ಆ್ಯಪ್ನಗರ

ಅಕ್ಟೋಬರ್‌ ತಿಂಗಳೊಳಗೆ ಉಳಿದ ಕೆಲಸ ಪೂರ್ಣಗೊಳಿಸಿ

ವಿಕ ಸುದ್ದಿಲೋಕ ಎಂಕೆ...

Vijaya Karnataka 31 May 2018, 5:00 am
ಎಂ.ಕೆ. ಹುಬ್ಬಳ್ಳಿ: ಹಿಂದಿನ ಶಾಸಕರ ಅವಧಿಯಲ್ಲಿ ಮಂಜೂರು ಮಾಡಲಾದ ಕೆಲಸಗಳನ್ನು ಅಕ್ಟೋಬರ್‌ ತಿಂಗಳ ಒಳಗಾಗಿ ಪೂರ್ಣಗೊಳಿಸುವಂತೆ ಶಾಸಕ ಮಹಾಂತೇಶ ದೊಡಗೌಡರ ಅಧಿಕಾರಿಗಳಿಗೆ ಸೂಚಿಸಿದರು.
Vijaya Karnataka Web BEL-30MKH1(1)


ಅವರು ಸ್ಥಳೀಯ ಪಟ್ಟಣ ಪಂಚಾಯಿತಿಯಲ್ಲಿ ಮಂಗಳವಾರ ನಡೆದ ಸಾಮಾನ್ಯ ಸಭೆಯ ನೇತೃತ್ವ ವಹಿಸಿ ಮಾತನಾಡಿದರು.

ಪಟ್ಟಣಕ್ಕೆ ಅಗತ್ಯವಾಗಿ ಬೇಕಾಗುವ ಕೆಲಸಕ್ಕೆ ಮೊದಲು ಆದ್ಯತೆ ನೀಡಬೇಕು. ಪ್ರತಿಯೊಂದು ಕೆಲಸಗಳು ಕೇವಲ ಒಂದು ಪಕ್ಷಕ್ಕೆ, ಜಾತಿಗೆ, ವಾರ್ಡ್‌ಗಳಿಗೆ ಸೀಮಿತಗೊಳಿಸದೆ ಎಲ್ಲ ವಾಡ್‌ಗಳಿಗೂ ಸಮನಾಗಿ ಹಂಚಿಕೆ ಮಾಡಬೇಕು ಎಂದರು.

ಹಿಂದಿನ ಶಾಸಕರು ಮಾಡಿದ ಕ್ರಿಯಾ ಯೋಜನೆ ಹಾಗು ಹೊಸ ಕೆಲಸಗಳ ಕ್ರಿಯಾ ಯೋಜನೆಯನ್ನು ಸಂಪೂರ್ಣವಾಗಿ ಓದಿ ಎಲ್ಲ ವಾರ್ಡ್‌ ಸದಸ್ಯರು ಸರಿ ಇದೆ ಎಂದ ಮೇಲೆ ಅದಕ್ಕೆ ಸಹಿ ಹಾಕಿದರು.

ಈ ವೇಳೆ ಪಪಂ ಅಧ್ಯಕ್ಷ ಸಿದ್ದಪ್ಪ ಗೋರಕೊಳ್ಳಿ, ಮುಖ್ಯಾಧಿಕಾರಿ ಸಂತೋಷ ಕುರಬೆಟ್ಟ, ಅಭಿಯಂತರ ರವೀಂದ್ರ ಗಡಾದ, ಎ.ಎಸ್‌. ಶೆಟ್ಟರ, ಪಪಂ ಎಲ್ಲ ಸದಸ್ಯರು ಉಪಸ್ಥಿತರಿದರು.

ಸಾರ್ವಜನಿಕರಿಂದ ಅಹವಾಲು ಸ್ವೀಕಾರ: ಸಾಮಾನ್ಯ ಸಭೆಗೂ ಮುನ್ನ ಶಾಸಕ ದೊಡಗೌಡ್ರ ನಾಗರಿಕರಿಂದ ಅಹವಾಲು ಸ್ವೀಕರಿಸಿದರು.

ಪಟ್ಟಣದ ಗಾಂಧಿನಗರದಲ್ಲಿ ಅನೇಕ ದಿನಗಳಿಂದ ನೀರಿನ ಸಮಸ್ಯೆ ಹೆಚ್ಚಾಗಿದ್ದು ಟ್ಯಾಂಕರ್‌ ಮೂಲಕ ನೀರು ಪೂರೈಸಬೇಕು ಎಂದು ಅಲ್ಲಿನ ನಿವಾಸಿ ಸಿದ್ರಾಮ ಗೋಣ ಮನವಿ ಮಾಡಿದರು.

ಕನಿಷ್ಟ 2 ತಿಂಗಳಿಗೊಮ್ಮೆ ಪಪಂ ವತಿಯಿಂದ ಸಾರ್ವಜನಿಕ ಸಭೆ ನಡೆಸಬೇಕು ಎಂದು ನಾಗರಿಕರು ಒತ್ತಾಯಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಅಧಿಕಾರಿಗಳು ಮುನಸಿಪಾಲ್ಟಿ ಕಾಯಿದೆಯಲ್ಲಿ ಈ ಅಂಶವಿಲ್ಲ ಎಂದು ಸಮಜಾಯಿಷಿ ನೀಡಿದರು. ಕಾನೂನು ಹೇಳುವುದು ಸರಿ. ಆದರೆ ಸಾರ್ವಜನಿಕರ ಸಮಸ್ಯೆಗಳನ್ನು ಕೇಳಲು ಎರಡು ತಿಂಗಳಿಗೊಮ್ಮೆ ಮೀಟಿಂಗ್‌ ಮಾಡಿದರೆ ತಪ್ಪಿಲ್ಲ ಎಂದು ಮೀಟಿಂಗ್‌ನಲ್ಲಿ ತಾವೂ ಹಾಜರಿರುವುದಾಗಿ ತಿಳಿಸಿದರು.

ಧಾರವಾಡ ಹಾಗು ಬೈಲಹೊಂಗಲ ರಸ್ತೆ ಮೇಲೆ ಇರುವ ವೈನ್‌ ಶಾಪ್‌ ಹಾಗೂ ಅಂಡರ್‌ ಪಾಸ್‌ಗೆ ಹೊಂದಿಕೊಂಡು ಹಣ್ಣು ಮಾರುವವರಿಂದ ಸಾರ್ವಜನಿಕರಿಗೆ ತೊಂದರೆಯಾಗುತ್ತಿದೆ ಎಂದು ನಾಗರಿಕರು ದೂರು ಹೇಳುತ್ತಿದಂತೆ ಪಪಂ ಸದಸ್ಯೆ ಶೋಭಾ ಕಿಲ್ಲೇದಾರ ದನಿಗೂಡಿಸಿ ಹಲವು ಬಾರಿ ಈ ವಿಷಯದ ಬಗ್ಗೆ ಹೇಳಿದರೂ ಅಧಿಕಾರಿಗಳು ಕಿವಿಗೊಡುತ್ತಿಲ್ಲ ಎಂದು ದೂರಿದರು. ಸೂಕ್ತ ಕ್ರಮ ಕೈಗೊಳ್ಳುವಂತೆ ಶಾಸಕರು ಅಧಿಕಾರಿಗಳಿಗೆ ಸೂಚಿಸಿದರು.

ಸಂತೆ ಮರು ದಿನ ಪೇಟೆ ಓಣಿಯನ್ನು ಸ್ವಚ್ಛಗೊಳಿಸುವ ನಮಗೆ ತಿಂಗಳಿಗೆ ಕೇವಲ 12 ನೂರು ರೂ. ನೀಡಲಾಗುತ್ತಿದೆ. ಇದರಿಂದ ನಮ್ಮ ಜೀವನ ಕಷ್ಟವಾಗಿದ್ದು, ವೇತನ ಹೆಚ್ಚಿಸಿ ಎಂದು ಪೌರ ಕಾರ್ಮಿಕರು ವಿನಂತಿಸಿದರು.

ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ರಾತ್ರಿ ವೇಳೆ ವೈದ್ಯಾಧಿಕಾರಿ ಇಲ್ಲದಿರುವುದರಿಂದ ಪಟ್ಟಣದ ಸುತ್ತಮುತ್ತಲಿನ ಗ್ರಾಮ ಹಾಗೂ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಭವಿಸುವ ಅಪಘಾತಕ್ಕೀಡಾದ ಅನೇಕರು ತೊಂದರೆ ಅನುಭವಿಸುತ್ತಿದ್ದಾರೆ ಎಂದು ಬಾಬು ಯಲಿಗಾರ ದೂರಿದರೆ, ಪ್ರತಿ ವಿದ್ಯುತ್‌ ಪರಿವರ್ತಕಕ್ಕೆ ರೈತರಿಂದ 12 ರಿಂದ 15 ಸಾವಿರ ರೂಪಾಯಿ ಹೆಸ್ಕಾಂ ಅಧಿಕಾರಿಗಳು ಪಡೆದು ಪರಿವರ್ತಕ ನೀಡುತ್ತಿದ್ದಾರೆ ಎಂದು ಕಲ್ಲಪ್ಪ ಕೆಂಚರಾಹುತ ದೂರಿದರು.

ಸಾರ್ವಜನಿಕರಿಂದ ಎಲ್ಲ ಅಹವಾಲುಗಳನ್ನು ಸ್ವೀಕರಿಸಿದ ಶಾಸಕ ದೊಡಗೌಡ್ರ ಆದಷ್ಟು ಬೇಗ ಪರಿಹಾರ ಒದಗಿಸುವುದಾಗಿ ತಿಳಿಸಿದರು.

ಪಪಂನಲ್ಲಿ ಸ್ಥಳೀಯರಿಗಿಲ್ಲ ಮನ್ನಣೆ: ದೂರು: ಕಳೆದ 10 ವರ್ಷಗಳಿಂದ ತಹಸೀಲ್ದಾರ್‌ರ ಠರಾವಿನ ಆದೇಶದ ಮೂಲಕ ಪಪಂನಲ್ಲಿ ಡಾಟಾ ಎಂಟ್ರಿ ಆಪರೇಟರ್‌ಆಗಿ ಸೇವೆ ಮಾಡುತ್ತಿದ್ದೇನೆ. ಕಳೆದ 16 ತಿಂಗಳಿಂದ ವೇತನ ನೀಡಿಲ್ಲ. ಅಲ್ಲದೆ ಡಿ.17, 2017ರಿಂದ ಹಾಜರಾತಿ ಪುಸ್ತಕದಲ್ಲಿ ಹೆಸರನ್ನೂ ತೆಗೆದಿದ್ದಾರೆ ಎಂದು ಮಲ್ಲಿಕಾರ್ಜುನ ತಿಗಡಿ ತಮ್ಮ ಅಳಲು ತೋಡಿಕೊಂಡರು. ಇದೇ ಸಂದರ್ಭದಲ್ಲಿ ಪಟ್ಟಣದ ಕೆಲ ಯುವಕರು ಹೌಸಿಂಗ್‌ ಹಾಗೂ ಡಾಟಾ ಎಂಟ್ರಿ ಆಪರೇಟರ್‌ ಕೆಲಸಕ್ಕೆ ಸ್ಥಳೀಯರನ್ನು ಆಯ್ಕೆ ಮಾಡಿಲ್ಲ ಎಂದು ದೂರಿದರು. ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಯನ್ನು ಶಾಸಕರು ವಿಚಾರಿಸಿದಾಗ ಕೆಲಸಗಾರರನ್ನು ಜಿಲ್ಲಾಧಿಕಾರಿಗಳು ನೇಮಿಸಿದ್ದಾರೆ ಎಂದು ಉತ್ತರಿಸಿದರು.


ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ