ಆ್ಯಪ್ನಗರ

ತಾವೇ ಕೊರೆಸಿದ ಕೊಳವೆಬಾವಿಗೆ ಬಿದ್ದು ರೈತ ಸಾವು

ಬೆಳಗಾವಿ/ರಾಯಬಾಗ: ತಾಲೂಕಿನ ಸುಲ್ತಾನಪುರ ಗ್ರಾಮದಲ್ಲಿ ರೈತರೊಬ್ಬರು ...

Vijaya Karnataka 12 May 2020, 5:00 am
ಬೆಳಗಾವಿ/ರಾಯಬಾಗ: ರಾಯಬಾಗ ತಾಲೂಕಿನ ಸುಲ್ತಾನಪುರ ಗ್ರಾಮದಲ್ಲಿರೈತರೊಬ್ಬರು ಹೊಲದಲ್ಲಿತಾವೇ ಕೊರೆಸಿದ ಕೊಳವೆ ಬಾವಿಗೆ ಬಿದ್ದು ಸಾವಿಗೀಡಾಗಿದ್ದು, ಆತ್ಮಹತ್ಯೆಯ ಶಂಕೆ ವ್ಯಕ್ತವಾಗಿದೆ.
Vijaya Karnataka Web 11BGM1075706
ಮೃತದೇಹ ಹೊರತೆಗೆಯುವ ಕಾರ್ಯಾಚರಣೆಯಲ್ಲಿತೊಡಗಿರುವ ಎಸ್‌ಡಿಆರ್‌ಎಫ್‌ ತಂಡ.


ಗ್ರಾಮದ ಲಕ್ಕಪ್ಪ ಸಂಗಪ್ಪ ದೊಡ್ಡಮನಿ (38) ಮೃತ ವ್ಯಕ್ತಿ. ಬೆಳೆ ರಕ್ಷಿಸುವ ಉದ್ದೇಶದಿಂದ ಸಾಲ ಮಾಡಿದ್ದ ಲಕ್ಕಪ್ಪ ಎರಡು ದಿನಗಳ ಹಿಂದಷ್ಟೆ ಕೊಳವೆ ಬಾವಿ ಕೊರೆಸಿದ್ದರು. ಆದರೆ ನೀರು ಸಿಕ್ಕಿರಲಿಲ್ಲ. ಇದರಿಂದ ಲಕ್ಕಪ್ಪ ಮನ ನೊಂದಿದ್ದರು. ಸೋಮವಾರ ಬೆಳಗ್ಗೆ ಇವರು ಬಾವಿಗೆ ಬಿದ್ದಿದ್ದು, ಕೇಸಿಂಗ್‌ ಇಲ್ಲದ ಕಾರಣ 15 ಅಡಿ ಆಳದವರೆಗೂ ಒಳಗೆ ಇಳಿದಿದ್ದಾರೆ. ಲಕ್ಕಪ್ಪ ಬಾವಿಗೆ ಬಿದ್ದಿರುವುದು ತಡವಾಗಿ ಗೊತ್ತಾಗಿದ್ದರಿಂದ ಅವರು ಉಸಿರಾಟ ತೊಂದರೆಯಿಂದ ಕೊಳವೆ ಬಾವಿಯಲ್ಲೇ ಮೃತಪಟ್ಟಿದ್ದಾರೆ.

ವಿಷಯ ತಿಳಿದ ಹಾರೂಗೇರಿ ಪೊಲೀಸ್‌ ಮತ್ತು ತಹಸೀಲ್ದಾರರು ರಕ್ಷಣಾ ತಂಡಗಳ ಜತೆ ಸ್ಥಳಕ್ಕಾಗಮಿಸಿದರು. ಬೆಳಗಾವಿ ಮತ್ತು ಅಥಣಿ ಪಟ್ಟಣದಿಂದ ಅಗ್ನಿಶಾಮಕ ತಂಡ ಹಾಗೂ ಬೆಳಗಾವಿಯ ರಾಜ್ಯ ವಿಪತ್ತು ನಿರ್ವಹಣಾ ತಂಡ (ಎಸ್‌ಡಿಆರ್‌ಎಫ್‌) ಕೊಳವೆಬಾವಿಗೆ ಪರ್ಯಾಯವಾಗಿ ಗುಂಡಿ ತೋಡಿ ಸತತ ಮೂರು ಗಂಟೆಗಳ ಕಾಲ ಕಾರ್ಯಾಚರಣೆ ನಡೆಸಿ, ಲಕ್ಕಪ್ಪ ಅವರ ಮೃತ ದೇಹ ಹೊರ ತೆಗೆದಿದೆ.

----

ಆತ್ಮಹತ್ಯೆ ಶಂಕೆ

ಸಮೀಪದಲ್ಲೇ ಘಟಪ್ರಭಾ ಎಡದಂಡೆ ಕಾಲುವೆ ಇದ್ದರೂ ಪ್ರತಿ ವರ್ಷ ಬೇಸಿಗೆಯಲ್ಲಿಕಾಲುವೆಯಲ್ಲಿನೀರಿಲ್ಲದ್ದರಿಂದ ಸುಲ್ತಾನಪುರ ವ್ಯಾಪ್ತಿಯ ರೈತರು ಬೆಳೆದ ಬೆಳೆ ಉಳಿಸಿಕೊಳ್ಳಲು ಹರಸಾಹಸ ಪಡುತ್ತಿದ್ದಾರೆ. ಈಗಾಗಲೆ ಕೃಷಿ ಉದ್ದೇಶಕ್ಕೆ ಸಾಲ ಮಾಡಿದ್ದ ಲಕ್ಕಪ್ಪ ದೊಡ್ಡಮನಿ ಕೂಡ ಮತ್ತಷ್ಟು ಸಾಲ ಮಾಡಿ ಮೇ 6ರಂದು ಕೊಳವೆ ಬಾವಿ ಕೊರೆಸಿದ್ದರು. 550 ಅಡಿ ಆಳ ಕೊರೆಸಿದರೂ ನೀರು ದಕ್ಕದ ಕಾರಣ ಅವರು ಮನ ನೊಂದಿದ್ದರು. ಅಲ್ಲದೆ, ಸಾಲ ಮರುಪಾವತಿಗಾಗಿ ಸಾಲಗಾರರು ಒತ್ತಾಯಿಸುತ್ತಿದ್ದರಿಂದ ಇನ್ನಷ್ಟು ಮನನೊಂದ ಲಕ್ಕಪ್ಪ ಆತ್ಮಹತ್ಯೆಗೆ ಯತ್ನಿಸಿದ್ದಾರೆ ಎಂದು ಸ್ಥಳೀಯರು ದೂರಿದ್ದಾರೆ. 1.5 ಎಕರೆ ಜಮೀನು ಹೊಂದಿದ್ದ ಲಕ್ಕಪ್ಪ ದೊಡ್ಡಮನಿಗೆ ಪತ್ನಿ, 11 ಮತ್ತು 9 ವರ್ಷದ ಇಬ್ಬರು ಮಕ್ಕಳಿದ್ದಾರೆ.

ಡಿಸಿ, ಎಸ್ಪಿ ಭೇಟಿ

ಜಿಲ್ಲಾಧಿಕಾರಿ ಡಾ.ಎಸ್‌.ಬಿ.ಬೊಮ್ಮನಹಳ್ಳಿ ಮತ್ತು ಎಸ್‌ಪಿ ಲಕ್ಷ್ಮಣ ನಿಂಬರಗಿ ಸ್ಥಳಕ್ಕೆ ಭೇಟಿ ನೀಡಿ ಮೃತ ಲಕ್ಕಪ್ಪ ಅವರ ಪತ್ನಿಯನ್ನು ಭೇಟಿ ಮಾಡಿ ಮಾಹಿತಿ ಪಡೆದುಕೊಂಡಿದ್ದಾರೆ. ಮುಖ್ಯಮಂತ್ರಿಗಳ ಪರಿಹಾರ ನಿಧಿಯಿಂದ ಪರಿಹಾರ ನೀಡಲು ಸರಕಾರಕ್ಕೆ ಮಾಹಿತಿ ನೀಡಲಾಗುವುದು ಎಂದು ಡಿಸಿ ಭರವಸೆ ನೀಡಿದ್ದಾರೆ. ಲಕ್ಕಪ್ಪ ಆತ್ಮಹತ್ಯೆ ಉದ್ದೇಶದಿಂದ ಕೊಳವೆಬಾವಿಗೆ ಬಿದ್ದಿದ್ದಾರೋ, ಕಾಲು ಜಾರಿ ಬಿದ್ದಿದ್ದಾರೋ ಎನ್ನುವ ಕುರಿತು ತನಿಖೆ ನಡೆಸುವುದಾಗಿ ಎಸ್ಪಿ ತಿಳಿಸಿದ್ದಾರೆ. ರಾಯಬಾಗ ತಹಸೀಲ್ದಾರ ಚಂದ್ರಕಾಂತ ಭಜಂತ್ರಿ, ತಾಪಂ ಇಒ ಪ್ರಕಾಶ ವಡ್ಡರ, ಅಗ್ನಿಶಾಮಕ ಇಲಾಖೆ ಜಿಲ್ಲಾಧಿಕಾರಿ ಎಚ್‌.ಎಫ್‌.ಶಿವಕುಮಾರ ಸ್ಥಳದಲ್ಲಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ