ್ಸಾದವರಲ್ಲಿ ಹೆಚ್ಚು. ಆದರೆ ಹರೆಯದವರಲ್ಲೂ ಇದೀಗ ಈ ಸಮಸ್ಯೆ ಹೆಚ್ಚುತ್ತಿದೆ.
Vijaya Karnataka Web Pain


ಸರ್ವಿಕಲ್‌ ಸ್ಪಾಂಡಿಲೋಸಿಸ್‌ ನೋವುದಾಯಕವಾದದ್ದು, ಕುತ್ತಿಗೆಯ ನೋವು, ಕುತ್ತಿಗೆಯಿಂದ ಭುಜಗಳಿಗೆ ನೋವು ಕಾಣಿಸಿಕೊಳ್ಳುವುದು, ಕೈಗಳ ನೋವು, ಜೋಮು ಕಾಣಿಸಿಕೊಳ್ಳುವುದು ಇತ್ಯಾದಿಗಳು ಕುತ್ತಿಗೆಯ ಮೂಳೆಗಳ ಸವೆತದಿಂದ ಅಥವಾ ಡಿಸ್ಕ್‌ನ ಸಮಸ್ಯೆಗಳಿಂದ ಬೆನ್ನುಹುರಿಯ ನರಗಳ ಮೇಲಾಗುವ ಒತ್ತಡದಿಂದ ಅಥವಾ ಸರ್ವಿಕಲ್‌ ಎಲುಬುಗಳ ಉರಿಯೂತದಿಂದ ಉಂಟಾಗುತ್ತದೆ. ಆದರೆ ಇದರ ನಿವಾರಣೆಗೆ ಪ್ರಕೃತಿಯಲ್ಲಿ ಸಾಕಷ್ಟು ಚಿಕಿತ್ಸಾ ಪದ್ಧತಿಗಳಿವೆ. ಅವು ನೋವು ನಿವಾರಣೆಯಲ್ಲಿ ಪ್ರಮುಖ ಪಾತ್ರವಹಿಸುತ್ತದೆ. ಆದರೆ ಚಿಕಿತ್ಸೆ ವ್ಯಕ್ತಿಯಿಂದ ವ್ಯಕ್ತಿಗೆ ಭಿನ್ನವಾಗಿರಬಹುದು.

ಬಿಸಿ ಮಣ್ಣಿನ ಲೇಪನ ಚಿಕಿತ್ಸೆ : ನೆನೆಸಿಟ್ಟ ಕಪ್ಪು ಮಣ್ಣನ್ನು ಅಥವಾ ಜೇಡಿ ಮಣ್ಣನ್ನು ಬಿಸಿ ನೀರಿನೊಂದಿಗೆ ಮಿಶ್ರಗೊಳಿಸಿ ಹದವಾಗಿ, ದೇಹಕ್ಕೆ ತೊಂದರೆಯಾಗದ ಬಿಸಿಯ ಮಟ್ಟದಲ್ಲಿ ಲೇಪನ ಮಾಡಿ 20 ರಿಂದ 30 ನಿಮಿಷಗಳ ಬಳಿಕ ಬೆಚ್ಚನೆಯ ಉಪ್ಪಿನ ನೀರಿನಲ್ಲಿ ತೊಳೆಯಬೇಕು. ಮಣ್ಣಿನಲ್ಲಿರುವ ಸಿಲಿಕಾ ಎಂಬ ಪದಾರ್ಥವು ನೋವು ನಿವಾರಣೆ ಮಾಡುವಲ್ಲಿ ಸಹಕಾರಿ.

ಮಸಾಜ್‌ ಚಿಕಿತ್ಸೆ: ಪ್ರಕೃತಿ ಚಿಕಿತ್ಸೆಯು ಅಂಗಮರ್ಧನ ಚಿಕಿತ್ಸೆಯಲ್ಲಿ ಎಳ್ಳೆಣ್ಣೆ ಅಥವಾ ಸಾಸಿವೆ ಎಣ್ಣೆಯನ್ನು ಹೆಚ್ಚಿ ಮಸಾಜ್‌ ಮೂವ್‌ಮೆಂಟ್ಸ್‌ಗೆ ಹೆಚ್ಚಿನ ಒತ್ತನ್ನು ನೀಡುತ್ತದೆ. ಈ ಮೂಮೆಂಟ್ಸ್‌ಗಳು ಕುತ್ತಿಗೆಯ ಮಾಂಸಖಂಡಗಳು, ನರಗಳ ಕಾರ್ಯಗಳನ್ನು ಪ್ರಚೋದಿಸಲು ಉಪಯುಕ್ತ. ಚಿಕಿತ್ಸೆಯ ಪ್ರಕಾರ ಎಣ್ಣೆಯು ಕೇವಲ ಒಂದು ಮಾಧ್ಯಮವೇ ಹೊರತು ಚಿಕಿತ್ಸೆಯಲ್ಲ. ಕುತ್ತಿಗೆ, ಕೈ ಪ್ರತಿಯೊಂದು ಭಾಗಕ್ಕೂ ಬೇರೆ ಬೇರೆ ರೀತಿಯ ಮೂವ್‌ಮೆಂಟ್ಸ್‌ಗಳನ್ನು ಉಪಯೋಗಿಸಲಾಗುತ್ತದೆ. ಈ ಭಿನ್ನ ರೀತಿಯ ಒತ್ತಡಗಳು ಆಯಾ ಭಾಗಕ್ಕೆ ತಕ್ಕ ರಕ್ತ ಸಂಚಾರ ಹಾಗೂ ನರಗಳ ಪ್ರಚೋದನೆಯನ್ನು ಮತ್ತು ಉದ್ದೇಶಿತ ಪ್ರಯೋಜನವನ್ನು ನೀಡುತ್ತದೆ. ಈ ತೊಂದರೆಗೆ ಸಂಬಂಧಪಟ್ಟ ಅಂಗಮರ್ಧನ ಕ್ರಿಯೆಯು ನುರಿತ ವೈದ್ಯರ ಸಮ್ಮುಖದಲ್ಲಿಯೇ ನಡೆಯುವುದು ಒಳಿತು.

ಉಪ್ಪಿನ ಶಾಖ ಚಿಕಿತ್ಸೆ : ಮಸಾಜ್‌ ಮಾಡಿ ಅಥವಾ ಮಸಾಜ್‌ ಮಾಡಿಸಲು ಸಮಯವಿಲ್ಲದಿರುವಾಗ ನೋವಿನ ಅಥವಾ ಎಳ್ಳೆಣ್ಣೆಯ ಲೇಪನವನ್ನು ಮಾಡಿ 20 ನಿಮಿಷಗಳ ನಂತರ ಕಲ್ಲು ಉಪ್ಪನ್ನು ಹಂಚಿನ ಮೇಲೆ ಬಿಸಿ ಮಾಡಿ ಒಂದು ಬಟ್ಟೆಯಲ್ಲಿ ತೆಗೆದುಕೊಂಡು ನೋವಿನ ಭಾಗಕ್ಕೆ ಬೆಚ್ಚನೆಯ ಶಾಖವನ್ನು ನೀಡಿ.

ಫಿಸಿಯೋಥೆರಪಿ: ವಿರುದ್ಧ ದಿಕ್ಕಿನಲ್ಲಿ ಹರಿಯುವ ವಿದ್ಯುತ್‌ ಶಕ್ತಿಯನ್ನು ನೋವಿನ ಭಾಗದಲ್ಲಿ ಹರಿಸುವುದರಿಂದ ನೋವನ್ನು ಕಡಿಮೆ ಮಾಡಲು ಅತ್ಯಂತ ಸಹಕಾರಿ. ಅಲ್ಟ್ರಾಸೌಂಡ್‌ ಚಿಕಿತ್ಸೆಯಲ್ಲಿ ಜೆಲ್‌ನ್ನು ನೋವಿನ ಭಾಗಕ್ಕೆ ಹಚ್ಚಿ ಅಲ್ಟ್ರಾಸೌಂಡ್‌ ತರಂಗಗಳನ್ನು ಮಸಾಜ್‌ನ ಮೂಲಕ ಒಳ ಹರಿಸುವಂತೆ ಮಾಡಿ ನೋವನ್ನು ನಿವಾರಿಸಲಾಗುವುದು. ಬಿಸಿ ಮೇಣದ ಪಟ್ಟಿ ಚಿಕಿತ್ಸೆಯು ಬಿಸಿಯನ್ನು ಆಯಾ ಭಾಗಕ್ಕೆ ತಾಗಿಸುವುದರಿಂದ ರಕ್ತಸಂಚಾರವನ್ನು ಆ ಭಾಗಕ್ಕೆ ಹೆಚ್ಚಿಸಿ ನೋವನ್ನು ಶಮನಗೊಳಿಸುತ್ತದೆ.

ಸಾಸಿವೆ ಪಟ್ಟಿ ಚಿಕಿತ್ಸೆ : ನೀರಿಗೆ 3 ಹಿಡಿ ಅಕ್ಕಿಹಿಟ್ಟನ್ನು ಸೇರಿಸಿ ಕುದಿಸಿ ಅದಕ್ಕೆ 1 ಹಿಡಿ ಸಾಸಿವೆ ಪುಡಿಯನ್ನು ಸೇರಿಸಿ ನೋವಿನ ಭಾಗಕ್ಕೆ ದಪ್ಪನಾಗಿ ಮೆತ್ತಿ ಅದರ ಮೇಲೆ ಬಟ್ಟೆಯನ್ನು ಕಟ್ಟಿ ಬಿಸಿನೀರಿನ ಶಾಖವನ್ನು ಕೊಡುಬೇಕು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ