ಆ್ಯಪ್ನಗರ

ಇಡೀ ದಿನ ಮಳೆ; ಅಂತೂ ಮುಂಗಾರು ಕಳೆ

ಬೆಳಗಾವಿ: ನಗರ ಸೇರಿ ಜಿಲ್ಲೆಯ ಹಲವೆಡೆ ಗುರುವಾರ ಬಹುತೇಕ ಇಡೀ ದಿನ ಉತ್ತಮ ಮಳೆ ಸುರಿದಿದ್ದು, ತಿಂಗಳ ನಂತರವಾದರೂ ...

Vijaya Karnataka 6 Jul 2018, 5:00 am
ಬೆಳಗಾವಿ: ಬೆಳಗಾವಿ ನಗರ ಸೇರಿ ಜಿಲ್ಲೆಯ ಹಲವೆಡೆ ಗುರುವಾರ ಬಹುತೇಕ ಇಡೀ ದಿನ ಉತ್ತಮ ಮಳೆ ಸುರಿದಿದ್ದು, ತಿಂಗಳ ನಂತರವಾದರೂ ಮುಂಗಾರಿನ ಕಳೆ ಕಾಣಿಸಿಕೊಂಡಿದೆ.
Vijaya Karnataka Web BLG-0507-2-52-5MAHESH3


ಮುಂಗಾರು ಆರಂಭದ ಒಂದು ದಿನ ಜಿಲ್ಲೆಯ ಕೆಲವೆಡೆ ಹಳ್ಳ ಕೊಳ್ಳಗಳು ತುಂಬಿ ಹರಿಯುವಂಥ ಧಾರಾಕಾರ ಮಳೆಯಾಗಿದ್ದು ಬಿಟ್ಟರೆ ನಂತರ ವರುಣ ಮುನಿಸಿಕೊಂಡಿದ್ದ. ದಕ್ಷಿಣ ಕರ್ನಾಟಕ, ಕರಾವಳಿ ಭಾಗದಲ್ಲಿ ಎಡೆಬಿಡದೆ ಮಳೆ ಸುರಿಯುತ್ತಿದ್ದರೂ ಈ ಭಾಗದಲ್ಲಿ ಮಳೆಯಾಗದೆ ರೈತರು ಕಂಗಾಲಾಗಿದ್ದರು. ಅದಾಗಿ ತಿಂಗಳ ನಂತರ ಬೆಳಗಾವಿಯಲ್ಲಿ ಮುಂಗಾರಿನ ವೈಭವ ಕಾಣಿಸಿಕೊಂಡಿದೆ.

ಜೂ.21 ರಿಂದ ಆರಂಭಗೊಂಡಿದ್ದ ಆರಿದ್ರಾ ಮಳೆ ಕಳೆದ ವರ್ಷದ ಅರ್ಧದಷ್ಟೂ ಈ ಬಾರಿ ಸುರಿದಿಲ್ಲ. ಆದರೆ, ಮಳೆ ಕೊನೆಗೊಳ್ಳುವ ಎರಡು ದಿನ ಚಿಕ್ಕೋಡಿ, ಹುಕ್ಕೇರಿ, ಬೆಳಗಾವಿ, ಖಾನಾಪುರ, ಬೈಲಹೊಂಗಲ ಭಾಗದಲ್ಲಿ ಉತ್ತಮ ಮಳೆಯಾಗಿರುವುದು ಬಾಡುವ ಬೆಳೆಗಳ ಜೀವ ಹಿಡಿದಿಟ್ಟಿದೆ. ಮುಂಗಾರು ಪೂರ್ವ ಉತ್ತಮ ಮಳೆ ಕಂಡಿದ್ದ ಅಥಣಿ, ರಾಮದುರ್ಗ, ಸವದತ್ತಿ ತಾಲೂಕಿನಲ್ಲಿ ಆರಿದ್ರಾ ಸಂಪೂರ್ಣವಾಗಿ ಕೈಕೊಟ್ಟಿದೆ. ಜು.6ರಿಂದ ಪುನರ್ವಸು ಮತ್ತು ನಂತರ ಬರುವ ಪುಷ್ಯ ಮಳೆ ಈಗಾಗಲೆ ಬಿತ್ತನೆ ಮಾಡಿದ ಬೆಳೆಗಳ ಇಳುವರಿ ನಿರ್ಧರಿಸಲಿವೆ ಎನ್ನುತ್ತಿದೆ ಕೃಷಿ ಇಲಾಖೆ.

ತಗ್ಗು ಪ್ರದೇಶ ಜಲಾವೃತ: ಬೆಳಗಾವಿ ನಗರದಲ್ಲಿ ಎರಡು ದಿನಗಳಿಂದ ಉತ್ತಮ ಮಳೆಯಾಗುತ್ತಿದೆ. ಗುರುವಾರ ಬೆಳಗ್ಗೆಯಿಂದಲೆ ಸತತ ಮಳೆ ಸುರಿಯುತ್ತಿದ್ದರಿಂದ ನಗರದ ತಗ್ಗು ಪ್ರದೇಶಗಳು ಜಲಾವೃತಗೊಂಡಿದ್ದವು. ವ್ಯಾಪಾರ ವಹಿವಾಟು, ಸಂಚಾರ ಕೂಡ ಅಸ್ತವ್ಯಸ್ತಗೊಂಡಿತ್ತು. ಹಿಂಡಲಗಾ ಗಣೇಶ ದೇವಸ್ಥಾನದ ಬಳಿ ಎಂಎಲ್‌ಐಆರ್‌ಸಿ ನಿರ್ಮಿಸಿರುವ ಕೆರೆಗಳಿಗೆ ಸಾಕಷ್ಟು ಪ್ರಮಾಣದಲ್ಲಿ ನೀರು ಹರಿದು ಬಂದಿದೆ. ಈಚೆಗೆ ಒಟ್ಟು ಐದು ಕೆರೆಗಳನ್ನು ನಿರ್ಮಿಸಿದ್ದ ಎಂಎಲ್‌ಐಆರ್‌ಸಿ ಬೆಳಗಾವಿ ನಗರದ ಜನರಿಗೆ ಸರೋವರ ಮಾದರಿ ಪರಿಸರ ನಿರ್ಮಿಸಿ ಗಮನ ಸೆಳೆದಿತ್ತು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ