ಆ್ಯಪ್ನಗರ

ಸಚಿವ ಸ್ಥಾನ ಸಿಗದಿದ್ದರೆ ರಾಜೀನಾಮೆ ನೀಡ್ತೇನೆ; ಬಂಡಾಯದ ಬಾವುಟ ಹಾರಿಸಿದ ಶಾಸಕ ಆನಂದ ಮಾಮನಿ

ಸಿಎಂ ಬಸವರಾಜ ಬೊಮ್ಮಾಯಿ ನೇತೃತ್ವದ ರಾಜ್ಯ ಸರ್ಕಾರಕ್ಕೆ ನೂತನ ಸಚಿವ ಸಂಪುಟ ರಚನೆ ಇದೀಗ ಕಗ್ಗಂಟಾಗಿ ಪರಿಣಮಿಸಿದೆ. ಸಚಿವ ಸ್ಥಾನದ ನಿರೀಕ್ಷೆಯಲ್ಲಿದ್ದ ಆಕಾಂಕ್ಷಿಗಳು ತಮಗೆ ಸ್ಥಾನ ಸಿಗೋದು ಡೌಟ್‌ ಆಗ್ತಿದ್ದಂತೆ ಬಂಡಾಯದ ಬಾವುಟ ಹಾರಿಸಲು ಶುರು ಮಾಡಿದ್ದಾರೆ. ಆ ಪೈಕಿ ಸವದತ್ತಿ–ಯಲ್ಲಮ್ಮ ಕ್ಷೇತ್ರದ ಶಾಸಕ ಆನಂದ ಮಾಮನಿ ಅವರು ಬಿಜೆಪಿಗೆ ಬಹಿರಂಗವಾಗಿಯೇ ರಾಜೀನಾಮೆಯ ಎಚ್ಚರಿಕೆಯನ್ನು ನೀಡಿದ್ದಾರೆ

Vijaya Karnataka Web 4 Aug 2021, 12:06 pm
ಬೆಳಗಾವಿ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದ ರಾಜ್ಯ ಸರ್ಕಾರಕ್ಕೆ ನೂತನ ಸಚಿವ ಸಂಪುಟ ರಚನೆಯ ಕೌಂಟ್‌ಡೌನ್‌ ಶುರುವಾಗುತ್ತಿರುವ ಬೆನ್ನಲ್ಲೇ ಮತ್ತೊಂದೆಡೆ ಸಚಿವ ಸ್ಥಾನದ ಆಕಾಂಕ್ಷಿಗಳು ತಮಗೆ ಅವಕಾಶ ಸಿಗಲ್ಲ ಅನ್ನೋದು ಗೊತ್ತಾಗ್ತಿದ್ದಂತೆ ಬಂಡಾಯದ ಬಾವುಟ ಹಾರಿಸಲು ಶುರು ಮಾಡಿದ್ದಾರೆ.
Vijaya Karnataka Web anand mamani


ಈ ಪೈಕಿ ಸವದತ್ತಿ–ಯಲ್ಲಮ್ಮ ಕ್ಷೇತ್ರದ ಶಾಸಕ ಆನಂದ ಮಾಮನಿ ಅವರು ಸರ್ಕಾರಕ್ಕೆ ರಾಜೀನಾಮೆಯ ಎಚ್ಚರಿಕೆಯನ್ನು ನೀಡಿದ್ದಾರೆ. ಈ ಸಂಬಂಧ ಸುದ್ದಿಗಾರರೊಂದಿಗೆ ಮಾತನಾಡಿರುವ ಆನಂದ ಮಾಮನಿ, ಸಚಿವ ಸ್ಥಾನ ಸಿಗದಿದ್ದರೆ ವಿಧಾನಸಭೆ ಉಪಾಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ಕೊಡುವುದಾಗಿ ನೀಡಿರುವ ಹೇಳಿಕೆಗೆ ನಾನು ಈಗಲೂ ಬದ್ಧವಿದ್ದೇನೆ. ನನಗೆ ಮುಖ್ಯಮಂತ್ರಿ ಕಚೇರಿಯಿಂದ ಈವರೆಗೂ ಕರೆ ಬಂದಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ದಿಲ್ಲಿಯಲ್ಲಿ ಪಟ್ಟು ಹಿಡಿದು ಸಚಿವರ ಪಟ್ಟಿ ಫೈನಲ್ ಮಾಡಿಸಿದ ಸಿಎಂ ಬೊಮ್ಮಾಯಿ
ಸವದತ್ತಿ–ಯಲ್ಲಮ್ಮ ಕ್ಷೇತ್ರದ ಶಾಸಕರಾಗಿರುವ ಆನಂದ ಮಾಮನಿ, ನಾನು ಸತತವಾಗಿ ಮೂರು ಬಾರಿ ಗೆದ್ದು ಶಾಸಕನಾಗಿ ಕ್ಷೇತ್ರದ ಅಭಿವೃದ್ಧಿಗೆ ಶ್ರಮಿಸಿದ್ದೇನೆ. ಜನರಿಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರದ ಯೋಜನೆಗಳನ್ನು ತಲುಪಿಸಲು ಶ್ರಮಿಸಿದ್ದೇನೆ. ಪಕ್ಷಕ್ಕಾಗಿ ದುಡಿದಿದ್ದೇನೆ. ಈ ಬಾರಿ ಸಚಿವ ಸ್ಥಾನ ನೀಡಬೇಕು ಎನ್ನುವುದು ನನ್ನ ಮತ್ತು ಕ್ಷೇತ್ರದ ಜನರ ಬಯಕೆಯಾಗಿತ್ತು. ಸಚಿವ ಸ್ಥಾನ ಸಿಗದಿದ್ದರೆ ವಿಧಾನಸಭೆ ಉಪಾಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ಕೊಡುವ ನಿರ್ಧಾರದಿಂದ ಹಿಂದೆ ಸರಿಯುವುದಿಲ್ಲ ಎಂದು ಸ್ಪಷ್ಟವಾಗಿ ಹೇಳಿದ್ದಾರೆ.

ಬುಧವಾರವೇ ರಾಜೀನಾಮೆ ನೀಡುವುದಿಲ್ಲ ಎಂದಿರುವ ಆನಂದ ಮಾಮನಿ, ಬಿಜೆಪಿ ಹಿರಿಯ ನಾಯಕ, ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮತ್ತು ಪಕ್ಷದ ಹಿರಿಯ ಮುಖಂಡರೊಂದಿಗೆ ಚರ್ಚಿಸಿ ಬಳಿಕ ಕ್ಷೇತ್ರದ ಮತದಾರರು, ಕಾರ್ಯಕರ್ತರು ಜೊತೆ ಚರ್ಚಿಸಿ ಮುಂದಿನ ನಿರ್ಧಾರ ಮಾಡುತ್ತೇನೆ ಎಂದು ಹೇಳಿದರು.

ಮುಂದಿನ ಲೇಖನ