ಆ್ಯಪ್ನಗರ

ನಿರ್ವಹಣೆ ಅಭಾವದಿಂದ ನೀರಾವರಿ ಕಾಲುವೆ ಒತ್ತುವರಿ

ಬೀಡಿ: ಗ್ರಾಮದ ತಟ್ಟಿ ಹಳ್ಳದಿಂದ ಹಾಳ ಜುಂಜವಾಡ ...

Vijaya Karnataka 11 Mar 2019, 5:00 am
ಬೀಡಿ : ಗ್ರಾಮದ ತಟ್ಟಿ ಹಳ್ಳದಿಂದ ಹಾಳ ಜುಂಜವಾಡ ಮಾರ್ಗವಾಗಿ ಅರಗಾಂವಿ ಕೆರೆಗೆ ನೀರು ಹರಿಸಬೇಕಿದ್ದ ನೀರಾವರಿ ಇಲಾಖೆಯ ಕಾಲುವೆ ಒತ್ತುವರಿಯಾಗಿದ್ದು, ರೈತರಿಗೆ ಉಪಯೋಗಕ್ಕೆ ಬಾರದಂತಾಗಿದೆ.
Vijaya Karnataka Web BEL-9BEEDI2


ರೈತರ ಜಮೀನಿಗೆ ನೀರಾವರಿ ಸೌಕರ್ಯ ಒದಗಿಸಬೇಕಾದ ಈ ಯೋಜನೆ ಬಹುತೇಕ ನೇಪಥ್ಯಕ್ಕೆ ಸರಿದಿದೆ. ತಾಲೂಕಿನ ಪ್ರಥಮ ಶಾಸಕ ಬಸಪ್ಪಣ್ಣ ಅರಗಾಂವಿಯವರು ಆರು ದಶಕಗಳ ಹಿಂದೆ ಗ್ರಾಮದ ಹೊರವಲಯದಲ್ಲಿ ಹರಿಯುವ ತಟ್ಟಿ ಹಳ್ಳದಿಂದ ಕೆರೆಗೆ ನೀರು ಹರಿಸುವ ಉದ್ದೇಶದಿಂದ ನಿರ್ಮಿಸಿದ ಈ ಕಾಲುವೆ ಪ್ರಾರಂಭದ ಹಂತದಲ್ಲಿ ಸರಿಯಾಗಿ ಕಾರ್ಯ ನಿರ್ವಹಿಸುತ್ತಿತ್ತು. ಆದರೆ, ನೀರಾವರಿ ಇಲಾಖೆ ದಶಕಗಳಿಂದ ಕಾಲುವೆಯ ನಿರ್ವಹಣೆ ಮಾಡದ್ದರಿಂದ ಕಾಲುವೆಯ ಬಹುತೇಕ ಭಾಗ ಒತ್ತುವರಿಯಾಗಿದೆ. ನಾಲ್ಕು ಕಿಮೀ ದೂರದ ಈ ಕಾಲುವೆ ಹೂಳು ತುಂಬಿ ಮಾಯವಾಗಿದೆ.

ಕಾಲುವೆಯಲ್ಲಿ ನೀರು ಹರಿಯದ ಕಾರಣ ಅರಗಾಂವಿ ಕೆರೆ ತುಂಬುತ್ತಿಲ್ಲ. ರೈತರ ಜಮೀನುಗಳಿಗೆ ಸರಿಯಾಗಿ ನೀರು ಸಿಗದೆ ಬೀಡಿ, ಜುಂಜವಾಡ, ಸಾಗರೆ, ನಂಜಿನಕೊಡಲ್‌, ಬೇಕವಾಡ ಗ್ರಾಮಗಳ ರೈತರಿಗೆ ತೊಂದರೆಯಾಗುತ್ತಿದೆ. ಕಾಲುವೆಯನ್ನು ಸರಿಯಾಗಿ ನಿರ್ವಹಿಸಿದಲ್ಲಿ ಕೆರೆ ಪಾತ್ರದ ನೂರಾರು ಹೆಕ್ಟೇರ್‌ ಪ್ರದೇಶಕ್ಕೆ ನೀರಾವರಿ ಸೌಲಭ್ಯ ದೊರೆಯಲಿದೆ.

ಬೀಡಿ-ಜುಂಜವಾಡ ರಸ್ತೆಯ ಒಂದು ಕಡೆ ಕಾಲುವೆ ಇತ್ತು ಎಂಬುದನ್ನು ವಿವರಿಸುವ ನೀರಾವರಿ ಇಲಾಖೆ ಅಳವಡಿಸಿದ ಮಾಹಿತಿ ಫಲಕವಿದೆ. ಪ್ರಸ್ತುತ ಕಾಲುವೆಯಲ್ಲಿ ಕಸ ಕಡ್ಡಿ ತುಂಬಿದ್ದು, ಬೀಡಿ ಗ್ರಾಮದ ಬಳಿ ಕಾಲುವೆಯನ್ನು ಸಂಪೂರ್ಣ ಒತ್ತುವರಿ ಮಾಡಲಾಗಿದೆ. ಇನ್ನುಳಿದ ಕಡೆಗಳಲ್ಲೂ ಕಾಲುವೆ ಒತ್ತುವರಿಯಾಗಿದೆ.

ಸಂಬಂಧಿಸಿದ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳು ಕೂಡಲೇ ಕಾಲುವೆಯನ್ನು ಸಮರ್ಪಕವಾಗಿ ನಿರ್ವಹಣೆ ಮಾಡಿ ಹೊಲಗಳು ಮತ್ತು ಅರಗಾಂವಿ ಕೆರೆಗೆ ನೀರು ಹರಿಸಬೇಕು ಎಂದು ಕೆರೆ ಪಾತ್ರದ ಗ್ರಾಮಗಳ ರೈತರು ಆಗ್ರಹಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ