ಆ್ಯಪ್ನಗರ

8 ಕಿಮೀಗೆ 2,500 ರೂ. ಸಾರಿಗೆ ಭತ್ಯೆ!

ಬೆಳಗಾವಿ: ಸುವರ್ಣ ವಿಧಾನಸೌಧದಲ್ಲಿ ನಡೆಯುವ ಚಳಿಗಾಲದ ...

Vijaya Karnataka 7 Dec 2018, 5:00 am
ಬೆಳಗಾವಿ : ಸುವರ್ಣ ವಿಧಾನಸೌಧದಲ್ಲಿ ನಡೆಯುವ ಚಳಿಗಾಲದ ಅಧಿವೇಶನದಲ್ಲಿ ಪಾಲ್ಗೊಳ್ಳುವ ಶಾಸಕರಿಗೆ ಬೆಳಗಾವಿ ನಗರದಿಂದ 8 ಕಿಮೀ ದೂರದಲ್ಲಿರುವ ಸುವರ್ಣಸೌಧ ಹೋಗುವುದಕ್ಕೆ ಕೊಡುವ ಒಂದು ದಿನದ ಗರಿಷ್ಠ ಸಾರಿಗೆ ಭತ್ಯೆ 2,500 ರೂ.!
Vijaya Karnataka Web BEL-6 LBS 2


''ಹುಬ್ಬಳ್ಳಿಯಿಂದ ಸುವರ್ಣ ವಿಧಾನಸೌಧಕ್ಕೆ ತೆರಳಲು ಗರಿಷ್ಠ ಐದು ಸಾವಿರ ರೂ. ಸಾರಿಗೆ ಭತ್ಯೆ ಕೊಡಲಾಗುತ್ತಿದೆ. ಕಳೆದ ಚಳಿಗಾಲದ ಅಧಿವೇಶನದಲ್ಲಿ 149 ಶಾಸಕರಿಗೆ 1.01 ಕೋಟಿ ರೂ. ಸಾರಿಗೆ ಭತ್ಯೆ ಕೊಡಲಾಗಿದೆ ಎಂದು ವಿಧಾನಸಭೆ ಸಚಿವಾಲಯ ಮಾಹಿತಿ ಹಕ್ಕಿನಡಿ ಮಾಹಿತಿ ನೀಡಿದೆ. ಆ ಮೂಲಕ ಸಾರ್ವಜನಿಕರ ತೆರಿಗೆ ಹಣದಲ್ಲಿ ಶಾಸಕರಿಗೆ ಭತ್ಯೆಗಳ ಭಾಗ್ಯ ನೀಡಲಾಗಿದೆ'', ಎಂದು ಆರ್‌ಟಿಐ ಕಾರ್ಯಕರ್ತ ಭೀಮಪ್ಪ ಗಡಾದ ಆರೋಪಿಸಿದ್ದಾರೆ.

ಗುರುವಾರ ಈ ಕುರಿತು ದಾಖಲೆ ಬಿಡುಗಡೆ ಮಾಡಿದ ಅವರು, ''ಸಚಿವಾಲಯದ ಮಾಹಿತಿಯಂತೆ ಶಾಸಕರಿಗೆ ಒಂದು ದಿನಕ್ಕೆ ಎರಡು ಸಾವಿರ ರೂ. ದಿನ ಭತ್ಯೆ ಹಾಗೂ ಪ್ರತಿ ಒಂದು ಕಿ.ಮೀ.ಗೆ 25 ರೂ.ನಂತೆ ಪ್ರಯಾಣ ಭತ್ಯೆ ಕೊಡಲು ಅವಕಾಶ ಇದೆ. ಆದರೆ, ಕನಿಷ್ಠ ಅಂತರದ ಪ್ರಯಾಣಕ್ಕೂ ಸಾವಿರಾರು ರೂ. ಬಿಲ್‌ ಪಾವತಿಸಲಾಗಿದೆ. ಇದನ್ನು ಕಡಿಮೆ ಮಾಡಿ ಅನಗತ್ಯ ಖರ್ಚು ಉಳಿಸಬೇಕು'', ಎಂದು ಆಗ್ರಹಿಸಿದರು.

''ಕಳೆದ ಚಳಿಗಾಲದ ಅಧಿವೇಶನದಲ್ಲಿ ವಿಧಾನಸಭೆ ಕಲಾಪಗಳು ಕೇವಲ 40 ಗಂಟೆ 30 ನಿಮಿಷ; ವಿಧಾನ ಪರಿಷತ್‌ನಲ್ಲಿ 58 ಗಂಟೆ 8 ನಿಮಿಷ ಕಲಾಪಗಳು ನಡೆದಿವೆ. ಇದಕ್ಕಾಗಿ 21.57 ಕೋಟಿ ರೂ. ಖರ್ಚು ಮಾಡಲಾಗಿದೆ. ವಿಧಾನಸಭೆಯ ಒಂದು ಗಂಟೆ ಕಲಾಪಕ್ಕೆ 50 ಲಕ್ಷ ರೂ.ಗೂ ಹೆಚ್ಚು ಖರ್ಚು ಮಾಡಲಾಗಿದೆ. ಆದರೆ, ಕಲಾಪ ನಡೆದ ಸಮಯದಲ್ಲಿ ಗಂಭೀರ ವಿಷಯಗಳು ಚರ್ಚೆಯಾಗಿಲ್ಲ'', ಎಂದು ಆರೋಪಿಸಿದರು.

ಸಚಿವರ ವಸತಿಗೆ ಲಕ್ಷ ರೂ. :
''ಕಳೆದ ಚಳಿಗಾಲದ ಅಧಿವೇಶನದಲ್ಲಿ ಸಚಿವರಿಗೆ ವಸತಿ ವ್ಯವಸ್ಥೆ ಮಾಡಲಾಗಿದ್ದ ಹೋಟೆಲ್‌ಗಳು ಒಂದು ಲಕ್ಷಕ್ಕೂ ಹೆಚ್ಚು ರೂ. ಖರ್ಚು ತೋರಿಸಿವೆ. ಸಚಿವ ಟಿ.ಬಿ. ಜಯಚಂದ್ರ ಅವರು ಉಳಿದುಕೊಂಡಿದ್ದ ಖಾಸಗಿ ಹೋಟೆಲ್‌ನಿಂದ 12 ದಿನಕ್ಕೆ 1.20 ಲಕ್ಷ ರೂ. ಖರ್ಚು ತೋರಿಸಲಾಗಿದೆ. ಇದೇ ರೀತಿ ಹಲವು ಸಚಿವರ ಹೋಟೆಲ್‌ ವಸತಿ ಖರ್ಚು ವೆಚ್ಚ 50 ಸಾವಿರ ರೂ. ದಾಟಿವೆ. ಸರಕಾರದ ಮುಖ್ಯಸಚೇತಕ ಆಗಿದ್ದ ಅಶೋಕ ಪಟ್ಟಣ ಅವರ 12 ದಿನದ ಹೋಟೆಲ್‌ ವಸತಿ ಬಿಲ್‌ 353 ರೂ.' ಎಂದು ಭೀಮಪ್ಪ ಗಡಾದ ದಾಖಲೆ ಪ್ರದರ್ಶಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ