ಆ್ಯಪ್ನಗರ

ನಕ್ಸಲ್‌ ದಾಳಿ; ಖಾನಾಪುರದ ಯೋಧ ಹುತಾತ್ಮ

ಖಾನಾಪುರ: ಪಶ್ಚಿಮ ಬಂಗಾಳದಲ್ಲಿ ನಕ್ಸಲರು ನಡೆಸಿದ ದಾಳಿಗೆ ಖಾನಾಪುರದ ನಿವಾಸಿ, ಯೋಧ ರಾಹುಲ್‌ ವಸಂತ ಶಿಂಧೆ ...

Vijaya Karnataka 18 Mar 2019, 5:00 am
ಖಾನಾಪುರ : ಪಶ್ಚಿಮ ಬಂಗಾಳದಲ್ಲಿ ನಕ್ಸಲರು ನಡೆಸಿದ ದಾಳಿಗೆ ಖಾನಾಪುರದ ನಿವಾಸಿ, ಯೋಧ ರಾಹುಲ್‌ ವಸಂತ ಶಿಂಧೆ (25) ಹುತಾತ್ಮರಾಗಿದ್ದಾರೆ.
Vijaya Karnataka Web BEL-17KHANAPUR1


ಬಿಎಸ್‌ಎಫ್‌ 117ನೇ ಬಟಾಲಿಯನ್‌ ಯೋಧರು ರಾತ್ರಿ ಪಾಳಿ ಮುಗಿಸಿ ತಮ್ಮ ಟೆಂಟ್‌ನತ್ತ ಹೊರಟಿದ್ದ ವೇಳೆ ನಕ್ಸಲರು ನಡೆಸಿದ ಗುಂಡಿನ ದಾಳಿಯಲ್ಲಿ ರಾಹುಲ್‌ ಸೇರಿದಂತೆ ಒಟ್ಟು ನಾಲ್ವರು ಯೋಧರು ಹುತಾತ್ಮರಾಗಿದ್ದಾರೆ.

ರಾಹುಲ್‌ ಹುತಾತ್ಮರಾದ ಬಗ್ಗೆ ಬಿಎಸ್‌ಎಫ್‌ ಅಧಿಕಾರಿಗಳು ಭಾನುವಾರ ಮಧ್ಯಾಹ್ನ ರಾಹುಲ್‌ ತಂದೆ ವಸಂತ ಶಿಂಧೆ ಅವರಿಗೆ ಮಾಹಿತಿ ನೀಡಿದ್ದಾರೆ. ಮರಣೋತ್ತರ ಪರೀಕ್ಷೆ ಬಳಿಕ ಹುತಾತ್ಮ ರಾಹುಲ್‌ ಅವರ ಪಾರ್ಥಿವ ಶರೀರವನ್ನು ಪಶ್ಚಿಮ ಬಂಗಾಳದಿಂದ ವಿಶೇಷ ವಾಹನದಲ್ಲಿ ಕೋಲ್ಕತ್ತ ನಗರಕ್ಕೆ ರವಾನಿಸಲಾಗಿದೆ. ಅಲ್ಲಿಂದ ವಿಮಾನದ ಮೂಲಕ ಮಧ್ಯರಾತ್ರಿ ಗೋವಾ ವಿಮಾನ ನಿಲ್ದಾಣ ತಲುಪಲಿದೆ. ಅಲ್ಲಿಂದ ರಸ್ತೆ ಮಾರ್ಗವಾಗಿ ಸೋಮವಾರ ಬೆಳಗ್ಗೆ ತಾಲೂಕಿಗೆ ಬರುವ ನಿರೀಕ್ಷೆಯಿದ್ದು, ಮಧ್ಯಾಹ್ನ ನಾವಗಾ ಗ್ರಾಮದಲ್ಲಿ ಅಂತ್ಯಕ್ರಿಯೆ ನಡೆಯಲಿದೆ.

ಮೌನ: ರಾಹುಲ್‌ ಸಾವಿನ ಸುದ್ದಿ ತಿಳಿಯುತ್ತಿದ್ದಂತೆ ನಾವಗಾ ಗ್ರಾಮದಲ್ಲಿ ನೀರವ ಮೌನ ಆವರಿಸಿದೆ. ರಾಹುಲ್‌ ಅವರ ಮನೆಗೆ ಬಿಜೆಪಿ ಮುಖಂಡ ಜ್ಯೋತಿಬಾ ರೇಮಾಣಿ, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಪುಂಡಲೀಕ ಕಾರಲಗೇಕರ ಮತ್ತಿತರರು ತೆರಳಿ ಸಾಂತ್ವನ ಹೇಳಿದರು. ತಾಲೂಕು ಆಡಳಿತ ಮತ್ತು ಪೊಲೀಸ್‌ ಇಲಾಖೆಯವರು ಗ್ರಾಮಕ್ಕೆ ಭೇಟಿ ನೀಡಿ ಅಂತ್ಯಕ್ರಿಯೆ ಸಿದ್ಧತೆಗಳ ಬಗ್ಗೆ ಪರಿಶೀಲನೆ ನಡೆಸಿದ್ದಾರೆ.

ದೇಶ ಸೇವಕರು :
2012ರಲ್ಲಿ ಗಡಿ ಭದ್ರತಾ ಪಡೆಯ 117ನೇ ಯೂನಿಟ್‌ನಲ್ಲಿ ಯೋಧನಾಗಿ ದೇಶಸೇವೆ ಪ್ರಾರಂಭಿಸಿದ್ದ ರಾಹುಲ್‌ ಶಿಂಧೆ ಪಂಜಾಬ್‌ ರಾಜ್ಯದ ವಿಶಾಲಪುರನಲ್ಲಿ ತರಬೇತಿ ಪಡೆದಿದ್ದರು. ಬಳಿಕ ಕಾಶ್ಮೀರ್‌, ಪಂಜಾಬ್‌ ಮತ್ತು ಜಮ್ಮುವಿನಲ್ಲಿ ಸೇವೆ ಸಲ್ಲಿಸಿ ಕಳೆದ ಅಕ್ಟೋಬರ್‌ನಲ್ಲಿ ಪಶ್ಚಿಮ ಬಂಗಾಳ ರಾಜ್ಯದ ಯೂನಿಟ್‌ನಲ್ಲಿ ಕರ್ತವ್ಯಕ್ಕೆ ಹಾಜರಾಗಿದ್ದರು. ತಾಲೂಕಿನಲ್ಲಿ ಪದವಿಯವರೆಗೆ ಶಿಕ್ಷ ಣ ಪೂರೈಸಿದ್ದ ರಾಹುಲ್‌ ತಂದೆ ವಸಂತ ಕೃಷಿಕರಾಗಿದ್ದು, ತಾಯಿ ಸುಜಾತಾ ಗೃಹಿಣಿ. ಇವರಿಗೆ ಒಬ್ಬ ಸಹೋದರ ಮತ್ತು ಓರ್ವ ಸಹೋದರಿ ಇದ್ದಾರೆ. ಸಹೋದರ ಇಂಡೋ ಟಿಬೇಟಿಯನ್‌ ಬಾರ್ಡರ್‌ ಪೊಲೀಸ್‌ ಸೇವೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಅಲ್ಲದೇ ರಾಹುಲ್‌ ತಂದೆ ವಸಂತ್‌ ಅವರ ಸಹೋದರರಾದ ಮಧುಕರ, ರಾಮಕೃಷ್ಣ ಅವರೂ ಸಹ ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿದ್ದಾರೆ. ಅವರ ಮಕ್ಕಳಾದ ರಾಮಚಂದ್ರ ಮತ್ತು ದಿನೇಶ ಅವರೂ ಯೋಧರಾಗಿದ್ದಾರೆ. ಒಟ್ಟಾರೆ ಶಿಂಧೆ ಕುಟುಂಬದ ಹಲವು ಸದಸ್ಯರು ದೇಶಸೇವೆಯಲ್ಲಿರುವುದು ವಿಶೇಷ.

ನಿಶ್ಚಿತಾರ್ಥ ನಡೆದಿತ್ತು :
ವಸಂತ-ಸುಜಾತಾ ಕಿರಿಯ ಪುತ್ರ ರಾಹುಲ್‌ ಅವರ ವಿವಾಹ ತಾಲೂಕಿನ ಚಾಪಗಾಂವ ಗ್ರಾಮದ ಯುವತಿಯೊಂದಿಗೆ ನಿಶ್ಚಯವಾಗಿತ್ತು. ಕಳೆದ ಡಿ.14ರಂದು ನಿಶ್ಚಿತಾರ್ಥವೂ ನಡೆದಿತ್ತು. ಇದೇ ಮೇ ತಿಂಗಳ ಬೇಸಿಗೆ ರಜೆಯಲ್ಲಿ ರಾಹುಲ್‌ ಮದುವೆ ನಡೆಯಬೇಕಿತ್ತು. ಕಳೆದ ಡಿಸೆಂಬರ್‌ ತಿಂಗಳಲ್ಲಿ ನಿಶ್ಚಿತಾರ್ಥಕ್ಕೆಂದು ಹದಿನೈದು ದಿನಗಳ ಕಾಲ ಊರಿಗೆ ಬಂದಿದ್ದ ರಾಹುಲ್‌ ತಂದೆಯೊಂದಿಗೆ ತಮ್ಮ ಕೃಷಿ ಜಮೀನಿನಲ್ಲಿ ಕೆಲದಿನಗಳ ಕಾಲ ಕೆಲಸ ನಿರ್ವಹಿಸಿದ್ದರು. ಮುಂದಿನ ಮೇ ತಿಂಗಳಲ್ಲಿ ರಜೆ ಹಾಕಿ ಮದುವೆಗಾಗಿ ಮನೆಗೆ ಬರುವುದಾಗಿ ಹೇಳಿದ್ದ ಅವರು ಈಗ ಮರಳಿ ಬಾರದ ಲೋಕಕ್ಕೆ ತೆರಳಿದ್ದಾರೆ ಎಂದು ರಾಹುಲ್‌ ಅವರ ಹತ್ತಿರದ ಸಂಬಂಧಿ ಪುಂಡಲೀಕ ಚೋಪಡೆ ಹೇಳಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ