ಆ್ಯಪ್ನಗರ

ಸುವರ್ಣ ವಿಧಾನಸೌಧ ಕಸ ಹೊಡೆಯುವವರೂ ಇರಲ್ಲ!

400 ಕೋಟಿ ರೂ. ವೆಚ್ಚದ ಬೆಳಗಾವಿಯ ಸುವರ್ಣ ವಿಧಾನಸೌಧಕ್ಕೆ ಇನ್ನು ಕಸ ಹೊಡೆಯುವವರೂ ಬರಲ್ಲ, ಭದ್ರತಾ ಸಿಬ್ಬಂದಿಯೂ ಸುಳಿಯಲ್ಲ. ವಿ

ವಿಕ ಸುದ್ದಿಲೋಕ 31 Mar 2017, 9:18 am

ಎಂ.ಕೆ.ಹೆಗಡೆ ಬೆಳಗಾವಿ

400 ಕೋಟಿ ರೂ. ವೆಚ್ಚದ ಬೆಳಗಾವಿಯ ಸುವರ್ಣ ವಿಧಾನಸೌಧಕ್ಕೆ ನಾಳೆಯಿಂದ ಕಸ ಹೊಡೆಯುವವರೂ ಬರಲ್ಲ, ಭದ್ರತಾ ಸಿಬ್ಬಂದಿಯೂ ಸುಳಿಯಲ್ಲ. ವಿದ್ಯುತ್‌ ನಿರ್ವಣೆಗೂ ಜನರಿರಲ್ಲ, ಗಾರ್ಡನ್‌ ನೋಡುವುದಕ್ಕೂ ಸಿಬ್ಬಂದಿ ಇರಲ್ಲ!

ಇದಕ್ಕೆ ಕಾರಣ ಕಳೆದ ಒಂದು ವರ್ಷದಿಂದ ಸುವರ್ಣ ವಿಧಾನಸೌಧ ನಿರ್ವಣೆಗೆ ಸರಕಾರ ಬಿಡಿಗಾಸನ್ನೂ ಕೊಟ್ಟಿಲ್ಲ. ಒಂದು ವರ್ಷದಿಂದ ನಿರ್ವಹಣೆ ಗುತ್ತಿಗೆ ಪಡೆದವರು ಸಿಬ್ಬಂದಿಗೆ ನೀಡುವುದಕ್ಕೆ ಹಣವಿಲ್ಲದೆ ಪರದಾಡುತ್ತಿದ್ದು, ಶುಕ್ರವಾರ ಸಂಜೆಯಿಂದ ಎಲ್ಲ ಸಿಬ್ಬಂದಿಯನ್ನೂ ಕೆಲಸದಿಂದ ಬಿಡುಗಡೆ ಮಾಡಲು ನಿರ್ಧರಿಸಿದ್ದಾರೆ.

ಉತ್ತರದ ಜನರೊಂದಿಗೆ ನಾವಿದ್ದೇವೆ ಎಂದು ತೋರಿಸುವುದಕ್ಕೋಸ್ಕರ ಸರಕಾರ 2006ರಲ್ಲಿ ಸಂಕಲ್ಪ ಮಾಡಿ, 2011ರ ಹೊತ್ತಿಗೆ ಸುವರ್ಣ ವಿಧಾನಸೌಧ ನಿರ್ಮಾಣ ಮಾಡಿದೆ. ವರ್ಷಕ್ಕೆ ಸುಮಾರು 4 ಕೋಟಿ ರೂ. ನಿರ್ವಹಣೆಗೆ ಖರ್ಚಾಗುತ್ತಿದ್ದು, ಪ್ರತಿ ವರ್ಷ ಏಪ್ರಿಲ್‌ ತಿಂಗಳಲ್ಲೇ ಸರಕಾರ ವರ್ಷದ ಹಣ ಬಿಡುಗಡೆ ಮಾಡುತ್ತ ಬಂದಿದೆ. ಲೋಕೋಪಯೋಗಿ ಇಲಾಖೆ ಸ್ವಚ್ಛತೆ, ಭದ್ರತೆ, ವಿದ್ಯುತ್‌ ಹಾಗೂ ಗಾರ್ಡನ್‌ ನಿರ್ವಹಣೆಗೆ ಒಬ್ಬೊಬ್ಬರಿಗೆ ವಾರ್ಷಿಕ ಗುತ್ತಿಗೆ ನೀಡುತ್ತದೆ. ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ನೀರು ಪೂರೈಕೆ ಮಾಡುತ್ತ ಬಂದಿದೆ.

ಆದರೆ, 2016ರ ಏಪ್ರಿಲ್‌ ತಿಂಗಳಿನಲ್ಲಿ ವಾಡಿಕೆಯಂತೆ ಬರಬೇಕಿದ್ದ ಹಣ ಬರಲೇ ಇಲ್ಲ. ಇಂದಲ್ಲ ನಾಳೆ ಹಣ ಬರಬಹುದೆಂದು ಲೋಕೋಪಯೋಗಿ ಇಲಾಖೆ ಮತ್ತೊಂದು ವರ್ಷಕ್ಕೆ ಟೆಂಡರ್‌ ಕರೆದು ಗುತ್ತಿಗೆ ಮುಂದುವರಿಸಿದೆ. ಆದರೆ ಹಣ ಬಿಡುಗಡೆಯಾಗಲೇ ಇಲ್ಲ.

ಜವಾಬ್ದಾರಿ ಹೊತ್ತ ಸಚಿವಾಲಯ

Vijaya Karnataka Web belagavi suvarna soudha
ಸುವರ್ಣ ವಿಧಾನಸೌಧ ಕಸ ಹೊಡೆಯುವವರೂ ಇರಲ್ಲ!

ಈ ಮಧ್ಯೆ, ವಿಧಾನಮಂಡಳದ ಸಚಿವಾಲಯ ಕಳೆದ ಡಿಸೆಂಬರ್‌ ತಿಂಗಳಿನಲ್ಲಿ ಸುವರ್ಣ ವಿಧಾನಸೌಧದ ನಿರ್ವಹಣೆಯನ್ನು ತಾನೇ ಮಾಡುವುದಾಗಿ ಹೇಳಿ ಅನುದಾನವನ್ನು ಪಡೆದುಕೊಂಡಿದೆ. ವರ್ಷ ಮುಗಿದರೂ ಅಲ್ಲಿಂದಲೂ ನಿರ್ವಹಣೆ ಹಣ ಬಿಡುಗಡೆಯಾಗಿಲ್ಲ. ವಿಧಾನಸಭೆಯ ಸಚಿವಾಲಯಕ್ಕೆ ಸ್ಥಳೀಯ ಲೋಕೋಪಯೋಗಿ ಇಲಾಖೆ 2-3 ಪತ್ರ ಬರೆದಿದೆ. ನಿರ್ವಹಣೆಯನ್ನು ಲೋಕೋಪಯೋಗಿ ಇಲಾಖೆ ಮುಂದುವರಿಸಬೇಕೋ ಅಥವಾ ಅದಕ್ಕೆ ಬೇರೆ ವ್ಯವಸ್ಥೆ ಮಾಡಲಾಗುವುದೋ ಎಂದು ಸ್ಪಷ್ಟನೆ ಕೋರಲಾಗಿತ್ತು. ಆದರೆ ಒಂದಾದ ಮೇಲೆ ಒಂದರಂತೆ ಪತ್ರ ಬರೆದರೂ ಈವರೆಗೂ ಯಾವುದೇ ಪ್ರತಿಕ್ರಿಯೆ ಇಲ್ಲ. ಹಿಂದಿನ ನಿರ್ವಹಣೆಯ ಹಣವೂ ಇಲ್ಲ, ಮುಂದಿನ ನಿರ್ವಹಣೆಯ ಪ್ರಸ್ತಾಪವೂ ಇಲ್ಲ.

ಶುಕ್ರವಾರ ವಾರ್ಷಿಕ ಗುತ್ತಿಗೆ ಅಂತ್ಯವಾಗುತ್ತಿದೆ. ಶನಿವಾರದಿಂದ ಸುವರ್ಣ ವಿಧಾನಸೌಧ ಕಾಯುವವರಾರ‍ಯರು? ಕಸ ಹೊಡೆಯುವವರಾರ‍ಯರು? ಗಿಡಗಳಿಗೆ ನೀರುಣಿಸುವವರಾರ‍ಯರು? ವಿದ್ಯುತ್‌ ವ್ಯವಸ್ಥೆ ನೋಡಿಕೊಳ್ಳುವವರಾರ‍ಯರು? ಬಾಕಿ ಇರುವ ವಿದ್ಯುತ್‌ ಬಿಲ್‌ ತುಂಬುವವರಾರ‍ಯರು? ಆಗೊಮ್ಮೆ ಈಗೊಮ್ಮೆ ನಡೆಯುವ ವಿವಿಧ ಸಭೆಗಳಿಗೆ ನೀರು ಪೂರೈಕೆ ಮಾಡುವವರಾರ‍ಯರು? -ಈ ಪ್ರಶ್ನೆಗಳಿಗೆ ಇನ್ನೂ ಉತ್ತರ ಸಿಕ್ಕಿಲ್ಲ.

ದಿನಕ್ಕೆ 150 ಸಿಬ್ಬಂದಿ
ಪ್ರತಿ ನಿತ್ಯ ಸಂಪೂರ್ಣ ವಿಧಾನಸೌಧ ಸ್ವಚ್ಛತೆಗೆ ಸುಮಾರು 8-10 ಜನ ಕೆಲಸ ಮಾಡುತ್ತಾರೆ. 40 -50 ಜನ ಭದ್ರತಾ ಸಿಬ್ಬಂದಿ ಕಾರ್ಯನಿರ್ವಹಿಸುತ್ತಾರೆ. ಸುತ್ತಲಿನ ಗಾರ್ಡನ್‌ ನಿರ್ವಹಣೆಗೆ 35-40 ಜನ ಇರುತ್ತಾರೆ. ನೀರು ಪೂರೈಕೆಗೆ ಕೆಲವು ಸಿಬ್ಬಂದಿ ಇರುತ್ತಾರೆ. ವಿದ್ಯುತ್‌ ನಿರ್ವಹಣೆಗೆ ಆಗಾಗ ಸಂಬಂಧಿಸಿದವರು ಬರುತ್ತಾರೆ. ಎಲ್ಲ ಸೇರಿ ಸರಾಸರಿ 100-150 ಜನ ವಿಧಾನಸೌಧ ನಿರ್ವಹಣೆ ಕೆಲಸ ಮಾಡುತ್ತಾರೆ. ಅವರಿಗೆಲ್ಲ ಗುತ್ತಿಗೆದಾರರು ವೇತನ ನೀಡಬೇಕು. ಸುಮಾರು ಒಂದೂವರೆ ಕೋಟಿ ರೂ.ಗಳಷ್ಟು ವಿದ್ಯುತ್‌ ಬಿಲ್‌ ಬರುತ್ತದೆ. ಆದರೆ ಸರಕಾರದಿಂದ ಮಾತ್ರ ಯಾವುದಕ್ಕೂ ಈ ಸಾಲಿನಲ್ಲಿ ಒಂದು ಪೈಸೆಯೂ ಬಂದಿಲ್ಲ. ನವೆಂಬರ್‌ ಅಂತ್ಯದಲ್ಲಿ ವಿಧಾನಮಂಡಳದ ಅಧಿವೇಶನ ನಡೆದ ಸಂದರ್ಭದಲ್ಲಿ ಸರಕಾರದಿಂದ ವಿಶೇಷ ಅನುದಾನ ಬಿಡುಗಡೆ ಮಾಡಿ ಕೆಲಸ ನಿರ್ವಹಿಸಲಾಗಿದೆ. ಏಪ್ರಿಲ್‌ನಲ್ಲಿ ಗುತ್ತಿಗೆ ಪಡೆದವರು ಈಗ ಹಣ ಬರಬಹುದು, ಆಗ ಬರಬಹುದು ಎಂದು ಕಾಯುತ್ತಲೇ ವರ್ಷಪೂರ್ತಿ ನಿರ್ವಹಣೆ ಮಾಡಿದ್ದಾರೆ.

ನನಗೆ ಈ ಬಗ್ಗೆ ಯಾವುದೇ ಮಾಹಿತಿ ಇಲ್ಲ. ಕೂಡಲೇ ವಿಚಾರಿಸುತ್ತೇನೆ ಎಂದು ವಿಧಾನಸಭಾಧ್ಯಕ್ಷ ಕೆ.ಬಿ.ಕೋಳಿವಾಡ ಹೇಳಿದರು.

ವಿಷಯ ನನ್ನ ಗಮನಕ್ಕೆ ಬಂದಿಲ್ಲ. ಲೋಕೋಪಯೋಗಿ ಇಲಾಖೆ ಕಾರ್ಯದರ್ಶಿಯೊಂದಿಗೆ ಈ ಬಗ್ಗೆ ಮಾತನಾಡುತ್ತೇನೆ ಎಂದು ಜಿಲ್ಲಾಧಿಕಾರಿ ಎನ್‌.ಜಯರಾಂ ಹೇಳಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ