ಆ್ಯಪ್ನಗರ

ಕರೆಂಟ್‌ ಕಂಬ ಏರಿದ ಮಹಿಳಾ ಕಾರ್ಪೊರೇಟರ್‌!

ಬೆಳಗಾವಿ: ನಾಗರಿಕ ಸಮಸ್ಯೆಗಳನ್ನು ಮುಂದಿಟ್ಟುಕೊಂಡು ಇಲ್ಲಿನ ವಾರ್ಡ್‌ 41ರ ನಗರ ಸೇವಕಿ ...

Vijaya Karnataka 31 Oct 2018, 5:00 am
ಬೆಳಗಾವಿ: ನಾಗರಿಕ ಸಮಸ್ಯೆಗಳನ್ನು ಮುಂದಿಟ್ಟುಕೊಂಡು ಇಲ್ಲಿನ ವಾರ್ಡ್‌ 41ರ ನಗರ ಸೇವಕಿ ಸರಳಾ ಹೆರೇಕರ ಹೈಮಾಸ್ಟ್‌ ದೀಪದ ಕಂಬ ಏರಿ ಮಂಗಳವಾರ ವಿನೂತನ ಪ್ರತಿಭಟನೆ ನಡೆಸಿದ್ದಾರೆ.
Vijaya Karnataka Web BLG-3010-2-52-30MAHESH2


''ವಾರ್ಡ್‌ 41ರ ಸದಾಶಿವ ನಗರದಲ್ಲಿ ಕೆಲ ವರ್ಷಗಳಿಂದ ಹೈಮಾಸ್ಟ್‌ ಸೇರಿದಂತೆ ಬೀದಿ ಬದಿ ವಿದ್ಯುತ್‌ ದೀಪಗಳೇ ಉರಿಯುತ್ತಿಲ್ಲ. ಇದರಿಂದ ರಾತ್ರಿ ವೇಳೆ ಬೆಳಕಿನ ಕೊರತೆ ಉಂಟಾಗಿ ಜನರ ಓಡಾಟ ಕಷ್ಟವಾಗುತ್ತಿದೆ. ವಾರ್ಡ್‌ ವ್ಯಾಪ್ತಿಯ ಬಹುತೇಕ ರಸ್ತೆಗಳು ಹಾಳಾಗಿವೆ. ಒಳಚರಂಡಿಗಳಲ್ಲಿ ಕಸದ ರಾಶಿ ತುಂಬಿಕೊಂಡಿದೆ. ಈ ಕುರಿತು ಪಾಲಿಕೆ ಆಯುಕ್ತರು ಸೇರಿದಂತೆ ಅಧಿಕಾರಿಗಳಿಗೆ ಮಾಹಿತಿ ನೀಡಿದರೂ ಗಮನ ಹರಿಸುತ್ತಿಲ್ಲ'', ಎಂದು ಆರೋಪಿಸಿ ಸರಳಾ ಹೆರೇಕರ ಮಂಗಳವಾರ ಬೆಳಗ್ಗೆ ಸದಾಶಿವ ನಗರದ ಗಣಪತಿ ದೇವಸ್ಥಾನ ಬಳಿಯ ಹೈಮಾಸ್ಟ್‌ ವಿದ್ಯುತ್‌ ಕಂಬ ಏರಿ ಪ್ರತಿಭಟನೆ ಆರಂಭಿಸಿದರು.

ಸುದ್ದಿ ತಿಳಿದ ಎಪಿಎಂಸಿ ಠಾಣೆ ಇನ್‌ಸ್ಪೆಕ್ಟರ್‌ ಜೆ.ಎಂ.ಕಾಲಿಮಿರ್ಚಿ ಸೇರಿದಂತೆ ಪೊಲೀಸ್‌ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ ಕಂಬ ಏರಿದ್ದ ನಗರ ಸೇವಕಿಯನ್ನು ಕೆಳಗಿಳಿಸಲು ಹರಸಾಹಸ ಪಟ್ಟರು. ''ಆರು ತಿಂಗಳ ಹಿಂದೆಯೇ ಆಯುಕ್ತರು, ಮೇಯರ್‌ ಸೇರಿ ಎಲ್ಲರಿಗೂ ಸಮಸ್ಯೆಗಳಿಗೆ ಪರಿಹಾರ ಕೋರಿ ಮನವಿ ಸಲ್ಲಿಸಿದ್ದೇನೆ. ನಂತರವೂ ಹಲವಾರು ಬಾರಿ ಸಂಬಂಧಿಸಿದ ಅಧಿಕಾರಿಗಳ ಬೆನ್ನು ಬಿದ್ದರೂ ಯಾರೂ ಕ್ಯಾರೇ ಎನ್ನುತ್ತಿಲ್ಲ. ಕೋಟ್ಯಂತರ ರೂ.ಅನುದಾನ ಹರಿದು ಬರುತ್ತಿದ್ದರೂ ಪಾಲಿಕೆ ಅಧಿಕಾರಿಗಳು ಸದಾಶಿವ ನಗರದ ಗಂಭೀರ ಸಮಸ್ಯೆಗಳಿಗೆ ಸ್ಪಂದಿಸುತ್ತಿಲ್ಲ'', ಎಂದು ಆಕ್ರೋಶ ವ್ಯಕ್ತಪಡಿಸಿದ ಸರಳಾ ಹೆರೇಕರ, ಪಾಲಿಕೆ ಆಯುಕ್ತರು ಮತ್ತು ಸಂಬಂಧಿಸಿದ ಅಧಿಕಾರಿ ಸ್ಥಳಕ್ಕೆ ಬಂದು ಭರವಸೆ ನೀಡುವವರೆಗೆ ಕಂಬದಿಂದ ಇಳಿಯುವುದಿಲ್ಲ ಎಂದು ಹಠ ಹಿಡಿದರು.

ನಂತರ ಸ್ಥಳಕ್ಕೆ ಆಗಮಿಸಿದ ಪಾಲಿಕೆ ಆಯುಕ್ತ ಶಶಿಧರ ಕುರೇರ, ಎಇಇ ಎಂ.ವಿ.ಹಿರೇಮಠ ವಾರ್ಡ್‌ ಸಮಸ್ಯೆಗಳಿಗೆ ಶೀಘ್ರ ಪರಿಹಾರ ಕಲ್ಪಿಸುವ ಭರವಸೆ ನೀಡಿದ ನಂತರ ಸರಳಾ ಹೆರೇಕರ ವಿದ್ಯುತ್‌ ಕಂಬದಿಂದ ಕೆಳಗಿಳಿದರು.

ಪೌರ ಕಾರ್ಮಿಕರಿಗೆ ವೇತನ ನೀಡಲು ಹಣವಿಲ್ಲದಿರುವ ಸಂದರ್ಭದಲ್ಲಿ ಶಿಮ್ಲಾ ಪ್ರವಾಸ ಬೇಡ ಎಂದು ಪರಿಷತ್‌ ಸಭೆಯಲ್ಲಿ ಬಹಿರಂಗವಾಗಿ ನಾನು ವಿರೋಧಿಸಿದ್ದನ್ನು ಕೆಲ ನಗರ ಸೇವಕರಿಗೆ ಅರಗಿಸಿಕೊಳ್ಳಲು ಆಗುತ್ತಿಲ್ಲ. ಹಾಗಾಗಿ ಸರಳಾ ಹೆರೇಕರ ವಿರುದ್ಧ ಮಾತನಾಡಲು ಆರಂಭಿಸಿದ್ದಾರೆ. ನಾನು ಹೆಚ್ಚು ಮಾತನಾಡಿದರೆ ಪಾಲಿಕೆ ಸಭೆಯಿಂದ ಸಸ್ಪೆಂಡ್‌ ಮಾಡುವುದಾಗಿ ಹೆದರಿಸುತ್ತಿದ್ದಾರೆ. ಅವರಿಗೆ ತಾಕತ್ತಿದ್ದರೆ ಸಸ್ಪೆಂಡ್‌ ಮಾಡಿ ತೋರಿಸಲಿ.
-ಸರಳಾ ಹೆರೇಕರ. ನಗರ ಸೇವಕಿ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ