ಆ್ಯಪ್ನಗರ

ಚಿಕೂನ್‌ ಗುನ್ಯಾ; ಚಿಕಿತ್ಸೆಗೆ ರೋಗಿಗಳ ಪರದಾಟ

ಬಸವರಾಜ ಟಿ. ಆಯಟ್ಟಿ ಯರಗಟ್ಟಿ ಸಮೀಪದ ಮುಗಳಿಹಾಳ ಗ್ರಾಮದಲ್ಲಿ ಹತ್ತು ಹದಿನೈದು ...

Vijaya Karnataka 4 Aug 2019, 5:00 am
ಬಸವರಾಜ ಟಿ. ಆಯಟ್ಟಿ ಯರಗಟ್ಟಿ
Vijaya Karnataka Web BLG-0308-2-52-3YGT1

ಸಮೀಪದ ಮುಗಳಿಹಾಳ ಗ್ರಾಮದಲ್ಲಿ ಹತ್ತು ಹದಿನೈದು ದಿನಗಳಿಂದ ಚಿಕೂನ್‌ ಗುನ್ಯಾ ಕಾಣಿಸಿಕೊಂಡಿದ್ದು, ಗ್ರಾಮಸ್ಥರು ಆಂತಕಗೊಂಡಿದ್ದಾರೆ.

ಗ್ರಾಮದಲ್ಲಿ ಸಾವಿರಕ್ಕೂ ಹೆಚ್ಚು ಮನೆಗಳಿದ್ದು, ಈ ಪೈಕಿ 20ಕ್ಕೂ ಹೆಚ್ಚು ಮನೆಗಳಲ್ಲಿ ಚಿಕೂನ್‌ ಗುನ್ಯಾ ಜ್ವರ ಬಾಧಿತರನ್ನು ಕಾಣಬಹುದಾಗಿದೆ. ಅಲ್ಲದೆ ಇಲ್ಲಿನ ಕಸ್ತೂರಿಬಾ ಬಾಲಕಿಯರ ವಸತಿ ನಿಲಯದ ವಿದ್ಯಾರ್ಥಿನಿಯರಲ್ಲೂ ಶಂಕಿತ ಚಿಕೂನ್‌ ಗುನ್ಯಾ ಕಂಡು ಬಂದಿದೆ.

ಮುಂಗಾರು ಆರಂಭಗೊಂಡಿದ್ದು, ಕೃಷಿ ಚಟುವಟಿಕೆಗಳಲ್ಲಿ ತೊಡಗಬೇಕಿದ್ದ ರೈತರು ಕೈ ಕಾಲುಗಳಲ್ಲಿ ಶಕ್ತಿ ಕಳೆದುಕೊಂಡು ಮನೆಯಲ್ಲಿಯೇ ಉಪಚಾರ ಪಡೆಯುತ್ತಿದ್ದಾರೆ. ದಿನದಿಂದ ದಿನಕ್ಕೆ ಜ್ವರ ಪೀಡಿತರ ಸಂಖ್ಯೆ ಹೆಚ್ಚುತ್ತಿದ್ದು, ಸೂಕ್ತ ಚಿಕಿತ್ಸೆಗೆ ಜನರು ಪರದಾಡುವಂತಾಗಿದೆ. ಗ್ರಾಮದಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರವೂ ಇಲ್ಲ. ಹೀಗಾಗಿ ಜ್ವರ ಪೀಡಿತರು ಕಡಬಿ ಇಲ್ಲವೇ ಯರಗಟ್ಟಿಗೆ ತೆರಳಿ ಚಿಕಿತ್ಸೆ ಪಡೆÜಯಬೇಕಾದ ಸ್ಥಿತಿ ಇದೆ ಎನ್ನುತ್ತಾರೆ ಗ್ರಾಮಸ್ಥರು.

ಬಸ್‌ ಸೌಲಭ್ಯ ಇಲ್ಲ: ಮುಗಳಿಹಾಳ ಗ್ರಾಮ ಕಡಬಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಒಳಪಡುತ್ತದೆ. ಆದರೆ, ಅಲ್ಲಿಗೆ ಹೋಗಲು ಬಸ್‌ ಸೌಕರ್ಯವಿಲ್ಲದ್ದರಿಂದ ಅನಿವಾರ್ಯವಾಗಿ ಯರಗಟ್ಟಿ ಅಥವಾ ಗೋಕಾಕಕ್ಕೆ ಹೋಗಬೇಕಾದ ಪರಿಸ್ಥಿತಿ ಇದೆ. ಇನ್ನೂ ಕಾಯಿಲೆ ಹೆಚ್ಚಾಗುವ ಸಾಧ್ಯತೆ ಇದ್ದು, ಕೂಡಲೇ ಆರೋಗ್ಯ ಇಲಾಖೆ ಅಧಿಕಾರಿಗಳು ಎಚ್ಚೆತ್ತು ನಿಯಂತ್ರಣಕ್ಕೆ ಮುಂದಾಗಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.

''ಬರೋಬ್ಬರಿ 15 ದಿನಾ ಆತ್ರಿ ಜ್ವರಾ ಬಂದು. ಒಂದು ದಿನಾ ಮೈ ತಣ್ಣಗಾದ್ರ, ಮರುದಿನ ಮತ್ತ ಬೆಚ್ಚಗ ಅಕ್ಕತ್ರಿ. ಕೈಕಾಲು ಹಿಡಿಕೊಂಡಾವ್ರಿ, ಮೇಲೆದ್ದು ನಡ್ಯಾಕ ಬರಲಾರದಂಗ ಆಗೇತಿ. ಇಷ್ಟ ತ್ರಾಸ ಇಟ್ಟಗೊಂಡ ಕಡಬಿ ದವಾಖಾನಿಗೆ ಹೋಗಿ ಹೆಂಗ ಬರಬೇಕು ನೀವ ಹೇಳ್ರೀ'', ಎಂದು ಗ್ರಾಮದ ಉದ್ದಪ್ಪ ದಳವಾಯಿ ನೋವು ತೋಡಿಕೊಂಡರು.

ಮುಗಳಿಹಾಳ ಗ್ರಾಮದಲ್ಲಿ ಚಿಕೂನ್‌ ಗುನ್ಯಾ ಮತ್ತು ಮಲೇರಿಯಾ ರೋಗದ ಹಾವಳಿ ವಿಪರೀತವಾಗಿದೆ. ಇತ್ತೀಚೆಗೆ ಸುರಿದ ಮಳೆಯಿಂದಾಗಿ ಗ್ರಾಮದ ಓಣಿಗಳಲ್ಲಿ ನಿಂತ ನೀರಿನಿಂದ ಸೊಳ್ಳೆಗಳ ಕಾಟ ವಿಪರೀತವಾಗಿದೆ. ಗ್ರಾಮಸ್ಥರು ಹಾಗೂ ಕಸ್ತೂರಬಾ ಬಾಲಿಕೆಯರ ವಿದ್ಯಾರ್ಥಿನಿಲಯದ ವಿದ್ಯಾರ್ಥಿನಿಯರು ರೋಗದಿಂದ ಬಳಲುತ್ತಿದ್ದಾರೆ. ಆಸ್ಪತ್ರೆ ಇಲ್ಲದಿರುವುದರಿಂದ ಸಾಕಷ್ಟು ತೊಂದರೆಯಾಗುತ್ತಿದೆ. ಕಾರಣ ಸರಕಾರ ಶೀಘ್ರ ಪ್ರಾಥಮಿಕ ಆರೋಗ್ಯ ಕೇಂದ್ರ ತೆರೆಯಬೇಕು. ಈ ಕುರಿತು ಗ್ರಾಪಂಗೂ ಮನವಿ ಸಲ್ಲಿಸಲಾಗಿದೆ.
-ಲಕ್ಕಪ್ಪ ಬಿಜ್ಜನ್ನವರ, ಅಧ್ಯಕ್ಷರು, ರೈತ ಕೃಷಿ ಕಾರ್ಮಿಕ ಸಂಘಟನೆ

ಮುಗಳಿಹಾಳ ಗ್ರಾಮದಲ್ಲಿ ಸಾಂಕ್ರಾಮಿಕ ಜ್ವರ ಪ್ರಕರಣ ಕಂಡು ಬಂದಿದ್ದು, ಶೀಘ್ರ ಗ್ರಾಮಕ್ಕೆ ಭೇಟಿ ನೀಡಿ ಅಗತ್ಯ ವೈದ್ಯಕೀಯ ಸೇವೆ ನೀಡುತ್ತೇವೆ.
- ಡಾ. ಆನಂದ ಪಾಟೀಲ, ವೈದ್ಯರು ಪ್ರಾಥಮಿಕ ಆರೋಗ್ಯ ಕೇಂದ್ರ, ಕಡಬಿ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ