ಆ್ಯಪ್ನಗರ

ದೀರ್ಘಕಾಲದ ಮಂಡಿ ನೋವಿನ ನಿವಾರಣೆಗೆ ಆಪಲ್ ಸೈಡರ್ ವಿನೆಗರ್‌ ಟ್ರೈ ಮಾಡಿ!

ಮಂಡಿ ನೋವು ಕಡಿಮೆ ಮಾಡಿಕೊಳ್ಳಲು ನೀವು ನಿಸರ್ಗದತ್ತವಾದ ಪರಿಹಾರವನ್ನು ಹುಡುಕುತ್ತಿದ್ದರೆ ಆಪಲ್ ಸೈಡರ್ ವಿನೆಗರ್ ಸಹಾಯ ಮಾಡಬಲ್ಲದು

Vijaya Karnataka Web 26 Jun 2021, 3:07 pm
ಮನುಷ್ಯನಿಗೆ ವಯಸ್ಸಾದ ಮೇಲೆ ಒಂದಲ್ಲಾ ಒಂದು ಕಾಯಿಲೆಗಳು ಕಾಣಿಸಿಕೊಳ್ಳುತ್ತವೆ. ಆದರೆ ಬಹುತೇಕ ಆರೋಗ್ಯ ಸಮಸ್ಯೆಗಳು ತಾತ್ಕಾಲಿಕವಾಗಿರದೆ ದೀರ್ಘ ಕಾಲ ಉಳಿಯುವ ತೊಂದರೆಗಳಾಗಿ ಜೀವ ಹಿಂಡುತ್ತವೆ. ಕೆಲವರಿಗೆ ಕೇವಲ ಅರ್ಧ ವಯಸ್ಸಿಗೆ ವಿವಿಧ ಬಗೆಯ ಆರೋಗ್ಯದ ತೊಂದರೆಗಳು ಜೊತೆಗೆ ಮೂಳೆಗಳಿಗೆ ಸಂಬಂಧ ಪಟ್ಟ ಸಮಸ್ಯೆಗಳು ಎದುರಾಗುತ್ತವೆ.
Vijaya Karnataka Web try apple cider vinegar to get rid from knee pain naturally
ದೀರ್ಘಕಾಲದ ಮಂಡಿ ನೋವಿನ ನಿವಾರಣೆಗೆ ಆಪಲ್ ಸೈಡರ್ ವಿನೆಗರ್‌ ಟ್ರೈ ಮಾಡಿ!


ಅಂತಹ ಮೂಳೆಗಳ ಸಮಸ್ಯೆಯೆಂದರೆ ಅದು ಮಂಡಿ ನೋವು. ಇತ್ತೀಚಿಗೆ ಮಂಡಿನೋವು ಎನ್ನುವ ಸಮಸ್ಯೆ ಮಕ್ಕಳಿಗೆ ಹಾಗೂ ದೊಡ್ಡವರಿಗೆ ಕೂಡ ಕಾಡಲು ಪ್ರಾರಂಭ ಮಾಡಿದೆ. ಪ್ರಮುಖ ಕಾರಣ ಎಂದರೆ ದೇಹದಲ್ಲಿ ಮೂಳೆಗಳು ದುರ್ಬಲವಾಗಿರುವುದು. ಇದರಿಂದ ಸಣ್ಣ ಪುಟ್ಟ ಪೆಟ್ಟಾದರೂ ಅದರಿಂದ ಮೂಳೆಗಳಿಗೆ ಸಾಕಷ್ಟು ತೊಂದರೆ ಉಂಟಾಗುತ್ತದೆ.

ಕೆಲವರಿಗೆ ಬಹಳ ಚಿಕ್ಕ ವಯಸ್ಸಿಗೆ ಮೂಳೆಗಳು ಸವೆದ ಅನುಭವ ಇರುತ್ತದೆ. ಇನ್ನು ಇವರ ಜೊತೆ ಆರ್ಥ್ರೈಟಿಸ್, ಆಸ್ಟಿಯೋಪೋರೋಸಿಸ್ ಸಮಸ್ಯೆಗಳು ಬೇರೆ. ಯಾವುದೇ ಸಂದರ್ಭದಲ್ಲಿ ಇದ್ದಕ್ಕಿದ್ದಂತೆ ಕೈಕಾಲು ಹಿಡಿದುಕೊಂಡಂತೆ ಆಗುವುದು, ಕೈ ಕಾಲುಗಳು ಊದಿಕೊಳ್ಳುವುದು, ಕಾಲಿನ ಭಾಗ ಇದ್ದಕ್ಕಿಂದಂತೆ ಕೆಂಪು ಬಣ್ಣಕ್ಕೆ ತಿರುಗುವುದು, ಕೈಕಾಲುಗಳಲ್ಲಿ ಮುಳ್ಳು ಚುಚ್ಚಿದ ಅನುಭವ ಉಂಟಾಗುವುದು.

ಇವೆಲ್ಲವೂ ಮೂಳೆಗಳ ಆರಂಭಿಕ ಸಮಸ್ಯೆಯ ರೋಗಲಕ್ಷಣಗಳು ಎಂದು ಹೇಳಬಹುದು. ಇದರ ನಂತರದಲ್ಲಿ ಹೆಚ್ಚು ಹೊತ್ತು ನಿಂತುಕೊಳ್ಳಲು ಸಾಧ್ಯವಿರುವುದಿಲ್ಲ. ಸ್ವಲ್ಪ ದೂರ ನಡೆಯಲು ಆಗುವುದಿಲ್ಲ. ಮೆಟ್ಟಿಲು ಹತ್ತಲು ಕಷ್ಟವಾಗುತ್ತದೆ. ಇನ್ನು ಇತ್ಯಾದಿ ಸಮಸ್ಯೆಗಳು ಒಂದರ ಮೇಲೊಂದರಂತೆ ಬರಲು ಪ್ರಾರಂಭವಾಗುತ್ತವೆ.

ಆದರೆ ಇವುಗಳಿಗೆ ನೈಸರ್ಗಿಕವಾಗಿ ಮನೆಯಲ್ಲಿ ಮಾಡಿಕೊಳ್ಳಬಹುದಾದ ಹಲವಾರು ಪರಿಹಾರಗಳಿವೆ. ನಿಸರ್ಗದತ್ತವಾದ ಪರಿಹಾರಗಳು ಎಂದಿಗೂ ತುಂಬಾ ಪರಿಣಾಮಕಾರಿ ಮತ್ತು ಯಾವುದೇ ಅಡ್ಡ ಪರಿಣಾಮಗಳನ್ನು ಉಂಟು ಮಾಡುವುದಿಲ್ಲ. ಈ ವಿಚಾರದಲ್ಲಿ ಆಪಲ್ ಸೈಡರ್ ವಿನೆಗರ್ ತಕ್ಕ ಮಟ್ಟಿಗೆ ನಿರೀಕ್ಷಿತ ಪ್ರಮಾಣದಲ್ಲಿ ನಿಮಗೆ ಸಹಾಯ ಮಾಡುತ್ತದೆ ಎಂದು ಹೇಳಬಹುದು.

​ಆಪಲ್ ಸೈಡರ್ ವಿನೆಗರ್ ಮೂಳೆಗಳ ಆರೋಗ್ಯಕ್ಕೆ ಹೇಗೆ ಸಹಕಾರಿ?

  • ನಾವು ಸೇವನೆ ಮಾಡುವ ಆಹಾರದಲ್ಲಿ ಕಂಡುಬರುವ ಖನಿಜಾಂಶಗಳು ಕೆಲವೊಮ್ಮೆ ನಮ್ಮ ಮೂಳೆಗಳ ಕೀಲುಗಳ ಭಾಗದಲ್ಲಿ ದೀರ್ಘಕಾಲದವರೆಗೆ ವಿಷಕಾರಿ ಅಂಶಗಳ ರೂಪದಲ್ಲಿ ಶೇಖರಣೆ ಆಗಿರುತ್ತವೆ.
  • ಯಾವಾಗ ನಮ್ಮ ದೇಹದ ಜೀರ್ಣ ಶಕ್ತಿ ಸರಿಯಾಗಿ ಕೆಲಸ ಮಾಡಲು ಆಗುವುದಿಲ್ಲ ಆ ಸಂದರ್ಭದಲ್ಲಿ ಈ ರೀತಿಯ ಸಮಸ್ಯೆ ಎದುರಾಗುತ್ತದೆ. ಹೀಗೆ ಶೇಖರಣೆಯಾದ ಖನಿಜಾಂಶಗಳು ಕೀಲುಗಳಿಗೆ ಸರಿಯಾಗಿ ಚಲಿಸಲು ಅನುಕೂಲ ಮಾಡಿಕೊಡುವುದಿಲ್ಲ.
  • ಇದು ಸಾಧಾರಣವಾಗಿ ಮಂಡಿ ನೋವಿಗೆ ಕಾರಣವಾಗುತ್ತದೆ. ಇಂತಹ ಸಂದರ್ಭದಲ್ಲಿ ಆಪಲ್ ಸೈಡರ್ ವಿನೆಗರ್ ಆಮ್ಲಿಯ ಪ್ರಭಾವಕ್ಕೆ ವಿರುದ್ಧವಾದ ಗುಣಲಕ್ಷಣಗಳನ್ನು ಹೊಂದಿರುವುದರಿಂದ ಖನಿಜಾಂಶಗಳು ಕರಗುವಂತೆ ಮಾಡಿ ದೇಹದಿಂದ ಹೊರಹಾಕುತ್ತದೆ. ಇದರಿಂದ ಸರಾಗವಾಗಿ ಕೀಲುಗಳು ಆಡಲು ಅನುಕೂಲವಾಗುತ್ತದೆ. ನೋವು ಸಹ ಕ್ರಮೇಣವಾಗಿ ಕಡಿಮೆಯಾಗುತ್ತದೆ.

ರಾತ್ರಿ ಮಲಗುವ ಮೊದಲು ಒಂದು ಚಮಚ ಆಪಲ್ ಸೈಡರ್ ವಿನೆಗರ್ ಸೇವಿಸಿ ನೋಡಿ!

​ಮೂಳೆಗಳಿಗೆ ಸಂಬಂಧಪಟ್ಟ ಸಮಸ್ಯೆಗಳಿಗೆ

  • ಆಪಲ್ ಸೈಡರ್ ವಿನೆಗರ್ ನಲ್ಲಿ ಆಂಟಿ ಇನ್ಫಾಮೇಟರಿ ಗುಣ ಲಕ್ಷಣಗಳು ಹೆಚ್ಚಾಗಿವೆ. ಇದರಿಂದ ಸಾಕಷ್ಟು ಬಗೆಯ ಆರೋಗ್ಯ ಸಮಸ್ಯೆಗಳಿಗೆ ಪರಿಹಾರ ಸಿಕ್ಕಿದಂತೆ ಆಗುತ್ತದೆ. ಉದಾಹರಣೆಗೆ ಮೂಳೆಗಳಿಗೆ ಸಂಬಂಧಪಟ್ಟ ಆರ್ಥರೈಟಿಸ್, ದೇಹಕ್ಕೆ ಸಂಬಂಧಪಟ್ಟ ತೂಕ ಹೆಚ್ಚಾಗುವಿಕೆ ಮತ್ತು ಗಂಟಲು ನೋವಿನ ಸಮಸ್ಯೆ ಇತ್ಯಾದಿ.
  • ಆಪಲ್ ಸೈಡರ್ ವಿನೆಗರ್ ಮನುಷ್ಯನ ದೇಹಕ್ಕೆ ಕ್ಯಾಲ್ಸಿಯಂ, ಮೆಗ್ನೀಷಿಯಂ, ಪೊಟ್ಯಾಶಿಯಂ, ಫಾಸ್ಪರಸ್ ಮತ್ತು ಇತ್ಯಾದಿ ಖನಿಜಾಂಶಗಳನ್ನು ಒದಗಿಸಿ ಕೊಡುವುದರಿಂದ ಮೂಳೆಗಳು ದುರ್ಬಲವಾಗಿದ್ದರೂ ಸಹ ನಂತರದಲ್ಲಿ ಸದೃಢವಾಗುತ್ತವೆ.

​ಹಾಗಾದರೆ ಮಂಡಿನೋವಿಗೆ ಆಪಲ್ ಸೈಡರ್ ವಿನೆಗರ್ ಅನ್ನು ಪರಿಹಾರ ಎನ್ನಬಹುದಾ?

  • ನಿಮಗೆಲ್ಲ ಗೊತ್ತಿರುವ ಹಾಗೆ ಆಪಲ್ ಸೈಡರ್ ವಿನಗರ್ ಆಮ್ಲಿಯ ಪ್ರಭಾವವನ್ನು ಹೊಂದಿದೆ. ಹಾಗಾಗಿ ಇದನ್ನು ಬಳಸುವ ಮುಂಚೆ ನೀರಿನಲ್ಲಿ ಮಿಶ್ರಣ ಮಾಡಬೇಕಾಗುತ್ತದೆ.
  • ನೀರಿನಲ್ಲಿ ಮಿಶ್ರಣ ಮಾಡದೆ ಆಪಲ್ ಸೈಡರ್ ವಿನೆಗರ್ ಸೇವನೆ ಮಾಡಲು ಮುಂದಾದರೆ ಅದರಿಂದ ಹಲ್ಲುಗಳ ಮೇಲ್ಭಾಗದ ಎನಾಮಲ್ ಹಾಳಾಗುತ್ತದೆ ಮತ್ತು ಅನ್ನನಾಳದ ಭಾಗದಲ್ಲಿ ಕಿರಿಕಿರಿ ಉಂಟಾಗುತ್ತದೆ.
  • ಮಂಡಿ ನೋವಿನ ಸಮಸ್ಯೆ ಪರಿಹಾರ ಮಾಡಿಕೊಳ್ಳಲು ನೀವು 2 ಟೀ ಚಮಚ ಆಪಲ್ ಸೈಡರ್ ವಿನಿಗರ್ ಅನ್ನು 2 ಲೋಟ ಫಿಲ್ಟರ್ ಮಾಡಿದ ನೀರಿನಲ್ಲಿ ಮಿಶ್ರಣ ಮಾಡಿ ಇಡೀ ದಿನ ಆಗಾಗ ಕುಡಿಯಬೇಕು. ಅಥವಾ ನೀವು ರಾತ್ರಿ ಮಲಗುವ ಸಂದರ್ಭದಲ್ಲಿ ಮಲಗುವ ಮುಂಚೆ ಸೇವನೆ ಮಾಡಿದರೆ ಸಾಕಾಗುತ್ತದೆ.

ಕೂರಲು ಆಗಲ್ಲ, ನಿಲ್ಲಲೂ ಆಗಲ್ಲ, ಮಂಡಿ ನೋವಿಗೆ ಬೆಸ್ಟ್ ‌ ಮನೆಮದ್ದು

​ಇನ್ನೊಂದು ವಿಧಾನ.....

  • ಒಂದು ವೇಳೆ ಅದು ಸಾಧ್ಯವಾಗದಿದ್ದರೆ, ಇನ್ನೊಂದು ಪರಿಹಾರವನ್ನು ಸುಲಭವಾಗಿ ಮಾಡಿಕೊಳ್ಳಬಹುದು. ಅದೇನೆಂದರೆ ನೀವು ಸ್ನಾನ ಮಾಡುವ ಮುಂಚೆ ಒಂದು ಬಕೆಟ್ ಉಗುರು ಬೆಚ್ಚಗಿನ ನೀರಿಗೆ ಸುಮಾರು ಎರಡು ಕಪ್ ಆಪಲ್ ಸೈಡರ್ ವಿನಿಗರ್ ಹಾಕಿ ಅದರಲ್ಲಿ ನಿಮ್ಮ ಮಂಡಿಗಳನ್ನು ಸುಮಾರು 30 ನಿಮಿಷಗಳ ಕಾಲ ನೆನೆಸಬೇಕು. ಸಂಪೂರ್ಣವಾಗಿ ನಿಮಗೆ ಮಂಡಿ ನೋವು ಹೋಗುವವರೆಗೆ ಪ್ರತಿ ದಿನ ಇದೇ ರೀತಿ ಮಾಡಿ.
  • ಮೂರನೆಯ ಪರಿಹಾರ ಎಂದರೆ ನಿಮಗೆ ಮಂಡಿ ನೋವು ಕಂಡು ಬರುವ ಜಾಗದಲ್ಲಿ ಆಪಲ್ ಸೈಡರ್ ವಿನೆಗರ್ ಅನ್ನು ಅಷ್ಟೇ ಪ್ರಮಾಣದ ತೆಂಗಿನ ಎಣ್ಣೆ ಅಥವಾ ಆಲಿವ್ ಆಯಿಲ್ ಜೊತೆಗೆ ಮಿಶ್ರಣ ಮಾಡಿ ಅನ್ವಯಿಸಿ ಚೆನ್ನಾಗಿ ಮಸಾಜ್ ಮಾಡಿ. ದಿನಕ್ಕೆ ಒಂದು ಅಥವಾ ಎರಡು ಬಾರಿ ಈ ರೀತಿ ಮಾಡುವುದರಿಂದ ಕ್ರಮೇಣವಾಗಿ ಮಂಡಿ ನೋವು ಕಡಿಮೆಯಾಗುತ್ತದೆ.

​ಮಂಡಿ ನೋವಿನ ಪರಿಹಾರಕ್ಕೆ ಇನ್ನು ಕೆಲವು ಸರಳ ಉಪಾಯಗಳು

  • ಸಣ್ಣ ಪ್ರಮಾಣದಲ್ಲಿ ಅಥವಾ ಈಗತಾನೇ ಶುರುವಾಗಿರುವ ಮಂಡಿನೋವಿಗೆ ಮೇಲೆ ಹೇಳಿದ ಪರಿಹಾರಗಳು ಅತ್ಯಂತ ಪರಿಣಾಮಕಾರಿಯಾಗಿ ಕೆಲಸ ಮಾಡುತ್ತವೆ.
  • ಆದರೆ ಒಂದು ವೇಳೆ ನಿಮ್ಮ ಮಂಡಿ ನೋವಿನ ಸಮಸ್ಯೆ ತುಂಬಾ ದೀರ್ಘ ಕಾಲದಿಂದ ಸ್ವಲ್ಪ ಹೆಚ್ಚಿನ ಪ್ರಮಾಣದಲ್ಲಿದ್ದರೆ ನಿಮ್ಮ ವೈದ್ಯರನ್ನು ಸಂಪರ್ಕಿಸಿ ಸರಿಯಾದ ರೋಗನಿರ್ಣಯ ಮಾಡಿ ಚಿಕಿತ್ಸೆಯನ್ನು ಪಡೆದುಕೊಳ್ಳಬಹುದು. ಮಂಡಿ ನೋವಿನ ಸಮಸ್ಯೆಗೆ ಹೊಂದಿಕೊಂಡಂತೆ ಮನೆಯಲ್ಲಿ ಮಾಡಬಹುದಾದ ಇನ್ನು ಕೆಲವು ಸುಲಭ ಪರಿಹಾರಗಳು ಎಂದರೆ....

​ಕೋಲ್ಡ್ ಕಂಪ್ರೆಸ್ ಅನ್ವಯಿಸಿ

  • ಒಂದು ತೆಳುವಾದ ಕಾಟನ್ ಬಟ್ಟೆ ತೆಗೆದುಕೊಂಡು ಅದರಲ್ಲಿ ಐಸ್ ಕ್ಯೂಬ್ ಗಳನ್ನು ಹಾಕಿ ಬಟ್ಟೆಯನ್ನು ಸುತ್ತಿ ನಿಮಗೆ ಮಂಡಿ ನೋವು ಕಂಡು ಬರುವ ಜಾಗದಲ್ಲಿ ಇದರಿಂದ ಒತ್ತಿಕೊಳ್ಳಬೇಕು.
  • ಇದು ರಕ್ತನಾಳಗಳ ಊದಿಕೊಳ್ಳುವಿಕೆ ಪ್ರಕ್ರಿಯೆಯನ್ನು ತಡೆದು ನೋವಿರುವ ಜಾಗಕ್ಕೆ ಅತಿಹೆಚ್ಚಿನ ಪ್ರಮಾಣದಲ್ಲಿ ರಕ್ತಸಂಚಾರ ಆಗುವುದನ್ನು ತಪ್ಪಿಸುತ್ತದೆ.
  • ಇದರಿಂದ ಶೀಘ್ರವಾಗಿ ಮಂಡಿ ನೋವು ಪರಿಹಾರವಾಗುತ್ತದೆ. ದಿನದಲ್ಲಿ ಎರಡರಿಂದ ಮೂರು ಬಾರಿ ಈ ರೀತಿ ಮಾಡುವುದರಿಂದ ಆದಷ್ಟು ಬೇಗನೆ ನಿಮ್ಮ ಮಂಡಿನೋವು ವಾಸಿಯಾಗುತ್ತದೆ.

​ಶುಂಠಿ ಈ ರೀತಿ ಬಳಕೆ ಮಾಡಿ

  • ಸಾಧಾರಣವಾಗಿ ಎಲ್ಲರ ಮನೆಯಲ್ಲೂ ಶುಂಠಿ ಇದ್ದೇ ಇರುತ್ತದೆ. ಆರ್ಥ್ರೈಟಿಸ್ ಸಮಸ್ಯೆಗೆ ಇದೊಂದು ಶಕ್ತಿಯುತವಾದ ಪರಿಹಾರ ಎಂದು ಹೇಳುತ್ತಾರೆ.
  • ಅದೇ ರೀತಿ ಮೈಕೈ ಸೆಳೆತ, ಮೂಳೆಗಳ ನೋವು, ಕೈಕಾಲುಗಳಲ್ಲಿ ಮುಳ್ಳು ಚುಚ್ಚಿದ ಅನುಭವ ಉಂಟಾಗುವುದು, ಮಾಂಸ ಖಂಡಗಳಿಗೆ ಗಾಯ ಉಂಟಾಗುವುದು ಹೀಗೆ ಹಲವಾರು ಸಮಸ್ಯೆಗಳಿಗೆ ಶುಂಠಿ ಪರಿಹಾರವಾಗಿ ಕೆಲಸ ಮಾಡುತ್ತದೆ.
  • ಶುಂಠಿಯಲ್ಲಿ anti-inflammatory ಗುಣ ಲಕ್ಷಣಗಳು ಹೆಚ್ಚಾಗಿ ಸಿಗುವುದರಿಂದ ಊದಿಕೊಂಡಿರುವ ಮಂಡಿಯ ಭಾಗವನ್ನು ತನ್ನ ಪ್ರಭಾವದ ಮೂಲಕ ನಿಯಂತ್ರಣ ಮಾಡಿ ನೋವು ಕಡಿಮೆಯಾಗುವಂತೆ ಮಾಡುತ್ತದೆ. ಇದಕ್ಕಾಗಿ ಪ್ರತಿ ದಿನ ಎರಡರಿಂದ ಮೂರು ಕಪ್ ಶುಂಠಿ ಚಹಾ ಸೇವನೆ ಮಾಡುವ ಅಭ್ಯಾಸವನ್ನು ಮಾಡಿಕೊಳ್ಳಬೇಕು.
  • ಒಂದು ವೇಳೆ ನಿಮ್ಮ ಬಳಿ ಶುಂಠಿಯ ಎಣ್ಣೆ ಇದ್ದರೆ ಅದರಿಂದ ನೋವಿರುವ ಜಾಗಕ್ಕೆ ಚೆನ್ನಾಗಿ ಮಸಾಜ್ ಮಾಡಿ. ಇದನ್ನು ಸಹ ದಿನದಲ್ಲಿ ಎರಡರಿಂದ ಮೂರು ಬಾರಿ ಮಾಡಬೇಕು.
  • ಇದರ ಜೊತೆಗೆ ಇನ್ನೊಂದು ಪರಿಹಾರವೆಂದರೆ ಹಸಿಶುಂಠಿಯನ್ನು ನಾಲ್ಕೈದು ಬೆಳ್ಳುಳ್ಳಿ ಎಸಳುಗಳ ಜೊತೆ ಚೆನ್ನಾಗಿ ಜಜ್ಜಿ ಪೇಸ್ಟ್ ತಯಾರಿಸಿಕೊಂಡು ಅದನ್ನು ನೋವಿರುವ ಭಾಗದಲ್ಲಿ ಅನ್ವಯಿಸಿ ಮಸಾಜ್ ಮಾಡಬೇಕು. ಪ್ರತಿದಿನ ಕೇವಲ ಒಂದು ಬಾರಿ ಈ ರೀತಿ ಮಾಡುವುದರಿಂದ ಶೀಘ್ರವಾಗಿ ಮಂಡಿ ನೋವು ನಿವಾರಣೆಯಾಗುತ್ತದೆ.

ಶೀತ, ಕೆಮ್ಮು, ಅಜೀರ್ಣ, ಇನ್ನೂ ನಾನಾ ಸಮಸ್ಯೆಗಳಿಗೆ ಒಣ ಶುಂಠಿ ರಾಮಬಾಣ

​ಅರಿಶಿನ

  • ಅರಿಶಿನದಲ್ಲಿ ನಿಮಗೆಲ್ಲ ಗೊತ್ತಿರುವ ಹಾಗೆ ' Curcumin'ಎಂಬ ಅಂಶ ಅಡಗಿದೆ. ಇದು anti-inflammatory ಗುಣಲಕ್ಷಣಗಳನ್ನು ಒಳಗೊಂಡಿದೆ. ಇದರಲ್ಲಿ ಆಂಟಿಆಕ್ಸಿಡೆಂಟ್ ಲಕ್ಷಣಗಳು ಸಹ ಕಂಡು ಬರುತ್ತವೆ.
  • ಮಂಡಿ ನೋವು ನಿವಾರಣೆಯಲ್ಲಿ ಇದು ಬಹಳ ಪ್ರಮುಖವಾಗಿ ಕೆಲಸ ಮಾಡುತ್ತದೆ. ಮೂಳೆಗಳ ರೋಗ ತಜ್ಞರು ಹೇಳಿರುವ ಹಾಗೆ ಅರಿಶಿನ ಆರ್ಥ್ರೈಟಿಸ್ ಸಮಸ್ಯೆ ಹೆಚ್ಚಾಗುವ ಸಾಧ್ಯತೆಯನ್ನು ತಪ್ಪಿಸುತ್ತದೆ. ಇದರಿಂದ ನಂತರದಲ್ಲಿ ಉಂಟಾಗುವ ಮಂಡಿ ನೋವು ಸಮಸ್ಯೆ ಮೊದಲೇ ತಪ್ಪಿದಂತೆ ಆಗುತ್ತದೆ.
  • ಬಹಳ ಹಿಂದಿನಿಂದ ವಿಪರೀತ ಮಂಡಿ ನೋವಿನ ಸಮಸ್ಯೆ ಇರುವವರು ಈ ರೀತಿ ಮಾಡಬಹುದು. ಅದೇನೆಂದರೆ ಅರ್ಧ ಟೀ ಚಮಚ ಶುಂಠಿ ತುರಿ ಮತ್ತು ಅರ್ಧ ಟೀ ಚಮಚ ಅರಿಶಿನವನ್ನು ಒಂದು ಕಪ್ ನೀರಿನಲ್ಲಿ ಹಾಕಿ ಚೆನ್ನಾಗಿ ಕುದಿಸಿ.
  • ಸುಮಾರು ಹತ್ತು ನಿಮಿಷಗಳು ಕಳೆದ ಮೇಲೆ ಇದಕ್ಕೆ ನಿಂಬೆಹಣ್ಣಿನ ರಸ ಮತ್ತು ಜೇನುತುಪ್ಪವನ್ನು ಸೇರಿಸಿ. ಇದನ್ನು ಸೋಸಿ ಪ್ರತಿದಿನ ಎರಡು ಬಾರಿ ಸೇವನೆ ಮಾಡಬೇಕು. ರಾತ್ರಿ ಮಲಗುವ ಸಂದರ್ಭದಲ್ಲಿ ಒಂದು ಲೋಟ ಹಾಲಿಗೆ ಅರಿಶಿನವನ್ನು ಹಾಕಿ ಮಿಶ್ರಣ ಮಾಡಿ ಸೇವನೆ ಮಾಡುವ ಅಭ್ಯಾಸ ಮಾಡಿಕೊಳ್ಳಿ.
  • ಈಗಾಗಲೇ ಯಾರಾದರೂ ದೇಹದಲ್ಲಿ ಕೊಲೆಸ್ಟ್ರಾಲ್ ಅಂಶವನ್ನು ಕಡಿಮೆ ಮಾಡುವ ಮಾತ್ರೆಗಳನ್ನು ಅಥವಾ ಔಷಧಗಳನ್ನು ತೆಗೆದುಕೊಳ್ಳುತ್ತಿದ್ದರೆ, ಅಂತಹವರು ಅರಿಶಿನದ ಪ್ರಯೋಗದಿಂದ ದೂರವುಳಿಯುವುದು ಒಳ್ಳೆಯದು. ಏಕೆಂದರೆ ಇದು ಸಹ ರಕ್ತವನ್ನು ಶುದ್ಧೀಕರಣ ಮಾಡುತ್ತದೆ ಎಂದು ಹೇಳುತ್ತಾರೆ. ಇದರಿಂದ ಆರೋಗ್ಯದ ಮೇಲೆ ಅಡ್ಡ ಪರಿಣಾಮ ಉಂಟಾಗುವ ಸಾಧ್ಯತೆ ಇದೆ.

ದಿನಾ ಒಂದು ಗ್ಲಾಸ್ ಅರಿಶಿನ ಹಾಲು ಕುಡಿದರೆ ಈ ಕಾಯಿಲೆಗಳೆಲ್ಲಾ ದೂರ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ