ಆ್ಯಪ್ನಗರ

ಕಾಳಿಕಾ ದೈವಜ್ಞ ಸೊಸೈಟಿ, ಯೋಧನ ಮನೆ ಮೇಲೆ ಐಟಿ ದಾಳಿ

ಬೆಳಗಾವಿ: ಪ್ರತ್ಯೇಕ ಪ್ರಕರಣಗಳಿಗೆ ಸಂಬಂಧಿಸಿದಂತೆ ನಗರದಲ್ಲಿ ಎರಡು ಕಡೆ ಆದಾಯ ತೆರಿಗೆ ಇಲಾಖೆ ...

Vijaya Karnataka 9 Aug 2018, 5:00 am
ಬೆಳಗಾವಿ: ಪ್ರತ್ಯೇಕ ಪ್ರಕರಣಗಳಿಗೆ ಸಂಬಂಧಿಸಿದಂತೆ ನಗರದಲ್ಲಿ ಎರಡು ಕಡೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಬಾಪಟ್‌ ಗಲ್ಲಿಯ ಶ್ರೀ ಕಾಳಿಕಾ ದೈವಜ್ಞ ಕ್ರೆಡಿಟ್‌ ಸೌಹಾರ್ದ ಸೊಸೈಟಿ ಮತ್ತು ಕಾಕತಿ ಪೊಲೀಸ್‌ ಠಾಣೆ ವ್ಯಾಪ್ತಿಯ ಕೇದನೂರು ಗ್ರಾಮದ ಮನೆಯೊಂದರ ಮೇಲೆ ಐಟಿ ದಾಳಿ ನಡೆದಿದೆ. ಬುಧವಾರ ಬೆಳಗ್ಗೆಯೇ ಎರಡೂ ಕಡೆ ದಾಳಿ ನಡೆಸಿರುವ ಐಟಿ ಅಧಿಕಾರಿಗಳು ಸಂಜೆವರೆಗೂ ಶೋಧ- ವಿಚಾರಣೆ ಕೈಗೊಂಡಿದ್ದಾರೆ.
Vijaya Karnataka Web BLG-0808-2-52-8MAHESH4


ಗ್ರಾಹಕರು ಠೇವಣಿ ಇಟ್ಟ ಕೋಟ್ಯಂತರ ರೂಪಾಯಿ ಮೌಲ್ಯದ ಚಿನ್ನಾಭರಣ ವಂಚನೆ ವಿಷಯಕ್ಕೆ ಸಂಬಂಧಿಸಿದಂತೆ ಶ್ರೀಕಾಳಿಕಾ ದೈವಜ್ಞ ಕ್ರೆಡಿಟ್‌ ಸೌಹಾರ್ದ ಸೊಸೈಟಿ ಚೇರ್ಮನ್‌ ಖಡೇ ಬಜಾರ್‌ ಠಾಣೆಗೆ ದೂರು ನೀಡಿದ್ದರು. ದೂರಿನ ಹಿನ್ನೆಲೆಯಲ್ಲಿ ಖಡೇ ಬಜಾರ್‌ ಠಾಣೆ ಪೊಲೀಸರು ಸೊಸೈಟಿ ಮ್ಯಾನೇಜರ್‌ ಸೇರಿದಂತೆ ಮೂವರನ್ನು ಬಂಧಿಸಿ, ದುರ್ಬಳಕೆ ಮಾಡಿಕೊಂಡಿದ್ದ 4 ಕಿಲೋ ತೂಕದ ಚಿನ್ನಾಭರಣ ವಶಕ್ಕೆ ಪಡೆದಿದ್ದರು. ಈ ಹಿನ್ನೆಲೆಯಲ್ಲಿ ಸೊಸೈಟಿ ಆರ್ಥಿಕ ವ್ಯವಹಾರ ಪರಿಶೀಲನೆಗೆ ಐಟಿ ಅಧಿಕಾರಿಗಳು ಬುಧವಾರ ಹಠಾತ್‌ ದಾಳಿ ನಡೆಸಿ ದಾಖಲೆ ಪತ್ರಗಳನ್ನು ಪರಿಶೀಲಿಸಿದ್ದಾರೆ. ಅಲ್ಲದೆ, ಹೆಚ್ಚು ಮೊತ್ತದ ನಗದು ಮತ್ತು ಚಿನ್ನಾಭರಣ ಠೇವಣಿ ಇಟ್ಟಿರುವ ಸೊಸೈಟಿ ಗ್ರಾಹಕರನ್ನೂ ಕರೆಯಿಸಿ ವಿಚಾರಣೆ ನಡೆಸಿದ್ದಾರೆ ಎನ್ನಲಾಗಿದೆ.

ಕೋಟಿ ರೂ. ಅವ್ಯವಹಾರ: ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸುತ್ತಿರುವ ಯೋಧನ ಕೇದನೂರು ಗ್ರಾಮದ ಮನೆಯ ಮೇಲೆ ಐಟಿ ಅಧಿಕಾರಿಗಳ ತಂಡ ದಾಳಿ ನಡೆಸಿ ದಾಖಲೆ ಪತ್ರ ಪರಿಶೀಲನೆ ನಡೆಸಿದೆ. ಉತ್ತರ ಪ್ರದೇಶದ ಮಥುರಾದಲ್ಲಿರುವ ಭಾರತೀಯ ಸೇನೆಗೆ ಸೇರಿದ ಸಹಕಾರಿ ಸಂಸ್ಥೆಯಲ್ಲಿ ಯೋಧ 1 ಕೋಟಿ ರೂ.ಗೂ ಹೆಚ್ಚು ಮೌಲ್ಯದ ಅವ್ಯವಹಾರ ಮಾಡಿದ ಆರೋಪದ ಹಿನ್ನೆಲೆಯಲ್ಲಿ ಹುಬ್ಬಳ್ಳಿ ಮೂಲದ ಆದಾಯ ತೆರಿಗೆ ಅಧಿಕಾರಿಗಳು ದಾಳಿ ನಡೆಸಿದ್ದಾರೆ ಎಂದು ತಿಳಿದು ಬಂದಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ