ಆ್ಯಪ್ನಗರ

ಇಲ್ಲಿದೆ ನೋಡಿ ಟಾಪ್ 15 ಅಡುಗೆ ಟಿಪ್ಸ್

ಅಡುಗೆ ಟಿಪ್ಸ್ ಅಡುಗೆ ಮನೆಯಲ್ಲಿ ಹಾಕಬೇಕಾದ ಶ್ರಮವನ್ನು ಕಡಿಮೆ ಮಾಡುತ್ತದೆ ಹಾಗೂ ಆಹಾರದ ರುಚಿಯನ್ನು ಹೆಚ್ಚಿಸುತ್ತದೆ. ಸಾರಿಗೆ ಉಪ್ಪು ಜಾಸ್ತಿ, ಟೊಮೆಟೊ ಸಿಪ್ಪೆ ಬಿಡಿಸಬೇಕು ಇಂಥ ಅಡುಗೆ ಸಮಸ್ಯೆಗಳಿಗೆ ಇಲ್ಲಿದೆ ನೋಡಿ ಸೂಪರ್ ಟಿಪ್ಸ್.

Vijaya Karnataka Web 7 Jul 2019, 4:54 pm
ಅಡುಗೆ ಮಾಡುವಾಗ ಕೆಲವು ವಿಷಯಗಳತ್ತ ಹೆಚ್ಚಿನ ಗಮನ ಹರಿಸಿದರೆ ಕೆಲವು ಖಾದ್ಯ ಇನ್ನಷ್ಟು ರುಚಿಯಾಗುತ್ತದೆ ಹಾಗೂ ಅಡುಗೆ ಕೆಲಸವೂ ಸುಲಭವಾಗುತ್ತದೆ.
Vijaya Karnataka Web cooking tips


1. ಸಾರಿಗೆ ಉಪ್ಪು ಹೆಚ್ಚಾದರೆ ಕಬ್ಬಿಣದ ಸೌಟನ್ನು ಒಲೆಯ ಮೇಲಿಟ್ಟು ಅದು ಕೆಂಪಗೆ ಕಾದ ಮೇಲೆ ಸಾರಿನಲ್ಲಿ ಅದ್ದಿದರೆ ಉಪ್ಪು ಸರಿಯಾಗುತ್ತದೆ.

2. ದ್ರಾಕ್ಷಿ, ಟೊಮೆಟೊ, ಕಿತ್ತಳೆ ಹಣ್ಣುಗಳನ್ನು ಕುದಿಯುವ ನೀರಿನಲ್ಲಿ ಎರಡು ನಿಮಿಷಗಳ ಕಾಲ ಇಟ್ಟು ನಂತರ ತಣ್ಣೀರಿಗೆ ಹಾಕಿದರೆ ಸಿಪ್ಪೆಯನ್ನು ಸುಲಭವಾಗಿ ಸುಲಿಯಬಹುದು.

3. ಗಾಜಿನ ಲೋಟಕ್ಕೆ ಬಿಸಿ ಬಿಸಿ ಕಾಫಿ ಅಥವಾ ಟೀ ಹಾಕುವ ಮುಂಚೆ ಆ ಲೋಟದಲ್ಲಿ ಒಂದು ಚಮಚ ಹಾಕಿಟ್ಟರೆ ಲೋಟಕ್ಕೆ ಬಗ್ಗಿಸಿದ ಪೇಯದ ಬಿಸಿಯನ್ನು ಆ ಚಮಚ ಸಾಕಷ್ಟು ತೆಗೆದುಕೊಳ್ಳುವ ಕಾರಣ ಆ ಲೋಟ ಬಿಸಿಗೆ ಒಡೆಯುವುದಿಲ್ಲ.

4. ಕಾಫಿಗೆ ಒಂದು ಚಿಟಿಕೆ ಉಪ್ಪು ಹಾಕಿ ಕಲಸಿ ಕುಡಿದರೆ ಕಾಫಿಯ ರುಚಿ ಹೆಚ್ಚುತ್ತದೆ.

5. ಆಲೂಗೆಡ್ಡೆ ಬೇಯಿಸಿದ ನೀರಿನಿಂದ ಬೆಳ್ಳಿ ಮತ್ತು ಇತರ ಪಾತ್ರೆಗಳನ್ನು ಅಚ್ಚುಕಟ್ಟಾಗಿ ತೊಳೆಯಬಹುದು.

6. ಟೀ ಸೊಪ್ಪನ್ನು ಗಾಜಿನ ಜಾಡಿಗಳಲ್ಲಿ ಹಾಕಿಟ್ಟರೆ ಟೀ ರುಚಿ ಹೆಚ್ಚುತ್ತದೆ. ಟೀ ಕುದಿಯುವಾಗ ಕಿತ್ತಳೆ ಸಿಪ್ಪೆ ಅಥವಾ ಏಲಕ್ಕಿ ಸಿಪ್ಪೆ ಹಾಕಿದರೆ ವಿಶಿಷ್ಟ ರುಚಿ ಸಿಗುತ್ತದೆ.

7. ತೊಗರಿ ಬೇಳೆ ಬೇಯಲು ಇಡುವಾಗ ಅದರ ಜೊತೆ ಒಂದು ಚೂರು ತೆಂಗಿನಕಾಯಿ ಹಾಕಿದರೆ ಬೇಳೆ ಬೇಗ ಮತ್ತು ಚೆನ್ನಾಗಿ ಬೇಯುತ್ತದೆ.

8. ಕಡಗೋಲನ್ನು ಬಿಸಿ ನೀರಿನಲ್ಲಿ ಹಾಕಿ ತೆಗೆದು ಮಜ್ಜಿಗೆ ಕಡೆದರೆ ಅದಕ್ಕೆ ಬೆಣ್ಣೆ ಅಂಟುವುದಿಲ್ಲ. ಮಳೆಗಾಲದಲ್ಲಿ ಮಿಕ್ಸಿಯಲ್ಲಿ ಬೆಣ್ಣೆ ತೆಗೆಯುವಾಗ ಬಿಸಿ ನೀರು ಮತ್ತು ಬೇಸಿಗೆಯಲ್ಲಿ ತಂಪು ನೀರು ಹಾಕಿದರೆ ಬೆಣ್ಣೆ ಸುಲಭವಾಗಿ ಬರುತ್ತದೆ.

9. ಹಾಲು ಕಾಯಿಸುವಾಗ ಆ ಪಾತ್ರೆಯಲ್ಲಿ ಒಂದು ಸ್ಟೀಲ್‌ ಸೌಟು ಹಾಕಿಟ್ಟರೆ ಹಾಲು ಉಕ್ಕಿ ಚೆಲ್ಲುವುದಿಲ್ಲ. ಸೊಪ್ಪು ಬೇಯಿಸುವಾಗ ಪಾತ್ರೆ ಮೇಲೆ ಮುಚ್ಚಳ ಇಡಬೇಡಿ. ಇದರಿಂದ ಸೊಪ್ಪಿನ ಹಸಿರು ಬಣ್ಣ ಹಾಗೆಯೇ ಇರುತ್ತದೆ.

10. ಕಾಲಿಫ್ಲವರ್‌ಗೆ ಸ್ವಲ್ಪ ವಿನಿಗರ್‌ ಬೆರೆಸಿ ಬೇಯಿಸಿದರೆ ಅದರ ಬಿಳಿ ಬಣ್ಣ ಹಾಗೆಯೇ ಇರುತ್ತದೆ. ಮಸಾಲೆ ಅಥವಾ ಕೊಬ್ಬರಿ ರುಬ್ಬುವಾಗ ಸ್ವಲ್ಪ ಉಪ್ಪು ಹಾಕಿದರೆ ಕೊಬ್ಬರಿ ಬೇಗ ನುಣ್ಣಗಾಗುತ್ತದೆ ಮತ್ತು ಮೈ ಮೇಲೆ ಸಿಡಿಯುವುದಿಲ್ಲ.

11. ಪಲಾವ್‌ ಮಾಡುವ ಮೊದಲು ಬಾಸುಮತಿ ಅಕ್ಕಿಯನ್ನು ಸ್ವಲ್ಪ ಹೊತ್ತು ನೀರಿನಲ್ಲಿ ನೆನೆಸಿಟ್ಟು ನೀರು ಬಸಿದು ಮೂರ್ನಾಲ್ಕು ನಿಮಿಷ ಹಾಗೆಯೇ ಬಿಟ್ಟು ನಂತರ ಪಲಾವ್‌ ಮಾಡಿದರೆ ಅನ್ನ ಮುದ್ದೆಯಾಗದೆ ಉದುರುದುರಾಗಿರುತ್ತದೆ.

12. ದೋಸೆ ಅಕ್ಕಿಗೆ ಸ್ವಲ್ಪ ಹೆಸರುಬೇಳೆ ಹಾಕಿ ರುಬ್ಬಿದರೆ ದೋಸೆ ಮೃದುವಾಗುತ್ತದೆ. ಬಾಳೆಕಾಯಿಯನ್ನು ಹೆಚ್ಚುವಾಗ ಕೈಗಳಿಗೆ ಮಜ್ಜಿಗೆ ಸವರಿದರೆ ಕೈ ಕಪ್ಪಾಗುವುದಿಲ್ಲ.

13. ಗಾಳಿ ಬರುವ ಸ್ಥಳದಲ್ಲಿ ಈರುಳ್ಳಿ ಹೆಚ್ಚಿದರೆ ಕಣ್ಣೀರು ಬರುವುದನ್ನು ತಪ್ಪಿಸಬಹುದು. ಕೈಯೆಲ್ಲಾ ಸೀಮೆಎಣ್ಣೆ ವಾಸನೆಯಿದ್ದರೆ ತಿಳಿ ಮಜ್ಜಿಗೆಯಿಂದ ಕೈಗಳನ್ನು ತೊಳೆಯಿರಿ.

14. ಬೆಳ್ಳಿ ಪಾತ್ರೆಗಳನ್ನು ವಿಭೂತಿಯಿಂದ ಮತ್ತು ಸ್ಟೀಲ್‌ ಪಾತ್ರೆಗಳನ್ನು ಗೋಧಿ ಹಿಟ್ಟಿನಿಂದ ತಿಕ್ಕಿ ತೊಳೆದರೆ ಅವುಗಳಲ್ಲಿ ಅಂಟಿದ ಜಿಡ್ಡು ಹೋಗಿ ಪಾತ್ರೆಗಳು ಹೊಳೆಯುತ್ತವೆ.

15. ಕೈಗಳಿಗೆ ಕೊಬ್ಬರಿ ಎಣ್ಣೆ ಹಚ್ಚಿಕೊಂಡು ಹಸಿ ಮೆಣಸಿನಕಾಯಿಗಳನ್ನು ಹೆಚ್ಚಿದರೆ ಕೈಗಳು ಉರಿಯುವುದಿಲ್ಲ. ಸೀಮೆ ಬದನೆಕಾಯಿ ಹೆಚ್ಚುವಾಗ ಅಂಗೈಗೆ ಕೊಬ್ಬರಿ ಎಣ್ಣೆ ಹಚ್ಚಿದರೆ ಕೈಯಲ್ಲಿ ಅಂಟಿನ ಸಿಪ್ಪೆ ಏಳುವುದಿಲ್ಲ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ