ಆ್ಯಪ್ನಗರ

ಸುರೇಶ್‌ ಅಂಗಡಿ ಪತ್ನಿ ಸ್ಪರ್ಧಿಸಿದರೆ ಬೆಂಬಲ, ಕಾಂಗ್ರೆಸ್‌ನ ನಾಯಕನ ಅಚ್ಚರಿಯ ಹೇಳಿಕೆ

ದಿ. ಸುರೇಶ್‌ ಅಂಗಡಿ ಪತ್ನಿ ಸ್ಪರ್ಧಿಸಿದರೆ ಅವರನ್ನು ಬೆಂಬಲಿಸುವುದಷ್ಟೆ ಅಲ್ಲ, ಅವರ ಪರವಾಗಿ ಪ್ರಚಾರ ಮಾಡುವುದಾಗಿಯೂ ಹೇಳಿರುವ ಪ್ರಕಾಶ್‌ ಹುಕ್ಕೇರಿ, "ನಾನೂ ಬೇರೆ ಪಕ್ಷದಿಂದ ಸ್ಪರ್ಧಿಸಲು ಸಿದ್ಧ" ಎಂದಿದ್ದಾರೆ.

Vijaya Karnataka 26 Oct 2020, 11:35 pm
ನಿಪ್ಪಾಣಿ (ಬೆಳಗಾವಿ): ಬೆಳಗಾವಿ ಲೋಕಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ದಿ. ಸುರೇಶ್‌ ಅಂಗಡಿ ಅವರ ಪತ್ನಿಗೆ ಬಿಜೆಪಿ ಟಿಕೆಟ್‌ ನೀಡಿದರೆ ಪಕ್ಷಾತೀತವಾಗಿ ಅವರ ಪರ ಪ್ರಚಾರ ಮಾಡುವುದಾಗಿ ಕಾಂಗ್ರೆಸ್‌ನ ಮಾಜಿ ಸಂಸದ ಪ್ರಕಾಶ್‌ ಹುಕ್ಕೇರಿ ಅಚ್ಚರಿಯ ಹೇಳಿಕೆ ನೀಡಿದ್ದಾರೆ.
Vijaya Karnataka Web Prakash Hukkeri


ಅಲ್ಲದೆ, "ಒಂದು ವೇಳೆ ಸುರೇಶ್‌ ಅಂಗಡಿ ಕುಟುಂಬ ಹೊರತುಪಡಿಸಿ ಯಾರಿಗಾದರೂ ಟಿಕೆಟ್‌ ನೀಡಿದಲ್ಲಿ ನಾನು ಕಾಂಗ್ರೆಸ್‌ ಅಥವಾ ಬೇರೆ ಪಕ್ಷದಿಂದ ಸ್ಪರ್ಧಿಸಲು ತಯಾರಿದ್ದೇನೆ. ಈ ವಿಚಾರವಾಗಿ ಕಾಂಗ್ರೆಸ್‌ ಹೈಕಮಾಂಡ್‌ ನನ್ನ ಮೇಲೆ ಏನು ಕ್ರಮ ಜರುಗಿಸುತ್ತೋ ಜರುಗಿಸಲಿ. ನನಗೂ ಅವರಿಂದ ಸಾಕಾಗಿ ಹೋಗಿದೆ," ಎಂದೂ ತಮ್ಮ ಅಸಮಾಧಾನ ಹೊರಹಾಕಿದ್ದಾರೆ.

ಖಾಸಗಿ ಕಾರ್ಯಕ್ರಮದ ನಂತರ ಪಟ್ಟಣದಲ್ಲಿ ಮಾತನಾಡಿ, "ಕಳೆದ ಲೋಕಸಭಾ ಚುನಾವಣೆ ಸಮಯದಲ್ಲೇ ಬೆಳಗಾವಿ ಕ್ಷೇತ್ರದ ಟಿಕೆಟ್‌ ನೀಡುವಂತೆ ಕೇಳಿದ್ದೆ. ಆದರೆ, ಪಕ್ಷದ ಹೈಕಮಾಂಡ್‌ ಚಿಕ್ಕೋಡಿ ಟಿಕೆಟ್‌ ನೀಡಿತು. ನಾನು ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವನಾಗಿ ಸಾಕಷ್ಟು ಅಭಿವೃದ್ಧಿ ಕಾರ್ಯ ಮಾಡಿದ್ದೇನೆ. ಬೆಳಗಾವಿ ನನಗೇನೂ ಹೂಸದಲ್ಲ," ಎಂದು ಹೇಳಿದರು.

ಹುಕ್ಕೇರಿ ಹೇಳಿಕೆಗೆ ಜಾರಕಿಹೊಳಿ ವಿರೋಧ

ಪ್ರಕಾಶ್‌ ಹುಕ್ಕೇರಿ ಅವರ ಈ ಹೇಳಿಕೆ ಅವರ ಹಿರಿತನಕ್ಕೆ ತಕ್ಕುದಲ್ಲ. ಅವರ ಹೇಳಿಕೆಗಳನ್ನು ವರಿಷ್ಠರು ಗಮನಿಸಿದ್ದಾರೆ. ಅಲ್ಲದೆ, ಇಂಥ ಹೇಳಿಕೆಗಳನ್ನು ಸಾಕಷ್ಟು ಬಾರಿ ನೋಡಿದ್ದೇವೆ. ಇದೇನು ಹೊಸದಲ್ಲ. ಬೆಳಗಾವಿ ಲೋಕಸಭಾ ಕ್ಷೇತ್ರಕ್ಕೆ ಅವರಿಗೆ ಅವಕಾಶವಿಲ್ಲ. ಅವರದ್ದೇನಿದ್ದರೂ ಚಿಕ್ಕೋಡಿ ಕ್ಷೇತ್ರ. ಬೆಳಗಾವಿಗೆ ಯೋಗ್ಯ ವ್ಯಕ್ತಿಯನ್ನು ಹುಡುಕುತ್ತಿದ್ದೇವೆ. ಲಖನ್‌ ಜಾರಕಿಹೊಳಿ ಟಿಕೆಟ್‌ ಕೇಳಿಲ್ಲ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್‌ ಜಾರಕಿಹೊಳಿ ಹೇಳಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ