ಆ್ಯಪ್ನಗರ

ನಿರಂತರ ಮಳೆ; 20ಕ್ಕೂ ಹೆಚ್ಚು ಗ್ರಾಮಗಳಲ್ಲಿ ವಿದ್ಯುತ್‌ ವ್ಯತ್ಯಯ

ಖಾನಾಪುರ: ತಾಲೂಕಿನಲ್ಲಿ ಕಳೆದ 10 ದಿನಗಳಿಂದ ಉತ್ತಮ ಮಳೆ ಸುರಿಯುತ್ತಿದ್ದು, ಭಾನುವಾರ ಸಹ ಪಟ್ಟಣದಲ್ಲಿ ಭಾರಿ ಮಳೆಯಾಗಿದೆ...

Vijaya Karnataka 8 Jul 2019, 5:00 am
ಖಾನಾಪುರ : ತಾಲೂಕಿನಲ್ಲಿ ಕಳೆದ 10 ದಿನಗಳಿಂದ ಉತ್ತಮ ಮಳೆ ಸುರಿಯುತ್ತಿದ್ದು, ಭಾನುವಾರ ಸಹ ಪಟ್ಟಣದಲ್ಲಿ ಭಾರಿ ಮಳೆಯಾಗಿದೆ. ಪಟ್ಟಣದ ಟಿಪ್ಪು ಸುಲ್ತಾನ್‌ ವೃತ್ತದ ಸುತ್ತಲಿನ ರಸ್ತೆಗಳಲ್ಲಿ ಎರಡು ಅಡಿಗಳಷ್ಟು ನೀರು ಸಂಗ್ರಹಗೊಂಡು ಸಾರ್ವಜನಿಕರು ಸಂಚಾರ ಸಮಸ್ಯೆ ಅನುಭವಿಸಿದರು.
Vijaya Karnataka Web BEL-7KHANAPUR3


ಜೂ.29ರಿಂದ ಭಾನುವಾರದವರೆಗೆ ತಾಲೂಕಿನ ಅರಣ್ಯ ಪ್ರದೇಶದಲ್ಲಿ 130 ಸೆಂ.ಮೀ ಗಳಷ್ಟು ಮಳೆ ಸುರಿದಿದ್ದು, ಮಳೆ ಮತ್ತು ಗಾಳಿಯಿಂದ ತಾಲೂಕಿನ ಜಾಂಬೋಟಿ, ಕಣಕುಂಬಿ, ಶಿರೋಲಿ, ಗುಂಜಿ, ಲೋಂಡಾ ಅರಣ್ಯದ ಸುತ್ತಲಿನ 20ಕ್ಕೂ ಹೆಚ್ಚು ಹಳ್ಳಿಗಳಲ್ಲಿ ಶನಿವಾರ ಸಂಜೆಯಿಂದಲೇ ವಿದ್ಯುತ್‌ ಸಂಪರ್ಕದಲ್ಲಿ ವ್ಯತ್ಯಯ ಉಂಟಾಗಿದೆ.

ತಾಲೂಕಿನ ಕೃಷ್ಣಾಪುರ, ದೇಗಾಂವ, ಕೊಂಗಳಾ, ಪಾಸ್ತೊಳಿ, ಗವ್ವಾಳಿ, ಆಮಗಾಂವ, ತಳೇವಾಡಿ, ಕಣಕುಂಬಿ, ಜಾಂಬೋಟಿ, ಚಾಪೋಲಿ ಮತ್ತಿತರ ಭಾಗದಲ್ಲಿ ದಿನವಿಡೀ ಮಳೆ ಸುರಿದಿದೆ. ಅರಣ್ಯ ಪ್ರದೇಶದಲ್ಲಿ ಸುರಿಯುತ್ತಿರುವ ಸತತ ಮಳೆಯಿಂದಾಗಿ ಮಲಪ್ರಭಾ, ಮಹದಾಯಿ, ಪಾಂಡರಿ ನದಿಗಳಲ್ಲಿ ರಭಸದಿಂದ ನೀರು ಹರಿಯುತ್ತಿದೆ. ಅಲಾತ್ರಿ, ಕಳಸಾ, ಬಂಡೂರಿ, ಮಂಗೇತ್ರಿ, ವಜ್ರಾ, ಪಣಸೂರಿ, ಕುಂಬಾರ, ತಟ್ಟಿ, ಕೋಟ್ನಿ ಹಳ್ಳಗಳೂ ಸಹ ಉಕ್ಕಿ ಹರಿಯುತ್ತಿವೆ.

ಲೋಂಡಾ, ಭೀಮಗಡ ಹಾಗೂ ಕಣಕುಂಬಿ ಅರಣ್ಯ ವಲಯದ ಹಲವು ಗ್ರಾಮಗಳಿಗೆ ಸಂಪರ್ಕ ಕಲ್ಪಿಸುವ ರಸ್ತೆ ಮತ್ತು ಸೇತುವೆಗಳಲ್ಲಿ ನೀರು ತುಂಬಿ ಸಂಚಾರಕ್ಕೆ ತೊಂದರೆಯಾಗಿದೆ. ತಾಲೂಕಿನ ಹಬ್ಬನಹಟ್ಟಿಯ ಆಂಜನೇಯ ದೇವಾಲಯ ಮತ್ತು ಇಟಗಿಯ ಮರುಳಶಂಕರ ದೇವಾಲಯಗಳು ಸಂಪೂರ್ಣವಾಗಿ ಮಲಪ್ರಭಾ ನದಿಯಲ್ಲಿ ಜಲಾವೃತಗೊಂಡಿವೆ.

ತಾಲೂಕಿನ ಪೂರ್ವ ಭಾಗದ ಹಲವು ಗ್ರಾಮಗಳಲ್ಲೂ ಭಾನುವಾರ ಉತ್ತಮ ಮಳೆಯಾಗಿದೆ. ತಾಲೂಕಿನ ಹಿಂಡಲಗಿ, ಮುಗಳಿಹಾಳ, ಮಂಗೇನಕೊಪ್ಪ, ಕಸಮಳಗಿ, ಬೇಕವಾಡ, ಸಾಗರೆ, ನಂದಗಡ, ಹಲಸಿ, ಬೀಡಿ, ಕಕ್ಕೇರಿ, ಗುಂಡೇನಟ್ಟಿ, ಗಂದಿಗವಾಡ, ಇಟಗಿ, ಪಾರಿಶ್ವಾಡ ಮತ್ತಿತರ ಭಾಗದಲ್ಲಿ ಭಾನುವಾರ ಮಳೆಯಾಗಿದೆ.

ಜಾಂಬೋಟಿಯಲ್ಲಿ 10 ಸೆಂಮೀ ಮಳೆ :
ಭಾನುವಾರ ಲಭ್ಯವಾದ ಮಾಹಿತಿಯಂತೆ ತಾಲೂಕಿನ ಅಸೋಗಾದಲ್ಲಿ 3.1 ಸೆಂ.ಮೀ, ಬೀಡಿಯಲ್ಲಿ 1.3 ಸೆಂ.ಮೀ, ಕಕ್ಕೇರಿಯಲ್ಲಿ 1.5 ಸೆಂ.ಮೀ, ಗುಂಜಿಯಲ್ಲಿ 7.8 ಸೆಂ.ಮೀ, ಲೋಂಡಾ ರೈಲು ನಿಲ್ದಾಣದಲ್ಲಿ 8.4 ಸೆಂ.ಮೀ, ಲೋಂಡಾ ಪಿಡಬ್ಲ್ಯೂಡಿಯಲ್ಲಿ 9.2 ಸೆಂ.ಮೀ, ನಾಗರಗಾಳಿಯಲ್ಲಿ 5.3 ಸೆಂ.ಮೀ, ಜಾಂಬೋಟಿಯಲ್ಲಿ 10.5 ಸೆಂ.ಮೀ, ಕಣಕುಂಬಿಯಲ್ಲಿ 13.4 ಸೆಂ.ಮೀ ಮತ್ತು ಖಾನಾಪುರ ಪಟ್ಟಣದಲ್ಲಿ 1.9 ಸೆಂ.ಮೀ ಮಳೆಯಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ