ಆ್ಯಪ್ನಗರ

‘ಅಧಿಕಾರ’ಕ್ಕೆ ನಿರಾಣಿ ಸಹೋದರರ ರಾಜ‘ಕಾರಣ’

ಬಾಗಲಕೋಟ: ಜಿಲ್ಲೆಯ ರಾಜಕೀಯದಲ್ಲಿ ಅಧಿಕಾರ ಗಳಿಸಲು ಮುಂದಾಗಿರುವ ನಿರಾಣಿ ಕುಟುಂಬ, ಈಗ ಸಂಗಮೇಶ ನಿರಾಣಿ ಅವರನ್ನು ಮುನ್ನೆಲೆಗೆ ತರುವ ಪ್ರಯತ್ನ ನಡೆಸಿದೆ.

Vijaya Karnataka 18 Apr 2018, 5:00 am
ಬಾಗಲಕೋಟ: ಜಿಲ್ಲೆಯ ರಾಜಕೀಯದಲ್ಲಿ ಅಧಿಕಾರ ಗಳಿಸಲು ಮುಂದಾಗಿರುವ ನಿರಾಣಿ ಕುಟುಂಬ, ಈಗ ಸಂಗಮೇಶ ನಿರಾಣಿ ಅವರನ್ನು ಮುನ್ನೆಲೆಗೆ ತರುವ ಪ್ರಯತ್ನ ನಡೆಸಿದೆ.
Vijaya Karnataka Web nirani brothers politics
‘ಅಧಿಕಾರ’ಕ್ಕೆ ನಿರಾಣಿ ಸಹೋದರರ ರಾಜ‘ಕಾರಣ’


ಬಿಜೆಪಿ ಸರಕಾರದಲ್ಲಿ ಕೈಗಾರಿಕೆ ಸಚಿವರಾಗಿದ್ದ ಮುರಗೇಶ ನಿರಾಣಿ ತಮ್ಮ ಸಹೋದರನನ್ನು ಶಾಸಕನನ್ನಾಗಿಸಲು ನಿರಂತರ ಹೋರಾಟ ನಡೆಸಿದ್ದಾರೆ. ಇದೀಗ ಜಮಖಂಡಿ ಕ್ಷೇತ್ರದ ಟಿಕೆಟ್‌ ಸಂಗಮೇಶ ಕೈತಪ್ಪಿದೆ. ಟಿಕೆಟ್‌ ಪಡೆದಿರುವ ಮಾಜಿ ಶಾಸಕ ಶ್ರೀಕಾಂತ ಸೋಲಿಸಲು ಸಂಗಮೇಶ ಬಂಡಾಯ ಅಭ್ಯರ್ಥಿಯಾಗಿ ಕಣಕ್ಕಿಳಿದರೂ ಆಶ್ಚರ್ಯವಿಲ್ಲ. ಸದ್ಯ ಕಾಂಗ್ರೆಸ್‌ ಹಾಗೂ ಬಿಜೆಪಿಯಲ್ಲಿ ಟಿಕೆಟ್‌ ದೊರೆಯದ ಮುಖಂಡರೊಂದಿಗೆ ಒಮ್ಮತದ ಅಭ್ಯರ್ಥಿಯನ್ನು ಕಣಕ್ಕಿಳಿಸುವ ಚಿಂತನೆ ನಡೆದಿದೆ. ಇದು ಸಾಧ್ಯವಾಗದಿದ್ದರೆ ಸ್ವತಃ ಸಂಗಮೇಶ ನಿರಾಣಿ ಪಕ್ಷೇತರ ಅಭ್ಯರ್ಥಿಯಾಗಲಿದ್ದಾರೆ. ಕಳೆದ ಬಾರಿ ಕೆಜೆಪಿ ಅಭ್ಯರ್ಥಿಯಿಂದ ಬಂಡಾಯದ ಬಿಸಿ ಕಂಡಿದ್ದ ಬಿಜೆಪಿ, ಈ ಬಾರಿ ಪಕ್ಷದ ಟಿಕೆಟ್‌ ಆಕಾಂಕ್ಷಿಯಿಂದಲೇ ಬಂಡಾಯ ಕಾಣಲಿದೆ.

ರಾಜಕಾರಣಕ್ಕೆ ಸಂಗಮೇಶ

ಕೈಗಾರಿಕೆ ಸಚಿವರಾಗಿದ್ದ ಮುರಗೇಶ ನಿರಾಣಿ 2013ರ ಚುನಾವಣೆಯಲ್ಲಿ ಪರಾಭವಗೊಂಡರು. ನಂತರ ನಡೆದ ವಿಧಾನಪರಿಷತ್‌ ಚುನಾವಣೆಯಲ್ಲಿ ಸಹೋದರ ಹನಮಂತ ಅವರಿಗೆ ಬಿಜೆಪಿ ಟಿಕೆಟ್‌ ಕೊಡಿಸಿ, ಗೆಲ್ಲಿಸುವಲ್ಲಿ ಯಶಸ್ವಿಯಾದರು. ಈ ಬೆಳವಣಿಗೆ ಬಳಿಕ ನಿರಾಣಿ ಕುಟುಂಬದಿಂದ ಕಿರಿಯ ಸಹೋದರ ಸಂಗಮೇಶ ಅವರನ್ನು ರಾಜಕಾರಣಕ್ಕೆ ತರಬೇಕೆಂಬ ಉದ್ದೇಶ ಬಲವಾಯಿತು. ಈ ಕಾರಣದಿಂದ ಎಂಆರ್‌ಎನ್‌ ಸಂಸ್ಥೆಯ ಮೂಲಕ ನಾನಾ ಕಾರ್ಯಕ್ರಮ ಆರಂಭಗೊಂಡವು.

ನಿರಾಣಿ ಶುಗರ್ಸ್‌ ವ್ಯವಸ್ಥಾಪಕ ನಿರ್ದೇಶಕರಾಗಿರುವ ಸಂಗಮೇಶ ಅವರನ್ನು ಸಕ್ರಿಯ ರಾಜಕಾರಣಕ್ಕೆ ತರಲು ಕೆಲಸ ಆರಂಭಗೊಂಡಿತು. ಬೀಳಗಿ ಅಥವಾ ಜಮಖಂಡಿ ಕ್ಷೇತ್ರದಿಂದ ಸ್ಪರ್ಧಿಸಲು ಮಾಜಿ ಸಚಿವ ಮುರಗೇಶ ನಿರ್ಧರಿಸಿದ್ದರು. ಸಹೋದರನಿಗೆ ಜಮಖಂಡಿ ಟಿಕೆಟ್‌ ಕೊಡಿಸಿ ತಾವು ಬೀಳಗಿಯಿಂದ ಸ್ಪರ್ಧಿಸುವುದಾಗಿ ಪಕ್ಷದ ಆಂತರಿಕ ವಲಯದಲ್ಲಿ ಹೇಳಿಕೊಂಡಿದ್ದರು. ಈ ಮೂಲಕ ಜಮಖಂಡಿ ಹಾಗೂ ಬೀಳಗಿ ಎರಡೂ ಕ್ಷೇತ್ರಗಳಲ್ಲಿ ತಮ್ಮ ಕುಟುಂಬದವರೇ ಸ್ಪರ್ಧಿಸಲಿದ್ದಾರೆ ಎಂಬ ಇಂಗಿತವನ್ನು ನಿರಾಣಿ ಹೊರಹಾಕಿದರು.

ಸ್ವಪಕ್ಷೀಯರ ವಿರೋಧ

ಆದರೆ ನಿರಾಣಿ ಕುಟುಂಬದ ಮತ್ತೊಬ್ಬ ಸದಸ್ಯನ ಸ್ಪರ್ಧೆಗೆ ಜಮಖಂಡಿ ಕ್ಷೇತ್ರದಲ್ಲಿ ಸ್ವಪಕ್ಷೀಯರು ವಿರೋಧಿಸಿದರು. ಮಾಜಿ ಶಾಸಕ ಶ್ರೀಕಾಂತ ಕುಲಕರ್ಣಿ ಎಂಆರ್‌ಎನ್‌ ಫೌಂಡೇಶನ್‌ ಚಟುವಟಿಕೆ ಬಂದ್‌ ಮಾಡಿಸಬೇಕೆಂದು ಯಡಿಯೂರಪ್ಪ ಅವರಿಗೆ ದೂರಿದರು. ಕೆಲವು ದಿನ ಬಂದ್‌ ಆದ ಚಟುವಟಿಕೆ ಮತ್ತೆ ಆರಂಭಗೊಂಡಿತು. ಆದರೆ ಚುನಾವಣೆ ಕಣ ಮಾತ್ರ ಬಿಸಿಯಾಯಿತು. ಮಾಜಿ ಶಾಸಕ ಶ್ರೀಕಾಂತ ಕುಲಕರ್ಣಿ ಅವರಿಗೆ ಸದ್ಯ ಜಮಖಂಡಿ ಕ್ಷೇತ್ರದ ಟಿಕೆಟ್‌ ನೀಡಲಾಗಿದೆ. ಹೇಗಾದರೂ ಮಾಡಿ ಟಿಕೆಟ್‌ ಬದಲಾಯಿಸಬೇಕು ಎಂದು ನಿರಾಣಿ ಕುಟುಂಬ ಯಡಿಯೂರಪ್ಪ ಮೇಲೆ ಒತ್ತಡ ಹೇರುತ್ತಿದೆ.

ಟಿಕೆಟ್‌ ಇಲ್ಲವಾದರೆ ಬಂಡಾಯ

'ನಾನು ಈಗಲೂ ಟಿಕೆಟ್‌ ಆಕಾಂಕ್ಷಿಯಾಗಿದ್ದೇನೆ. ದೊರೆಯದಿದ್ದರೆ ಪಕ್ಷೇತರನಾಗಿ ಅಥವಾ ಮತ್ತೊಬ್ಬ ಅಭ್ಯರ್ಥಿಗೆ ಬೆಂಬಲ ನೀಡುವ ಬಗ್ಗೆ ನಿರ್ಧಾರ ಕೈಗೊಳ್ಳುತ್ತೇನೆ' ಎಂದು ಸಂಗಮೇಶ ನಿರಾಣಿ ಹೇಳಿದರು.

'ವಿಜಯ ಕರ್ನಾಟಕ'ದೊಂದಿಗೆ ಮಾತನಾಡಿ, ಶ್ರೀಕಾಂತ ಕುಲಕರ್ಣಿ ಅವರಿಗೆ ಟಿಕೆಟ್‌ ನೀಡಬಾರದೆಂದು ಮನವಿ ಮಾಡಲಾಗಿತ್ತಾದರೂ ಪಕ್ಷ ಅವರಿಗೆ ಟಿಕೆಟ್‌ ನೀಡಿದೆ. ಅವರಿಗೆ ಜನಬಲವಿಲ್ಲ ಎಂಬುದು ಸೋಮವಾರ ಮೆರವಣಿಗೆ ನಡೆಸಿದಾಗ ಇದ್ದ ಜನರ ಸಂಖ್ಯೆಯಿಂದ ಗೊತ್ತಾಗಿದೆ. ನನಗೆ ಟಿಕೆಟ್‌ ದೊರೆಯುತ್ತದೆ ಎಂದು ವಿಶ್ವಾಸದಲ್ಲಿದ್ದೇನೆ ಎಂದು ತಿಳಿಸಿದರು.

'ಪಕ್ಷದಿಂದ ನನಗೆ ಟಿಕೆಟ್‌ ನೀಡದಿದ್ದರೆ ಕಾಂಗ್ರೆಸ್‌, ಬಿಜೆಪಿಯಲ್ಲಿರುವ ಸಮಾನ ಮನಸ್ಕ ಮುಖಂಡರೊಂದಿಗೆ ಪಕ್ಷೇತರ ಅಭ್ಯರ್ಥಿಯನ್ನು ಕಣಕ್ಕಿಳಿಸಲಾಗುತ್ತದೆ. ಈ ಬಗ್ಗೆ ಕ್ಷೇತ್ರದ ಕಾರ್ಯಕರ್ತರು, ಜನರಿಂದ ಅಭಿಪ್ರಾಯ ಸಂಗ್ರಹಿಸುತ್ತೇವೆ. ಮುಖಂಡರೆಲ್ಲರೂ ಒಪ್ಪಿಗೆ ನೀಡಿದರೆ ನಾನು ಸ್ಪರ್ಧಿಸುತ್ತೇನೆ. ಇಲ್ಲವಾದರೆ ಇನ್ನೊಬ್ಬ ಅಭ್ಯರ್ಥಿಗೆ ಬೆಂಬಲಿಸುತ್ತೇವೆ' ಎಂದರು.

ಸಮಾನಮನಸ್ಕ ಬೆಂಬಲಿತ ಕಣಕ್ಕೆ?

ಕಾಂಗ್ರೆಸ್‌ನಲ್ಲಿ ಟಿಕೆಟ್‌ ವಂಚಿತರಾದ ಸುಶೀಲಕುಮಾರ ಬೆಳಗಲಿ, ಶ್ರೀಶೈಲ ದಳವಾಯಿ, ಬಿಜೆಪಿ ಟಿಕೆಟ್‌ ವಂಚಿತರಾದ ಉಮೇಶ ಮಹಾಬಳಶೆಟ್ಟಿ, ಜಿ.ಎಸ್‌.ಸಿಂಧೂರ ಸೇರಿದಂತೆ ಮುಖಂಡರೆಲ್ಲ ಪಕ್ಷೇತರ ಅಭ್ಯರ್ಥಿಯ ಸ್ಪರ್ಧೆಗೆ ಚಿಂತನೆ ನಡೆಸಿದ್ದಾರೆ ಎನ್ನಲಾಗುತ್ತಿದೆ. ಈ ಸಾಧ್ಯತೆ ನಿಜವಾದರೆ ಬಿಜೆಪಿ, ಕಾಂಗ್ರೆಸ್‌ ಪಕ್ಷಗಳ ಮತಗಳಿಕೆ ಮೇಲೆ ನೇರ ಪರಿಣಾಮ ಬೀರಲಿದೆ. ಜತೆಗೆ ಅಭ್ಯರ್ಥಿಗಳಿಗೂ ತಲೆನೋವಾಗಲಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ