ಆ್ಯಪ್ನಗರ

ಸಿದ್ದರಾಮಯ್ಯ ಭೇಟಿ, ಕಾಂಗ್ರೆಸ್‌ಗೆ ಪುನಶ್ಚೇತನ ?

ರವಿರಾಜ್‌ ಆರ್‌.ಗಲಗಲಿ ಬಾಗಲಕೋಟ ಕ್ಷೇತ್ರಕ್ಕೆ ಭೇಟಿ ನೀಡಿಲ್ಲ ಎಂಬ ದೂರುಗಳ ಮಧ್ಯೆ ಬಾದಾಮಿಗೆ ನಾಲ್ಕು ದಿನಗಳ ಕಾಲ ಪ್ರವಾಸಕ್ಕೆ ಸಿದ್ದರಾಮಯ್ಯ ಆಗಮಿಸುತ್ತಿದ್ದಾರೆ, ಇದೇ ಸಂದರ್ಭದಲ್ಲಿ ಜಿಲ್ಲಾ ಕಾಂಗ್ರೆಸ್‌ ಘಟಕದ ಪುನಶ್ಚೇತನದ ಸವಾಲು ಕೂಡ ಮಾಜಿ ಸಿಎಂ ಎದುರಿಗಿದೆ.

Vijaya Karnataka 27 Jun 2019, 5:00 am
ರವಿರಾಜ್‌ ಆರ್‌.ಗಲಗಲಿ ಬಾಗಲಕೋಟ
Vijaya Karnataka Web mla siddaramaiahs visit to badami taluk
ಸಿದ್ದರಾಮಯ್ಯ ಭೇಟಿ, ಕಾಂಗ್ರೆಸ್‌ಗೆ ಪುನಶ್ಚೇತನ ?


ಕ್ಷೇತ್ರಕ್ಕೆ ಭೇಟಿ ನೀಡಿಲ್ಲ ಎಂಬ ದೂರುಗಳ ಮಧ್ಯೆ ಬಾದಾಮಿಗೆ ನಾಲ್ಕು ದಿನಗಳ ಕಾಲ ಪ್ರವಾಸಕ್ಕೆ ಸಿದ್ದರಾಮಯ್ಯ ಆಗಮಿಸುತ್ತಿದ್ದಾರೆ, ಇದೇ ಸಂದರ್ಭದಲ್ಲಿ ಜಿಲ್ಲಾ ಕಾಂಗ್ರೆಸ್‌ ಘಟಕದ ಪುನಶ್ಚೇತನದ ಸವಾಲು ಕೂಡ ಮಾಜಿ ಸಿಎಂ ಎದುರಿಗಿದೆ.

'ಅತಿಥಿ ಶಾಸಕರಾಗಬೇಡಿ' ಎಂದು ಸಾಮಾಜಿಕ ತಾಣಗಳಲ್ಲಿ ಜನರು ಟೀಕೆ ಮಾಡಿದ್ದಕ್ಕೆ ಖಡಕ್‌ ಉತ್ತರ ನೀಡಿದ್ದ ಸಿದ್ದರಾಮಯ್ಯ ಶೀಘ್ರ ಬಾದಾಮಿಗೆ ಬರುವುದಾಗಿ ತಿಳಿಸಿದ್ದರು. ಜೂ.27 ರಿಂದ 30ರವರೆಗೆ ಬಾದಾಮಿ, ಬಾಗಲಕೋಟಗಳಲ್ಲಿ ನಾನಾ ಕಾರ್ಯಕ್ರಮಗಳಲ್ಲಿ ಶಾಸಕ ಸಿದ್ದರಾಮಯ್ಯ ಭಾಗವಹಿಸಲಿದ್ದಾರೆ. ಇದರೊಂದಿಗೆ ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷ ಸ್ಥಾನಕ್ಕೆ ಹೊಸಬರ ನೇಮಕ, ನಿಗಮ ಮಂಡಳಿಗಳಿಗೆ ಕಾರ್ಯಕರ್ತರ ನೇಮಕದ ವಿಷಯ ಚರ್ಚೆಗೆ ಬರಲಿದೆ.

ಸಮಿತಿ ಮರು ನೇಮಕ

ಬರ ನಿರ್ವಹಣೆಗಾಗಿ ಮಾರ್ಚ್‌ನಲ್ಲಿ ಸಭೆ ನಡೆಸಿದ್ದ ಸಿದ್ದರಾಮಯ್ಯ ನಂತರ ಲೋಕಸಭೆ ಚುನಾವಣೆ ಪ್ರಚಾರಕ್ಕಾಗಿ ಬಾದಾಮಿಗೆ ಬಂದಿದ್ದರು. ಲೋಕಸಭೆ ಚುನಾವಣೆಯ ನೀತಿ ಸಂಹಿತೆ ಮುಗಿದರೂ ಸಿದ್ದರಾಮಯ್ಯ ಅವರಿಗೆ ಸ್ವಕ್ಷೇತ್ರಕ್ಕೆ ಬರಲು ಆಗಿರಲಿಲ್ಲ. ರಾಜ್ಯ ರಾಜಕೀಯದಲ್ಲಿ ನಡೆದಿದ್ದ ಬೆಳವಣಿಗೆ ಮಾಜಿ ಸಿಎಂ ಕ್ಷೇತ್ರ ಭೇಟಿಗೆ ತಡೆಯೊಡ್ಡಿತ್ತು. ಜನರಿಂದ ಟೀಕೆಗಳು ಹೆಚ್ಚಾಗುತ್ತಿದ್ದಂತೆ ಕ್ಷೇತ್ರದತ್ತ ಮುಖ ಮಾಡಿರುವ ಮಾಜಿ ಸಿಎಂ ಇದೇ ಮೊದಲ ಬಾರಿಗೆ ನಾಲ್ಕು ದಿನ ಕ್ಷೇತ್ರದಲ್ಲಿರಲಿದ್ದಾರೆ. ನಾಲ್ಕೂ ದಿನಗಳಂದು ರಸ್ತೆ ಕಾಮಗಾರಿ, ಡಯಾಲಿಸಿಸ್‌ ಘಟಕ ಸೇರಿದಂತೆ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಲಿದ್ದಾರೆ.

ಸಿದ್ದರಾಮಯ್ಯ ಕ್ಷೇತ್ರಕ್ಕೆ ಬರುತ್ತಿದ್ದಾರೆ ಎನ್ನುವ ವಿಷಯ ಜಿಲ್ಲೆಯ ಕಾಂಗ್ರೆಸ್‌ ಮುಖಂಡರು, ಕಾರ್ಯಕರ್ತರಲ್ಲಿ ಹೊಸ ಆಸೆ ಮೂಡಿಸಿದೆ. ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ ಅಭ್ಯರ್ಥಿಯ ಭಾರಿ ಪರಾಭವದ ನಂತರ ಕಾಂಗ್ರೆಸ್‌ ಪಕ್ಷದಲ್ಲಿ ಮೊದಲಿನ ಉತ್ಸಾಹವಿಲ್ಲ. ಈಗಾಗಲೇ ಕೆಪಿಸಿಸಿಯ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನ ಹೊರತುಪಡಿಸಿ ಸಮಿತಿಯನ್ನೇ ವಿಸರ್ಜಿಸಲಾಗಿದೆ. ಪಕ್ಷವನ್ನು ಮತ್ತೆ ಸಬಲಗೊಳಿಸುವ ಉದ್ದೇಶದಿಂದ ಜಿಲ್ಲಾ ಮಟ್ಟದಲ್ಲೂ ಸಮಿತಿಯನ್ನು ಮರು ನೇಮಕಗೊಳಿಸಲಾಗುತ್ತಿದೆ. ಕಳೆದ 8 ವರ್ಷಗಳಿಂದ ಎಂ.ಬಿ.ಸೌದಾಗರ ಅಧ್ಯಕ್ಷ ಸ್ಥಾನದಲ್ಲಿದ್ದಾರೆ. ಹಲವು ಬಾರಿ ಅವರ ಹುದ್ದೆ ಬದಲಾವಣೆ ಮಾತು ಕೇಳಿಬಂದಿದ್ದರೂ ನಂತರ ವಿಷಯ ತಣ್ಣಗಾಗಿತ್ತು. ಇದೀಗ ಸಿದ್ದರಾಮಯ್ಯ ಅವರೇ ಜಿಲ್ಲಾ ಸಮಿತಿಯನ್ನು ಬದಲಾಯಿಸುವ ಇರಾದೆ ಹೊಂದಿದ್ದಾರೆ. ಈ ಹಿನ್ನೆಲೆಯಲ್ಲಿ ಜಿಲ್ಲಾಧ್ಯಕ್ಷ ಸ್ಥಾನದ ಬದಲಾವಣೆಯ ಸೂಚನೆ ಕಾರ್ಯಕರ್ತರಿಗೆ ದೊರೆತಿದೆ. ಸದ್ಯ ಅಧ್ಯಕ್ಷ ಸ್ಥಾನದ ಆಕಾಂಕ್ಷಿಗಳ ಪಟ್ಟಿಯಲ್ಲಿ ಮಾಜಿ ಶಾಸಕರಾದ ಎಸ್‌.ಜಿ.ನಂಜಯ್ಯನಮಠ, ವಿಜಯಾನಂದ ಕಾಶಪ್ಪನವರ ಅವರ ಹೆಸರುಗಳು ಕೇಳಿಬಂದಿವೆ. ಕಾರ್ಯಕರ್ತರಿಗೆ ಜಿಲ್ಲಾಧ್ಯಕ್ಷ ಸ್ಥಾನ ನೀಡಬೇಕು ಎಂಬ ಬೇಡಿಕೆಯೂ ಇದೆ.

ಆಕಾಂಕ್ಷಿಗಳ ಪಟ್ಟಿ ದೊಡ್ಡದು

ಜಿಲ್ಲೆಯ ಏಕೈಕ ಮಂಡಳಿಯಾದ ಬಿಟಿಡಿಎಗೆ ಕಾಂಗ್ರೆಸ್‌ನ ಮಾಜಿ ಸಚಿವ ಎಚ್‌.ವೈ.ಮೇಟಿ ಅಧ್ಯಕ್ಷರಾಗಿ ನೇಮಕಗೊಂಡಿದ್ದಾರೆ. ರಾಜ್ಯದ ಇನ್ನುಳಿದ ನಿಗಮ, ಮಂಡಳಿಗಳಿಗೆ ಅಧ್ಯಕ್ಷರ ನೇಮಕ ಬಾಕಿಯಿದೆ. ನಿಗಮ, ಮಂಡಳಿಗಳ ಅಧ್ಯಕ್ಷ ಸ್ಥಾನದ ನೇಮಕಾತಿಗಾಗಿ ಪಕ್ಷದಲ್ಲಿ ಅರ್ಜಿ ಆಹ್ವಾನಿಸಲಾಗಿದೆ. ಪ್ರತಿ ಜಿಲ್ಲಾಧ್ಯಕ್ಷರು ಆಕಾಂಕ್ಷಿಗಳಿಂದ ಅರ್ಜಿ ಪಡೆದು ನಾಲ್ವರ ಹೆಸರುಗಳನ್ನು ರಾಜ್ಯ ಸಮಿತಿಗೆ ಕಳಿಸಬೇಕು ಎಂದು ಆದೇಶ ನೀಡಲಾಗಿದೆ. ನಿಗಮ, ಮಂಡಳಿ ಅಧ್ಯಕ್ಷ ಸ್ಥಾನಕ್ಕಾಗಿ ಪ್ರತಿ ವಿಧಾನಸಭೆ ಕ್ಷೇತ್ರದಲ್ಲಿ ನಾಲ್ಕಕ್ಕಿಂತ ಹೆಚ್ಚು ಆಕಾಂಕ್ಷಿಗಳಿದ್ದಾರೆ. ಜಿಲ್ಲಾ ಸಮಿತಿ ಮರು ನೇಮಕ, ಮಂಡಳಿ ಅಧ್ಯಕ್ಷರ ನೇಮಕಕ್ಕೆ ಹೆಸರುಗಳ ಶಿಫಾರಸ್ಸು ಬಗ್ಗೆ ಸಿದ್ದರಾಮಯ್ಯ ಮುಖಂಡರೊಂದಿಗೆ ಚರ್ಚಿಸಲಿದ್ದಾರೆ. ಜೂ.29 ರಂದು ಸಂಜೆ 5ಕ್ಕೆ ಜಿಲ್ಲೆಯ ಕಾರ್ಯಕರ್ತರ ಸಭೆಯಲ್ಲಿ ಮಾಜಿ ಸಿಎಂ ಭಾಗವಹಿಸಲಿದ್ದಾರೆ. ಸಭೆಯಲ್ಲಿ ಪಕ್ಷದ ಪುನಶ್ಚೇತನದ ಬಗ್ಗೆ ಚರ್ಚೆ ನಡೆಯಲಿದೆ.


ಭರ್ತಿ ಒಂದು ತಿಂಗಳ ನಂತರ ಸ್ವಕ್ಷೇತ್ರಕ್ಕೆ ಮಾಜಿ ಸಿಎಂ, ಬಾದಾಮಿ ಶಾಸಕ ಸಿದ್ದರಾಮಯ್ಯ ಭೇಟಿ ನೀಡುತ್ತಿದ್ದಾರೆ. ಲೋಕಸಭೆ ಚುನಾವಣೆಯಲ್ಲಿ ಅಭ್ಯರ್ಥಿ ಸೋಲನುಭವಿಸಿರುವುದರಿಂದ ಪಕ್ಷವನ್ನು ಮತ್ತೆ ಕಟ್ಟುವ ಬಗ್ಗೆ ಚಿಂತನೆ ನಡೆದಿದೆ. ಜಿಲ್ಲಾ ಕಾಂಗ್ರೆಸ್‌ ಸಮಿತಿ ಮರು ನೇಮಕದ ಬಗ್ಗೆ ಬಿಸಿ ಬಿಸಿ ಚರ್ಚೆ ನಡೆಯಲಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ