ಆ್ಯಪ್ನಗರ

ಗುಬ್ಬಚ್ಚಿ ಗೂಡು, ಕಾಣೆಯಾಗಿದೆ ನೋಡು

ಸಾವಳಗಿ : ನಿತ್ಯವೂ ಚಿಂವ್‌..ಚಿಂವ್‌ಗುಟ್ಟುತ್ತ, ಬೆಳ್ಳಂಬೆಳಗ್ಗೆ ಆಹಾರಕ್ಕಾಗಿ ಅಲೆಯುತ್ತಿದ್ದ, ಎಲ್ಲೆಡೆ ಸದ್ದು ಮಾಡುತ್ತ. ಕಾಳುಗಳನ್ನು ಕಬಳಿಸುತ್ತ ಕೈಗೆ ಸಿಗದಂತೆ ಸುರಕ್ಷಿತ ಅಂತರ ಕಾಪಾಡಿಕೊಂಡು ಹತ್ತಿರ ಹೋದಲ್ಲಿ ತಕ್ಷಣ ಪುರ್ರನೆ.. ಹಾರಿ ಹೋಗುವ ಪುಟಾಣಿ ಗುಬ್ಬಿಗಳು ಇಂದು ಕಾಣೆಯಾಗುತ್ತಿದೆ. ಕಾಣದಂತಾಗುತ್ತಿವೆ.

Vijaya Karnataka Web 6 May 2018, 5:00 am
ಸಾವಳಗಿ : ನಿತ್ಯವೂ ಚಿಂವ್‌..ಚಿಂವ್‌ಗುಟ್ಟುತ್ತ, ಬೆಳ್ಳಂಬೆಳಗ್ಗೆ ಆಹಾರಕ್ಕಾಗಿ ಅಲೆಯುತ್ತಿದ್ದ, ಎಲ್ಲೆಡೆ ಸದ್ದು ಮಾಡುತ್ತ. ಕಾಳುಗಳನ್ನು ಕಬಳಿಸುತ್ತ ಕೈಗೆ ಸಿಗದಂತೆ ಸುರಕ್ಷಿತ ಅಂತರ ಕಾಪಾಡಿಕೊಂಡು ಹತ್ತಿರ ಹೋದಲ್ಲಿ ತಕ್ಷಣ ಪುರ್ರನೆ.. ಹಾರಿ ಹೋಗುವ ಪುಟಾಣಿ ಗುಬ್ಬಿಗಳು ಇಂದು ಕಾಣೆಯಾಗುತ್ತಿದೆ. ಕಾಣದಂತಾಗುತ್ತಿವೆ.
Vijaya Karnataka Web the destruction of plants missing the breed
ಗುಬ್ಬಚ್ಚಿ ಗೂಡು, ಕಾಣೆಯಾಗಿದೆ ನೋಡು


ಎಲ್ಲಿಂದಲೋ ತಂದು ಹುಲ್ಲಿನ ಮನೆ ಹೆಣೆದು ತನ್ನ ಸಂತತಿ ಬೆಳೆಸಲು ಹರಸಾಹಸ ಪಡುತ್ತಿದ್ದ ಗುಬ್ಬಿಗಳು ನಿರುಮ್ಮಳವಾಗಿ ದೇವರ ಫೋಟೊಗಳ ಹಿಂದೆ, ಅಟ್ಟದಲ್ಲಿ ಅಡಗಿ ಮನೆಯ ತೊಲೆ ಸಂದಿಗಳಲ್ಲಿ ಗೂಡು ಕಟ್ಟುತ್ತಿದ್ದವು. ಕೂಡಿ ಬಾಳುತ್ತಿದ್ದವು. ಎಷ್ಟೇ ಓಡಿಸಿದರೂ ಆಗಷ್ಟೇ ಪುರ್‌...ನೆ ಹಾರಿ, ಮತ್ತೆ ಮತ್ತೆ ಭರ್ರ್‌ನೆ ಬಂದು ಮನೆಯೊಳಗೆ ನುಗ್ಗಿ ಸಂಸಾರ ಕಟ್ಟಿಕೊಳ್ಳುತ್ತಿದ್ದವು. ಛಲ ಬಿಡದ ಗುಬ್ಬಿಗಳು ದಿನ ಬೆಳಗಾದರೆ ಮನೆಯೊಳಗೆ ನುಗ್ಗಿ ಸಂಜೆಯಾದರೆ ಬೀದಿ ಬದಿಯಲ್ಲಿರುವ ವಿದ್ಯುತ್‌ ತಂತಿಯ ಮೇಲ್ಬಾಗದಲ್ಲಿ ತಳಿರು ತೋರಣದಂತೆ ಸಾಲು ಸಾಲಾಗಿ ಕುಳಿತುಕೊಳ್ಳುತ್ತಿದ್ದ ಗುಬ್ಬಿಯ ದೃಶ್ಯಗಳನ್ನು ಆಗ ನೋಡುವುದೇ ಹಬ್ಬವಾಗಿತ್ತು. ಕೆಲ ಕಿಡಿಗೇಡಿ ಹುಡುಗರು ಅವುಗಳಿಗೆ ಕವಣೆ ಮಾಡಿ ಸುರ್‌.. ಎಂದು ಕಲ್ಲನ್ನೆಸೆದರೆ ಒಂದೇ ಏಟಿಗೆ ಮೇಲಕ್ಕೆದ್ದು ಆಕಾಶದತ್ತ ಹಾರುತ್ತ ಮಾಯವಾಗುತ್ತಿದ್ದವು.

ಚಿಕ್‌.. ಚಿಕ್‌.. ಚಿಂವ್‌.. ಚಿಂವ್‌.. ಸದ್ದು ಮಾಡುವ ಗುಬ್ಬಿಯ ಶಬ್ದ ಕೇಳಲು ಕಿವಿಗೆ ಇಂಪಿತ್ತು, ಎಲ್ಲಿ ನೀರು ಕಂಡರೂ ಪಟ ಪಟನೆ ರೆಕ್ಕೆ ಅರಳಿಸಿ ಮುಳುಗಿ ಸ್ನಾನ ಮಾಡಿ ಮನೆ ಮನೆಯಲ್ಲಿ ಚಿಲಿಪಿಲಿ ಗುಟ್ಟುತ್ತಿದ್ದ ಗುಬ್ಬಚ್ಚಿಗಳು ಅಪರೂಪದ ಅತಿಥಿಗಳಾಗಿವೆ. ತಾಯಿ ಗುಬ್ಬಿ ತನ್ನ ಪುಟ್ಟ ಮರಿ ಗುಬ್ಬಿಗೆ ಎಲ್ಲಿಂದಲೋ ತಂದ ಆಹಾರದಿಂದ ಕೊಡುವ ಗುಟುಕು ಪ್ರೀತಿ ವಾತ್ಸಲ್ಯ, ಸಂಬಂಧದ ಸಂದೇಶವೂ ಇಂದು ಕಾಣದಾಗಿದೆ.

ಧಾನ್ಯ, ಹುಳು ಮತ್ತು ಗಿಡಗಳ ಎಳೆಯ ಕುಡಿ ಆಹಾರವನ್ನಾಗಿ ಗುಬ್ಬಚ್ಚಿಗಳು ಸೇವಿಸುತ್ತಿದ್ದವು. ಒಂದು ಅಧ್ಯಯನದ ಪ್ರಕಾರ ಅಭಿವೃದ್ಧಿ ಹೊಂದುತ್ತಿರುವ ಎಲೆಕ್ಟ್ರಾನಿಕ್‌, ತರಂಗ, ವಿದ್ಯುತ್‌ ಕಾಂತಿಯ ಅಲೆಗಳಲ್ಲಿ ಗುಬ್ಬಚ್ಚಿಗಳ ಸೂಕ್ಷ ್ಮ ಹೃದಯಕ್ಕೆ ಹಾಗೂ ಅವುಗಳ ಸಂತಾನೋತ್ಪತ್ತಿ ಸಾಮರ್ಥ್ಯ‌ಕ್ಕೆ ಹಾನಿಯುಂಟು ಮಾಡುತ್ತಿವೆ. ಎಲ್ಲ ಪ್ರದೇಶಗಳಲ್ಲಿ ಎಲೆಕ್ಟ್ರಾನಿಕ್‌ ತರಂಗ ಆವರಿಸಿರುವುದರಿಂದ ಗುಬ್ಬಚ್ಚಿಗಳ ಸಂತತಿ ಅವನತಿಯತ್ತ ಸಾಗುತ್ತಿದೆ.

' ಸುಡು ಬಿಸಿಲಿನ ಬೇಸಿಗೆಯಲ್ಲಿ ನಮಗೆ ಕಷ್ಟವಾಗುತ್ತಿದೆ, ಇನ್ನು ಪ್ರಾಣಿ, ಪಕ್ಷಿ, ಹಕ್ಕಿಗಳ ಸ್ಥಿತಿ ಹೇಳತೀರದಾಗಿದೆ, ಎಲೆಕ್ಟ್ರಾನಿಕ್‌ ತರಂಗಳಿಗೆ ಸಿಲುಕಿ ಗುಬ್ಬಚ್ಚಿಗಳು ಕಣ್ಮರೆಯಾಗಿವೆ. ಗಿಡ-ಮರಗಳು ಸಹ ಕಡಿಮೆಯಾಗಿದೆ, ಮನುಷ್ಯ ಮಜ್ಜಿಗೆ, ಲಸ್ಸಿ, ಕೂಲಡಿಂಕ್ಸ್‌ ಕುಡಿದು ತಣ್ಣಗೆ ಆಗುತ್ತಾರೆ, ಆದರೆ ಪ್ರಾಣಿ, ಪಕ್ಷಿಗಳು ಹನಿ ನೀರಿಗಾಗಿ ಅಲೆದಾಡಿ ಸಾಯುತ್ತಿವೆ. ಸಾಧ್ಯವಾದಷ್ಟು ಎಲ್ಲರೂ ಉಳಿಸಿಕೊಳ್ಳುವ ಪ್ರಯತ್ನ ಮಾಡಿ ' ಎಂದು ಸಾವಳಗಿಯ ಪಾರುಖ ಪಟೇಲ ಹೇಳುತ್ತಾರೆ.


ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ