ಆ್ಯಪ್ನಗರ

ಜೋಳದ ದರ ದುಪ್ಪಟ್ಟು; ಬಡವರಿಗೆ ತುಟ್ಟಿಯಾದ ರೊಟ್ಟಿ

ಸರಳಾ ಸಾತ್ಪುತೆ ಬೆಳಗಾವಿ ಜಿಲ್ಲೆಯ ಜನರ ಪ್ರಮುಖ ಆಹಾರ ಧಾನ್ಯವಾದ ಜೋಳದ ದರ ಕಳೆದ ...

Vijaya Karnataka 20 Nov 2019, 5:00 am
ಸರಳಾ ಸಾತ್ಪುತೆ ಬೆಳಗಾವಿ
Vijaya Karnataka Web double the rate of corn
ಜೋಳದ ದರ ದುಪ್ಪಟ್ಟು; ಬಡವರಿಗೆ ತುಟ್ಟಿಯಾದ ರೊಟ್ಟಿ

ಜಿಲ್ಲೆಯ ಜನರ ಪ್ರಮುಖ ಆಹಾರ ಧಾನ್ಯವಾದ ಜೋಳದ ದರ ಕಳೆದ ಹದಿನೈದು ದಿನಗಳಲ್ಲಿದುಪ್ಪಟ್ಟಾಗಿರುವುದರಿಂದ ಜನಸಾಮಾನ್ಯರ ಆಹಾರ ಪದ್ಧತಿಯೇ ಬದಲಾಗಿದೆ.

ವರ್ಷದ ಬೆಳೆಯಾದ ಜೋಳದ ಬಿತ್ತನೆ ಸೆಪ್ಟೆಂಬರ್‌ ಅಂತ್ಯದಿಂದ ಅಕ್ಟೋಬರ್‌ ಅಂತ್ಯದ ವರೆಗೆ ಆಗಬೇಕಿತ್ತು. ಆದರೆ ಜಿಲ್ಲೆಯಾದ್ಯಂತ ಸುರಿದ ಭಾರಿ ಮಳೆಯಿಂದಾಗಿ ಈ ಬಾರಿ ಜೋಳದ ಬಿತ್ತನೆಯೇ ಆಗಿಲ್ಲ. ಹೀಗಾಗಿ ಜೋಳದ ದಾಸ್ತಾನೇ ಇಲ್ಲವಾಗಿದೆ ಎನ್ನುತ್ತಿದ್ದಾರೆ ರೈತರು. ಹೀಗಾಗಿ ಕಳೆದ 3-4 ವರ್ಷಗಳಿಂದ ಹೆಚ್ಚು ಕಡಿಮೆ ಸ್ಥಿರವಾಗಿದ್ದ ಜೋಳದ ದರ ಈ ಬಾರಿ ಇದ್ದಕ್ಕಿದ್ದಂತೆ ದುಪ್ಪಟ್ಟಾಗಿರುವುದು ಸಾಮಾನ್ಯರನ್ನು ಕಂಗಾಲಾಗಿಸಿದೆ.

ಜೋಳದ ದರ ಹೆಚ್ಚಾಗಿರುವುದರಿಂದ ಪರ್ಯಾಯ ಮಾರ್ಗ ಕಂಡುಕೊಂಡಿರುವ ಜನತೆ, ಜೋಳಕ್ಕೆ ಕಡಿಮೆ ದರದಲ್ಲಿಸಿಗುವ ಅನ್ನಭಾಗ್ಯ ಅಕ್ಕಿಯನ್ನು ಹೆಚ್ಚಿನ ಪ್ರಮಾಣದಲ್ಲಿಬೆರೆಸಿ ಬೀಸಿಕೊಂಡು ರೊಟ್ಟಿ ತಯಾರಿಸುತ್ತಿದ್ದಾರೆ. ಜತೆಗೆ, ಸದ್ಯ ಜೋಳಕ್ಕಿಂತ ಕಡಿಮೆ ಬೆಲೆಯಿರುವ ಗೋಧಿಯ ಚಪಾತಿಗಳನ್ನೇ ನಿತ್ಯದ ಆಹಾರಕ್ಕೆ ಹೆಚ್ಚು ಬಳಸುತ್ತಿದ್ದಾರೆ.

ಜೋಳದ ಕೊರತೆ:
ಸ್ಥಳೀಯರ ಬಹುಮುಖ್ಯ ಆಹಾರ ಧಾನ್ಯವಾದ ಜೋಳಕ್ಕೆ ಸ್ಥಳೀಯ ಸಂತೆಗಳೇ ಪ್ರಮುಖ ಮಾರುಕಟ್ಟೆ. ಈ ಬಾರಿ ಬಿಟ್ಟು ಬಿಡದೆ ಸುರಿದ ಮಳೆಯಿಂದಾಗಿ ರೈತರಿಗೆ ಜೋಳ ಬಿತ್ತನೆ ಮಾಡಲು ಆಗಲೇ ಇಲ್ಲ. ಹೀಗಾಗಿ ರೈತರ ಮನೆಗಳಲ್ಲಿಜೋಳದ ದಾಸ್ತಾನೇ ಇಲ್ಲವಾಗಿದೆ. ಸಂತೆಯೆಲ್ಲಹುಡುಕಿದರೂ ಎಲ್ಲೋ ಕೆಲವರು ಮಾತ್ರ ಜೋಳದ ವ್ಯಾಪಾರ ಮಾಡುತ್ತಿರುವುದು ಕಂಡು ಬರುತ್ತಿದೆ. ಸಂತೆ ಹೊರತು ಪಡಿಸಿ ಬೆಳಗಾವಿ ನಗರ ಪ್ರದೇಶಕ್ಕೆ ಮನೆ ಮಾರಿಗೆ ಬಂದು ವ್ಯಾಪಾರ ಮಾಡುವ ಸುತ್ತಮುತ್ತಲಿನ ಕೆಲ ರೈತರು ಸಹ ವ್ಯಾಪಾರಕ್ಕೆ ಬರುವುದನ್ನು ನಿಲ್ಲಿಸಿದ್ದಾರೆ.

ದರ ಇಳಿಯುವ ನಿರೀಕ್ಷೆ
ತಡವಾದರೂ ನೇಸರಗಿ ಸೇರಿದಂತೆ ಜಿಲ್ಲೆಯಾದ್ಯಂತ ಕೆಲವು ಕಡೆ ಸದ್ಯ ಜೋಳದ ಬಿತ್ತನೆ ನಡೆಯುತ್ತಿದೆ. ಫೆಬ್ರವರಿ ತಿಂಗಳಲ್ಲಿರೈತರಿಗೆ ಇದರ ಫಸಲು ತಲುಪುತ್ತದೆ. ಅಲ್ಲಿಯವರೆಗೆ ಸಂತೆ, ಮಾರುಕಟ್ಟೆಯಲ್ಲಿಜೋಳದ ದಾಸ್ತಾನು ಕೊರತೆಯಿದೆ. ಸದ್ಯ ಕಾಲ ತಪ್ಪಿಸಿ ಬಿತ್ತನೆ ಮಾಡುತ್ತಿರುವುದರಿಂದ ಚೆನ್ನಾಗಿ ಫಸಲು ಬರುತ್ತದೆ ಎನ್ನುವ ನಂಬಿಕೆ ರೈತರಿಗೂ ಇಲ್ಲ. ಮುಂದೆ ಜೋಳದ ಫಸಲು ಚೆನ್ನಾಗಿ ಬಂದರೆ ದರ ಕಡಿಮೆಯಾಗಬಹುದು ಎನ್ನುತ್ತಾರೆ ಚಿಲ್ಲರೆ ವ್ಯಾಪಾರಸ್ಥರು.

ಜೋಳದ ಧಾನ್ಯಕ್ಕೆ ಬಹುಬೇಗ ನುಸಿ ಸೇರುವುದರಿಂದ ಅದನ್ನು ಸಂಗ್ರಹಿಸಿಟ್ಟುಕೊಳ್ಳುವುದು ಕಷ್ಟ. ಕಳೆದ ಮೂರು ವರ್ಷದಿಂದ ಸ್ಥಿರವಾಗಿದ್ದ ಜೋಳದ ಬೆಲೆ ಇಷ್ಟೊಂದು ಹೆಚ್ಚಾಗುವ ನಿರೀಕ್ಷೆ ಇರಲಿಲ್ಲ. ಹೀಗಾಗಿ ಅಂಗಡಿಯಲ್ಲಿಜೋಳ ಸಂಗ್ರಹಿಸಿಟ್ಟುಕೊಂಡಿಲ್ಲ. ಜೋಳದ ಬೆಲೆ ಹೆಚ್ಚಾದಾಗಿನಿಂದ ಅಂಗಡಿಯಲ್ಲಿಜೋಳದ ವ್ಯಾಪಾರವನ್ನೇ ನಿಲ್ಲಿಸಿದ್ದೇನೆ.
- ಸುರೇಶ ಪರಮಾಜ, ಕಾಳಿನ ವ್ಯಾಪಾರಿ, ಖಾಸಬಾಗ

ಜ್ವಾಳದ ದರ ಹೆಚ್ಚಾದಾಗಿಂದ ಒಂದ್‌ ಕಿಲೋ ಜ್ವಾಳಕ್ಕ, ಎರಡ ಕಿಲೋ ರೇಷನ್‌ ಅಕ್ಕಿ ಬೆರೆಸಿ ಬೀಸ್ಗೊಂಡು ಬರಾತೇವ್ರೀ. ಮನ್ಯಾಗಿನ ಶುಗರ್‌ ಪೇಶಂಟ್‌ಗಳ್ಗೆ ಇದರಿಂದ ಭಾಳ ಗೋಳಾಗೇತಿ. ಡಾಕ್ಟರ್‌ಗಳು ಜೋಳದ ರೊಟ್ಟಿ ತಿನ್ನು ಅಂತಾರ. ಆದರ ಜೋಳದ ದರ ಹೆಚ್ಚಾಗಿ ಅಕ್ಕಿ ಸೇರಿಸೋದು ಅನಿವಾರ್ಯ ಆಗೇತಿ.
-ಪ್ರತಿಭಾ ಕಾಂಬಳೆ, ವಡಗಾವಿ

ವಿವಿಧ ಬಗೆಯ ಜೋಳದ ದರ(ಕೆಜಿಯಲ್ಲಿ)
ಹೈಬ್ರೀಡ್‌ ಬಾರ್ಸಿ ಜೋಳ
ಹಿಂದಿನ ದರ:- 32-35ರೂ; ಈಗಿನ ದರ 50-60ರೂ.

ಲೋಕಲ್‌ ಬಾರ್ಸಿ
ಹಿಂದಿನ ದರ:- 35-40ರೂ.; ಈಗಿನ ದರ:-60-70ರೂ

ವಿಜಾಪುರ ಬಾರ್ಸಿ(ಬಿಳಿಜೋಳ)
ಹಿಂದಿನ ದರ:-50-55 ರೂ.; ಈಗಿನ ದರ:- 80-90ರೂ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ