ಆ್ಯಪ್ನಗರ

ಮರಾಠಿ ಭಾಷೆಯಲ್ಲಿ ದಾಖಲೆ ನೀಡಲು ಎಂಇಎಸ್‌ ಆಗ್ರಹ

ಬೆಳಗಾವಿ: ಮರಾಠಿ ಭಾಷೆಯಲ್ಲಿ ಸರಕಾರಿ ದಾಖಲೆಗಳನ್ನು ಒದಗಿಸುವಂತೆ ಒತ್ತಾಯಿಸಿ ಸೋಮವಾರ ...

Vijaya Karnataka 16 Jul 2019, 5:00 am
ಬೆಳಗಾವಿ : ಮರಾಠಿ ಭಾಷೆಯಲ್ಲಿ ಸರಕಾರಿ ದಾಖಲೆಗಳನ್ನು ಒದಗಿಸುವಂತೆ ಒತ್ತಾಯಿಸಿ ಸೋಮವಾರ ಮಹಾರಾಷ್ಟ್ರ ಏಕೀಕರಣ ಸಮಿತಿ (ಎಂಇಎಸ್‌) ಮುಖಂಡರು ನಗರದ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಪ್ರತಿಭಟನೆ ನಡೆಸಿ, ಜಿಲ್ಲಾಧಿಕಾರಿ ಎಸ್‌.ಬಿ. ಬೊಮ್ಮನಹಳ್ಳಿಯವರಿಗೆ ಮನವಿ ಸಲ್ಲಿಸಿದರು.
Vijaya Karnataka Web BEL-15 LBS 6


ಮನವಿ ಸ್ವೀಕರಿಸಿ ಮಾತನಾಡಿದ ಜಿಲ್ಲಾಧಿಕಾರಿ, ಗಡಿಭಾಗದ ವಿಷಯ ನ್ಯಾಯಾಲಯದಲ್ಲಿದ್ದು, ಈಗ ಚರ್ಚೆ ಮಾಡುವುದು ಸರಿಯಲ್ಲ. ಕರ್ನಾಟಕದಲ್ಲಿ ಕನ್ನಡಕ್ಕೆ ಮೊದಲ ಆದ್ಯತೆ ನೀಡಬೇಕು ಎಂದು ಎಂಇಎಸ್‌ ಮುಖಂಡರಿಗೆ ತಿಳಿಹೇಳಿದರು.

ಅಥಣಿ, ಚಿಕ್ಕೋಡಿ, ನಿಪ್ಪಾಣಿ, ಖಾನಾಪುರ ಗಡಿಭಾಗದ ಜನರಿಗೆ ಕನ್ನಡ ಭಾಷೆಯಲ್ಲಿ ದಾಖಲೆಗಳನ್ನು ನೀಡುತ್ತಿರುವುದರಿಂದ ಸಮಸ್ಯೆಯಾಗುತ್ತಿದೆ. ಭಾಷಾ ಅಲ್ಪಸಂಖ್ಯಾತರಿಗೆ ಮರಾಠಿ ಭಾಷೆಯಲ್ಲಿ ದಾಖಲೆ ನೀಡಬೇಕು ಎಂದು ಎಂಇಎಸ್‌ ಮುಖಂಡರು ಆಗ್ರಹಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿ, ''ನಾವು ಸರಕಾರದ ಆದೇಶ ಪಾಲಿಸುತ್ತಿದ್ದೇವೆ. ನೀವು ಕನ್ನಡ ಭಾಷೆಯಲ್ಲಿ ವ್ಯವಹರಿಸಬೇಕು. ಭಾಷಾ ಅಲ್ಪಸಂಖ್ಯಾತರಿಗೆ ಮರಾಠಿ ಭಾಷೆಯಲ್ಲಿ ದಾಖಲೆ ನೀಡುವಂತೆ ಸೂಕ್ತ ದಾಖಲೆ ಇದ್ದರೆ ಸಲ್ಲಿಸಿ'' ಎಂದು ತಿಳಿಸಿದರು.

ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿನ ವ್ಯಾಪಾರ ಮಳಿಗೆಗಳ ನಾಮಫಲಕ ಕನ್ನಡದಲ್ಲಿ ಹಾಕುವಂತೆ ಅಧಿಕಾರಿಗಳು ಒತ್ತಾಯಿಸುತ್ತಿದ್ದಾರೆ. ಮರಾಠಿ ಭಾಷೆ ಬಳಸಲು ಅವಕಾಶ ನೀಡಬೇಕು ಎಂದು ಎಂಇಎಸ್‌ ಮುಖಂಡರು ಆಗ್ರಹಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ಜಿಪಂ ಸಿಇಒ ಡಾ. ಕೆ.ವಿ.ರಾಜೇಂದ್ರ, ಕನ್ನಡ ಅಭಿವೃದ್ಧಿ ಪ್ರಾಧಿಕಾರ ಮತ್ತು ಸರಕಾರದ ನಿರ್ದೇಶನದಂತೆ ನಾಮಫಲಕದಲ್ಲಿ ಶೇ.60 ಕನ್ನಡ ಹಾಗೂ ಶೇ.40 ಅನ್ಯ ಭಾಷೆ ಬಳಸಬಹುದು ಎಂಬ ನಿಯಮವಿದೆ. ಅದರಂತೆ ನೀವು ನಡೆದುಕೊಳ್ಳಬೇಕು ಎಂದರು.

ಮಾಜಿ ಶಾಸಕ ಮನೋಹರ ಕಿಣೇಕರ, ಜಿಪಂ ಸದಸ್ಯೆ ಸರಸ್ವತಿ ಪಾಟೀಲ, ಎಂಇಎಸ್‌ ಮುಖಂಡರಾದ ಮಾರುತಿರಾವ ಅಷ್ಟೇಕರ, ಮಾಧುರಿ ಹೆಗಡೆ ಮತ್ತಿತರರು ಇದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ