ಆ್ಯಪ್ನಗರ

ಅವ್ಯವಹಾರ ಆರೋಪ: ಮುಗಳಿ ಗ್ರಾಪಂನಲ್ಲಿ ಅಧಿಕಾರಿಗಳಿಂದ ಪರಿಶೀಲನೆ

ಚಿಕ್ಕೋಡಿ: ತಾಲೂಕಿನ ಮುಗಳಿ ಗ್ರಾಮ ಪಂಚಾಯಿತಿಯಲ್ಲಿ 14ನೇ ಹಣಕಾಸು ಯೋಜನೆ ಅನುಷ್ಠಾನದಲ್ಲಿ ಅವ್ಯವಹಾರ ...

Vijaya Karnataka 10 Oct 2018, 5:00 am
ಚಿಕ್ಕೋಡಿ: ತಾಲೂಕಿನ ಮುಗಳಿ ಗ್ರಾಮ ಪಂಚಾಯಿತಿಯಲ್ಲಿ 14ನೇ ಹಣಕಾಸು ಯೋಜನೆ ಅನುಷ್ಠಾನದಲ್ಲಿ ಅವ್ಯವಹಾರ ನಡೆದಿದೆ ಎಂಬ ಆರೋಪದ ಹಿನ್ನೆಲೆಯಲ್ಲಿ ತಾಪಂನ ಅಧಿಕಾರಿಗಳು ಪರಿಶೀಲನೆ ನಡೆಸಲು ಮಂಗಳವಾರ ಮುಗಳಿ ಗ್ರಾಮ ಪಂಚಾಯಿತಿಗೆ ತೆರಳಿದ ಸಂದರ್ಭದಲ್ಲಿ ಹಾಜರಿರಬೇಕಿದ್ದ ಇಬ್ಬರೂ ಪಿಡಿಒಗಳು ಗೈರು ಹಾಜರಾಗಿದ್ದರಿಂದ ಗ್ರಾಮಸ್ಥರು ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
Vijaya Karnataka Web BEL-9CKD1


ಪರಿಶೀಲನೆ ವೇಳೆ ಹಾಜರಿರಬೇಕಾಗಿದ್ದ ಪಿಡಿಒ ಪ್ರಕಾಶ ಪಾಟೀಲ ಮತ್ತು ಈ ಹಿಂದೆ ಇದ್ದ ಪಿಡಿಒ ರೂಪಾ ಬಡಕುಂಡ್ರಿ ಇಬ್ಬರೂ ಗೈರು ಹಾಜರಾಗಿದ್ದರಿಂದ ಪರಿಶೀಲನೆ ಬಂದಿದ್ದ ತಾಲೂಕು ಪಂಚಾಯಿತಿ ಅಧಿಕಾರಿಗಳಾದ ಬಿ.ವಿ.ಮಣಮುದ್ದೆ ಮತ್ತು ವಿ.ಎ.ಸಾಲಿಮಠ ಅವರನ್ನು ಅವ್ಯವಹಾರ ನಡೆದಿದೆ ಎಂದು ಆರೋಪ ಮಾಡಿದ್ದ ಸಾಮಾಜಿಕ ಕಾರ್ಯಕರ್ತ ಪಿ.ಕೆ.ದೇಶಪಾಂಡೆ ಮತ್ತು ತಾಪಂ ಸದಸ್ಯ ರಾಜು ಪಾಟೀಲ ಅವರು ತರಾಟೆಗೆ ತೆಗೆದುಕೊಂಡರು.

ಅಷ್ಟರಲ್ಲಿಯೆ ಗ್ರಾಪಂ ಸದಸ್ಯರು,ಅವ್ಯವಹಾರ ನಡೆದಿದೆ ಎಂದು ಆರೋಪ ಮಾಡಿದ್ದ ತಾಪಂ ಸದಸ್ಯ ರಾಜು ಪಾಟೀಲ ಹಾಗೂ ಸಾಮಾಜಿಕ ಕಾರ್ಯಕರ್ತ ಪಿ.ಕೆ.ದೇಶಪಾಂಡೆಯವರ ಮಧ್ಯೆ ಮಾತಿನ ಚಕಮಕಿ ನಡೆದು ಕೈ ಕೈ ಮಿಲಾಯಿಸುವ ಮಟ್ಟ ತಲುಪುತ್ತಿದ್ದಂತೆಯೇ ಅಲ್ಲಿದ್ದ ಕೆಲವು ಸದಸ್ಯರು ಪರಿಸ್ಥಿತಿ ಗೊಳಿಸಲು ಮುಂದಾದರು. ಗ್ರಾಪಂನಲ್ಲಿ ಕೆಲ ಕಾಲ ಗೊಂದಲದ ವಾತಾವರಣ ಸೃಷ್ಟಿಯಾಗಿತ್ತು. ಇದನ್ನು ಕಂಡು ಪರಿಶೀಲನೆ ನಡೆಸಲು ಆಗಮಿಸಿದ್ದ ತಾಪಂ ಅಧಿಕಾರಿಗಳು ಪಿಡಿಒಗಳು ನಾಳೆ ಬರುವುದಾಗಿ ಹೇಳಿದ್ದಾರೆ. ಆಗ ಆಗಲೇ ತಾವೂ ಬರುವುದಾಗಿ ಹೇಳಿ ಎದ್ದು ಅಲ್ಲಿಂದ ಹೊರಟು ಹೋದರು.

ಕವಡೆ ಕಾಸಿನ ಕಿಮ್ಮತ್ತಿಲ್ಲದ ನೋಟಿಸ್‌:
ಮುಗಳಿ ಗ್ರಾಪಂನಲ್ಲಿ 14ನೇ ಹಣಕಾಸು ಯೋಜನೆಯಡಿ ಅವ್ಯವಹಾರ ನಡೆದಿದೆ ಎಂದು ತಾಪಂ ಸದಸ್ಯ ರಾಜು ಪಾಟೀಲ ಮತ್ತು ಸಾಮಾಜಿಕ ಕಾರ್ಯಕರ್ತ ಪಿ.ಕೆ.ದೇಶಪಾಂಡೆಯವರು ಸಲ್ಲಿಸಿದ ದೂರಿನ ಮೇರೆಗೆ ಆ.9 ರಂದು ಪರಿಶೀಲನೆ ನಡೆಸಲು ತಾವು ಬರುತ್ತಿದ್ದು, ಅಂದು ಪಿಡಿಒಗಳು ಮತ್ತು ಗ್ರಾಪಂನ ಎಲ್ಲ ಸದಸ್ಯರು ಹಾಗೂ ಆರೋಪ ಮಾಡಿರುವವರು ಎಲ್ಲರೂ ಹಾಜರಿರಬೇಕೆಂದು ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಕೆ.ಎಸ್‌.ಪಾಟೀಲರು ತಮ್ಮ ಕಚೇರಿಯಿಂದ ಮುಂಚಿತವಾಗಿ ನೋಟಿಸ್‌ ಜಾರಿ ಮಾಡಿದ್ದರು. ಮುಗಳಿ ಗ್ರಾಪಂನಲ್ಲಿ ಗ್ರಾಪಂ ಸದಸ್ಯರು ಮತ್ತು ಆರೋಪ ಮಾಡಿದವರು ಹಾಜರಿದ್ದರು. ಆದರೆ ಮುಖ್ಯವಾಗಿ ಹಾಜರಿರಬೇಕಾಗಿದ್ದ ಈಗೀನ ಪಿಡಿಒ ಮತ್ತು ಹಿಂದಿನ ಪಿಡಿಓ ಇಬ್ಬರೂ ಹಾಜರಾಗದಿರುವುದು ಚರ್ಚೆಗೆ ಗ್ರಾಸವಾಗಿದ್ದು, ಈ ಪಿಡಿಒಗಳಿಗೆ ತಾಪಂ. ಕಾರ್ಯನಿರ್ವಾಹಕ ಅಧಿಕಾರಿಗಳ ನೋಟಿಸಿಗೆ ಕವಡೆ ಕಾಸಿನ ಕಿಮ್ಮತ್ತಿಲ್ಲದಂತಾಗಿದೆ ಎಂಬ ಚರ್ಚೆಗಳು ಮಂಗಳವಾರ ಮುಗಳಿ ಗ್ರಾಪಂನಲ್ಲಿ ನಡೆಯುತ್ತಿರುವುದು ಕಂಡು ಬಂದಿತು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ