ಆ್ಯಪ್ನಗರ

ಸವದತ್ತಿಯ ಗಟ್ಟಿಗಿತ್ತಿ ಬಾಲಕಿಯರು

ಯಾರದೋ ದುಷ್ಟತನದಿಂದ ಅಪಾಯಕ್ಕೆ ಸಿಲುಕಿ ಮಕ್ಕಳ ರಕ್ಷಣಾ ಸಮಿತಿ ರಕ್ಷಣೆಯಲ್ಲಿ ಬಾಲಮಂದಿರ ಸೇರಿದ್ದ ಆರು ಬಾಲಕಿಯರು ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ

Vijaya Karnataka 2 May 2019, 5:00 am
ಬೆಳಗಾವಿ: ಯಾರದೋ ದುಷ್ಟತನದಿಂದ ಅಪಾಯಕ್ಕೆ ಸಿಲುಕಿ ಮಕ್ಕಳ ರಕ್ಷಣಾ ಸಮಿತಿ ರಕ್ಷಣೆಯಲ್ಲಿ ಬಾಲಮಂದಿರ ಸೇರಿದ್ದ ಆರು ಬಾಲಕಿಯರು ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಉತ್ತಮ ಶ್ರೇಣಿಯಲ್ಲಿ ಉತ್ತೀರ್ಣರಾಗುವ ಮೂಲಕ ಗಟ್ಟಿತನ ತೋರಿದ್ದಾರೆ.
Vijaya Karnataka Web BLG-0105-2-52-1PRAMOD5


ಸವದತ್ತಿಯಲ್ಲಿರುವ ಬಾಲಕಿಯರ ಬಾಲಮಂದಿರ ವಿದ್ಯಾರ್ಥಿನಿಯರು ಮಾನಸಿಕ ಸಂಕಟಗಳನ್ನು ಮೀರಿ ಶಿಕ್ಷಣದಲ್ಲಿ ಪ್ರತಿಭೆ ತೋರಿದ್ದಾರೆ. ಇವರಲ್ಲಿ ಕೆಲವರು ನಾಲ್ಕೈದು ವರ್ಷಗಳಿಂದ ಬಾಲಮಂದಿರದಲ್ಲಿ ಆಶ್ರಯ ಪಡೆದಿದ್ದರೆ, ಇನ್ನೂ ಕೆಲವರು ಐದಾರು ತಿಂಗಳ ಹಿಂದೆ ಬಾಲಮಂದಿರ ಸೇರಿದ್ದರೂ ಸಾಮಾಜಿಕ ದಾಳಿಯ ಸಂಕೋಲೆ ಮೆಟ್ಟಿ ನಿಂತು ಸಾಧನೆ ಮಾಡಿದ್ದಾರೆ.

ಬಾಲಮಂದಿರದ ಆರು ಬಾಲಕಿಯರು ಈ ವರ್ಷ ಎಸ್ಸೆಸ್ಸೆಲ್ಸಿ ಪರೀಕ್ಷೆ ಬರೆದಿದ್ದರು. ಅದರಲ್ಲಿ ಆರೂ ಬಾಲಕಿಯರು ಉತ್ತೀರ್ಣರಾಗಿದ್ದಾರೆ. ಅದರಲ್ಲಿ ಇಬ್ಬರು ಶೇ. 60ಕ್ಕಿಂತ ಹೆಚ್ಚಿನ ಅಂಕ ಗಳಿಸಿದ್ದು, ಮೂವರು ಶೇ. 60ಕ್ಕಿಂತ ಹೆಚ್ಚಿನ ಅಂಕ ಪಡೆದು ಪಾಸಾಗಿದ್ದಾರೆ. ಬಾಲಕಿಯರ ಈ ಸಾಧನೆಯಿಂದ ಬಾಲಮಂದಿರದಲ್ಲಿ ಹರ್ಷ ಮನೆ ಮಾಡಿದೆ. ಇತರ ವಿದ್ಯಾರ್ಥಿಗಳಿಗೂ ಇವರು ಸ್ಫೂರ್ತಿಯಾಗಿದ್ದಾರೆ.

ಸವದತ್ತಿಯ ಬೆಡಸೂರು ಗ್ರಾಮದ ಸರಸ್ವತಿ ತಿಪ್ಪಣ್ಣ ಕಲ್ಲೋಳಿ (ಶೇ. 78.8), ಸವಿತಾ ಮರನಿಂಗಪ್ಪ ಜೀರಗವಾಡ (ಶೇ. 74.8), ಶಿಲ್ಪಾ ಲಕ್ಷ್ಮಪ್ಪ ಗಾಡಿವಡ್ಡರ್‌ (ಶೇ. 66.40), ಅಕ್ಷತಾ ಮಹಾದೇವ ಬಂಗಿ (ಶೇ. 64.48), ಆಶಾ ಬಸಯ್ಯ ಹಿರೇಮಠ (ಶೇ. 69.92), ಬಸಮ್ಮಾ ರುದ್ರಪ್ಪ ಬೆಡಸೂರು (ಶೇ. 52.80) ಗಮನಾರ್ಹ ಸಾಧನೆ ಮಾಡಿದ ವಿದ್ಯಾರ್ಥಿಗಳು.

ನಿರಂತರ ಅಭ್ಯಾಸ: ''ವಿದ್ಯಾರ್ಥಿಗಳಿಗೆ ತಮ್ಮ ಬದುಕಿನ ಕಹಿ ಘಟನೆಗಳು ನೆನಪಾಗದಂತೆ ಬಾಲಮಂದಿರದಲ್ಲಿ ಮನೆಯ ವಾತಾವರಣ ಸೃಷ್ಟಿಸಿ ಶಿಕ್ಷಣ ನೀಡಲಾಗುತ್ತಿದೆ. ಅಲ್ಲದೆ, ವೇಳಾಪಟ್ಟಿ ಪ್ರಕಾರ ಅಭ್ಯಾಸ ಮಾಡಿಸಿದ್ದರಿಂದ ಮಕ್ಕಳು ಉತ್ತಮ ಅಂಕ ಗಳಿಸಲು ನೆರವಾಗಿದೆ'', ಎನ್ನುತ್ತಾರೆ ಬಾಲಮಂದಿರದ ಮೇಲ್ವಿಚಾರಕಿ ಪಾರ್ವತಿ. ''ಮಂದಿರದ ಮಕ್ಕಳು ಬೆಳಗ್ಗೆ 5.30ಕ್ಕೆ ಎದ್ದು ಅಭ್ಯಾಸ ಮಾಡುತ್ತಾರೆ. ಶಾಲೆಗೆ ಹೋಗಿ ಬಂದ ಬಳಿಕ ಮತ್ತೆ ಸಂಗೀತ, ಕರಕುಶಲ, ಪಠ್ಯ ವಿಷಯಗಳ ಟ್ಯೂಶನ್‌ ನಡೆಯುತ್ತದೆ. ಎಸ್ಸೆಸ್ಸೆಲ್ಸಿ ಪರೀಕ್ಷೆ ಬರೆದ ಆರು ಬಾಲಕಿಯರು ಆಗಾಗ ಗುಂಪು ಚರ್ಚೆಯ ಮೂಲಕವೂ ಅಭ್ಯಾಸ ಮಾಡುತ್ತಿದ್ದರು. ಅವರ ಸಾಧನೆ ಇತರರಿಗೆ ಪ್ರೇರಣೆಯಾಗಿದೆ'', ಎಂದು ಪಾರ್ವತಿ ತಿಳಿಸಿದರು.

ರಕ್ಷಣೆಯಾದ ಮಕ್ಕಳು: ಸಾಮಾಜಿಕ ದೌರ್ಜನ್ಯಗಳಿಗೆ ಸಿಲುಕಿ ರಕ್ಷಣೆಯಾದ ಮಕ್ಕಳಿಗೆ ಬಾಲಮಂದಿರದಲ್ಲಿ ಆಶ್ರಯ ನೀಡಲಾಗುತ್ತದೆ. ಈಗಲೂ ಮಕ್ಕಳ ಮೇಲೆ ಮಾನಸಿಕ, ದೈಹಿಕ ದೌರ್ಜನ್ಯಗಳು ನಡೆಯುತ್ತಿರುವುದರಿಂದ ಬಾಲಮಂದಿರ ಸೇರುವ ಮಕ್ಕಳ ಸಂಖ್ಯೆ ಕಡಿಮೆಯಾಗುತ್ತಿಲ್ಲ. ಪಾಲಕರು, ಕುಟುಂಬಸ್ಥರನ್ನು ಬಿಟ್ಟು ಬದುಕುವ ಈ ಮಕ್ಕಳಿಗೆ ಮಾನಸಿಕ ಸ್ಥೈರ್ಯದ ಅವಶ್ಯಕತೆ ಇರುತ್ತದೆ. ಕಾಡುವ ನೋವಿನ ಘಟನೆಗಳನ್ನು ಮೀರಿ ಶಿಕ್ಷಣದಲ್ಲಿ ಗಮನ ಕೇಂದ್ರೀಕರಿಸುವುದು ಸವಾಲು. ಅಂಥ ಸ್ಥಿತಿಯಲ್ಲಿ ಬಾಲಕಿಯರು ಸಾಧನೆ ಮಾಡುವ ಮೂಲಕ ಬದುಕಿನ ಛಲ ತೋರಿಸಿದ್ದಾರೆ.

ಬಾಲಕಿಯರು ಶಾಲೆಯಿಂದ ಬಂದ ತಕ್ಷಣ ದಿನದ ಕೆಲಸ ಮುಗಿಸಿ ಅಭ್ಯಾಸ ಆರಂಭಿಸುತ್ತಿದ್ದರು. ಆ ದಿನದ ಅಭ್ಯಾಸವನ್ನು ಅಂದೇ ಮುಗಿಸುತ್ತಿದ್ದರು. ವೇಳಾಪಟ್ಟಿಯಂತೆ ಓದುತ್ತಿದ್ದರು. ಅವರ ಸಾಧನೆ ಖುಷಿ ತಂದಿದೆ.
- ಪಾರ್ವತಿ, ಬಾಲಕಿಯರ ಬಾಲಮಂದಿರದ ಮೇಲ್ವಿಚಾರಕಿ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ