ಆ್ಯಪ್ನಗರ

ಹೆಸ್ಕಾಂಗೆ ತಲೆಬಿಸಿ ತಂದಿಟ್ಟ ಕೋಲ್ಡ್‌ ಸ್ಟೋರೇಜ್‌ಗಳು

- 34 ಲಕ್ಷ ರೂ...

Vijaya Karnataka 6 Sep 2018, 5:00 am
ಬೆಳಗಾವಿ: ಈಚೆಗೆ ವಿವಾದಕ್ಕೆ ಗುರಿಯಾಗಿದ್ದ ಇಲ್ಲಿನ ಆಟೋನಗರದ ಮಾಂಸ ಶೇಖರಣೆಯ ನಾಲ್ಕು ಘಟಕಗಳು ಬರೋಬ್ಬರಿ 34 ಲಕ್ಷ ರೂ.ಗೂ ಅಧಿಕ ವಿದ್ಯುತ್‌ ಶುಲ್ಕ ಬಾಕಿ ಉಳಿಸಿಕೊಂಡಿದ್ದು, ಇತರ ಇಲಾಖೆಗಳ ಕಾನೂನು ತಿಕ್ಕಾಟದಿಂದಾಗಿ ಹೆಸ್ಕಾಂ ಸಂದಿಗ್ಧ ಸ್ಥಿತಿಗೆ ಸಿಲುಕಿದೆ.
Vijaya Karnataka Web cold storages have brought head ache to hescom
ಹೆಸ್ಕಾಂಗೆ ತಲೆಬಿಸಿ ತಂದಿಟ್ಟ ಕೋಲ್ಡ್‌ ಸ್ಟೋರೇಜ್‌ಗಳು


ಆಟೋನಗರದಲ್ಲಿರುವ ಎಂಟು ಮಾಂಸ ಶೇಖರಣಾ ಘಟಕಗಳ ಪೈಕಿ ನಾಲ್ಕು ಘಟಕಗಳು ವಿದ್ಯುತ್‌ ಶುಲ್ಕ ಭರಿಸದೆ ಬಾಕಿ ಉಳಿಸಿಕೊಂಡಿವೆ. ಈ ಘಟಕಗಳಲ್ಲಿ ಗೋ ವಧೆ ನಡೆಯುತ್ತದೆ ಎಂದು ಈಚೆಗೆ ಆರೋಪ ಕೇಳಿ ಬಂದಿದ್ದರಿಂದ ಪೊಲೀಸ್‌ ಪ್ರಕರಣ ದಾಖಲಾಗಿತ್ತು. ಘಟಕಗಳಲ್ಲಿನ ಮಾಂಸಗಳನ್ನು ಪೊಲೀಸರು ಜಪ್ತು ಮಾಡಿದ್ದು, ಪ್ರಕರಣದ ತನಿಖೆ ನಡೆಯುತ್ತಲೇ ಇದೆ. ಈ ಪ್ರಕರಣಗಳಿಂದಾಗಿ ಹೆಸ್ಕಾಂಗೆ ಬಾಕಿ ಶುಲ್ಕ ವಸೂಲಿ ಮಾಡುವುದು ಸವಾಲಾಗಿದೆ.

ವಿದ್ಯುತ್‌ ಶುಲ್ಕ ಭರಿಸಿಲ್ಲ ಎಂದು ಹೆಸ್ಕಾಂ ಅಧಿಕಾರಿಗಳು ಮೇ 17ಕ್ಕೆ ನಾಲ್ಕು ಘಟಕಗಳ ವಿದ್ಯುತ್‌ ಪೂರೈಕೆ ಸ್ಥಗಿತಗೊಳಿಸಿದ್ದರು. ಆದರೆ, ಮಾಂಸ ಶೇಖರಣಾ ಘಟಕಗಳ ಪ್ರಕರಣ ನ್ಯಾಯಾಲಯದಲ್ಲಿ ನಡೆಯುತ್ತಿರುವುದರಿಂದ ಅದರಲ್ಲಿನ ಜಪ್ತು ಮಾಡಿದ ಮಾಂಸಗಳು ಕೆಡದಂತೆ ಇಡಲು ವಿದ್ಯುತ್‌ ಸಂಪರ್ಕ ಅಗತ್ಯ. ಹಾಗಂತ ಆ ಘಟಕಗಳಿಗೆ ವಿದ್ಯುತ್‌ ಪೂರೈಸಬೇಕು ಅಥವಾ ಸಂಪರ್ಕ ಕಡಿತ ಮಾಡುವಂತೆ ನ್ಯಾಯಾಲಯ ಯಾವುದೇ ಸೂಚನೆ ನೀಡಿಲ್ಲ ಎನ್ನುತ್ತಾರೆ ಅಧಿಕಾರಿಗಳು.

''ಆದರೆ, ತನಿಖಾಧಿಕಾರಿಗಳು ವಿದ್ಯುತ್‌ ಸಂಪರ್ಕ ಕಡಿತ ಮಾಡದಂತೆ ಒತ್ತಡ ಹೇರುತ್ತಿದ್ದಾರೆ. ತನಿಖೆಗಾಗಿ ಅಷ್ಟೊಂದು ದೊಡ್ಡ ಮೊತ್ತವನ್ನು ಭರಿಸುವುದು ಕಷ್ಟ. ಸಾರ್ವಜನಿಕರ ಹಣವನ್ನು ಈ ರೀತಿ ಖರ್ಚು ಮಾಡಲು ಸಹ ಆಗುವುದಿಲ್ಲ. ಇದರಿಂದ ಗೊಂದಲ ಸೃಷ್ಟಿಯಾಗಿದ್ದು, ಘಟಕಗಳ ಶುಲ್ಕ ಬಾಕಿ ಇದ್ದರೂ ಸದ್ಯ ವಿದ್ಯುತ್‌ ಪೂರೈಸಲಾಗುತ್ತಿದೆ. ಅಲ್ಲದೆ, ಈ ಕುರಿತು ಸಲಹೆ ಕೇಳಿ ನಿಗಮದ ವ್ಯವಸ್ಥಾಪಕ ನಿರ್ದೇಶಕರಿಗೆ ವರದಿ ಕಳುಹಿಸಲಾಗಿದೆ. ಇದುವರೆಗೆ ಉತ್ತರ ಬಂದಿಲ್ಲ'', ಎಂದು ಹೆಸ್ಕಾಂ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್‌ (ಎಇಇ) ಅಶ್ವಿನ್‌ ಶಿಂಧೆ ತಿಳಿಸಿದರು.

ಯಾವುದು ಆ ಘಟಕಗಳು?: ಹೆಸ್ಕಾಂ ಮಾಹಿತಿ ಪ್ರಕಾರ, ಶಿವಾನಿ ಪ್ರೆಸಿಶನ್‌ ಕಂಪೋನೆಂಟ್ಸ್‌, ಸೆವೆನ್‌ ಸ್ಟಾರ್‌ ಗ್ರೂಫ್ಸ್‌, ನೈಲ್‌ ಅಗ್ರೋ ಫುಡ್ಸ್‌ ಪ್ರೈ.ಲಿ, ಎಸ್‌.ಬಿ. ಟ್ರೇಡರ್ಸ್‌ ಚೌಧರಿ ಎನ್ನುವ ಮಾಂಸ ಸಂಗ್ರಹಣಾ ಘಟಕಗಳು ವಿದ್ಯುತ್‌ ಶುಲ್ಕ ಬಾಕಿ ಉಳಿಸಿಕೊಂಡಿವೆ. ಕೇಂದ್ರ ಸಚಿವೆ ಮೇನಕಾ ಗಾಂಧಿ ಅವರು ಈ ಘಟಕಗಳ ಮೇಲೆ ದಾಳಿ ಮಾಡಿದ ನಂತರದಿಂದ ವಿದ್ಯುತ್‌ ಬಿಲ್‌ಗಳು ಬಾಕಿ ಉಳಿಯುತ್ತಿವೆ ಎಂದು ಹೆಸ್ಕಾಂ ಅಧಿಕಾರಿಗಳು ತಿಳಿಸಿದ್ದಾರೆ.

ಬೆಳಗಾವಿ ನಗರದ ನಾಲ್ಕು ಮಾಂಸ ಸಂಸ್ಕರಣಾ ಘಟಕಗಳು 34 ಲಕ್ಷ ರೂ. ವಿದ್ಯುತ್‌ ಶುಲ್ಕ ಬಾಕಿ ಉಳಿಸಿಕೊಂಡಿರುವುದು ನಿಜ. ಅವುಗಳ ಮೇಲೆ ತನಿಖೆ ನಡೆಯುತ್ತಿರುವುದರಿಂದ ವಿದ್ಯುತ್‌ ಪೂರೈಸಬೇಕೋ ಬೇಡವೊ ಎನ್ನುವ ಗೊಂದಲ ಉಂಟಾಗಿದೆ. ಈ ಕುರಿತು ಕೇಂದ್ರ ಕಚೇರಿಗೆ ವರದಿ ಕೊಟ್ಟು ಸಲಹೆ ಕೇಳಿದ್ದೇವೆ.
- ಅಶ್ವಿನ್‌ ಶಿಂಧೆ, ಹೆಸ್ಕಾಂ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್‌ (ಎಇಇ).

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ