ಪುಟ್ಟ ಕಂದಮ್ಮನ ಉಳಿವಿಗೆ ಬೇಕಿದೆ 16 ಕೋಟಿ: ಸುವರ್ಣ ಸೌಧದಲ್ಲಿ ಪರಿಪರಿಯಾಗಿ ಬೇಡಿಕೊಂಡ್ರು ಕ್ಯಾರೇ ಅಂದಿಲ್ಲ ಜನ ಪ್ರತಿನಿಧಿಗಳು

Vijaya Karnataka Web 25 Dec 2021, 5:32 pm
ಈ ಪಾಪು ಜಗತ್ತಿನಲ್ಲಿಯೇ ಅತ್ಯಂತ ವಿರಳವಾದ ರೋಗದಿಂದ ಬಳಲುತ್ತಿದೆ. ಈ ಕಂದಮ್ಮ ಬದುಕಬೇಕಾದರೆ 16 ಕೋಟಿ ರೂಪಾಯಿ ಮೌಲ್ಯದ ಇಂಜಕ್ಷನ್ ಬೇಕು. ಭಾರತದಲ್ಲಿ ಇರದ ಆ ಕಾಸ್ಟ್ಲಿ ಇಂಜೆಕ್ಷನ್‌ ಅನ್ನು ಯೂರೋಪಿನಿಂದ ತರಿಸಿಕೊಳ್ಳಬೇಕು. ನಿತ್ಯ ಕೂಲಿ ಮಾಡಿ ಬದುಕುವ ಬಡಪಾಯಿಗಳಾದ ಈ ಪೋಷಕರಿಗೆ ಬೆಟ್ಟದಷ್ಟು ದೊಡ್ಡ ಮೊತ್ತದ ಕಾಸು ಹೊಂದಿಸುವುದು ಕಷ್ಟದ ಮಾತೇ ಸೈ.. ಹೀಗಾಗಿ ತಮ್ಮ ಕಂದಮ್ಮನ ಉಳಿವಿಗಾಗಿ ಉಪಕಾರ ಮಾಡಿ ಎಂದು ಪೋಷಕರು ಕರುನಾಡಿನ ಸಹೃದಯಿಗಳೊಂದಿಗೆ ಸಹಾಯ ಬೇಡುತ್ತಿದ್ದಾರೆ.

ಸರ್ವಂ ಬಾಳೇಕುಂದ್ರಿ ಅನ್ನೋ ಹೆಸರಿನ ಈ ಮಗು, ವಿಶ್ವದಲ್ಲಿಯೇ ಅತೀ ವಿರಳವಾದ ಸ್ಪ್ಯಾನಲ್ ಮಸ್ಕುಲರ್ ಅಟ್ರಾಪಿ ಎಂಬ ರೋಗದಿಂದ ಬಳಲುತ್ತಿದೆ. ಈ ಮಗು ಬದುಕಬೇಕಾದ್ರೆ ಯುರೋಪ್‌ನಲ್ಲಿ ಮಾತ್ರ ಸಿಗುವ 16 ಕೋಟಿ ರೂಪಾಯಿಯ ಜೊಲಗೆಸ್ಮಾ ಎಂಬ ಇಂಜಕ್ಷನ್ ಕೊಡಬೇಕಿದೆ. ಬೆಳಗಾವಿ ಶಹಾಪುರ ಗ್ರಾಮದಲ್ಲಿ ಇಲೆಕ್ಟ್ರಿಕಲ್ ವೈರಿಂಗ್ ಕೆಲಸ ಮಾಡುವ ಈ ಮಗುವಿನ ತಂದೆ ಮಹೇಶ ಪ್ರಕಾಶ ಬಾಳೇಕುಂದ್ರಿ ಹೇಗಾದ್ರೂ ಮಾಡಿ ನನ್ನ ಮಗುವನ್ನು ಉಳಿಸಬೇಕು ಎಂದು ಶತ ಪ್ರಯತ್ನ ಮಾಡುತ್ತಿದ್ದಾರೆ.

ಮಗುವಿನ ಚಿಕಿತ್ಸೆಯ ಸಹಾಯಾರ್ಥ ಬೆಳಗಾವಿಯ ಸುವರ್ಣ ಸೌಧದಲ್ಲಿ ಅಧಿವೇಶನ ನಡೆಯುವ ವೇಳೆ ಭೇಟಿ, ಸೌಧದ ಸುವರ್ಣ ಗಾರ್ಡನ್‍ನಲ್ಲಿ ಪಾಪು ಜತೆ ಪೋಷಕರಿಬ್ಬರೂ ಧರಣಿ ಕುಳಿತು ಮಗುವನ್ನು ಬದುಕಿಸಿಕೊಡಿ ಎಂದು ಅಂಗಲಾಚಿದ್ದರು. ಆದರೆ ಮುಖ್ಯಮಂತ್ರಿ ಆದಿಯಾಗಿ ಈ ಬೆಳಗಾವಿಗೆ ಬಂದ ಯಾವ ಜನ ಪ್ರತಿನಿಧಿಗೂ ಈ ಪೋಷಕರ ರೋಧನೆ ಕೇಳಲೇ ಇಲ್ಲ.

ಈ ಮಗುವಿನ ಚಿಕಿತ್ಸೆಗೆ ಬೇಕಾಗಿರುವುದು 16 ಕೋಟಿ. ಇದು ಸಣ್ಣ ಮೊತ್ತವೇನಲ್ಲ. ಸರ್ಕಾರ ಉಮೇದು ತೋರಿಸಿದರೆ ಇದು ಆಗದೇ ಇರುವ ಕೆಲಸವೇನೂ ಅಲ್ಲ. ಸರ್ಕಾರ ಮಾಡದೇ ಹೋದರೂ ಕೂಡ ಕರುನಾಡಿನ ಜನ ಮನಸ್ಸು ಮಾಡಿದರೆ ಈ ಮೊತ್ತ ಸಂಗ್ರಹಿಸುವುದು ಕಷ್ಟದ ಕೆಲಸವೇನಲ್ಲ. ಇಂಜೆಕ್ಷನ್‌ ಲಭ್ಯವಾಗಿ ಮಗು ಬದುಕುಳಿದರೆ ಅದಕ್ಕಿಂತ ದೊಡ್ಡ ಪುಣ್ಯ ಮತ್ತೊಂದಿಲ್ಲ.
Loading ...