ಆ್ಯಪ್ನಗರ

ಜೊಲ್ಲೆ ಪಾಲಾದ ಚಿಕ್ಕೋಡಿ ಬಿಜೆಪಿ ಟಿಕೆಟ್‌; ಕತ್ತಿ ಬೆಂಬಲಿಗರ ಅಸಮಾಧಾನ

ಬೆಳಗಾವಿ/ಹುಕ್ಕೇರಿ : ಚಿಕ್ಕೋಡಿ ಲೋಕಸಭಾ ಕ್ಷೇತ್ರದ ಬಿಜೆಪಿ ಟಿಕೆಟ್‌ ಅಣ್ಣಾಸಾಹೇಬ ಜೊಲ್ಲೆ ಅವರ ಪಾಲಾಗುತ್ತಿದ್ದಂತೆ ಮಾಜಿ ...

Vijaya Karnataka 30 Mar 2019, 5:00 am
ಬೆಳಗಾವಿ/ಹುಕ್ಕೇರಿ : ಚಿಕ್ಕೋಡಿ ಲೋಕಸಭಾ ಕ್ಷೇತ್ರದ ಬಿಜೆಪಿ ಟಿಕೆಟ್‌ ಅಣ್ಣಾಸಾಹೇಬ ಜೊಲ್ಲೆ ಅವರ ಪಾಲಾಗುತ್ತಿದ್ದಂತೆ ಮಾಜಿ ಮಾಜಿ ಸಂಸದ ರಮೇಶ್‌ ಕತ್ತಿ ಅಭಿಮಾನಿಗಳು ಅಸಮಾಧಾನಗೊಂಡಿದ್ದಾರೆ.
Vijaya Karnataka Web BEL-29 HUKKERI 01


ಬಿಡಿಸಿಸಿ ಬ್ಯಾಂಕ್‌ ಅಧ್ಯಕ್ಷ ರೂ ಆಗಿರುವ ಮಾಜಿ ಸಂಸದ ರಮೇಶ್‌ ಕತ್ತಿ ಕ್ಷೇತ್ರದಲ್ಲಿ ತಮ್ಮದೇ ಆದ ಪ್ರಭಾವ ಹೊಂದಿ 2014ರ ಲೋಕಸಭಾ ಚುನಾವಣೆಯಲ್ಲಿ ಅಲ್ಪ ಮತಗಳ ಅಂತರದಿಂದ ಸೋಲನುಭವಿಸಿದ್ದರು. ಈ ಬಾರಿ ಗೆಲ್ಲುವ ಗುರಿಯೊಂದಿಗೆ ಚುನಾವಣೆಗೆ ಸ್ಪರ್ಧಿಸಲು ಎಲ್ಲ ಸಿದ್ಧತೆ ಮಾಡಿಕೊಂಡು, ಚುನಾವಣೆ ಘೋಷಣೆಗಿಂತ ಮೊದಲೇ ಹುಕ್ಕೇರಿ ತಾಲೂಕಿನ ಹಳ್ಳಿಗಳಲ್ಲಿ ಒಂದು ಸುತ್ತಿನ ಪ್ರಚಾರ ಕೈಗೊಂಡು, ಪ್ರಧಾನಿ ನರೇಂದ್ರ ಮೋದಿ ಅವರನ್ನು ಬೆಂಬಲಿಸಲು ಮನವಿ ಮಾಡಿದ್ದರು. ಅಲ್ಲದೆ, ಕ್ಷೇತ್ರದಲ್ಲಿ ಗೆಲ್ಲಲೇಬೇಕಾದ ಒತ್ತಡದಲ್ಲಿರುವ ಬಿಜೆಪಿ ಕೂಡ ರಮೇಶ್‌ ಕತ್ತಿ ಅವರಿಗೆ ಟಿಕೆಟ್‌ ನೀಡುವ ನಿರೀಕ್ಷೆ ಎಲ್ಲರಲ್ಲಿತ್ತು. ಆದರೆ, ಕೊನೇ ಘಳಿಗೆಯಲ್ಲಿ ಟಿಕೆಟ್‌ ಜೊಲ್ಲೆ ಅವರ ಪಾಲಾಗಿರುವುದು ಕತ್ತಿ ಬೆಂಬಲಿಗರಲ್ಲಿ ನಿರುತ್ಸಾಹ, ಮೌನ ಮನೆ ಮಾಡಿದೆ.

ಹುಕ್ಕೇರಿ ತಾಲೂಕಿನ ಬಹುತೇಕ ಗ್ರಾಮ ಪಂಚಾಯಿತಿಗಳಲ್ಲಿ ಬಿಜೆಪಿ ಬೆಂಬಲಿತರು ಅಧ್ಯಕ್ಷ -ಉಪಾಧ್ಯಕ್ಷ ರಾಗಿದ್ದು, ಆಡಳಿತ ಚುಕ್ಕಾಣಿ ಹಿಡಿದ್ದಿದ್ದಾರೆ. ಜಿಪಂ ಮತ್ತು ತಾಪಂನಲ್ಲಿಯೂ ಬಿಜೆಪಿ ಬಲಿಷ್ಠವಾಗಿದೆ. ತಾಲೂಕಿನ ಸಂಘ-ಸಂಸ್ಥೆಗಳಲ್ಲಿ ಬಿಜೆಪಿ ಬೆಂಬಲಿತರು ಎಲ್ಲ ಸ್ಥಾನಗಳನ್ನು ಗೆದ್ದಿದ್ದಾರೆ. ಇದರ ಹಿಂದೆ ಕತ್ತಿ ಸಹೋದರರ ಶಕ್ತಿ ಕೆಲಸ ಮಾಡಿರುವುದನ್ನು ಪಕ್ಷದ ಹೈಕಮಾಂಡ್‌ ಮರೆತಿದೆ ಎಂದು ಕೆಲ ಕಾರ್ಯಕರ್ತರು ಜಾಲತಾಣಗಳಲ್ಲಿ ಬಹಿರಂಗವಾಗಿ ಹೇಳಿಕೊಂಡಿದ್ದಾರೆ.

ಟಿಕೆಟ್‌ ವಂಚಿತ ರಮೇಶ್‌ ಕತ್ತಿ ಅವರ ಮುಂದಿನ ನಡೆ ಬಗ್ಗೆ ತಿಳಿದು ಬಂದಿಲ್ಲ. ಶೀಘ್ರ ಲೋಕಸಭಾ ಮತಕ್ಷೇತ್ರದ ವ್ಯಾಪ್ತಿಯ ಮುಖಂಡರ, ಅಭಿಮಾನಿಗಳ, ಕಾರ್ಯಕರ್ತರ ಸಭೆ ನಡೆಸಲಿದ್ದಾರೆಂದು ತಿಳಿದು ಬಂದಿದೆ.

ರಮೇಶ್‌ ಜತೆ 'ಕೈ' ಮಾತುಕತೆ? :
ಕತ್ತಿ ಬೆಂಬಲಿಗರ ಅಸಮಾಧಾನದ ಪೂರ್ಣ ಪ್ರಯೋಜನ ಪಡೆಯಲು ಮುಂದಾಗಿರುವ ಕಾಂಗ್ರೆಸ್‌, ಟಿಕೆಟ್‌ ವಂಚಿತ ರಮೇಶ್‌ ಕತ್ತಿ ಜತೆಗೆ ಮಾತುಕತೆ ಆರಂಭಿಸಿದೆ ಎಂದು ತಿಳಿದುಬಂದಿದೆ. ಇದಕ್ಕೆ ಪುಷ್ಟಿ ಎನ್ನುವಂತೆ ಶುಕ್ರವಾರ ಬೆಳಗಾವಿಗೆ ಭೇಟಿ ನೀಡಿದ್ದ ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಎಚ್‌.ಕೆ.ಪಾಟೀಲ್‌ ಕೂಡ ''ರಮೇಶ್‌ ಕತ್ತಿಯೊಂದಿಗೆ ಸಂಪರ್ಕದಲ್ಲಿದ್ದೇವೆ'', ಎಂದು ಬಹಿರಂಗವಾಗಿ ಹೇಳಿದ್ದಾರೆ. ಬಿಡಿಸಿಸಿ ಬ್ಯಾಂಕ್‌ ರಾಜಕಾರಣದಲ್ಲಿ ಸದಾ ಕತ್ತಿ ಸಹೋದರರ ಹಿಂದೆ ನಿಲ್ಲುವ ಸಚಿವ ಸತೀಶ್‌ ಜಾರಕಿಹೊಳಿ ಕೂಡ, ''ರಮೇಶ್‌ ಕತ್ತಿ ಪಕ್ಷಕ್ಕೆ ಬಂದರೆ ಸ್ವಾಗತಿಸುತ್ತೇವೆ'', ಎಂದು ಹೇಳಿಕೆ ನೀಡಿದ್ದಾರೆ. ರಮೇಶ್‌ ಕತ್ತಿ ಕೂಡ ಇದೇ ಅವಕಾಶ ಬಳಸಿಕೊಂಡು ಪಕ್ಷದ ಹೈಕಮಾಂಡ್‌ ಮೇಲೆ ಒತ್ತಡ ತರುವ ಅಥವಾ ಬಂಡಾಯವೆದ್ದು ಶಕ್ತಿ ಪ್ರದರ್ಶನಕ್ಕೆ ಇಳಿಯುವ ಸಾಧ್ಯತೆ ಇದೆ.

ಏ.4ರ ವರೆಗೆ ಅವಕಾಶವಿದೆ: ಉಮೇಶ್‌ ಕತ್ತಿ :
''ಚಿಕ್ಕೋಡಿ ಲೋಕಸಭೆ ಕ್ಷೇತ್ರದ ಬಿಜೆಪಿ ಟಿಕೆಟ್‌ ವಿಚಾರದಲ್ಲಿ ಏ.4ರ ವರೆಗೆ ಅವಕಾಶವಿದೆ. ಈ ಕುರಿತು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ ಅವರ ಜತೆ ಚರ್ಚಿಸಿದ್ದೇನೆ. ಏಪ್ರಿಲ್‌ 3ರ ಒಳಗೆ ಚಿಕ್ಕೋಡಿ ಕ್ಷೇತ್ರದ ಲೋಕಸಭೆ ಅಭ್ಯರ್ಥಿಯಾಗಿ ರಮೇಶ್‌ ಕತ್ತಿ ಅವರ ಹೆಸರು ಘೋಷಣೆ ಮಾಡಲಾಗುವುದು ಎಂದು ಭರವಸೆ ನೀಡಿದ್ದಾರೆ. ಹೀಗಾಗಿ ಕಾರ್ಯಕರ್ತರು ಅಸಮಾಧಾನಗೊಳ್ಳಬೇಕಿಲ್ಲ. ಶಾಂತವಾಗಿರಬೇಕು'' ಎಂದು ಶಾಸಕ ಉಮೇಶ್‌ ಕತ್ತಿ ಹೇಳಿದ್ದಾರೆ. ಚಿಕ್ಕೋಡಿ ಕ್ಷೇತ್ರದಿಂದ ಅಣ್ಣಾಸಾಹೇಬ ಜೊಲ್ಲೆ ಅವರಿಗೆ ಬಿಜೆಪಿ ಟಿಕೆಟ್‌ ಘೋಷಣೆಯಾದ ಹಿನ್ನೆಲೆಯಲ್ಲಿ ಬೆಲ್ಲದ ಬಾಗೇವಾಡಿಯ ತಮ್ಮ ನಿವಾಸದಲ್ಲಿ ಸೇರಿದ್ದ ತಮ್ಮ ಬೆಂಬಲಿಗರನ್ನು ಉದ್ದೇಶಿಸಿ ಅವರು ಮಾತನಾಡಿದರು. ''ರಮೇಶ ಕತ್ತಿಗೆ ಟಿಕೆಟ್‌ ನೀಡುವ ಬಗ್ಗೆ ಪಕ್ಷ ದ ವರಿಷ್ಠರಿಗೆ ಮನವರಿಕೆ ಮಾಡಲಾಗಿದೆ. ಅಲ್ಲದೆ, ಪಕ್ಷ ದ ನಿರ್ಧಾರಗಳಿಗೆ ನಾವು ಬದ್ಧರಾಗಿದ್ದೇವೆ'' ಎಂದು ಅವರು ಹೇಳಿದರು.

ಮಾಜಿ ಸಂಸದ ರಮೇಶ್‌ ಕತ್ತಿ ಕಾಂಗ್ರೆಸ್‌ಗೆ ಬಂದರೆ ಸ್ವಾಗತಿಸುತ್ತೇವೆ. ಪಕ್ಷ ಕ್ಕೆ ಬರುವ ಕುರಿತು ಕತ್ತಿ ಬ್ರದರ್ಸ್‌ ನಮ್ಮೊಂದಿಗೆ ಮಾತುಕತೆ ನಡೆಸಿಲ್ಲ. ರಮೇಶ್‌ ಕತ್ತಿ ಕಾಂಗ್ರೆಸ್‌ ಪಕ್ಷ ಸೇರ್ಪಡೆ ಕುರಿತು ಹೈಕಮಾಂಡ್‌ ಏನಾದರೂ ಮಾಹಿತಿ ಕೇಳಿದರೆ ನಮ್ಮ ನಿರ್ಧಾರ ತಿಳಿಸಲಾಗುವುದು.
- ಸತೀಶ್‌ ಜಾರಕಿಹೊಳಿ, ಸಚಿವ

ರಮೇಶ್‌ ಕತ್ತಿ ಅವರಿಗೆ ಬಿಜೆಪಿ ಟಿಕೆಟ್‌ ತಪ್ಪಿದ್ದು ಬೇಸರ ತಂದಿದೆ. ಲೋಕಸಭಾ ಕ್ಷೇತ್ರದ ಎಂಟು ವಿಧಾನಸಭಾ ಕ್ಷೇತ್ರಗಳ ಕಾರ್ಯಕರ್ತರೊಂದಿಗೆ ಸಂಪರ್ಕದಲ್ಲಿದ್ದೇವೆ. ಹಿರಿಯರು ಮುಂದಿನ ತೀರ್ಮಾನ ಕೈಗೊಳ್ಳಲಿದ್ದಾರೆ.
- ಪವನ್‌ ಕತ್ತಿ, ಜಿಪಂ ಸದಸ್ಯ ಹಾಗೂ ರಮೇಶ್‌ ಕತ್ತಿ ಪುತ್ರ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ