ಆ್ಯಪ್ನಗರ

ಮೋದಿ ಸಭೆಗೆ 2 ಲಕ್ಷ ಜನ: ಸುರೇಶ ಅಂಗಡಿ

Vijaya Karnataka 5 May 2018, 5:00 am

ಬೆಳಗಾವಿ: ಮೇ 9ರಂದು ಬೆಳಗಾವಿಗೆ ಆಗಮಿಸಲಿರುವ ಪ್ರಧಾನಿ ನರೇಂದ್ರ ಮೋದಿ, ಸಂಜೆ 4 ಗಂಟೆಗೆ ಬಿ.ಎಸ್‌.ಯಡಿಯೂರಪ್ಪ ಮಾರ್ಗದ ಖುಲ್ಲಾ ಜಾಗದಲ್ಲಿ ಹಾಕಿರುವ ಬೃಹತ್‌ ವೇದಿಕೆಯಲ್ಲಿ ಪಕ್ಷದ ಅಭ್ಯರ್ಥಿಗಳ ಪರ ಸಾರ್ವಜನಿಕರನ್ನುದ್ದೇಶಿಸಿ ಮಾತನಾಡಲಿದ್ದಾರೆ ಎಂದು ಸಂಸದ ಸುರೇಶ ಅಂಗಡಿ ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಶುಕ್ರವಾರ ಮಾತನಾಡಿದ ಅವರು, ''ಗೋಕಾಕ ಪಟ್ಟಣದಲ್ಲಿ ಮೋದಿ ಅವರ ಪ್ರಚಾರ ಸಭೆ ನಡೆಸುವ ಸಂಬಂಧ ಸ್ಥಳ ಪರಿಶೀಲನೆ ಕೈಗೊಳ್ಳಲಾಗಿತ್ತಾದರೂ ಇದೀಗ ಬೆಳಗಾವಿ ನಗರದ ಹೊರ ವಲಯದಲ್ಲಿ ಪ್ರಚಾರ ಸಭೆ ನಡೆಸಲು ನಿರ್ಧರಿಸಲಾಗಿದೆ'', ಎಂದರು.

''ಬೆಳಗಾವಿ ಲೋಕಸಭಾ ಕ್ಷೇತ್ರದ ವ್ಯಾಪ್ತಿಯ ಖಾನಾಪುರ, ರಾಮದುರ್ಗ, ಸವದತ್ತಿ, ಬೈಲಹೊಂಗಲ, ಚನ್ನಮ್ಮನ ಕಿತ್ತೂರು, ಗೋಕಾಕ, ಅರಬಾವಿ, ಬೆಳಗಾವಿ ಗ್ರಾಮೀಣ, ಬೆಳಗಾವಿ ದಕ್ಷಿಣ ಮತ್ತು ಉತ್ತರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ 2 ಲಕ್ಷಕ್ಕೂ ಹೆಚ್ಚು ಜನರು ಮೋದಿ ಪ್ರಚಾರ ಸಭೆಯಲ್ಲಿ ಭಾಗವಹಿಸಲಿದ್ದಾರೆ. ಶಾಸಕರು, ಸಂಸದರು, ಸ್ಥಳೀಯ ಸಂಸ್ಥೆಗಳ ಪ್ರತಿನಿಧಿಗಳು ಪಾಲ್ಗೊಳ್ಳಲಿದ್ದಾರೆ'', ಎಂದು ಮಾಹಿತಿ ನೀಡಿದರು.

ಮೇ 6ರಂದು ಬೆಳಗ್ಗೆ 11 ಗಂಟೆಯಿಂದ ಬೆಳಗಾವಿ ದಕ್ಷಿಣ ವಿಧಾನಸಭಾ ಕ್ಷೇತ್ರದಲ್ಲಿ ಕೇಂದ್ರದ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್‌ ಬಿಜೆಪಿ ಅಭ್ಯರ್ಥಿ ಅಭಯ ಪಾಟೀಲ ಪರ ಮತಯಾಚನೆ ಮಾಡಲಿದ್ದಾರೆ. ಈಗಾಗಲೇ ಬೆಳಗಾವಿ ಉತ್ತರ ಕ್ಷೇತ್ರದಲ್ಲಿ ಕೇಂದ್ರ ಸಚಿವೆ ಸ್ಮೃತಿ ಇರಾನಿ ಪ್ರಚಾರ ಸಭೆ ನಡೆಸಿರುವ ಹಿನ್ನೆಲೆಯಲ್ಲಿ ಈಗ ಸುಷ್ಮಾ ಸ್ವರಾಜ್‌ ದಕ್ಷಿಣದಲ್ಲಿ ಮಾತ್ರ ಪ್ರಚಾರ ನಡೆಸಲಿದ್ದಾರೆ ಎಂದ ಅಂಗಡಿ, ಅಂದು ಸಂಜೆ 4ಕ್ಕೆ ಬೆಳಗಾವಿ ದಕ್ಷಿಣ ಮತ್ತು ಉತ್ತರ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಶಾ ರೋಡ್‌ ಶೋ ನಡೆಸುತ್ತಾರೆ ಎಂದು ತಿಳಿಸಿದರು.

ಬಂಡಾಯ ಅಭ್ಯರ್ಥಿಗಳ ವಿರುದ್ಧ ಈಗಾಗಲೇ ಪಕ್ಷ ಕ್ರಮ ಕೈಗೊಂಡಿದ್ದು, ಪಕ್ಷ ವಿರೋಧಿ ಚಟುವಟಿಕೆ ನಡೆಸುವವರ ವಿರುದ್ಧವೂ ನಾಯಕರು ಕ್ರಮ ಕೈಗೊಳ್ಳುತ್ತಾರೆ. ಕೇಂದ್ರ ಸರಕಾರ ಸ್ಮಾರ್ಟ್‌ ಸಿಟಿ ಯೋಜನೆಗೆ ಕೋಟ್ಯಂತರ ರೂ. ಅನುದಾನ ಬಿಡುಗಡೆ ಮಾಡಿದ್ದರೂ ಸ್ಥಳೀಯ ಶಾಸಕರು ಸಮರ್ಪಕವಾಗಿ ಬಳಕೆ ಮಾಡಿಕೊಂಡಿಲ್ಲ. ಬಿಜೆಪಿ ಜನಪ್ರತಿನಿಧಿಗಳನ್ನು ದೂರವಿಟ್ಟು ಕೆಲಸ ಮಾಡುವ ಮೂಲಕ ಕಾಂಗ್ರೆಸ್‌ ಒಡೆದು ಆಳುವ ನೀತಿ ನಡೆಸಿದೆ ಎಂದು ಸುರೇಶ ಅಂಗಡಿ ಹೇಳಿದರು.

Vijaya Karnataka Web modis meeting with 2 lakh people
ಮೋದಿ ಸಭೆಗೆ 2 ಲಕ್ಷ ಜನ: ಸುರೇಶ ಅಂಗಡಿ


ಬಿಜೆಪಿ ರೈತ ಮೋರ್ಚಾ ಕಾರ್ಯದರ್ಶಿ ಶಂಕರಗೌಡ ಪಾಟೀಲ, ಎಂ.ಬಿ.ಜಿರಲಿ, ಆರ್‌.ಎಸ್‌.ಮುತಾಲಿಕ, ಬಸವರಾಜ ರೊಟ್ಟಿ ಉಪಸ್ಥಿತರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ