ಆ್ಯಪ್ನಗರ

ಬೆಳೆಗಾರರಿಗೆ ಆಘಾತ ತಂದ ಮಣೂಕ ದರ ಕುಸಿತ

ಮಹಾಂತೇಶ ಕೆಂಚಣ್ಣವರ ಅಡಹಳ್ಳಿ ಸಕ್ಕರೆ ನಾಡು ಖ್ಯಾತಿಯ ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನಲ್ಲಿ ಸುಮಾರು 2 ಸಾವಿರ ಹೆಕ್ಟೇರ್‌ ಪ್ರದೇಶದಲ್ಲಿ ದ್ರಾಕ್ಷಿ ...

Vijaya Karnataka 16 Mar 2019, 5:00 am
ಮಹಾಂತೇಶ ಕೆಂಚಣ್ಣವರ ಅಡಹಳ್ಳಿ
Vijaya Karnataka Web BLG-1503-2-52-IMG-20150304-WA0023

ಸಕ್ಕರೆ ನಾಡು ಖ್ಯಾತಿಯ ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನಲ್ಲಿ ಸುಮಾರು 2 ಸಾವಿರ ಹೆಕ್ಟೇರ್‌ ಪ್ರದೇಶದಲ್ಲಿ ದ್ರಾಕ್ಷಿ ಬೆಳೆಯಿದ್ದು ಈಗ ಮಾರುಕಟ್ಟೆಯಲ್ಲಿ ಒಣದ್ರಾಕ್ಷಿ (ಮಣೂಕ) ಬೆಲೆ ಕುಸಿತವಾಗಿರುವುದು ರೈತರಿಗೆ ಆಘಾತ ನೀಡಿದೆ.

ಅಥಣಿ ತಾಲೂಕಿನ ಪೂರ್ವ ಹಾಗೂ ಉತ್ತರ ಭಾಗದಲ್ಲಿ ದ್ರಾಕ್ಷಿ ಬೆಳೆ ಹೆಚ್ಚಿದೆ. ಪೂರ್ವಭಾಗದ ಹಳ್ಳಿಗಳಾದ ಅಡಹಳ್ಳಿ, ಕೋಹಳ್ಳಿ, ಯಲಿಹಡಲಗಿ, ಕೊಕಟನೂರ, ಐಗಳಿ, ಕಕಮರಿ, ಸೇರಿದಂತೆ ಇನ್ನಿತರ ಹಳ್ಳಿಗಳಲ್ಲಿ ದ್ರಾಕ್ಷಿ ಬೆಳೆಯೇ ಹೆಚ್ಚು. ಇಲ್ಲಿ ಉತ್ಪಾದನೆಯಾಗುವ ದ್ರಾಕ್ಷಿಯಲ್ಲಿ ಶೇ.70ರಷ್ಟು ದ್ರಾಕ್ಷಿಯನ್ನು ಒಣ ದ್ರಾಕ್ಷಿಯನ್ನಾಗಿ ಮಾಡಿ ಮಾರಾಟ ಮಾಡಲಾಗುತ್ತದೆ.ಆದರೆ, ರಾಜ್ಯದಲ್ಲಿ ಒಣ ದ್ರಾಕ್ಷಿಗೆ ಸೂಕ್ತ ಮಾರುಕಟ್ಟೆ ವ್ಯವಸ್ಥೆ ಇಲ್ಲದ ಕಾರಣ ನೆರೆಯ ವåಹಾರಾಷ್ಟ್ರದ ಮಾರುಕಟ್ಟೆಯಲ್ಲಿ ಮಾರಾಟ ಮಾಡುವ ಅನಿವಾರ್ಯತೆ ಜಿಲ್ಲೆಯ ದ್ರಾಕ್ಷಿ ಬೆಳೆಗಾರರದ್ದು.

ಒಣ ದ್ರಾಕ್ಷಿ ಬೆಲೆ ಎರಡು ತಿಂಗಳ ಹಿಂದೆ ಒಂದು ಕೆಜಿಗೆ 230 ರಿಂದ 300ರ ವರೆಗೆ ಇತ್ತು. ಆದರೆ, ಈಗ ಒಂದು ಕೆಜಿಗೆ 100 ರಿಂದ 160 ರ ವರೆಗೆ ಇಳಿಕೆಯಾಗಿದೆ. ಲಕ್ಷಾಂತರ ರೂ. ಖರ್ಚು ಮಾಡಿ ಬೆಳೆ ತೆಗೆದ ರೈತರಿಗೆ ಬೆಲೆ ಕುಸಿತದಿಂದ ದಿಕ್ಕು ತೋಚದಂತಾಗಿದೆ.

ದ್ರಾಕ್ಷಿಯೇ ಜೀವನಾಧಾರ: ಹಲವು ವರ್ಷಗಳಿಂದ ಅಥಣಿ ತಾಲೂಕಿನ ನೂರಾರು ರೈತರು ದ್ರಾಕ್ಷಿ ಬೆಳೆಯನ್ನು ಮುಖ್ಯ ಬೆಳೆಯನ್ನಾಗಿ ಬೆಳೆಯುತ್ತಿದ್ದಾರೆ. ತಾಲೂಕಿನ ಸುಮಾರು 2000 ಹೆಕ್ಟರ್‌ಗಿಂತಲೂ ಹೆಚ್ಚು ಪ್ರದೇಶದಲ್ಲಿ ದ್ರಾಕ್ಷಿ ಬೆಳೆಯಲಾಗುತ್ತಿದೆ. ಆದರೆ, ಒಣದ್ರಾಕ್ಷಿ ತಯಾರಿಸುವ ಹೊತ್ತಿಗೆ ಮಾರುಕಟ್ಟೆಯಲ್ಲಿ ದರ ಇಳಿಕೆಯಾಗುವುದು ರೈತರ ಲಾಭದ ಪ್ರಮಾಣವನ್ನು ಕಡಿಮೆ ಮಾಡುತ್ತಿದೆ.

ಮಾರುಕಟ್ಟೆ ಅವ್ಯವಸ್ಥೆ :
ಈ ಭಾಗದಲ್ಲಿ ತಯಾರಾದ ಸಾವಿರಾರು ಟನ್‌ ಗಳಷ್ಟು ಒಣದ್ರಾಕ್ಷಿಗೆ ಕರ್ನಾಟಕದಲ್ಲಿ ಮಾರುಕಟ್ಟೆ ವ್ಯವಸ್ಥೆಯಿಲ್ಲ. ಹೀಗಾಗಿ ರೈತರು ಪಕ್ಕದ ಮಹಾರಾಷ್ಟ್ರದ ಮಾರುಕಟ್ಟೆಗೆ ಒಣದ್ರಾಕ್ಷಿ ಪೂರೈಸುತ್ತಾರೆ. ಅಲ್ಲಿನ ಸಾಂಗ್ಲಿ, ತಾಸಗಾಂವ ಮಾರುಕಟ್ಟೆಯನ್ನು ಇಲ್ಲಿನ ರೈತರು ಅವಲಂಬಿಸಿದ್ದಾರೆ. ಅಲ್ಲಿನ ವ್ಯಾಪಾರಿಗಳು ಒಣದ್ರಾಕ್ಷಿ ಹಾಳಾಗದಂತೆ ಸಂಗ್ರಹಿಸಿಡುವ ಶೀತಲೀಕರಣ ಘಟಕ ನಿರ್ಮಿಸಿಕೊಂಡಿದ್ದಾರೆ. ಹೀಗಾಗಿ ಜಿಲ್ಲೆಯ ರೈತರು ಬೆಳೆದ ದ್ರಾಕ್ಷಿಯ ಲಾಭ ಮಹಾರಾಷ್ಟ್ರದ ವರ್ತಕರಿಗೆ ಹೆಚ್ಚಿನ ಪ್ರಮಾಣದಲ್ಲಿ ಸಿಗುವಂತಾಗಿದೆ.

ಸರಕಾರ ಒಣದ್ರಾಕ್ಷಿಗೆ ಸೂಕ್ತ ಮಾರುಕಟ್ಟೆ ವ್ಯವಸ್ಥೆ ಕಲ್ಪಿಸಬೇಕು. ಬೆಂಬಲ ಬೆಲೆ ನಿಗದಿ ಪಡಿಸಿ ದ್ರಾಕ್ಷಿ ಬೆಳೆಗಾರರನ್ನು ರಕ್ಷಿಸಬೇಕು.
- ಅರುಣ ಮಾಳಿ, ದ್ರಾಕ್ಷಿ ಬೆಳೆಗಾರ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ