ಆ್ಯಪ್ನಗರ

ಮಹದಾಯಿ: ಹೆಚ್ಚುವರಿ ನೀರಿಗಾಗಿ ಸುಪ್ರೀಂಗೆ ಮೇಲ್ಮನವಿ

ಬೆಳಗಾವಿ: ಮಹದಾಯಿ ನದಿ ...

Vijaya Karnataka 27 Sep 2018, 5:00 am
ಬೆಳಗಾವಿ: ಮಹದಾಯಿ ನದಿ ನೀರು ಹಂಚಿಕೆ ಸಂಬಂಧ ಇನ್ನು ಒಂದೂವರೆ ತಿಂಗಳೊಳಗೆ ಸುಪ್ರೀಂ ಕೋಟ್‌ ತಡೆಯಾಜ್ಞೆ ತೆರವು ಮಾಡಿಸಿಕೊಂಡು ಹೆಚ್ಚುವರಿ ನೀರಿಗೆ ಮೇಲ್ಮನವಿ ಸಲ್ಲಿಸುವುದಾಗಿ ಜಲಸಂಪನ್ಮೂಲ ಸಚಿವ ಡಿ.ಕೆ. ಶಿವಕುಮಾರ್‌ ತಿಳಿಸಿದ್ದಾರೆ.
Vijaya Karnataka Web BLG-2609-2-52-26PRAMOD1A


ಖಾನಾಪುರ ತಾಲೂಕಿನ ಕಣಕುಂಬಿಗೆ ಬುಧವಾರ ಭೇಟಿ ನೀಡಿದ ಅವರು, ಮಹದಾಯಿ ನೀರು ಪಡೆಯಲು ನಡೆಯಬೇಕಿರುವ ಕಾಮಗಾರಿ ಸ್ಥಳಗಳ ಪರಿಶೀಲನೆ ನಡೆಸಿ, ಈ ವಿಷಯ ತಿಳಿಸಿದರು.

''ಕಳಸಾ-ಬಂಡೂರಿ ಕಾಮಗಾರಿಗೆ 2017ರ ಆ. 17ರಂದು ಸುಪ್ರೀಂ ಕೋರ್ಟ್‌ ನೀಡಿರುವ ತಡೆಯಾಜ್ಞೆಯನ್ನು ತೆರವುಗೊಳಿಸಬೇಕಿದೆ. ಅದಕ್ಕೆ ಸಿದ್ಧತೆ ನಡೆದಿದ್ದು, ಜತೆಯಲ್ಲೇ ಹೆಚ್ಚುವರಿ ನೀರಿಗಾಗಿ ಮೇಲ್ಮನವಿ ಸಲ್ಲಿಸಲು ತಯಾರಿ ನಡೆಸಿದ್ದೇವೆ'', ಎಂದರು.

''ಸದ್ಯಕ್ಕೆ ಸಿಕ್ಕಿರುವ ನೀರು ಬಳಸಿಕೊಳ್ಳಲು ರಾಜ್ಯ ಸರಕಾರ ಬದ್ಧ. ನ್ಯಾಯಾಧಿಕರಣ ರಾಜ್ಯಕ್ಕೆ ಹಂಚಿಕೆ ಮಾಡಿರುವ ನೀರಿನ ಬಗ್ಗೆ ಗೆಜೆಟ್‌ ನೋಟಿಫಿಕೇಶನ್‌ ಆಗುವುದು ಬಾಕಿ ಇದ್ದು, ಕೇಂದ್ರ ಪರಿಸರ ಮಂತ್ರಾಲಯದಿಂದಲೂ ಪರವಾನಗಿ ಸಿಗಬೇಕಿದೆ. ಈ ಮೂರು ಕೆಲಸಗಳು ಮುಗಿದ ತಕ್ಷಣ ಉಳಿದ ಕಾಮಗಾರಿ ಕೈಗೊಳ್ಳಲಾಗುವುದು. ಅದಕ್ಕಿಂತ ಮೊದಲೇ ನಡೆಸಿದರೆ ನ್ಯಾಯಾಂಗ ನಿಂದನೆಗೆ ಒಳಗಾಗುವ ಅಪಾಯ ಇದೆ'', ಎಂದ ಸಚಿವರು, ಈವರೆಗೆ ಎಷ್ಟು ಪ್ರಮಾಣದ ಕಾಮಗಾರಿ ಪೂರ್ಣಗೊಂಡಿದೆ ಎನ್ನುವ ಮಾಹಿತಿ ನೀಡಲು ನಿರಾಕರಿಸಿದರು.

ಹೋರಾಟ ಮುಂದುವರಿಯಲಿದೆ: ''ಮಹದಾಯಿ ನೀರು ಹಂಚಿಕೆಯಲ್ಲಿ ರಾಜ್ಯಕ್ಕೆ ಅನ್ಯಾಯವಾಗಿದೆ. ಮಹದಾಯಿ ನದಿಯ 188 ಟಿಎಂಸಿ ನೀರು ರಾಜ್ಯದಲ್ಲಿ ಉತ್ಪತ್ತಿಯಾಗುತ್ತದೆ ಎಂದು ನ್ಯಾಯಾಧಿಕರಣವೇ ಒಪ್ಪಿದೆ. ಆದರೆ, ರಾಜ್ಯಕ್ಕೆ 13.42 ಟಿಎಂಸಿ ನೀರು ಮಾತ್ರ ಕೊಟ್ಟು, ಅದರಲ್ಲಿ 8.02 ಟಿಎಂಸಿಯನ್ನು ವಿದ್ಯುತ್‌ ಉತ್ಪಾದನೆಗೆ ಬಳಸಿ ನದಿಗೆ ಬಿಡುವಂತೆ ಹೇಳಿದೆ. ಮೂರು ರಾಜ್ಯಕ್ಕೂ ಹಂಚಿಕೆಯಾಗಿ ಉಳಿಯುವ 140 ಟಿಎಂಸಿ ನೀರು ಸಮುದ್ರಕ್ಕೆ ವ್ಯರ್ಥವಾಗಿ ಹೋಗುತ್ತಿದೆ. ನಮ್ಮ ರಾಜ್ಯದ ಪಾಲಿನ ನೀರು ಕೇಳಲು ಹೋರಾಟ ಮುಂದುವರಿಸುತ್ತೇವೆ. ಈಗಾಗಲೇ ಮುಖ್ಯಮಂತ್ರಿಗಳ ಅಧ್ಯಕ್ಷತೆಯಲ್ಲಿ ಕಾನೂನು ಮತ್ತು ತಾಂತ್ರಿಕರ ತಜ್ಞರೊಂದಿಗೆ ಸಭೆ ನಡೆಸಿದ್ದೇವೆ'', ಎಂದರು.

ಶಾಸಕಿಯರಾದ ಲಕ್ಷ್ಮೀ ಹೆಬ್ಬಾಳಕರ, ಡಾ.ಅಂಜಲಿ ನಿಂಬಾಳ್ಕರ್‌ ಹಾಗೂ ಜಲಸಂಪನ್ಮೂಲ ಇಲಾಖೆಯ ಹಿರಿಯ ಅಧಿಕಾರಿಗಳು ಇದ್ದರು. ಇದೇ ವೇಳೆ ಸಚಿವರು ರೈತರಿಂದಲೂ ಅಹವಾಲು ಆಲಿಸಿದರು. ಈ ಇಬ್ಬರೂ ಶಾಸಕಿಯರು ಮತ್ತು ಸಚಿವರು ಹುಬ್ಬಳ್ಳಿಯಿಂದ ಒಂದೇ ಕಾರಿನಲ್ಲಿ ಬಂದರು. ಆದರೆ ಜಿಲ್ಲಾ ಉಸ್ತುವಾರಿ ಸಚಿವ ರಮೇಶ ಜಾರಕಿಹೊಳಿ ಅತ್ತ ಸುಳಿಯಲಿಲ್ಲ.

250 ಕೋಟಿ ರೂ. ಖರ್ಚು:
''ಮಹದಾಯಿ ನೀರು ಪಡೆಯುವುದಕ್ಕಾಗಿ ಕಳಸಾ-ಬಂಡೂರಿ ನಾಲಾ ವ್ಯಾಪ್ತಿಯಲ್ಲಿ 250 ಕೋಟಿ ರೂ. ವೆಚ್ಚದ ಕಾಮಗಾರಿ ನಡೆಸಲಾಗಿದೆ. ಯೋಜನಾ ವ್ಯಾಪ್ತಿಯ ಕ್ಷೇತ್ರಗಳ ಸಮೀಕ್ಷೆ ನಡೆಸಲು 50 ಲಕ್ಷ ರೂ. ಮೀಸಲಿಡಲಾಗಿದೆ. ಕಳಸಾ-ಬಂಡೂರಿ ಕಾಮಗಾರಿಗೆ 499 ಹೆಕ್ಟೇರ್‌ ಅರಣ್ಯಭೂಮಿ ಹಾಗೂ 191 ಹೆಕ್ಟೇರ್‌ ಖಾಸಗಿ ಜಮೀನು ಅಗತ್ಯವಿದೆ. ಇವುಗಳಿಗೆ ಪರ್ಯಾಯ ಭೂಮಿ ಕೊಡಲು ಸರಕಾರ ಬದ್ಧವಿದೆ. ವಿವಾದಿತ ಪ್ರದೇಶಗಳಲ್ಲಿ ಮಾತ್ರ ಕಾಮಗಾರಿ ಬಾಕಿ ಇದ್ದು, ಸಮಯ ವಿಳಂಬ ಮಾಡದೆ ಕೆಲಸ ಆರಂಭಿಸುತ್ತೇವೆ'', ಎಂದು ಸಚಿವರು ತಿಳಿಸಿದರು.

ಮಹದಾಯಿ ನೀರು ಹಂಚಿಕೆಯಲ್ಲಿ ರಾಜ್ಯ ನ್ಯಾಯ ಸಿಕ್ಕಿದೆ ಎಂದು ಸರಕಾರದ ಪರವಾಗಿ ಹೇಳಲು ತಯಾರಿಲ್ಲ. ಹೆಚ್ಚಿನ ನೀರಿಗಾಗಿ ಕಾನೂನು ಹೋರಾಟ ಮುಂದುವರಿಸುತ್ತೇವೆ.
- ಡಿ.ಕೆ. ಶಿವಕುಮಾರ್‌, ಜಲಸಂಪನ್ಮೂಲ ಸಚಿವ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ