ಆ್ಯಪ್ನಗರ

ಹಲಸಿನ ಹಣ್ಣು ತಿನ್ನಿ, ಆರೋಗ್ಯಕರ ಪ್ರಯೋಜನಗಳನ್ನು ಪಡೆಯಿರಿ

ವಸಂತ ಕಾಲದಲ್ಲಿ ಸಿಗುವಂತಹ ಹಲಸಿನ ಹಣ್ಣು ಗ್ರಾಮೀಣ ಭಾಗದ ಜನರ ಪ್ರಿಯವಾದ ಹಣ್ಣು. ಇದರಲ್ಲಿ ಹಲವಾರು ರೀತಿಯ ಆರೋಗ್ಯ ಲಾಭಗಳು ಇವೆ. ಅದನ್ನು ತಿಳಿಯಿರಿ

Vijaya Karnataka Web 17 Apr 2020, 5:39 pm
ಹಲಸಿನ ಹಣ್ಣು ಎಂದರೆ ಅದು ಸುವಾಸನೆ ಹಾಗೂ ರುಚಿ ಎರಡನ್ನೂ ಹೊಂದಿದೆ. ಈ ಹಣ್ಣನ್ನು ಬಳಸಿಕೊಂಡು ವಿವಿಧ ರೀತಿಯ ಖಾದ್ಯಗಳನ್ನು ಕೂಡ ತಯಾರಿಸುವರು. ಅದೇ ರೀತಿಯಾಗಿ ಹಲಸಿನ ಹಣ್ಣನ್ನು ಹಾಗೆ ತಿನ್ನಬಹುದು. ಇದು ಬೇಸಗೆಯಲ್ಲಿ ಹೆಚ್ಚಾಗಿ ಬೆಳೆಯುವ ಕಾರಣದಿಂದಾಗಿ ಆರೋಗ್ಯಕ್ಕೂ ಒಳ್ಳೆಯದು ಎಂದು ಹೇಳಲಾಗುತ್ತಿದೆ. ಗ್ರಾಮೀಣ ಭಾಗದಲ್ಲಿ ಇಂದಿಗೂ ಹಲಸಿನ ಹಣ್ಣನ್ನು ಯಥೇಚ್ಛವಾಗಿ ಬಳಸುವರು.
Vijaya Karnataka Web surprising health benefits of jackfruit
ಹಲಸಿನ ಹಣ್ಣು ತಿನ್ನಿ, ಆರೋಗ್ಯಕರ ಪ್ರಯೋಜನಗಳನ್ನು ಪಡೆಯಿರಿ


ಇದರಿಂದ ಹಪ್ಪಳ, ತಿಂಡಿ, ದೋಸೆ ಹಾಗೂ ಇತ್ಯಾದಿ ತಿಂಡಿ ತಿನಿಸುಗಳನ್ನು ಬಳಸುವರು. ಪ್ರಕೃತಿದತ್ತವಾಗಿ ಸಿಗುವಂತಹ ಈ ಹಣ್ಣಿನಲ್ಲಿ ಹಲವಾರು ರೀತಿಯ ವಿಟಮಿನ್ ಗಳು ಹಾಗೂ ಖನಿಜಾಂಶಗಳು ಇವೆ. ವಿಟಮಿನ್ ಬಿ, ಪೊಟಾಶಿಯಂ ಮತ್ತು ಪ್ರೋಟೀನ್ ಇದರಲ್ಲಿ ಸಮೃದ್ಧವಾಗಿದೆ. ಇದರಲ್ಲಿನ ಇತರ ಕೆಲವೊಂದು ಪೋಷಕಾಂಶಗಳು ಈ ಹಣ್ಣನ್ನು ಆರೋಗ್ಯಕ್ಕೆ ಉತ್ತಮವೆಂದು ಪರಿಗಣಿಸುವಂತೆ ಮಾಡಿದೆ. ಇಲ್ಲಿ ಹಲಸಿನ ಹಣ್ಣಿನ ಆರೋಗ್ಯ ಲಾಭಗಳ ಬಗ್ಗೆ ತಿಳಿಯುವ.

ಹಲಸಿನ ಹಣ್ಣು ಯಾಕೆ ಒಳ್ಳೆಯದು?

ಖನಿಜಾಂಶ, ವಿಟಮಿನ್ ಗಳು ಮತ್ತು ಆಹಾರದ ನಾರಿನಾಂಶ ಹೊಂದಿರುವಂತಹ ಹಲಸಿನ ಹಣ್ಣು ನೈಸರ್ಗಿಕ ವಿರೇಚಕ ಗುಣ ಹೊಂದಿದೆ ಮತ್ತು ಇದು ಜೀರ್ಣಕ್ರಿಯೆ ವ್ಯವಸ್ಥೆಯ ಸಮಸ್ಯೆಯನ್ನು ದೂರ ಮಾಡುವುದು. ವಿಟಮಿನ್ ಎ ಒಳಗೊಂಡಿರುವ ಹಲಸಿನ ಹಣ್ಣು ಕಣ್ಣಿಗೆ ಕೂಡ ಒಳ್ಳೆಯದು. ಹಲಸಿನ ಹಣ್ಣಿನಲ್ಲಿ ಕೊಲೆಸ್ಟ್ರಾಲ್ ಮತ್ತು ಅನಾರೋಗ್ಯಕರ ಕೊಬ್ಬು ಇಲ್ಲದಿರುವುದು ಇದರ ಮತ್ತೊಂದು ಗುಣವಾಗಿದೆ. ವಿಟಮಿನ್ ಬಿಯಿಂದ ಸಮೃದ್ಧವಾಗಿರುವ ಇದರಲ್ಲಿ ನಿಯಾಸಿನ್, ಪಿರಿಡಾಕ್ಸಿನ್, ರಿಬೋಫ್ಲಾವಿನ್ ಮತ್ತು ಫೋಲಿಕ್ ಆಮ್ಲವಿದೆ. ವಿಟಮಿನ್ ಸಿ ಕೂಡ ಇರುವ ಇದು ಪ್ರತಿರೋಧಕ ವ್ಯವಸ್ಥೆ ಬಲಪಡಿಸುವಲ್ಲಿ ತುಂಬಾ ಸಹಕಾರಿ ಆಗಿರುವುದು. ಹಲಸಿನ ಹಣ್ಣಿನಿಂದ ಸಿಗುವ ಆರೋಗ್ಯ ಲಾಭಗಳ ಬಗ್ಗೆ ತಿಳಿಯಿರಿ.

ಕ್ಯಾನ್ಸರ್ ಚಿಕಿತ್ಸೆಗೆ ಇದು ಸಹಕಾರಿ

ಹಲಸಿನ ಹಣ್ಣಿನಲ್ಲಿ ಲಿಗ್ನಾನ್ಸ್, ಐಸೊಫ್ಲಾವೊನ್ ಮತ್ತು ಸಪೋನಿನ್ ಗಳಂತಹ ಹಲವಾರು ರಿತಿಯ ಪೈಥೋ ಕೆಮಿಕಲ್ ಗಳು ಇವೆ. ಇದೆಲ್ಲವೂ ಕ್ಯಾನ್ಸರ್ ವಿರುದ್ಧ ಹೋರಾಡುತ್ತದೆ ಎಂದು ಹೇಳಲಾಗುತ್ತದೆ. ಹಲಸಿನ ಹಣ್ಣಿನಲ್ಲಿ ಇರುವಂತಹ ಆಂಟಿಆಕ್ಸಿಡೆಂಟ್ ಫ್ರೀ ರ್ಯಾಡಿಕಲ್ ನ್ನು ತಟಸ್ಥಗೊಳಿಸುವುದು ಮತ್ತು ಕೆಲವು ಕ್ಯಾನ್ಸರ್ ನ್ನು ಇದು ತಡೆಯುವುದು. ಹಲಸಿನ ಹಣ್ಣಿನಲ್ಲಿ ಇರುವಂತಹ ಲ್ಯಾಕ್ಟಿನ್ ಎನ್ನುವ ಅಂಶವು ಗರ್ಭಕೋಶದ ಕ್ಯಾನ್ಸರ್ ವಿರುದ್ಧ ಹೋರಾಡುವುದು ಎಂದು ಅಧ್ಯಯನವು ಹೇಳಿವೆ. ಇದರಲ್ಲಿ ಇರುವಂತಹ ಆಹಾರದ ನಾರಿನಾಂಶವು ಹೊಟ್ಟೆ, ಅನ್ನನಾಳದಂತಹ ಕ್ಯಾನ್ಸರ್ ನ್ನು ತಡೆಯುವುದು.

ತೂಕ ಇಳಿಸಲು

ಬೊಜ್ಜು ದೇಹಿಗಳ ಸಂಖ್ಯೆಯು ದಿನೇ ದಿನೇ ಹೆಚ್ಚುತ್ತಲಿದೆ. ಇದಕ್ಕಾಗಿ ನೈಸರ್ಗಿಕವಾಗಿ ಸಿಗುವಂತಹ ಹಲಸಿನ ಹಣ್ಣು ತಿಂದರೆ ತುಂಬಾ ಒಳ್ಳೆಯದು. ಇದು ಕೊಬ್ಬು ರಹಿತವಾಗಿದೆ ಮತ್ತು ಕೊಲೆಸ್ಟ್ರಾಲ್ ತುಂಬಾ ಕಡಿಮೆ ಇದೆ. ಇದನ್ನು ತಿಂದರೆ ಅದರಿಂದ ಇತರ ಹಲವಾರು ರೀತಿಯ ಲಾಭಗಳು ಕೂಡ ದೇಹಕ್ಕೆ ಲಭ್ಯವಾಗುವುದು.

ರಕ್ತದೊತ್ತಡ ಕಡಿಮೆ ಮಾಡುವುದು

ಪೊಟಾಶಿಯಂ ಅಂಶವು ಅತ್ಯಧಿಕವಾಗಿ ಇರುವಂತಹ ಹಲಸಿನ ಹಣ್ಣು ರಕ್ತದೊತ್ತಡ ಕಡಿಮೆ ಮಾಡುವುದು ಮತ್ತು ಇದನ್ನು ನಿಯಂತ್ರಣದಲ್ಲಿ ಇಡುವುದು. ಇದರಿಂದಾಗಿ ಹೃದಯಾಘಾತ, ಪಾರ್ಶ್ವವಾಯು ಮತ್ತು ಹೃದಯ ಸಂಬಂಧಿ ಸಮಸ್ಯೆಗಳು ದೂರವಾಗುವುದು.

ಜೀರ್ಣಕ್ರಿಯೆ ಸುಧಾರಣೆ

ನೂರು ಗ್ರಾಂ ಹಲಸಿನ ಹಣ್ಣಿನಲ್ಲಿ 3.6 ಗ್ರಾಂ ಆಹಾರದ ನಾರಿನಾಂಶವಿದೆ. ಇದು ಜೀರ್ಣಕ್ರಿಯೆಗೆ ತುಂಬಾ ಒಳ್ಳೆಯದು. ಇದನ್ನು ಹೆಚ್ಚಿನ ಪ್ರಮಾಣದಲ್ಲಿ ಸೇವಿಸಿದರೂ ಅದು ಹೊಟ್ಟೆ ನೋವು ಉಂಟು ಮಾಡದು ಮತ್ತು ಕರುಳಿನ ಕ್ರಿಯೆ ಸರಾಗವಾಗಿಸುವುದು. ದೊಡ್ಡ ಕರುಳಿನ ಕ್ಯಾನ್ಸರ್ ಕಾರಕ ರಾಸಾಯನಿಕವನ್ನು ಇದು ತೆಗೆದು ಕರಳನ್ನು ರಕ್ಷಿಸುವುದು.

ನಿದ್ರಾಹೀನತೆ ನಿವಾರಣೆ

ಹಲಸಿನ ಹಣ್ಣು ತಿಂದರೆ ಅದರಿಂದ ನಿದ್ರೆಯ ಸಮಸ್ಯೆ ನಿವಾರಣೆ ಮಾಡಬಹುದು. ಇದರಲ್ಲಿ ಮೆಗ್ನಿಶಿಯಂ ಮತ್ತು ಕಬ್ಬಿನಾಂಶವು ಅಧಿಕವಾಗಿದೆ ಮತ್ತು ಇದು ನಿದ್ರೆಯ ಗುಣಮಟ್ಟವನ್ನು ಹೆಚ್ಚಿಸಲು ಸಹಕಾರಿ. ಮೆಗ್ನಿಶಿಯಂ ನಿದ್ರಾಹೀನತೆಗೆ ಕಾರಣವಾಗುವಂತಹ ರಕ್ತಹೀನತೆಯನ್ನು ಕೂಡ ಕಡಿಮೆ ಮಾಡುವುದು.

ಹೊಟ್ಟೆಯಿಂದ ಹೊರ ಬರುವ ಕೆಟ್ಟ ವಾಸನೆಗೆ ಈ ಕಾರಣಗಳು ಇರಬಹುದು

ಮಧುಮೇಹಿ ಸ್ನೇಹಿ

ಹಲಸಿನ ಹಣ್ಣು ತುಂಬಾ ಸಿಹಿಯಾಗಿ ಇದ್ದರೂ ಇದನ್ನು ಮಧುಮೇಹಿಗಳು ತಿಂದರೂ ತುಂಬಾ ಸುರಕ್ಷಿತವಾಗಿರುವುದು. ಯಾಕೆಂದರೆ ಇದರಲ್ಲಿನ ಸಕ್ಕರೆಯು ರಕ್ತನಾಳದಲ್ಲಿ ತುಂಬಾ ನಿಧಾನವಾಗಿ ಹೀರಿಕೊಲ್ಳುವುದು. ಹೀಗಾಗಿ ಮಧುಮೇಹಿಗಳು ಈ ಹಣ್ಣನ್ನು ತಿಂದರೆ ಅದರಿಂದ ಹಲವಾರು ರೀತಿಯ ಲಾಭಗಳು ಸಿಗುವುದು. ಎರಡೂ ರೀತಿಯ ಮಧುಮೇಹಿಗಳಲ್ಲಿ ಇದು ಗ್ಲೂಕೋಸ್ ಸಹಿಷ್ಣತೆಯನ್ನು ಹೆಚ್ಚಿಸುವುದು.

ಕಣ್ಣು ಮತ್ತು ಚರ್ಮವನ್ನು ರಕ್ಷಿಸುವುದು

ವಿಟಮಿನ್ ಎ ಹೊಂದಿರುವಂತಹ ಹಲಸಿನ ಹಣ್ಣು ಕಣ್ಣಿನ ಆರೋಗ್ಯವನ್ನು ಕಾಪಾಡುವುದು ಮತ್ತು ದೃಷ್ಟಿಶಕ್ತಿ ಹೆಚ್ಚಿಸುವುದು. ಕಣ್ಣಿನ ಪೊರೆ ಮತ್ತು ಅಕ್ಷಿಪಟಲದ ಅವನತಿಯನ್ನು ಇದು ತಡೆಯುತ್ತದೆ. ಚರ್ಮದ ಕಾಂತಿಯನ್ನು ರಕ್ಷಿಸುವ ಮೂಲಕ ವಯಸ್ಸಾಗುವ ಲಕ್ಷಣಗಳನ್ನು ಮರೆಮಾಚುವಂತೆ ಮಾಡುವುದು. ಬಿಸಿಲಿನಿಂದ ಆಗಿರುವ ಹಾನಿ ಮತ್ತು ನೆರಿಗೆ ಕೂಡ ನಿವಾರಣೆ ಮಾಡುವುದು.

ಹುಣ್ಣು(ಅಲ್ಸರ್) ನಿವಾರಣೆ

ಅಲ್ಸರ್ ಗೆ ತೆಗೆದುಕೊಳ್ಳುವಂತಹ ಮಾತ್ರೆಯು ಹಲವಾರು ರೀತಿಯ ಅಡ್ಡಪರಿಣಾಮಗಳನ್ನು ಉಂಟು ಮಾಡುವುದು. ಆದರೆ ಹಲಸಿನ ಹಣ್ಣು ಇದಕ್ಕೆ ತುಂಬಾ ಪರಿಣಾಮಕಾರಿ. ಯಾಕೆಂದರೆ ಇದರಲ್ಲಿ ಪ್ರಬಲ ಅಲ್ಸರ್ ವಿರೋಧಿ ಗುಣ, ನಂಜುನಿರೋಧಕ, ಉರಿಯೂತ ಶಮನಕಾರಿ ಮತ್ತು ಆಂಟಿಆಕ್ಸಿಡೆಂಟ್ ಅಂಶಗಳು ಇವೆ.

ಮೂಳೆಗೆ ಬಲ

ಹಲಸಿನ ಹಣ್ಣಿನಲ್ಲಿ ಇರುವಂತಹ ಕ್ಯಾಲ್ಸಿಯಂ ಮೂಳೆಗಳಿಗೆ ಬಲನೀಡುವುದು. ಇದರಿಂದ ಹಲಸಿನ ಹಣ್ಣು ತಿಂದರೆ ಅದು ಮೂಳೆಗಳಿಗೆ ಶಕ್ತಿ ನೀಡುವುದು. ಕ್ಯಾಲ್ಸಿಯಂ ಜತೆಗೆ ಇದರಲ್ಲಿ ವಿಟಮಿನ್ ಸಿ ಮತ್ತು ಮೆಗ್ನಿಶಿಯಂ ಸಮೃದ್ಧವಾಗಿದ್ದು, ಕ್ಯಾಲ್ಸಿಯಂ ಹೀರಿಕೊಳ್ಳಲು ನೆರವಾಗುವುದು.

ನರ ವ್ಯವಸ್ಥೆಗೆ ಬಲ

ನಿಶ್ಯಕ್ತಿ, ಒತ್ತಡ ಮತ್ತು ಸ್ನಾಯುಗಳಲ್ಲಿನ ದುರ್ಬಲತೆಯನ್ನು ಹಲಸಿನ ಹಣ್ಣು ಸೇವಿಸುವ ಮೂಲಕ ನಿವಾರಣೆ ಮಾಡಬಹುದು. ಹಲಸಿನ ಹಣ್ಣಿನಲ್ಲಿ ಥೈಮೇನ್ ಮತ್ತು ನಿಯಾಸಿನ್ ನಂತಹ ವಿಟಮಿನ್ ಗಳು ಇರುವ ಕಾರಣದಿಂದಾಗಿ ಇದು ದೇಹಕ್ಕೆ ಶಕ್ತಿ ನೀಡುವುದು.ಇಷ್ಟು ಮಾತ್ರವಲ್ಲದೆ ಹಲಸಿನ ಹಣ್ಣಿನಲ್ಲಿ ಇರುವಂತಹ ಇನ್ನೂ ಹಲವಾರು ರೀತಿಯ ಆರೋಗ್ಯ ಲಾಭಗಳ ಬಗ್ಗೆ ಅಧ್ಯಯನಗಳು ನಡೆಯುತ್ತಲಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ