ಆ್ಯಪ್ನಗರ

ದಾಸ್ತಿಕೊಪ್ಪ: ಮೇಲ್ಸೇತುವೆ ನಿರ್ಮಾಣದ ನಂತರ ಬಾರದ ಬಸ್‌ಗಳು

ಸಂಜೀವಕುಮಾರ ತಿಲಗರ, ಎಂಕೆ...

Vijaya Karnataka 17 Sep 2018, 7:06 pm
ಸಂಜೀವಕುಮಾರ ತಿಲಗರ, ಎಂ.ಕೆ.ಹುಬ್ಬಳ್ಳಿ
Vijaya Karnataka Web BEL-16MKH2(2)


ರಾಷ್ಟ್ರೀಯ ಹೆದ್ದಾರಿ 4ಕ್ಕೆ ಹೊಂದಿಕೊಂಡಿರುವ ಸಮೀಪದ ದಾಸ್ತಿಕೊಪ್ಪ ಗ್ರಾಮದ ಬಳಿ ಮೇಲ್ಸೇತುವೆ ನಿರ್ಮಿಸಿದ್ದು ಸುಗಮ ಸಂಚಾರಕ್ಕೆ ಅನುಕೂಲವೇನೊ ಆಗಿದೆ. ಆದರೆ ಸರಕಾರಿ ಬಸ್‌ಗಳು ಮೇಲ್ಸೇತುವೆಯಿಂದ ಗ್ರಾಮಕ್ಕೆ ಬರದೇ ನೇರವಾಗಿಯೇ ಹೋಗುತ್ತಿರುವುದರಿಂದ ಇಲ್ಲಿನ ಪ್ರಯಾಣಿಕರಿಗೆ ತುಂಬ ತೊಂದರೆಯಾಗಿದೆ.

ಹೀಗಾಗಿ ಶಾಲೆ, ಕಾಲೇಜು ವಿದ್ಯಾರ್ಥಿಗಳು, ಉದ್ಯೋಗಕ್ಕಾಗಿ ಬೇರೆ ಊರಿಗೆ ಹೋಗುವವರಿಗಂತೂ ಇದು ದಿನನಿತ್ಯದ ಗೋಳಾಗಿದೆ. ದಾಸ್ತಿಕೊಪ್ಪ ಗ್ರಾಮಕ್ಕೆ ಇಳಿದುಕೊಳ್ಳುವವರು ಇದ್ದರೆ ಮಾತ್ರ ಹೆದ್ದಾರಿಯಿಂದ ಸವೀರ್‍ಸ್‌ ರಸ್ತೆಗೆ ಬಸ್‌ಗಳು ಬರುತ್ತವೆ. ಇಲ್ಲದಿದ್ದರೆ ಓವರ್‌ ಬ್ರಿಜ್‌ ಮೇಲಿಂದಲೇ ಹೋಗುತ್ತಿವೆ. ಇದರಿಂದ ರೋಗಿಗಳು, ವೃದ್ಧರು, ಗರ್ಭಿಣಿಯರು ಪರದಾಡುವಂತಾಗಿದೆ.

ದುಡ್ಡು ಕೊಟ್ಟು ಪಾಸ್‌ ತೆಗೆದುಕೊಂಡು ಬೆಳಗಾವಿ ಹಾಗೂ ಧಾರವಾಡಕ್ಕೆ ಹೋಗುವವರು ಸುಮಾರು 5 ಕಿ.ಮೀ. ದೂರದ ಎಂ.ಕೆ.ಹುಬ್ಬಳ್ಳಿ ಹಾಗೂ ಇಟಗಿ ಕ್ರಾಸ್‌ವರೆಗೆ ಖಾಸಗಿ ವಾಹನಗಳಿಗೆ ನಿತ್ಯ 20 ರೂ. ಖರ್ಚು ಮಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಶಾಲೆ, ಕಾಲೇಜುಗಳಿಗೆ ಹಾಗೂ ಕೆಲಸಕ್ಕೆ ಸರಿಯಾದ ವೇಳೆಗೆ ಹೋಗಲು ಆಗುತ್ತಿಲ್ಲ ಎಂಬುದು ಇಲ್ಲಿನವರ ಅಳಲು. ಇನ್ನು ಮೇಲಾದರೂ ದಾಸ್ತಿಕೊಪ್ಪ ಗ್ರಾಮದಲ್ಲಿ ಬಸ್‌ಗಳು ಸವೀರ್‍ಸ್‌ ರಸ್ತೆಗೆ ಬರುವಂತೆ ನೋಡಿಕೊಳ್ಳಬೇಕೆಂದು ಬಸ್‌ ಚಾಲಕರಿಗೆ ಸೂಚಿಸಲು ಸಾರಿಗೆ ಸಂಸ್ಥೆ ಅಧಿಕಾರಿಗಳಲ್ಲಿ ಗ್ರಾಮಸ್ಥರು ಆಗ್ರಹಿಸಿದ್ದಾರೆ.

ಈ ಮೊದಲು ರಾಷ್ಟ್ರೀಯ ಹೆದ್ದಾರಿ ನಿರ್ಮಾಣದ ಸಂದರ್ಭದಲ್ಲಿ ದಾಸ್ತಿಕೊಪ್ಪ ಬಳಿ ಮೇಲ್ಸೇತುವೆ ನಿರ್ಮಾಣ ಮಾಡಿರಲಿಲ್ಲ. ರಸ್ತೆ ದಾಟಲು ಯಾವ ಸುರಕ್ಷತಾ ಕ್ರಮಗಳನ್ನೂ ಕೈಗೊಂಡಿರಲಿಲ್ಲ. ಆಗ ರಸ್ತೆ ಅಪಘಾತಗಳು ತುಂಬ ಸಂಭವಿಸುತ್ತಿದ್ದವು. ಹೀಗಾಗಿ ಅನೇಕರು ಇಲ್ಲಿ ಪ್ರಾಣ ಕಳೆದುಕೊಂಡಿದ್ದಾರೆ. ಈ ಕಾರಣದಿಂದಾಗಿ ದಾಸ್ತಿಕೊಪ್ಪ ಗ್ರಾಮಸ್ಥರು ಇಲ್ಲಿ ಸುರಕ್ಷೆ ಹಾಗೂ ಸುಗಮ ಸಂಚಾರಕ್ಕಾಗಿ ಮೇಲ್ಸೇತುವೆ ಬೇಕು ಎಂದು ಹೋರಾಟ ಮಾಡಿದ್ದರು. ಅದರ ಪ್ರತಿಫಲವಾಗಿ ಇಲ್ಲಿ ಓವರ್‌ ಬ್ರಿಜ್‌ ನಿರ್ಮಾಣವಾಗಿದೆ. ಆದರೆ ಬಸ್‌ಗಳು ಬಾರದೇ ಹೊಸ ಸಮಸ್ಯೆ ಶುರುವಾಗಿದೆ. ಇದಕ್ಕೆ ಶೀಘ್ರ ಪರಿಹಾರ ದೊರಕಿಸಬೇಕೆಂಬುದು ಇಲ್ಲಿನವರ ಒತ್ತಾಸೆ.

ಒಂದು ತಿಂಗಳ ಹಿಂದೆ ಧಾರವಾಡ ಸಾರಿಗೆ ಅಧಿಕಾರಿಗಳಿಗೆ ಗ್ರಾಪಂನಿಂದ ಮನವಿ ಸಲ್ಲಿಸಿದ್ದರೂ ಬಸ್‌ಗಳು ಮೇಲ್ಸೇತುವೆ ಮೇಲೆ ಸಂಚರಿಸುತ್ತಿವೆ. ಹೀಗೆಯೇ ಮುಂದುವರಿದರೆ ಬಸ್‌ ಬಂದ್‌ ಮಾಡಿ ಪ್ರತಿಭಟನೆ ಮಾಡಲಾಗುವುದು.
- ಮಲ್ಲವ್ವ ರಾವಳ, ಗ್ರಾಪಂ ಅಧ್ಯಕ್ಷೆ

ದಾಸ್ತಿಕೊಪ್ಪ ಧಾರವಾಡ ವಿಭಾಗಕ್ಕೆ ಒಳಪಡುತ್ತದೆ. ಆದರೂ ಅಲ್ಲಿನ ಸಾರಿಗೆ ಅಧಿಕಾರಿಗಳ ಜತೆ ಮಾತನಾಡಿ ಈ ಗ್ರಾಮಕ್ಕೆ ನಿಲುಗಡೆ ಇರುವ ಬಸ್‌ಗಳು ಮೇಲ್ಸೇತುವೆಯಿಂದ ಗ್ರಾಮಕ್ಕೆ ಬರುವ ವ್ಯವಸ್ಥೆ ಮಾಡಿಸುತ್ತೇನೆ.
- ಎಂ.ಆರ್‌. ಮುಂಜಿ, ಬೆಳಗಾವಿ ವಿಭಾಗೀಯ ನಿಯಂತ್ರಣಾಧಿಕಾರಿ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ