ಆ್ಯಪ್ನಗರ

ವಿಟಿಯು ವಿಭಜನೆಗೆ ಕನ್ನಡ ಸಂಘಟನೆಗಳ ತೀವ್ರ ವಿರೋಧ

ಬೆಳಗಾವಿ: ಮುಖ್ಯಮಂತ್ರಿ ಎಚ್‌ಡಿ...

Vijaya Karnataka 11 Feb 2019, 5:00 am
ಬೆಳಗಾವಿ : ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ವಿಟಿಯು ವಿಭಜಿಸುವ ಸಂಚನ್ನು ಬೆಳಗಾವಿ ನೆಲದಲ್ಲೇ ಕುಳಿತು ರಚಿಸುವ ಮೂಲಕ ಉತ್ತರ ಕರ್ನಾಟಕದ ಜನರ ಬೆನ್ನಿಗೆ ಚೂರಿ ಇರಿಯುವ ಮಹಾದ್ರೋಹ ಮಾಡಿದ್ದಾರೆ. ಇದನ್ನು ತಕ್ಷ ಣ ಕೈಬಿಡದಿದ್ದರೆ ಗಂಭೀರ ಸ್ವರೂಪದ ಹೋರಾಟ ಮಾಡಬೇಕಾದೀತು ಎಂದು ಕನ್ನಡಪರ ಸಂಘಟನೆಗಳು ಎಚ್ಚರಿಕೆ ನೀಡಿವೆ.
Vijaya Karnataka Web BLG-1002-2-52-10RAJU-1


ನಗರದ ಕನ್ನಡ ಸಾಹಿತ್ಯ ಭವನದಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕನ್ನಡಪರ ಸಂಘಟನೆಗಳ ಪ್ರಮುಖರು, ಸರಕಾರದ ಈ ಷಡ್ಯಂತ್ರ ಮುರಿದು ಹಾಕಲು ನಾವು ಸಜ್ಜಾಗಿದ್ದೇವೆ. ನಾನಾ ಸ್ವರೂಪಗಳ ಹೋರಾಟದ ಜತೆಗೆ ಉತ್ತರ ಕರ್ನಾಟಕ ಬಂದ್‌ಗೆ ಕರೆ ನೀಡಲು ಚಿಂತನೆ ನಡೆಸಿರುವುದಾಗಿ ತಿಳಿಸಿದರು.

ಶ್ರೀಮಂತಿಕೆ ಮೇಲೆ ಕಣ್ಣು: ವಿಟಿಯು ವಿಭಜನೆಯ ಹುನ್ನಾರದ ಹಿಂದೆ ಶೈಕ್ಷಣಿಕ ಹಿತಾಸಕ್ತಿ ಇಲ್ಲ. ಬದಲಾಗಿ ವಿಟಿಯುದ ಶ್ರೀಮಂತಿಕೆ ದೋಚುವ ಸ್ವಾರ್ಥ ಅಡಗಿದೆ. ಚಳಿಗಾಲದ ಅಧಿವೇಶನಕ್ಕೆ ಬೆಳಗಾವಿಗೆ ಆಗಮಿಸಿದ್ದ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ, ವಿಟಿಯುದಲ್ಲಿ ವಾಸ್ತವ್ಯ ಹೂಡಿದ್ದರು. ಈ ಸಂದರ್ಭದಲ್ಲಿ ವಿಟಿಯುದ ಆರ್ಥಿಕ ವ್ಯವಹಾರ ತಿಳಿದುಕೊಂಡು ಅದನ್ನೆಲ್ಲ ಉತ್ತರ ಕರ್ನಾಟಕದ ಜನರಿಗೆ ಏಕೆ ಬಿಡಬೇಕೆಂದು ವಿಚಾರಿಸಿ, ಉನ್ನತ ಶಿಕ್ಷಣ ಸಚಿವ ಜಿ.ಟಿ. ದೇವೇಗೌಡರ ಮೂಲಕ ವಿಭಜನೆಯ ಷಡ್ಯಂತ್ರ ಮಾಡಿದ್ದಾರೆ ಎಂದು ಆರೋಪಿಸಿದರು.

ಕಾಳಜಿ ಇದೆಯೇ?: ಪ್ರತ್ಯೇಕ ತಾಂತ್ರಿಕ ವಿಶ್ವವಿದ್ಯಾಲಯಕ್ಕೆ ಯಾರದೇ ಬೇಡಿಕೆ ಇಲ್ಲದಾಗಲೂ ಮುಖ್ಯಮಂತ್ರಿಗಳು ಇಟ್ಟಿರುವ ಈ ಅಪಾಯಕಾರಿ ಹೆಜ್ಜೆ ಜನರಲ್ಲಿ ಅನೇಕ ಸಂಶಯಗಳ ಜತೆಗೆ ಪ್ರತ್ಯೇಕತೆ ಭಾವನೆಗಳಿಗೆ ಪುಷ್ಟಿ ನೀಡುತ್ತದೆ. ವಿಟಿಯುಗೆ ಕಾರ್ಯಭಾರ ಹೆಚ್ಚಾಗಿದೆ ಎನ್ನುವುದನ್ನೇ ಮಾನದಂಡವಾಗಿ ಇಟ್ಟುಕೊಂಡು ವಿಭಜನೆ ನಡೆಸುವುದಾದರೆ ರಾಜೀವಗಾಂಧಿ ವಿಶ್ವವಿದ್ಯಾಲಯವನ್ನು ವಿಭಜಿಸಿ ಉತ್ತರ ಕರ್ನಾಟಕಕ್ಕೇಕೆ ಇನ್ನೊಂದು ವಿಶ್ವವಿದ್ಯಾಲಯವನ್ನು ನೀಡುತ್ತಿಲ್ಲ? ಇಲ್ಲಿಂದ 'ಕೆಶಿಪ್‌, ಆಯುಷ್‌ ಮತ್ತು ಇತರೆ ಇಲಾಖೆಗಳನ್ನು ಹೊತ್ತೊಯ್ದವರು ಇಲ್ಲಿನ ಏಳ್ಗೆಯನ್ನು ಬಯಸುತ್ತಿದ್ದಾರೆಂದು ಹೇಗೆ ಭಾವಿಸುವುದು? ಯಾರಿಗೂ ತಿಳಿಯದಂತೆ ಇವರು ಏನು ಮಾಡುತ್ತಿದ್ದಾರೆ ಎಂಬುದು ಜನರೆದುರು ಸ್ಪಷ್ಟಗೊಳ್ಳಬೇಕೆಂದು ಒತ್ತಾಯಿಸಿದರು.

ಮಾಜಿ ಮಹಾಪೌರ ಡಾ. ಸಿದ್ಧನಗೌಡ ಪಾಟೀಲ, ಕನ್ನಡ ಸಂಘಟನೆಗಳ ಕ್ರಿಯಾಸಮಿತಿ ಅಧ್ಯಕ್ಷ ಅಶೋಕ ಚಂದರಗಿ, ರಾಜು ಚಿಕ್ಕನಗೌಡರ್‌, ಕರವೇ ಜಿಲ್ಲಾ ಅಧ್ಯಕ್ಷ ಮಹಾದೇವ ತಳವಾರ, ಪ್ರಧಾನ ಕಾರ್ಯದರ್ಶಿ ದೀಪಕ್‌ ಗುಡಗನಟ್ಟಿ, ಕಸ್ತೂರಿ ಬಾವಿ, ಗಣೇಶ ರೋಕಡೆ, ಮೈನೂದ್ದೀನ್‌ ಮಕಾನದಾರ ಹಾಗೂ ಇತರರು ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

ಈ ಹಿಂದೆ ಎಚ್‌.ಡಿ. ಕುಮಾರಸ್ವಾಮಿ ಅವರು ಗಡಿ ಭಾಗದಲ್ಲಿ ಕೈಗೊಂಡ ದಿಟ್ಟ ಕ್ರಮಗಳಿಂದ ಅವರ ಬಗ್ಗೆ ಅಭಿಮಾನ ಮೂಡಿಸಿತ್ತು. ಆದರೆ, ವಿಟಿಯು ವಿಭಜನೆ ವಿಚಾರ ನೋಡಿ ಭ್ರಮನಿರಸನವಾಗಿದೆ. ಈ ಕುರಿತು ಉತ್ತರ ಕರ್ನಾಟಕದ ಜನಪ್ರತಿನಿಧಿಗಳು ಧ್ವನಿ ಎತ್ತಬೇಕು. ಸದನದಲ್ಲಿ ಪ್ರಶ್ನಿಸಿ ವಿವರ ಪಡೆಯಬೇಕು.
- ಕನ್ನಡಪರ ಮುಖಂಡರು

ವರದಿಯ ವಿವರ ಬಹಿರಂಗಗೊಳಿಸಿ :
ವಿಶ್ವವಿದ್ಯಾಲಯಗಳು ರಾಜ್ಯಪಾಲರ ಅಧೀನದಲ್ಲಿ ಬರುತ್ತವೆ. ನಂತರ ಸಮಕುಲಾಧಿಪತಿಯಾಗಿ ಉನ್ನತ ಶಿಕ್ಷಣ ಸಚಿವರು ಇರುತ್ತಾರೆ. ಮುಖ್ಯಮಂತ್ರಿಗಳು ವಿಟಿಯು ವಿಭಜನೆ ಸಂಗತಿಯನ್ನು ರಾಜ್ಯಪಾಲರು ಮತ್ತು ವಿಶ್ವವಿದ್ಯಾಲಯದ ಕಾರ್ಯಕಾರಿ ಪರಿಷತ್‌ನ ಗಮನಕ್ಕೆ ತಂದಿಲ್ಲ. ಶಿಕ್ಷಣ ತಜ್ಞರು, ಸಾರ್ವಜನಿಕರ ಅಭಿಪ್ರಾಯಗಳನ್ನು ಪಡೆಯದೇ ಉನ್ನತ ಶಿಕ್ಷಣ ಸಚಿವರ ಮೂಲಕ ಗೌಪ್ಯವಾಗಿ ಹಾಗೂ ಅನಧಿಕೃತ ರೀತಿಯಲ್ಲಿ ವಿಟಿಯು ಕುಲಸಚಿವ ಜಗನ್ನಾಥ ರಡ್ಡಿ, ವಿಟಿಯು ಮಾಜಿ ಕುಲಸಚಿವ ಹಾಗೂ ಹಾಲಿ ಕರ್ನಾಟಕ ರಾಜ್ಯ ಉನ್ನತ ಶಿಕ್ಷಣ ಪರಿಷತ್‌ ಸದಸ್ಯ ಎಸ್‌.ಎ. ಕೋರಿ ಅವರನ್ನು ಒಳಗೊಂಡ ಕಮಿಟಿ ರಚಿಸಿ ವರದಿ ತರಿಸಿಕೊಂಡಿದ್ದಾರೆ. ವಿಟಿಯು ನಿಯಮಾವಳಿ ಪ್ರಕಾರ ವಿಟಿಯುದ ನೌಕರರಾದವರು ಯಾವುದೇ ಕಮಿಟಿಯ ಭಾಗ ಇಲ್ಲವೆ ಸದಸ್ಯರಾಗಬೇಕಾದರೆ ವಿಶ್ವವಿದ್ಯಾಲಯದ ಕಾರ್ಯಕಾರಿ ಪರಿಷತ್‌ನ ಒಪ್ಪಿಗೆ ಪಡೆಯಬೇಕಾಗುತ್ತದೆ. ಇಲ್ಲಿ ಅದ್ಯಾವುದೇ ಕೆಲಸ ನಡೆದಿಲ್ಲ. ಜತೆಗೆ ಯಾವುದೇ ವರದಿ ತರಿಸಿಕೊಳ್ಳಬೇಕಾದರೆ ವಿಶ್ವವಿದ್ಯಾಲಯಕ್ಕೆ ಸಂಬಂಧ ಇಲ್ಲದವರಿಗೆ ಜವಾಬ್ದಾರಿ ನೀಡಬೇಕು. ಇಲ್ಲಿ ಸರಕಾರ ತನ್ನ ನೌಕರರಿಗೆ ಜವಾಬ್ದಾರಿ ನೀಡಿ ತನಗೆ ಬೇಕಿರುವಂತೆ ವರದಿ ತರಿಸಿಕೊಳ್ಳುವ ಪ್ರಯತ್ನ ಮಾಡಿದೆ. ಇದರ ಜತೆಗೆ ವಿಟಿಯು ಕುಲಪತಿ ಡಾ. ಕರಿಸಿದ್ಧಪ್ಪ ಅವರಿಂದಲೂ ಗೌಪ್ಯ ವರದಿ ತರಿಸಿಕೊಂಡಿರುವ ಮಾಹಿತಿ ಇದೆ. ಇವೆರಡೂ ವರದಿಗಳಲ್ಲಿ ಏನಿದೆ ಎಂಬುದನ್ನು ಸರಕಾರ ಮೊದಲು ಬಹಿರಂಗಗೊಳಿಸಬೇಕೆಂದು ಕನ್ನಡಪರ ಮುಖಂಡರು ಆಗ್ರಹಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ