ಆ್ಯಪ್ನಗರ

ಹಿಟ್‌ ಆಯ್ತು ನನ್ನ ಗೆಳೆಯ ಸಾಂಗ್‌

ರವಿರಾಜ್‌ ಆರ್‌.ಗಲಗಲಿ ಬಾಗಲಕೋಟ ಮುಳುಗಡೆ ನಗರದ ಎಂಜಿನಿಯರಿಂಗ್‌ ಕಾಲೇಜ್‌ ವಿದ್ಯಾರ್ಥಿಗಳು ರೂಪಿಸಿದ ನನ್ನ ಗೆಳೆಯಾ ಆಲ್ಬಂ ಸಾಂಗ್‌ ಈಗ ಯೂ ಟ್ಯೂಬ್‌ನಲ್ಲಿ ಹಿಟ್‌ ಆಗಿದೆ, ಇದರೊಂದಿಗೆ ನಗರದ ಯುವ ಪ್ರತಿಭೆಗಳು ಜನಪ್ರಿಯತೆ ಗಳಿಸಿದ್ದಾರೆ !.

Vijaya Karnataka 9 Jun 2019, 5:00 am
ರವಿರಾಜ್‌ ಆರ್‌.ಗಲಗಲಿ ಬಾಗಲಕೋಟ
Vijaya Karnataka Web my boyfriend song of hit
ಹಿಟ್‌ ಆಯ್ತು ನನ್ನ ಗೆಳೆಯ ಸಾಂಗ್‌


ಮುಳುಗಡೆ ನಗರದ ಎಂಜಿನಿಯರಿಂಗ್‌ ಕಾಲೇಜ್‌ ವಿದ್ಯಾರ್ಥಿಗಳು ರೂಪಿಸಿದ ನನ್ನ ಗೆಳೆಯಾ ಆಲ್ಬಂ ಸಾಂಗ್‌ ಈಗ ಯೂ ಟ್ಯೂಬ್‌ನಲ್ಲಿ ಹಿಟ್‌ ಆಗಿದೆ, ಇದರೊಂದಿಗೆ ನಗರದ ಯುವ ಪ್ರತಿಭೆಗಳು ಜನಪ್ರಿಯತೆ ಗಳಿಸಿದ್ದಾರೆ !.

ಬಾಗಲಕೋಟದ ರಶ್ಮಿ ಗುಡ್ಡದ ಹಾಡಿರುವ, ಸೌಭಾಗ್ಯ ಹಿರೇಮಠ ಬರೆದಿರುವ 'ನನ್ನ ಗೆಳೆಯಾ' ಹಾಡಿಗೆ ಆನ್‌ಲೈನ್‌ನಲ್ಲಿ ಜನ ಫಿದಾ ಆಗಿದ್ದಾರೆ. ಯೂ ಟ್ಯೂಬ್‌ನಲ್ಲಿ ಕಾಣಿಸಿಕೊಂಡ ಗೀತೆಯನ್ನು ಈವರೆಗೆ 22 ಲಕ್ಷ ಜನರು ವೀಕ್ಷಿಸಿದ್ದು ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗಿದೆ.

ನಗರದ ಯುವ ಗಾಯಕ, ಸಂಗೀತಗಾರ ವಿನಾಯಕ ದಂಡಗಿ ತಮ್ಮ ಯೂ ಟ್ಯೂಬ್‌ ಚಾನೆಲ್‌ನಲ್ಲಿ ಗೀತೆಯನ್ನು ಅಪ್‌ಲೋಡ್‌ ಮಾಡಿದ್ದಾರೆ. ಇದಕ್ಕೂ ಮೊದಲು ವಿನಾಯಕ ನೇತೃತ್ವದ ಸಂಗೀತಗಾರರ ತಂಡ ಕೆಜಿಎಫ್‌ ಸಿನಿಮಾ ಬೆಂಬಲಿಸಿ ಮಾಡಿದ್ದ ವಿಡಿಯೋ ಸಾಂಗ್‌ ಅಪಾರ ಜನಪ್ರಿಯತೆ ಗಳಿಸಿತ್ತು. ರಶ್ಮಿ ಹಾಡಿದ ಹಾಡನ್ನು ಮೊದಲ ದಿನವೇ 10 ಲಕ್ಷ ಜನ ವೀಕ್ಷಿಸಿದ್ದು, ಐದೇ ದಿನಗಳಲ್ಲಿ ಸೂಪರ್‌ ಹಿಟ್‌ ಲಿಸ್ಟ್‌ ತಲುಪಿದೆ. ಮೂಲತಃ ರೆಗ್ಗೆ ಟ್ಯೂನ್‌ ಕರಾವೋಕೆ ಸಂಗೀತಕ್ಕೆ ಹಾಡು ಸಂಯೋಜಿಸಲಾಗಿದೆ. 'ನನ್ನ ಗೆಳತಿ' ಎಂಬ ಹಾಡೊಂದನ್ನು ರಾಕೇಶ್‌ ಚಾತ್ರಾ ಎನ್ನುವ ಗಾಯಕ ಹಾಡಿ ಯೂ ಟ್ಯೂಬ್‌ನಲ್ಲಿ ಅಪಾರ ಜನಪ್ರಿಯತೆ ಗಳಿಸಿದ್ದರು. ಈ ಗೀತೆಯ ಮಾದರಿಯಲ್ಲಿಯೇ ಹುಡುಗಿ ತನ್ನ ಹುಡುಗನ ಬಗ್ಗೆ ಭಾವನೆ ವ್ಯಕ್ತಪಡಿಸುವ ಹಾಡನ್ನು ಬಸವೇಶ್ವರ ಎಂಜಿನಿಯರಿಂಗ್‌ ಕಾಲೇಜ್‌ ವಿದ್ಯಾರ್ಥಿನಿ ಸೌಭಾಗ್ಯ ಹಿರೇಮಠ ಬರೆದಿದ್ದಾರೆ. ಈ ಹಾಡಿಗೆ ಧ್ವನಿಯಾಗಿದ್ದು ಅದೇ ಕಾಲೇಜಿನ ಐಟಿ ವಿಭಾಗದ ವಿದ್ಯಾರ್ಥಿನಿ ರಶ್ಮಿ ಗುಡ್ಡದ.

ಇಂತಹದೊಂದು ಹಾಡು ತಯಾರಿಸಬೇಕು ಎಂದುಕೊಂಡಿದ್ದ ರಶ್ಮಿ ಅವರಿಗೆ ನೆರವಾಗಿದ್ದು ಸಂಗೀತಗಾರ ರವಿತೇಜಾ ಅವರ ರೆಕಾರ್ಡಿಂಗ್‌ ಸ್ಟುಡಿಯೋ. ರವಿತೇಜಾ ಅವರ ಸ್ಟುಡಿಯೋದಲ್ಲಿ ಹಾಡಿನ ರೆಕಾರ್ಡಿಂಗ್‌ ಕೈಗೊಳ್ಳಲಾಯಿತು. ಕೇವಲ ಹಾಡು ಇದ್ದರೆ ಸಾಲದು ವಿಡಿಯೋ ಕೂಡ ಇದ್ದರೆ ಚೆನ್ನ ಎಂಬ ಐಡಿಯಾ ಬಂದಿತು. ಆಗ ವಿನಯ್‌ ಆದಿ ಮಾರ್ಗದರ್ಶನದಲ್ಲಿ ವಿಡಿಯೋ ಕೂಡ ಸಿದ್ಧವಾಯಿತು. ನಗರದ ಶಿರೂರ ಅಗಸಿ, ಮುಚಖಂಡಿ ಕೆರೆ ಪ್ರದೇಶದಲ್ಲಿ ಡ್ರೋನ್‌ ಕ್ಯಾಮೆರಾ ಬಳಸಿ ವಿಭಿನ್ನವಾಗಿ ಹಾಡು ಚಿತ್ರೀಕರಿಸಲಾಯಿತು. ಹಾಡಿನ ಸಂಕಲವನ್ನು ಆದರ್ಶ ಹೂಗಾರ ಕೈಗೊಂಡಿದ್ದರೆ, ಗುರುರಾಜ ಶೆಟ್ಟಿ ತಾಂತ್ರಿಕ ಸಹಕಾರ ನೀಡಿದ್ದಾರೆ. ಎಸ್‌.ಎಸ್‌.ಹಿರೇಮಠ, ರಾಕೇಶ ಎಂ., ವಿಶಾಲ್‌ ಮಠ ಅವರ ನೆರವಿನಿಂದ ವಿಡಿಯೋ ಸಾಂಗ್‌ ಸಿದ್ಧಗೊಂಡಿದೆ. ಅಂದ ಹಾಗೆ 1ಲಕ್ಷ ಹಿಟ್‌ ಗಳಿಸಿದ ಹಾಡಿನ ಸಂಭ್ರಮಾಚರಣೆಯನ್ನು ಸಜೀವಿ ದೃಷ್ಟಿ ವಿಕಲಚೇತನ ಶಾಲೆಯಲ್ಲಿ ಆಚರಿಸುವ ಮೂಲಕ ತಂಡ ಸಾಮಾಜಿಕ ಕಾಳಜಿ ಮೆರೆದಿದೆ. ಈ ಹಾಡನ್ನು ಯೂ ಟ್ಯೂಬ್‌ನಲ್ಲಿ 'ನನ್ನ ಗೆಳೆಯಾ ನನ್ನ ಗೆಳೆಯಾ' ಎಂದು ಟೈಪಿಸಿ ವೀಕ್ಷಿಸಬಹುದಾಗಿದೆ.

ನಾನು ಶಾಸ್ತ್ರೀಯ ಸಂಗೀತ ಅಭ್ಯಸಿಸಿರುವುದರಿಂದ ಸಂಗೀತದ ಬಗ್ಗೆ ವಿಶೇಷ ಆಸಕ್ತಿಯಿದೆ. ಕಾಲೇಜಿನಲ್ಲಿ ಹಲವು ಕಾರ್ಯಕ್ರಮಗಳನ್ನು ನೀಡಿದ್ದೇನೆ. ಇದೇ ಮೊದಲ ಬಾರಿ ವಿಡಿಯೋ ಸಾಂಗ್‌ಗಾಗಿ ಹಾಡಿದ್ದೇನೆ. ಜನರು ನನ್ನನ್ನು ಗುರುತಿಸಿರುವುದು ಖುಷಿ ನೀಡಿದೆ. ಮುಂದೆ ಉತ್ತಮ ಗಾಯಕಿಯಾಗಿ ಗುರುತಿಸಿಕೊಳ್ಳುವ ಆಸೆಯಿದೆ.
ರಶ್ಮಿ ಗುಡ್ಡದ, ಗಾಯಕಿ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ