ಆ್ಯಪ್ನಗರ

ಮಹದಾಯಿ ಹೋರಾಟ; ರಾಮದುರ್ಗ ಸಂಪೂರ್ಣ ಬಂದ್‌

ರಾಮದುರ್ಗ : ಮಲಪ್ರಭಾ ನದಿಗೆ ಮಹದಾಯಿ ಹಾಗೂ ಕಳಸಾ ಬಂಡೂರಿ ...

Vijaya Karnataka 17 Jul 2019, 5:00 am
ರಾಮದುರ್ಗ : ಮಲಪ್ರಭಾ ನದಿಗೆ ಮಹದಾಯಿ ಹಾಗೂ ಕಳಸಾ ಬಂಡೂರಿ ನಾಲಾ ಜೋಡಣೆ ವಿಷಯದಲ್ಲಿ ಕೇಂದ್ರ ಹಾಗೂ ರಾಜ್ಯ ಸರಕಾರಗಳು ರೈತ ವಿರೋಧಿ ನೀತಿ ಅನುಸರಿಸುತ್ತಿವೆ ಎಂದು ಆರೋಪಿಸಿ ವಿವಿಧ ಸಂಘಟನೆಗಳ ಕಾರ್ಯಕರ್ತರು ಮಂಗಳವಾರ ರಾಮದುರ್ಗ ಸಂಪೂರ್ಣ ಬಂದ್‌ ಮಾಡಿ ಆಕ್ರೋಶ ವ್ಯಕ್ತಪಡಿಸಿದರು.
Vijaya Karnataka Web BEL-16RD1


ಸ್ಥಳೀಯ ಶಂಕರಲಿಂಗ ದೇವಸ್ಥಾನದಿಂದ ಬೃಹತ್‌ ಪ್ರತಿಭಟನೆ ಮೆರವಣಿಗೆ ಹೊರಟು ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಸರಕಾರಗಳ ವಿರುದ್ಧ ಘೋಷಣೆಗಳನ್ನು ಕೂಗುತ್ತ ಹುತಾತ್ಮ ವೃತ್ತದಲ್ಲಿ ಸಮಾವೇಶಗೊಂಡಿತು. ಮಹದಾಯಿ ಹೋರಾಟ ಸಮನ್ವಯ ಸಮಿತಿ ಅಧ್ಯಕ್ಷ ವೆಂಕಟೇಶ ಹಿರೇರಡ್ಡಿ ಮಾತನಾಡಿ, ಮಹದಾಯಿ ವಿಷಯವಾಗಿ ನ್ಯಾಯಾಧೀರಣ ತೀರ್ಪು ನೀಡಿ 11 ತಿಂಗಳು ಗತಿಸಿದರೂ ಮುಂದಿನ ಸುಧಾರಣೆ ಕ್ರಮ ಕೈಗೊಳ್ಳುವಲ್ಲಿ ಸರಕಾರಗಳು ವಿಫಲವಾಗಿವೆ. ಶೀಘ್ರ ಮಹದಾಯಿ ಯೋಜನೆ ಜಾರಿಗೊಳಿಸದಿದ್ದರೆ ನರಗುಂದ ಮಾದರಿ ಬಂಡಾಯ ನಡೆಸಬೇಕಾಗುತ್ತದೆ ಎಂದು ಎಚ್ಚರಿಸಿದರು.

ರೈತ ಮುಖಂಡ ಶಂಕರಗೌಡ ಪಾಟೀಲ ಮಾತನಾಡಿ, ಕಳೆದ ನಾಲ್ಕು ವರ್ಷಗಳಿಂದ ನೀರಿಗಾಗಿ ಬೀದಿಗಿಳಿದು ಹೋರಾಟ ಮಾಡುತ್ತಿದ್ದರೂ ರಾಜಕಾರಣಿಗಳು ಸ್ಪಂದಿಸುತ್ತಿಲ್ಲ. ಅಧಿಕಾರಕ್ಕಾಗಿ ರೆಸಾರ್ಟ್‌ನಲ್ಲಿ ಮೋಜು ಮಸ್ತಿ ಮಾಡುತ್ತಿದ್ದಾರೆ. ರೈತರ ಬಗ್ಗೆ ಕಿಂಚಿತ್ತು ಕಾಳಜಿ ಇಲ್ಲ ಎಂದು ಕಿಡಿಕಾರಿದರು.

ಕರ್ನಾಟಕ ರೈತ ಸಂಘ ಹಾಗೂ ರೈತ ಸೇನೆಯ ರಾಜ್ಯ ಸಂಚಾಲಕ ಮಲ್ಲಿಕಾರ್ಜುನ ರಾಮದುರ್ಗ, ತಾಲೂಕಾ ಅಧ್ಯಕ್ಷ ಶಿವಾನಂದ ದೊಡವಾಡ, ರೈತ ಸೇನಾ ಅಧ್ಯಕ್ಷ ಜಗದೀಶ ದೇವರಡ್ಡಿ, ಜಯ ಕರ್ನಾಟಕ ರಕ್ಷ ಣಾ ವೇದಿಕೆ ಅಧ್ಯಕ್ಷ ವಿಜಯಕುಮಾರ ರಾಠೋಡ, ಮುಖಂಡ ಮಲ್ಲಣ್ಣ ಯಾದವಾಡ ಮಾತನಾಡಿದರು. ಲಕನಾಯಕನಕೊಪ್ಪ ಪೂರ್ಣಾನಂದ ಮಠದ ಕೃಷ್ಣಾನಂದ ಸ್ವಾಮೀಜಿ ಹಾಗೂ ಮುಸ್ಲಿಂ ಧರ್ಮಗುರು ಮೌಲಾನಾ ಜಹೂರ ಹಾಜಿ ಪ್ರತಿಭಟನೆಯಲ್ಲಿ ಭಾಗವಹಿಸಿ ಬೆಂಬಲ ಸೂಚಿಸಿದರು.

ತಹಸೀಲ್ದಾರ ಬಸನಗೌಡ ಕೋಟೂರ ಪ್ರತಿಭಟನೆ ಸ್ಥಳಕ್ಕೆ ಆಗಮಿಸಿ ರೈತ ಸಂಘಟನೆಗಳಿಂದ ಮನವಿ ಸ್ವೀಕರಿಸಿದರು. ಕರವೇ ದುಂಡಯ್ಯ ಹಿರೇಮಠ, ಜಯಕರ್ನಾಟಕ ಸಂಘದ ಉಪಾಧ್ಯಕ್ಷ ಕೃಷ್ಣಾ ಬಡಿಗೇರ, ಮುಖಂಡರಾದ ಆರ್‌.ಸಿ. ಪತ್ತೆಪುರ, ಎಚ್‌.ಎಸ್‌. ಪಾಟೀಲ, ಆನಂದ ಜಗತಾಪ, ಸಿ.ಎಸ್‌. ಹಿರೇಮಠ, ಶಂಕರಣ್ಣ ಮುರಡಿ, ಗಿರಿಯಪ್ಪ ಹಂಜಿ, ಬಾಳಪ್ಪ ರಡರಟ್ಟಿ, ದಾದಾಪೀರ ಹಾಜಿ, ಶಶಿಕಾಂತ ನೆಲ್ಲೂರ, ಈರಣ್ಣ ಕಲ್ಯಾಣಿ, ಬಸವರಾಜ ಕೊನನ್ನವರ ಮತ್ತಿತರರು ಉಪಸ್ಥಿತರಿದ್ದರು.

ಸಾರಿಗೆ ಸಂಚಾರ ಸ್ಥಗಿತ :
ಮಹದಾಯಿಗಾಗಿ ರೈತ ಪರ ಸಂಘಟನೆಗಳು ನೀಡಿದ್ದ ರಾಮದುರ್ಗ ಬಂದ್‌ ಕರೆ ಹಿನ್ನೆಲೆಯಲ್ಲಿ ಬೆಳಗ್ಗೆ 10 ಗಂಟೆಯಿಂದ ಸಾರಿಗೆ ಸಂಚಾರ ಸ್ಥಗಿತಗೊಂಡಿತ್ತು. ವ್ಯಾಪಾರಸ್ಥರು ಸ್ವಯಂ ಪ್ರೇರಿತವಾಗಿ ತಮ್ಮ ಅಂಗಡಿಗಳನ್ನು ಬಂದ್‌ ಮಾಡಿ ಬೆಂಬಲ ಸೂಚಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ