ಆ್ಯಪ್ನಗರ

ಮಲೆನಾಡಾದ ಮುಳುಗಡೆ ಜಿಲ್ಲೆ

ಬಾಗಲಕೋಟ : ಜಿಟಿ ಜಿಟಿ ಮಳೆ, ಎಲ್ಲರ ಮೈಮೇಲೆ ರೇನ್‌ ಕೋಟ್‌, ರಸ್ತೆಗಳ ಮೇಲೆ ನಡೆಯಲು ಕಷ್ಟ ಕಷ್ಟ...ಜಿಲ್ಲೆಯಾದ್ಯಂತ ಗುರುವಾರ ಕಂಡ ದೃಶ್ಯಗಳಿವು.

Vijaya Karnataka 17 Aug 2018, 5:00 am
ಬಾಗಲಕೋಟ : ಜಿಟಿ ಜಿಟಿ ಮಳೆ, ಎಲ್ಲರ ಮೈಮೇಲೆ ರೇನ್‌ ಕೋಟ್‌, ರಸ್ತೆಗಳ ಮೇಲೆ ನಡೆಯಲು ಕಷ್ಟ ಕಷ್ಟ...ಜಿಲ್ಲೆಯಾದ್ಯಂತ ಗುರುವಾರ ಕಂಡ ದೃಶ್ಯಗಳಿವು.
Vijaya Karnataka Web
ಮಲೆನಾಡಾದ ಮುಳುಗಡೆ ಜಿಲ್ಲೆ


ಮಳೆ ಎಂದರೆ ಹೀಗೆ ಬಂದು ಹಾಗೆ ಹೋಗುವುದು ಎಂದುಕೊಂಡ ಜಿಲ್ಲೆಯ ಜನರಿಗೆ ವರುಣ ಈ ಬಾರಿ ಭಾರಿ ದರ್ಶನ ಮಾಡಿಸಿದ್ದಾನೆ. ಜಿಲ್ಲೆಯಾದ್ಯಂತ ಒಂದು ವಾರದಿಂದ ಶುರುವಾಗಿರುವ ತುಂತುರು ಮಳೆ ಬುಧವಾರ ರಾತ್ರಿಯಿಡಿ ಸುರಿದು ವಾತಾವರಣ ಬದಲಾಯಿಸಿದೆ.

ಕಾಣದ ಸೂರ್ಯ

ಸದಾ ಬಿಸಿಲಿನಿಂದ ಕಂಗೊಳಿಸುವ ಮುಳುಗಡೆ ಜಿಲ್ಲೆಗೆ ಒಂದೇ ದಿನ ರಾತ್ರಿಯಿಡಿ ಸುರಿದ ಮಳೆಯಿಂದಾಗಿ ಮಲೆನಾಡಿನ ಕಳೆ ಬಂದಿದೆ. ಜಿಲ್ಲೆಯಲ್ಲಿ ಬುಧವಾರ ರಾತ್ರಿ ಆರಂಭಗೊಂಡ ತುಂತುರು ಮಳೆ ಗುರುವಾರ ಮಧ್ಯಾಹ್ನದವರೆಗೂ ಸುರಿದಿದೆ. ಆಗಾಗ ಅಲ್ಪ ಸ್ವಲ್ಪ ವಿರಾಮ ನೀಡಿದ್ದು ಬಿಟ್ಟರೆ ಬಹುತೇಕ ಒಂದಿಡೀ ರಾತ್ರಿ ವರ್ಷಧಾರೆಯಾಗಿದೆ. 'ಮಳೆ ನಿಂತೀತು' ಎಂದುಕೊಂಡು ಕೆಲಸಗಳನ್ನು ಮುಂದೂಡಿದ ಜನರು ಗುರುವಾರ ಪರದಾಡಿದರು. ಬುಧವಾರ ಮಧ್ಯಾಹ್ನದಿಂದ ಜಿಲ್ಲೆಯಲ್ಲಿ ಸೂರ್ಯ ಮುಖ ತೋರಿಸಿಲ್ಲ. ಆಕಾಶದಲ್ಲಿ ಮುಸುಕಿರುವ ಮೋಡಗಳು ಸೂರ್ಯನಿಗೆ ಪರದೆ ಹಾಕಿದಂತಿದೆ.

ಎಲ್ಲೆಡೆ ರಾಡಿ

ನಿರಂತರ ಜಿಟಿ ಜಿಟಿ ಮಳೆಯಿಂದಾಗಿ ನಗರ, ಪಟ್ಟಣ ಹಾಗೂ ಗ್ರಾಮಗಳ ವಾತಾವರಣವೇ ಬದಲಾಗಿದೆ. ಗುರುವಾರ ಬೆಳಗ್ಗೆ ಶಾಲೆಗೆ ಹೊರಟ ಮಕ್ಕಳು ಕಡ್ಡಾಯವಾಗಿ ರೇನ್‌ ಕೋಟ್‌ ಹಾಕಿಕೊಳ್ಳಬೇಕಾಯಿತು. ವರ್ಷಧಾರೆಯಿಂದಾಗಿ ರಸ್ತೆ ತುಂಬೆಲ್ಲ ರಾಡಿ ಹರಡಿದ್ದರಿಂದ ಹೆಜ್ಜೆಯಿಡುವುದು ಕಷ್ಟವಾಯಿತು. ಬಾಗಲಕೋಟದಲ್ಲಿ ಒಳಚರಂಡಿ ಕಾಮಗಾರಿಗಾಗಿ ರಸ್ತೆ ಅಗದಿರುವುದರಿಂದ ಬೈಕ್‌ ಸವಾರರು ಬ್ಯಾಲೆನ್ಸ್‌ ಮಾಡುವಲ್ಲಿ ಸೋತುಹೋದರು. ಸತತ ಜಿನುಗು ಮಳೆಯಿಂದಾಗಿ ಮನೆಗಳಿಂದ ಹೊರಬರದ ಜನರು ಮನೆಯಲ್ಲಿ ಚಹಾ ಕುಡಿದು ಚಳಿಗಾಲದ ವಾತಾವರಣವನ್ನೂ ಅನುಭವಿಸಿದರು. ಇನ್ನು ಹೊಟೇಲ್‌, ರಸ್ತೆ ಪಕ್ಕದ ಟೀ ಅಂಗಡಿಗಳಲ್ಲಿ ಬಿಸಿ ಬಿಸಿ ಚಹಾಕ್ಕಾಗಿ ಜನಸಂದಣಿ ಹೆಚ್ಚಾಯಿತು. ಈ ಮಧ್ಯೆ ಶ್ರಾವಣ ಶುಕ್ರವಾರದ ಲಕ್ಷ್ಮಿ ಪೂಜೆಗಾಗಿ ಬಾಳೆ ಎಲೆ, ಹಣ್ಣುಗಳ ಖರೀದಿಯನ್ನು ಮಹಿಳೆಯರು ಮಳೆಯ ಮಧ್ಯೆ ನಡೆಸಿದರು.

ಸತತ ವರ್ಷಧಾರೆ

ಮಹಾರಾಷ್ಟ್ರ ಹಾಗೂ ಬೆಳಗಾವಿ ಜಿಲ್ಲೆಯಲ್ಲಿ ಸುರಿಯುತ್ತಿರುವ ಮಳೆಯಿಂದಾಗಿ ಕೃಷ್ಣಾ ನದಿ ನೀರಿನ ಪ್ರಮಾಣದಲ್ಲಿ ಹೆಚ್ಚಳವಾಗಿದೆ. ಬೆಳಗಾವಿ ಜಿಲ್ಲೆಯ ದರೂರ ಸೇತುವೆ ಮೂಲಕ ಗುರುವಾರ 94 ಸಾವಿರ ಕ್ಯೂಸೆಕ್‌ ನೀರು ಹರಿದುಬಂದಿದೆ. ಹಿಪ್ಪರಗಿ ಬ್ಯಾರೇಜ್‌ ಮೂಲಕ 93 ಸಾವಿರ ಕ್ಯೂಸೆಕ್‌ ನೀರನ್ನು ಆಲಮಟ್ಟಿ ಡ್ಯಾಂಗೆ ಹರಿಬಿಡಲಾಗುತ್ತಿದೆ. ಬ್ಯಾರೇಜ್‌ನ ನೀರಿನ ಸಂಗ್ರಹದ ಪ್ರಮಾಣ 4.10 ಟಿಎಂಸಿಯಷ್ಟಿದ್ದು 3.30 ಟಿಎಂಸಿ ನೀರು ಸಂಗ್ರಹಗೊಂಡಿದೆ. ಮಹಾರಾಷ್ಟ್ರದ ಕೊಯ್ನಾದಲ್ಲಿ 109 ಮಿ.ಮೀ., ಮಹಾಬಳೇಶ್ವರದಲ್ಲಿ 106 ಮಿ.ಮೀ., ನವಜಾದಲ್ಲಿ 98 ಮಿ.ಮೀ., ವಾರಣಾದಲ್ಲಿ 27 ಮಿ.ಮೀ. ಮಳೆ ಸುರಿದಿದೆ. ಜಿಲ್ಲೆಯಾದ್ಯಂತ ಗುರುವಾರ ಅಂದಾಜು 10 ಮಿ.ಮೀ. ಮಳೆ ಸುರಿದಿದೆ. ಬೆಳಗಾವಿ ಜಿಲ್ಲೆಯ ಹಿಡಕಲ್‌ ಜಲಾಶಯದಿಂದ ಘಟಪ್ರಭಾ ನದಿಗೆ ನೀರು ಹರಿಬಿಡಲಾಗುತ್ತಿದೆ. ಘಟಪ್ರಭಾ ನದಿ ಹರಿವಿನಲ್ಲಿ ಹೆಚ್ಚಳವಾಗಿರುವುದರಿಂದ ಮುಧೋಳ ತಾಲೂಕಿನ ಢವಳೇಶ್ವರ, ನಂದಗಾಂವ, ಮಿರ್ಜಿ, ಆಲಗುಂಡಿ ಬ್ಯಾರೇಜ್‌ಗಳಲ್ಲಿ ನೀರು ಭರ್ತಿಯಾಗಿದೆ. ಗುರುವಾರ ರಾತ್ರಿಯವರೆಗೂ ಮಳೆ ಮುಂದುವರಿದಿದ್ದು, ಮೋಡ ಕವಿದ ವಾತಾವರಣವಿದೆ. ಹೀಗಾಗಿ ಶುಕ್ರವಾರವೂ ಮಳೆಯಾಗುವ ಸಾಧ್ಯತೆಗಳಿವೆ.

-----

ಎಲ್ಲೆಲ್ಲಿ ಮಳೆ ?

ಬಾಗಲಕೋಟ-9.8 ಮಿ.ಮೀ.

ಬಾದಾಮಿ-4.4 ಮಿ.ಮೀ.

ಹುನಗುಂದ-10.6 ಮಿ.ಮೀ.

ಜಮಖಂಡಿ-5. 2 ಮಿ.ಮೀ.

ಮುಧೋಳ-2.2 ಮಿ.ಮೀ

ಬೀಳಗಿ- 6 ಮಿ.ಮೀ.

-----

ಇಷ್ಟು ಮಳೆಯನ್ನು ಇತ್ತೀಚಿನ ವರ್ಷಗಳಲ್ಲಿ ನೋಡಿಲ್ಲ. ಶ್ರಾವಣದಲ್ಲಿ ಮಳೆ ಸುರಿಯುವುದು ಸಾಮಾನ್ಯ, ಆದರೆ ನಿರಂತರವಾಗಿ ಮಳೆಯಾಗುತ್ತಿರುವುದು ವಾತಾವರಣ ಬದಲಾಯಿಸಿದೆ. ಸತತ ಮಳೆಯಿಂದ ಮನೆಯಿಂದ ಹೊರಗೆ ಹೋಗಲು ಸಾಧ್ಯವಾಗುತ್ತಿಲ್ಲ.

-ಭಾರತಿ ಮನಗೂಳಿ, ಬಾಗಲಕೋಟ ನಿವಾಸಿ


ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ