ಬೆಳಗಾವಿ: ಬೆಳಗಾವಿ ಮತ್ತು ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆಯಲ್ಲಿ ಉನ್ನತೀಕರಿಸಿದ ಪ್ರೌಢ ಶಾಲೆಗಳು, ಆದರ್ಶ ವಿದ್ಯಾಲಯಗಳು ಮತ್ತು ಹೆಣ್ಣುಮಕ್ಕಳ ವಸತಿ ಶಾಲೆ ಕಟ್ಟಡ ಕಾಮಗಾರಿ ಆರಂಭವಾಗಿದ್ದು, ಬರುವ ಮಾರ್ಚ್ ಒಳಗಾಗಿ ಎಲ್ಲ ಕಾಮಗಾರಿ ಪೂರ್ಣಗೊಳಿಸಿ ಎಂದು ಜಿಪಂ ಸಿಇಒ ಆರ್. ರಾಮಚಂದ್ರನ್ ಹೇಳಿದರು. ಇಲ್ಲಿನ ಜಿಪಂ ಸಭಾಂಗಣದಲ್ಲಿ ರಾಷ್ಟ್ರೀಯ ಮಾಧ್ಯಮಿಕ ಶಿಕ್ಷಣ ಅಭಿಯಾನದಡಿಯಲ್ಲಿ ನಡೆಯುತ್ತಿರುವ ಕಾಮಗಾರಿಗಳ ಪ್ರಗತಿ ಪರಿಶೀಲನೆ ಸಭೆಯಲ್ಲಿ ಮಾತನಾಡಿದ ಅವರು, ಕಟ್ಟಡಗಳನ್ನು ಶಾಲೆಗೆ ಹಸ್ತಾಂತರಿಸುವ ಪೂರ್ವದಲ್ಲಿ ಇಲಾಖೆಯ ಅಧಿಕಾರಿಗಳು ಹಾಗೂ ಸಂಬಂಧಿಸಿದ ಅಭಿಯಂತರರು ಜಂಟಿಯಾಗಿ ಭೇಟಿ ನೀಡಿ ಗುಣಮಟ್ಟ ಪರಿಶೀಲಿಸಿ ವರದಿ ಸಲ್ಲಿಸಬೇಕು ಎಂದರು. ಡಿಡಿಪಿಐಗಳಾದ ಎ.ಬಿ. ಪುಂಡಲೀಕ, ರಾಜೀವ ನಾಯಕ, ಅಭಿಯಂತರರು ಹಾಗೂ ಶಿಕ್ಷಣ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು. ಶಿಕ್ಷಣಾಧಿಕಾರಿ ಎ.ಸಿ. ಮನ್ನಿಕೇರಿ ಸ್ವಾಗತಿಸಿದರು. ಸಹಾಯಕ ಸಮನ್ವಯಾಧಿಕಾರಿ ಎ.ಡಿ. ಮತ್ತಿಕಲ್ಲಣ್ಣವರ ವಂದಿಸಿದರು.
ಮಾರ್ಚ್ ಒಳಗೆ ಕಾಮಗಾರಿ ಪೂರ್ಣಗೊಳಿಸಿ
Vijaya Karnataka 5 Dec 2017, 5:00 am