ಆ್ಯಪ್ನಗರ

ಧರ್ಮ ಒಡೆಯಲು ಯತ್ನಿಸಿದವರಿಗೆ ತಪ್ಪಿನ ಅರಿವು

ಬೆಳಗಾವಿ: ವೀರಶೈವ ಮತ್ತು ಲಿಂಗಾಯತ ಬೇರೆಯಲ್ಲ, ಎರಡೂ..

Vijaya Karnataka 26 Nov 2018, 5:00 am
ಬೆಳಗಾವಿ: ವೀರಶೈವ ಮತ್ತು ಲಿಂಗಾಯತ ಬೇರೆಯಲ್ಲ, ಎರಡೂ ಒಂದೇ. ಈ ವಿಷಯದಲ್ಲಿ ಬಡಿದಾಡುವುದು ಸರಿಯಲ್ಲ. ಒಳಪಂಗಡದ ಎಲ್ಲರೂ ಕೂಡಿಯೇ ಹೋಗಬೇಕೆಂದು ಅಖಿಲ ಭಾರತ ವೀರಶೈವ ಮಹಾಸಭಾದ ಅಧ್ಯಕ್ಷ ಡಾ.ಶಾಮನೂರು ಶಿವಶಂಕರಪ್ಪ ಹೇಳಿದರು.
Vijaya Karnataka Web BLG-2511-2-52-25RAJU-1


ಇಲ್ಲಿನ ಜೆಎನ್‌ಎಂಸಿ ಆವರಣದ ಕೆಎಲ್‌ಇ ಶತಮಾನೋತ್ಸವ ಭವನದಲ್ಲಿ ಭಾನುವಾರ ಏರ್ಪಡಿಸಿದ್ದ ಪ್ರತಿಭಾ ಪುರಸ್ಕಾರ ಸಮಾರಂಭದಲ್ಲಿ ಅವರು ಮಾತನಾಡಿದರು.

ಪ್ರತ್ಯೇಕ ಲಿಂಗಾಯತ ಧರ್ಮದ ಬೇಡಿಕೆ ಮುಗಿದ ಅಧ್ಯಾಯ. ಕೆಲವರು ಧರ್ಮ ಒಡೆಯಬೇಕೆಂದರು. ಆದರೆ, ಜನ ಅದಕ್ಕೆ ಅವಕಾಶ ನೀಡಲಿಲ್ಲ. ಒಡೆಯಲು ಯತ್ನಿಸಿದವರಿಗೆ ನಂತರ ತಪ್ಪಿನ ಅರಿವಾಗಿ ಈಗ ಕ್ಷಮೆ ಕೇಳಿದ್ದಾರೆ. ಇನ್ನೂ ಕೆಲವರು ನ್ಯಾಯಾಲಯದ ಕಟ್ಟೆ ಹತ್ತುವುದಾಗಿ ಹೇಳುತ್ತಿದ್ದಾರೆ. ಇದಕ್ಕೆ ನಮ್ಮ ಅಭ್ಯಂತರವೇನೂ ಇಲ್ಲವೆಂದು ಸ್ಪಷ್ಟಪಡಿಸಿದರು.

ಮಹಾಸಭಾದ ಉಪಾಧ್ಯಕ್ಷರೂ ಆಗಿರುವ ಹಿರಿಯ ರಾಜಕಾರಣಿ ಎನ್‌. ತಿಪ್ಪಣ್ಣ ಮಾತನಾಡಿ, ಮಕ್ಕಳು ವೀರಶೈವ ಲಿಂಗಾಯತ ಧರ್ಮದ ಸಂಸ್ಕಾರ ಪಡೆಯಬೇಕು. ಪರಿಶ್ರಮದ ಮೂಲಕ ಉನ್ನತ ಹುದ್ದೆಗೆ ಏರಿ ಸಮಾಜದ ಋುಣ ತೀರಿಸಬೇಕು ಎಂದು ಕರೆ ನೀಡಿದರು.

ಅನಕ್ಷ ರತೆ ನಿವಾರಣೆ : ಕೆಎಲ್‌ಇ ಕಾರ್ಯಾಧ್ಯಕ್ಷ ಮತ್ತು ರಾಜ್ಯಸಭಾ ಸದಸ್ಯ ಡಾ.ಪ್ರಭಾಕರ ಕೋರೆ ಮಾತನಾಡಿ, ಜಗತ್ತಿಗೆ ಶಿಕ್ಷಣ ನೀಡುವಂಥ ಬೃಹತ್‌ ಶಿಕ್ಷಣ ಸಂಸ್ಥೆಗಳನ್ನು ಹಾಗೂ ಮಠಮಾನ್ಯಗಳನ್ನು ವೀರಶೈವ ಲಿಂಗಾಯತ ಸಮಾಜ ಹೊಂದಿದ್ದರೂ, ಇದೇ ಸಮಾಜದಲ್ಲಿ ಶೇ.51ರಷ್ಟು ಅನಕ್ಷರಸ್ಥರು ಇದ್ದಾರೆ. ಅದರಲ್ಲೂ ಮಹಿಳೆಯರು ಮತ್ತು ಹೈದ್ರಾಬಾದ್‌ ಕರ್ನಾಟಕ ಭಾಗದವರು ಇದ್ದಾರೆ. ರೈತರ ಆತ್ಮಹತ್ಯೆಯೂ ನಮ್ಮಲ್ಲೇ ಹೆಚ್ಚಿದೆ. ಇದನ್ನು ನಿವಾರಿಸಬೇಕಿದೆ. ಈ ನಿಟ್ಟಿನಲ್ಲಿ ಮಹಾಸಭಾ ನಡೆಸುವ ಎಲ್ಲ ಕೆಲಸಗಳಿಗೆ ನಮ್ಮ ಬೆಂಬಲವಿದೆ. ಬೆಳಗಾವಿಯಲ್ಲೂ ಸಮಾಜದ ವಿದ್ಯಾರ್ಥಿಗಳಿಗಾಗಿ ವಸತಿ ನಿಲಯ ಕಟ್ಟಿಸಲಾಗುವುದು. ಇದಕ್ಕಾಗಿ ಜಾಗ ಗುರುತಿಸಲಾಗಿದೆ ಎಂದರು.

ಮಹಾಸಭಾದ ಜಿಲ್ಲಾ ಘಟಕದ ಅಧ್ಯಕ್ಷ ವೈ.ಎಸ್‌. ಪಾಟೀಲ ಪ್ರಾಸ್ತಾವಿಕವಾಗಿ ಮಾತನಾಡಿ, ಪುರಸ್ಕಾರ ಪಡೆದ ವಿದ್ಯಾರ್ಥಿಗಳು ಸಮಾಜ ಬೆಳಗುವ ದೀಪಗಳಾಗಬೇಕು. ಮೀಸಲಾತಿಗೆ ವ್ಯವಸ್ಥಿತ ಹೋರಾಟ ನಡೆಸಬೇಕಿದೆ ಎಂದರು.

ಶೈಕ್ಷಣಿಕ ಸಾಧನೆ ತೋರಿದ ವಿದ್ಯಾರ್ಥಿಗಳನ್ನು ಈ ಸಂದರ್ಭದಲ್ಲಿ ಸತ್ಕರಿಸಲಾಯಿತು. ಸಂಸದ ಸುರೇಶ ಅಂಗಡಿ, ವಿಧಾನ ಪರಿಷತ್‌ ಸದಸ್ಯ ಮಹಾಂತೇಶ ಕವಟಗಿಮಠ, ಕಲ್ಯಾಣರಾವ್‌ ಮುಚಳಂಬಿ, ಡಾ. ಸಿದ್ಧನಗೌಡ ಪಾಟೀಲ, ಬಿ.ವಿ. ಕಟ್ಟಿ, ಶಿವಕುಮಾರ ಸಂಬರಗಿಮಠ, ಡಾ. ಎಚ್‌.ಬಿ. ರಾಜಶೇಖರ, ಚನ್ನಬಸಪ್ಪ ವಾಲಿ, ಎಫ್‌.ವಿ. ಮಾನ್ವಿ, ಅಣಬೇರು ರಾಜಣ್ಣ, ರೇಣುಕಪ್ರಸನ್ನ, ರಮೇಶ ಕಳಸಣ್ಣವರ್‌ ಮತ್ತಿತರರು ಇದ್ದರು. ಸೋಮಲಿಂಗ ಮಾವಿನಕಟ್ಟಿ ಸ್ವಾಗತಿಸಿದರು. ಡಾ.ಗುರುದೇವಿ ಹುಲೆಪ್ಪನವರಮಠ ಮತ್ತು ಡಾ.ಮಹೇಶ ಗುರನಗೌಡರ್‌ ನಿರೂಪಿಸಿದರು. ರತ್ನಪ್ರಭಾ ಬೆಲ್ಲದ ವಂದಿಸಿದರು.

ವಸತಿ ನಿಲಯ ನಿರ್ಮಾಣ:
ವೀರಶೈವ ಲಿಂಗಾಯತ ಸಮಾಜದ ಪ್ರತಿಭಾನ್ವಿತ ಮಕ್ಕಳನ್ನು ಉತ್ತೇಜಿಸಿ ಮುಖ್ಯವಾಹಿನಿಗೆ ತರಲು 8-9 ವರ್ಷಗಳಿಂದ ರಾಜ್ಯಾದ್ಯಂತ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಏರ್ಪಡಿಸಲಾಗುತ್ತಿದೆ. 1 ಸಾವಿರ ಹೆಣ್ಣು ಮಕ್ಕಳು, 1 ಸಾವಿರ ಗಂಡು ಮಕ್ಕಳಿಗಾಗಿ ಬೆಂಗಳೂರಿನಲ್ಲಿ ವಸತಿ ನಿಲಯ ಕಟ್ಟಿಸಲಾಗುತ್ತಿದೆ. ಸಮಾಜದ ದಾನಿಗಳು ಇದಕ್ಕೆ ಕೈಜೋಡಿಸಬೇಕು ಎಂದು ವೀರಶೈವ ಮಹಾಸಭಾದ ಅಧ್ಯಕ್ಷ ಡಾ.ಶಾಮನೂರು ಶಿವಶಂಕರಪ್ಪ ವಿನಂತಿಸಿದರು.

ಡಾ. ಶಾಮನೂರು ಶಿವಶಂಕರಪ್ಪ ಮತ್ತು ಎನ್‌. ತಿಪ್ಪಣ್ಣ ಅವರು ಸಕಾಲಿಕ ದಿಟ್ಟತನ ತೋರಿ ಧರ್ಮ ಒಡೆಯುವುದನ್ನು ತಪ್ಪಿಸಿದರು. ಎಲ್ಲರಿಗೂ ಈಗ ತಪ್ಪಿನ ಅರಿವಾಗಿ ಒಂದೇ ಎನ್ನುವ ಭಾವನೆ ಮೂಡುತ್ತಿರುವುದು ಶುಭದಾಯಕ.
-ಡಾ.ಪ್ರಭಾಕರ ಕೋರೆ, ಕೆಎಲ್‌ಇ ಕಾರ್ಯಾಧ್ಯಕ್ಷ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ