ಆ್ಯಪ್ನಗರ

ಹರಿಯುವ ನದಿಯಲ್ಲೇ ಅಪಾಯಕಾರಿ ನಡಿಗೆ

ದಿಲೀಪ ಮಜಲೀಕರ ಗೋಕಾಕ ಈ ತೂಗು ಸೇತುವೆ ಎಂತಹ ಮಳೆ, ಗಾಳಿ, ಪ್ರವಾಹ ಬಂದರೂ ...

Vijaya Karnataka 20 Sep 2019, 5:00 am
ದಿಲೀಪ ಮಜಲೀಕರ ಗೋಕಾಕ
Vijaya Karnataka Web 19GOK1B_53

ಈ ತೂಗು ಸೇತುವೆ ಎಂತಹ ಮಳೆ, ಗಾಳಿ, ಪ್ರವಾಹ ಬಂದರೂ ಜಪ್ಪಯ್ಯ ಎನ್ನದೆ ನೂರಾರು ವರ್ಷಗಳಿಂದ ತೂಗುತ್ತಿದೆ. ಆದರೆ, ಇತ್ತೀಚೆಗೆ ಅದರ ಮೇಲಿನ ಸಂಚಾರ ನಿಷೇಧಿಸಲಾಗಿದೆ. ಹೀಗಾಗಿ ಜನ ಹರಿಯುವ ನದಿಯಲ್ಲಿಜೀವ ಕೈಯಲ್ಲಿಹಿಡಿದುಕೊಂಡು ಓಡಾಡುತ್ತಿದ್ದಾರೆ.

ಇದು ಭಾರತದ ನಯಾಗರ ಎಂದೇ ಗುರುತಿಸಲ್ಪಡುವ ಗೋಕಾಕ ಜಲಪಾತದ ಮೇಲಿನ ತೂಗುಸೇತುವೆಯ ಸ್ಥಿತಿ. ಸುಪ್ರಸಿದ್ಧ ಗೋಕಾಕ ಫಾಲ್ಸ್‌ ವೀಕ್ಷಣೆಗೆ ಕರ್ನಾಟಕ ಸೇರಿದಂತೆ ಗೋವಾ, ಮಹಾರಾಷ್ಟ್ರ ರಾಜ್ಯದ ಪ್ರವಾಸಿಗರು ಆಗಮಿಸುತ್ತಾರೆ. ಆದರೆ, ಇಲ್ಲಿರುವ ಪ್ರಮುಖ ಆಕರ್ಷಣೆಯಾದ ತೂಗು ಸೇತುವೆ ಮೇಲೆ ಸಂಚಾರ ನಿಷೇಧಿಸಿರುವುದು ಪ್ರವಾಸಿಗರಿಗೆ ನಿರಾಸೆಯಾಗುತ್ತಿದೆ.

ಅಧಿಸೂಚಿತ ಪ್ರದೇಶದ ಒಳಗೆ ಈ ತೂಗು ಸೇತುವೆ ಬರುತ್ತದೆ. ಇದನ್ನು ನಿರ್ವಹಣೆ ಮಾಡಬೇಕಿದ್ದ ಗೋಕಾಕ ಮಿಲ್‌ ತೂಗು ಸೇತುವೆ ಮೇಲೆ ಸಂಚಾರವನ್ನು ಬಂದ್‌ ಮಾಡಿದೆ. ಆದರೆ, ಜನ ಮಾತ್ರ ಗೋಡೆ ಹಿಡಿದು, ಮುಳ್ಳಿನ ಕಂಟಿ ದಾಟಿ ಹೇಗಾದರೂ ಮಾಡಿ ನದಿ ದಾಟುವ ಸಾಹಸಕ್ಕೆ ಕೈ ಹಾಕುತ್ತಿದ್ದಾರೆ. ಆಯ ತಪ್ಪಿ ಬಿದ್ದರೆ ಅಪಾಯ ನಿಶ್ಚಿತ.

ಶಾಲೆ ಬಿಟ್ಟು ಮನೆಯಲ್ಲಿಕುಳಿತ ಮಕ್ಕಳು:
ತಿಂಗಳಿನಿಂದ ತೂಗು ಸೇತುವೆ ಮೇಲೆ ಸಂಚಾರಕ್ಕೆ ನಿರ್ಬಂಧ ಹೇರಿದ್ದರಿಂದ ಹತ್ತಿರದ ನವಿಲಮಾಳ ನಗರದಲ್ಲಿನ 80ಕ್ಕೂ ಹೆಚ್ಚು ವಿದ್ಯಾರ್ಥಿಗಳು ಶಾಲೆ ಬಿಟ್ಟು ಮನೆಯಲ್ಲಿಕುಳಿತಿದ್ದಾರೆ. ಗೋಕಾಕ ಫಾಲ್ಸ್‌ನ ಕೈಗಾರಿಕಾ ಪ್ರದೇಶದಲ್ಲಿರುವ ಶಾಲೆಗಳಿಗೆ ಹೋಗಲು ವಿದ್ಯಾರ್ಥಿಗಳಿಗೆ ಸಂಚಾರ ಸಮಸ್ಯೆ ಎದುರಾಗಿದೆ. ತೂಗು ಸೇತುವೆ ಮೇಲೆ ಸಂಚಾರವಿಲ್ಲದೆ ನದಿ ದಾಟಲು ಸಾಧ್ಯವಾಗದೇ ಮನೆಯಲ್ಲೇ ಉಳಿಯುವ ಪರಿಸ್ಥಿತಿ ನಿರ್ಮಾಣವಾಗಿದೆ. ಸಂಚಾರ ನಿಷೇಧವಿದ್ದರೂ ಫಾಲ್ಸ್‌ನಲ್ಲಿಸಣ್ಣ ಪುಟ್ಟ ಗೂಡಂಗಡಿ ಇಟ್ಟುಕೊಂಡಿರುವ ವ್ಯಾಪಾರಸ್ಥರು ಗೋಡೆ ಹತ್ತಿ ತೂಗುಸೇತುವೆ ಮೇಲೆ ಸಂಚರಿಸುತ್ತಿದ್ದಾರೆ.

ಅನುದಾನ ಬಂದ ತಕ್ಷಣ ದುರಸ್ತಿ:
ತೂಗುಸೇತುವೆ ನಿರ್ವಹಣೆ ಬಗ್ಗೆ ಬಗ್ಗೆ ಪ್ರವಾಸೋದ್ಯಮ ಇಲಾಖೆಯ ಅಧಿಕಾರಿಗಳನ್ನು ಕೇಳಿದರೆ, ''ಇದು ಅಧಿಸೂಚಿತ ಪ್ರದೇಶಕ್ಕೆ ಒಳಪಟ್ಟಿರುವ ಸೇತುವೆ ಆಗಿರುವುದರಿಂದ ಇದರ ನಿರ್ವಹಣೆ ಗೋಕಾಕ ಮಿಲ್‌ ಮತ್ತು ಕೊಣ್ಣೂರು ಪುರಸಭೆಗೆ ಬರುತ್ತದೆ. ಆದರೂ ನಾವು ಇದರ ನಿರ್ವಹಣೆಗೆ 25 ಲಕ್ಷ ರೂ. ಪ್ರಸ್ತಾವನೆಯನ್ನು ಸರಕಾರಕ್ಕೆ ಸಲ್ಲಿಸಿದ್ದು, ಇನ್ನೂ ಹಣ ಬಿಡುಗಡೆಯಾಗಿಲ್ಲ. ಹಣ ಬಂದ ತಕ್ಷಣ ಸೇತುವೆ ದುರಸ್ತಿ ಕಾರ್ಯ ಮಾಡಿ ಸ್ಥಳೀಯ ಸಂಘ ಸಂಸ್ಥೆಗೆ ನಿರ್ವಹಣೆಗೆ ಕೊಡುತ್ತೇವೆ'', ಎನ್ನುತ್ತಿದ್ದಾರೆ.


ಮಹಾರಾಷ್ಟ್ರದಿಂದ ಜಲಪಾತ ವೀಕ್ಷಣೆಗೆ ಬಂದಿದ್ದೇವೆ. ಆದರೆ, ಇಲ್ಲಿನ ಪ್ರಮುಖ ಆಕರ್ಷಣೆ ತೂಗು ಸೇತುವೆ ಮೇಲೆ ಸಂಚಾರವಿಲ್ಲದೆ ನಿರಾಸೆಯಾಗಿದೆ.
-ಕುಬೇರ ಸೌದಿ, ಮಹರಾಷ್ಟ್ರದ ಪ್ರವಾಸಿಗ.

ಸೇತುವೆ ಬಂದ್‌ ಮಾಡ್ಯಾರಿ. ನಾವ್‌ ಅಡ್ಯಾಡುದ ಜಡಾ ಹಿಡದೈತಿ. ಆ ಕಡಿ ನಮ್ಮ ಮಕ್ಕಳ ಸಾಲಿ ಬಿಟ್‌ ಕುಂತಾವ, ಏನ್‌ ಮಾಡೋದ್ರಿ.
-ಬಾಳೇಶ ಚೂನಪ್ಪಗೋಳ, ಸ್ಥಳೀಯ ವ್ಯಾಪಾರಸ್ಥ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ