ಆ್ಯಪ್ನಗರ

ಕಾಂಗ್ರೆಸ್‌ ಪಾದಯಾತ್ರೆಗೆ ನೀತಿ ಸಂಹಿತೆ ಬಿಸಿ, ಬೆಳಗಾವಿ ಪ್ರವೇಶಕ್ಕೆ ಸಿಕ್ಕಿಲ್ಲ ಅನುಮತಿ

ಜಮಖಂಡಿ ಶಾಸಕ ಆನಂದ ನ್ಯಾಮಗೌಡ ಮತ್ತು ಮಾಜಿ ಸಚಿವೆ ಉಮಾಶ್ರೀ ನೇತೃತ್ವದ ಕಾಂಗ್ರೆಸ್‌ ಪ್ರತಿಭಟನಾ ಪಾದಯಾತ್ರೆಯಲ್ಲಿ ಪಾಲ್ಗೊಂಡಿದ್ದವರು ಬಾಗಲಕೋಟೆ ಜಿಲ್ಲೆಯ ಸೈದಾಪೂರ ಗ್ರಾಮದ ಬಳಿ ಜಿಲ್ಲಾಧಿಕಾರಿ ಅನುಮತಿಗಾಗಿ ಕಾಯುತ್ತಿದ್ದಾರೆ.

Vijaya Karnataka Web 22 Sep 2019, 3:33 pm
ಬಾಗಲಕೋಟೆ: ಕಾಂಗ್ರೆಸ್‌ ಪ್ರತಿಭಟನಾ ರ‍್ಯಾಲಿಗೆ ಉಪ ಚುನಾವಣಾ ನೀತಿ ಸಂಹಿತೆ ಬಿಸಿ ತಟ್ಟಿದೆ. ಅನುಮತಿ ಇಲ್ಲದ ಹಿನ್ನೆಲೆಯಲ್ಲಿ ಬಾಗಲಕೋಟೆ ಜಿಲ್ಲೆಯ ಗಡಿಯಲ್ಲೇ ಕೈ ನಾಯಕರು ಮತ್ತು ಕಾರ್ಯಕರ್ತರ ಪಾದಯಾತ್ರೆಯನ್ನು ತಡೆದು ನಿಲ್ಲಿಸಲಾಗಿದೆ.
Vijaya Karnataka Web Congress Protest


ಶನಿವಾರ ಆರಂಭವಾಗಿದ್ದ ಕಾಂಗ್ರೆಸ್‌ ಪ್ರತಿಭಟನಾ ಪಾದಯಾತ್ರೆ ಬಾಗಲಕೋಟೆಯಿಂದ ಬೆಳಗಾವಿಗೆ ತೆರಳುತ್ತಿತ್ತು. ಆದರೆ ಬೆಳಗಾವಿ ಜಿಲ್ಲಾಧಿಕಾರಿಯಿಂದ ಅನುಮತಿ ಪಡೆಯದ ಹಿನ್ನೆಲೆಯಲ್ಲಿ ಬೆಳಗಾವಿ ಗಡಿಯಲ್ಲಿ ಪಾದಯಾತ್ರೆಯನ್ನು ತಡೆದು ನಿಲ್ಲಿಸಲಾಗಿದೆ. ಈ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಅನುಮತಿಗಾಗಿ ಪ್ರತಿಭಟನಾಕಾರರು ಕಾದು ಕುಳಿತಿದ್ದಾರೆ.

ಆದರೆ ನೇರ ಅನುಮತಿ ನೀಡಲು ನಿರಾಕರಿಸಿರುವ ಜಿಲ್ಲಾಧಿಕಾರಿಗಳು ಚುನಾವಣಾ ಆಯೋಗದ ಜೊತೆ ಚರ್ಚಿಸಿದ ಬಳಿಕ ಅನುಮತಿ ನೀಡುವುದಾಗಿ ತಿಳಿಸಿದ್ದಾರೆ.

ಇದರಿಂದ ದಾರಿ ಕಾಣದಾಗಿರುವ ಜಮಖಂಡಿ ಶಾಸಕ ಆನಂದ ನ್ಯಾಮಗೌಡ ಮತ್ತು ಮಾಜಿ ಸಚಿವೆ ಉಮಾಶ್ರೀ ನೇತೃತ್ವದ ಕಾಂಗ್ರೆಸ್‌ ಪ್ರತಿಭಟನಾ ಪಾದಯಾತ್ರೆಯಲ್ಲಿ ಪಾಲ್ಗೊಂಡಿದ್ದವರು ಬಾಗಲಕೋಟೆ ಜಿಲ್ಲೆಯ ಸೈದಾಪೂರ ಗ್ರಾಮದ ಬಳಿ ಜಿಲ್ಲಾಧಿಕಾರಿ ಅನುಮತಿಗಾಗಿ ಕಾಯುತ್ತಿದ್ದಾರೆ.

ನೆರೆ ಸಂತ್ರಸ್ತರಿಗೆ ಪರಿಹಾರಕ್ಕೆ ಆಗ್ರಹಿಸಿ ಬಾಗಲಕೋಟೆ ಜಿಲ್ಲೆ ಜಮಖಂಡಿಯಿಂದ ಮಹಾಲಿಂಗಪುರದವರೆಗೆ ಶನಿವಾರ ಪ್ರತಿಭಟನಾ ಮೆರವಣಿಗೆ ನಡೆದಿತ್ತು. ಇಂದು ಮಹಾಲಿಂಗಪುರದ ಬನಶಂಕರಿ ದೇವಾಲಯದಿಂದ ಆರಂಭಗೊಂಡ ಪ್ರತಿಭಟನೆ ಸೈದಾಪೂರ ಮಾಗ೯ವಾಗಿ ಬೆಳಗಾವಿ ಜಿಲ್ಲೆಯತ್ತ ಹೊರಟಿತ್ತು. ಮುಂದೆ ಮೂಡಲಗಿ, ಅಂಕಲಗಿ, ಮಚ್ಚನ್ಡಿ ಮೂಲಕ ಮಂಗಳವಾರ ಬೆಳಗಾವಿ ಜಿಲ್ಲಾಧಿಕಾರಿ ಕಚೇರಿಯನ್ನು ಪಾದಯಾತ್ರೆ ತಲುಪಬೇಕಾಗಿತ್ತು.



ಆದರೆ ಬೆಳಗಾವಿ ಜಿಲ್ಲೆಯಲ್ಲಿ ಚುನಾವಣಾ ನೀತಿ ಸಂಹಿತಿ ಜಾರಿಯಾಗಿರುವ ಹಿನ್ನೆಲೆಯಲ್ಲಿ ಪ್ರತಿಭಟನೆ ಅರ್ಧಕ್ಕೆ ನಿಂತಿದ್ದು ಕಾಂಗ್ರೆಸ್‌ ಕಾರ್ಯಕರ್ತರು ಜಿಲ್ಲಾಧಿಕಾರಿ ಅನುಮತಿಯನ್ನು ಎದುರು ನೋಡುತ್ತಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ