ಆ್ಯಪ್ನಗರ

ಬೆಳಗಾವಿಯ ಹಲವು ಪ್ರದೇಶಗಳು ಜಲಾವೃತ, ದೆಹಲಿ ಪ್ರವಾಸದಲ್ಲಿ ಸಾಹುಕಾರ್! ರಮೇಶ್ ನಡೆಗೆ ನೆಟ್ಟಿಗರು ಗರಂ

ಬೆಳಗಾವಿ ಜಿಲ್ಲೆಯ ಹಲವು ಪ್ರದೇಶಗಳು ಭಾರೀ ಮಳೆಯಿಂದ ಜಲಾವೃತಗೊಂಡಿವೆ. ಆದರೆ ಇಂತಹ ಸಂದರ್ಭದಲ್ಲಿ ಕ್ಷೇತ್ರದಲ್ಲಿರಬೇಕಾದ ಸಚಿವ ರಮೇಶ್ ಜಾರಕಿಹೊಳಿ ದೆಹಲಿ ಪ್ರವಾಸದಲ್ಲಿದ್ದಾರೆ.

Vijaya Karnataka Web 18 Aug 2020, 11:46 am
ಬೆಳಗಾವಿ: ಭಾರೀ ಮಳೆ ಹಾಗೂ ಪ್ರವಾಹದಿಂದಾಗಿ ಬೆಳಗಾವಿ ಜಿಲ್ಲೆಯ ಹಲವು ಪ್ರದೇಶಗಳು ಜಲಾವೃತವಾಗುತ್ತಿವೆ. ಮಲಪ್ರಭಾ, ಘಟಪ್ರಭಾ, ಹಿರಣ್ಯಕೇಶಿ, ಮಾರ್ಕಂಡೇಯ ನದಿಗಳು ತುಂಬಿ ಹರಿಯುತ್ತಿರುವುದು ಮತ್ತು ತುಂಬಿದ ಜಲಾಶಯಗಳಿಂದ ಭಾರಿ ಪ್ರಮಾಣದ ನೀರು ಹೊರಬಿಡುತ್ತಿರುವುದರಿಂದ ತೀರ ಪ್ರದೇಶಗಳು ಜಲಾವೃತಗೊಳ್ಳುತ್ತಿವೆ. ಆದರೆ ಕ್ಷೇತ್ರದಲ್ಲಿದ್ದು ಪರಿಸ್ಥಿತಿ ನಿಭಾಯಿಸಬೇಕಾಗಿದ್ದ ಜಲಸಂಪನ್ಮೂಲ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ರಮೇಶ್ ಜಾರಕಿಹೊಳಿ ದೆಹಲಿ ಪ್ರವಾಸಲ್ಲಿದ್ದಾರೆ.
Vijaya Karnataka Web ramesh jarakiholi


ಮಳೆ ಹಾಗೂ ಪ್ರವಾಹದಿಂದ ಜನರು ಸಂತ್ರಸ್ತರಾಗುತ್ತಿದ್ದರೆ ರಮೇಶ್ ಜಾರಕಿಹೊಳಿ ದೆಹಲಿಯಲ್ಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ. ಡಿಸಿಎಂ ಹುದ್ದೆಗೆ ಲಾಬಿ ನಡೆಸುವುದು ಈ ಭೇಟಿಯ ಹಿಂದೆ ಇದೆ ಎಂಬ ಮಾತುಗಳು ಕೇಳಿಬರುತ್ತಿವೆ. ರಮೇಶ್‌ಗೆ ಸಿಪಿ ಯೋಗೇಶ್ವರ್ ಸಾಥ್ ನೀಡಿದ್ದಾರೆ.

ಡಿಸಿಎಂ ಸ್ಥಾನಕ್ಕೆ ಹೈಕಮಾಂಡ್‌ ಮಟ್ಟದಲ್ಲಿ ಲಾಬಿ! ರಮೇಶ್ ಜಾರಕಿಹೊಳಿ ದೆಹಲಿ ಭೇಟಿಯ ಗುಟ್ಟೇನು?

ಇದೇ ಸಂದರ್ಭದಲ್ಲಿ ಉತ್ತರ ಕರ್ನಾಟಕ ಭಾಗದ ಹಲವು ಜಿಲ್ಲೆಗಳಲ್ಲಿ ಭಾರೀ ಮಳೆಯಾಗುತ್ತಿದೆ. ಪ್ರವಾಹ ಪರಿಸ್ಥಿತಿಯಿಂದಾಗಿ ಬೆಳಗಾವಿ ಜಿಲ್ಲೆಯ ಹಲವು ಪ್ರದೇಶಗಳು ಜಲಾವೃತವಾಗುತ್ತಿವೆ. ಮಂಗಳವಾರ ಬೆಳಗ್ಗೆ ಗೋಕಾಕ ಪಟ್ಟಣದಿಂದ ಗೋಕಾಕ್ ಪಾಲ್ಸ್ ಗೆ ಹೋಗುವ ಸೇತುವೆ ಮೇಲೆ ನೀರು ಹರಿಯಲಾರಂಭಿಸಿದೆ.ಗೋಕಾಕ್ ಪಟ್ಟಣದ ದನದ ಪೇಟೆ, ಉಪ್ಪಾರ ಓಣಿ, ಮಹಾಲಿಂಗೇಶ್ವರ ನಗರ ಪ್ರದೇಶಗಳಿಗೆ ಮಳೆ ನೀರು ಆವರಿಸಿಕೊಂಡಿದ್ದು ಭಾರಿ ಪ್ರಮಾಣದ ಆರ್ಥಿಕ ಹಾನಿ ಸಂಭವಿಸುವ ಆತಂಕ ಜನತೆಯಲ್ಲಿ ಮೂಡಿದೆ.

ಸಚಿವ ಸ್ಥಾನಕ್ಕಾಗಿ ಸಿಪಿವೈ ದಿಲ್ಲಿ ದಂಡಯಾತ್ರೆ: ಡಿಕೆ ವಿರುದ್ಧದ ದಾಖಲೆ ಬಳಕೆ, ಜಾರಕಿಹೊಳಿ ಸಾಥ್‌

ಇಂತಹ ಸಂದರ್ಭದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರಾದ ರಮೇಶ್ ಜಾರಕಿಹೊಳಿ ಕ್ಷೇತ್ರದಲ್ಲಿರದೆ ದೆಹಲಿ ಪ್ರವಾಸಲ್ಲಿದ್ದಾರೆ. ಸಚಿವರ ಈ ನಡೆ ಸಾಮಾಜಿಕ ಜಾಲತಾಣಗಳಲ್ಲೂ ಚರ್ಚೆಗೆ ಗ್ರಾಸವಾಗಿದೆ. ಕ್ಷೇತ್ರದ ಜನರು ಸಚಿವರ ನಡೆಯನ್ನು ಪ್ರಶ್ನಿಸಿದ್ದಾರೆ. ಸಿಎಂ ಬಿಎಸ್‌ ಯಡಿಯೂರಪ್ಪ ಅವರು ಕೂಡಾ ಎಲ್ಲಾ ಜಿಲ್ಲಾ ಉಸ್ತುವಾರಿ ಸಚಿವರು ಕ್ಷೇತ್ರದಲ್ಲಿದ್ದು ಜನರ ಸಮಸ್ಯೆಗೆ ಸ್ಪಂದನೆ ನೀಡಬೇಕು ಎಂದು ಈಗಾಗಲೇ ಸೂಚನೆ ನೀಡಿದ್ದಾರೆ. ಆದರೆ ರಮೇಶ್ ಜಾರಕಿಹೊಳಿ ತಮ್ಮ ರಾಜಕೀಯ ಉದ್ದೇಶಕ್ಕಾಗಿ ದೆಹಲಿ ಪ್ರವಾಸಲ್ಲಿರುವುದು ಚರ್ಚೆಗೆ ಗ್ರಾಸವಾಗಿದೆ.

ಆದರೆ ಈ ಕುರಿತಾಗಿ ದೆಹಲಿಯಲ್ಲಿ ಮಾತನಾಡಿದ ಅವರು ರಾಷ್ಟ್ರೀಯ ಜಲ ನೀತಿಯನ್ನು ರೂಪಿಸುವುದು ಮತ್ತು ಅತಿವೃಷ್ಟಿಯನ್ನು ತಡೆಯಲು ನದಿಗಳ ಜೋಡಣೆ ಮಾಡುವ ಯೋಜನೆ ರೂಪಿಸುವ ದೃಷ್ಟಿಯಿಂದ ಮಾತುಕತೆ ನಡೆಸಲು ದೆಹಲಿಗೆ ಬಂದಿರುವುದಾಗಿ ತಿಳಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ