ಆ್ಯಪ್ನಗರ

ಗೋವಾ ಗಡಿನಾಡ ಕಸಾಪಕ್ಕೆ ಆರಂಭದಲ್ಲೇ ಅಪಸ್ವರ

ಬೆಳಗಾವಿ/ಪಣಜಿ: ಬರೋಬ್ಬರಿ 20 ವರ್ಷಗಳ ನಂತರ ಗೋವಾ ರಾಜ್ಯದಲ್ಲಿ ಅಸ್ತಿತ್ವಕ್ಕೆ ಬರುತ್ತಿರುವ ಕನ್ನಡ ಸಾಹಿತ್ಯ ...

Vijaya Karnataka 6 Sep 2018, 5:00 am
ಬೆಳಗಾವಿ/ಪಣಜಿ: ಬರೋಬ್ಬರಿ 20 ವರ್ಷಗಳ ನಂತರ ಗೋವಾ ರಾಜ್ಯದಲ್ಲಿ ಅಸ್ತಿತ್ವಕ್ಕೆ ಬರುತ್ತಿರುವ ಕನ್ನಡ ಸಾಹಿತ್ಯ ಪರಿಷತ್‌ನ ಗೋವಾ ಗಡಿನಾಡು ಘಟಕಕ್ಕೆ ಉದ್ಘಾಟನೆಗೂ ಮುನ್ನವೇ ಅಪಸ್ವರ ಎದ್ದಿದೆ.
Vijaya Karnataka Web objection in begining to goa kasapa unit
ಗೋವಾ ಗಡಿನಾಡ ಕಸಾಪಕ್ಕೆ ಆರಂಭದಲ್ಲೇ ಅಪಸ್ವರ


ಸ್ಥಳೀಯ ಕನ್ನಡ ಪರ ಸಂಘಟನೆಗಳ ಮುಖಂಡರ ವಿಶ್ವಾಸ ಪಡೆಯದೆ ಗೋವಾ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಗಿದೆ. ಆ ಮೂಲಕ ಕನ್ನಡಿಗರ ಒಗ್ಗಟ್ಟು ಒಡೆಯುವ ಯತ್ನ ಮಾಡಲಾಗುತ್ತಿದೆ ಎಂದು ಅಖಿಲ ಗೋವಾ ಕನ್ನಡ ಮಹಾಸಂಘ ಆಕ್ಷೇಪಿಸಿದೆ. ಅಲ್ಲದೆ, ಉದ್ಘಾಟನಾ ಸಮಾರಂಭವನ್ನು ಕೂಡಲೇ ಸ್ಥಗಿತಗೊಳಿಸಬೇಕು. ಇಲ್ಲದಿದ್ದರೆ, ಸಮಾರಂಭದ ವೇಳೆ ಕಪ್ಪು ಬಾವುಟ ಪ್ರದರ್ಶಿಸುವುದಾಗಿ ಮಹಾಸಂಘದ ಅಧ್ಯಕ್ಷ ಹನುಮಂತಪ್ಪ ಶಿರೂರ ಎಚ್ಚರಿಸಿದ್ದಾರೆ.

ಗೋವಾದಲ್ಲಿ 1998ರಲ್ಲಿಯೇ ಕಸಾಪ ಘಟಕ ಸ್ಥಾಪಿಸಲು ಕರ್ನಾಟಕ ಸರಕಾರ ನಿರ್ಧರಿಸಿತ್ತು. 20 ವರ್ಷಗಳಿಂದ ನನೆಗುದಿಗೆ ಬಿದ್ದಿದ್ದ ಈ ಪ್ರಸ್ತಾವವನ್ನು ಈಗ ಅನುಷ್ಠಾನ ಮಾಡಲಾಗುತ್ತಿದೆ. ಈವರೆಗೆ ಗೋವಾದಲ್ಲಿ 450 ಮಂದಿ ಕಸಾಪ ಸದಸ್ಯರಿದ್ದಾರೆ. ಅದರಲ್ಲಿ ವಿಜಯ ಶೆಟ್ಟಿ ಎನ್ನುವವರನ್ನು ಗೋವಾ ಘಟಕದ ಅಧ್ಯಕ್ಷರನ್ನಾಗಿ ನಾಮನಿರ್ದೇಶನ ಮಾಡಲಾಗಿದ್ದು, ಕಾರ್ಯದರ್ಶಿ, ಕೋಶಾಧ್ಯಕ್ಷ ಸೇರಿ ಇತರ ಪದಾಧಿಕಾರಿಗಳ ಆಯ್ಕೆಯೂ ನಡೆದಿದೆ.

ಈ ಎಲ್ಲ ಪ್ರಕ್ರಿಯೆ ಸ್ಥಳೀಯ ಕನ್ನಡ ಸಂಘಟನೆಗಳ ಗಮನಕ್ಕೆ ತರಬೇಕಿತ್ತು ಎನ್ನುವುದು ಅಲ್ಲಿನ ಕನ್ನಡ ಸಂಘಟನೆಗಳ ದೂರು. ''ಆದರೆ, ಆಕ್ಷೇಪ ಮಾಡುತ್ತಿರುವ ಕನ್ನಡ ಸಂಘಟನೆಗಳ ಪೈಕಿ ಯಾರೊಬ್ಬರೂ ಕಸಾಪ ಸದಸ್ಯರಿಲ್ಲ. ಘಟಕ ಸ್ಥಾಪನೆಗೆ ಕಳೆದೊಂದು ವರ್ಷದಿಂದ ಚಟುವಟಿಕೆ ಚುರುಕುಗೊಳಿಸಿದ್ದರೂ ಒಬ್ಬರೂ ಕಸಾಪವನ್ನು ಸಂಪರ್ಕಿಸಿಲ್ಲ. ಹೀಗಿರುವಾಗ ಸದಸ್ಯರಲ್ಲದವರನ್ನು ಕಸಾಪ ವ್ಯಾಪ್ತಿಯೊಳಗೆ ಪರಿಗಣಿಸಲು ಹೇಗೆ ಸಾಧ್ಯ'', ಎನ್ನುವುದು ಕಸಾಪ ಅಧ್ಯಕ್ಷ ಮನು ಬಳಿಗಾರ ಅವರ ಪ್ರಶ್ನೆ.

''ಅಲ್ಲದೆ, ಈಗ ಆಯ್ಕೆ ಮಾಡಿರುವ ನೂತನ ಅಧ್ಯಕ್ಷರು ಗೋವಾದಲ್ಲಿ ಕಸಾಪಕ್ಕೆ ಉಚಿತ ಕಚೇರಿ, ಸಭೆಗಳ ಆರಂಭಿಕ ಖರ್ಚು ನೋಡಿಕೊಳ್ಳುತ್ತಿದ್ದಾರೆ. ಇದೆಲ್ಲವನ್ನು ಕಸಾಪದಿಂದ ಮೊದಲೇ ನಡೆಸಲು ಆಗುವುದಿಲ್ಲ. ಕಸಾಪ ಯಾವ ಕನ್ನಡಿಗರನ್ನೂ ಒಡೆಯುತ್ತಿಲ್ಲ. ಉದ್ಘಾಟನೆ ಸಮಾರಂಭ ಖಂಡಿತ ನಡೆಸುತ್ತೇವೆ. ಕನ್ನಡದ ಕೆಲಸಕ್ಕೆ ಅಡ್ಡಿ ಮಾಡುವ ಆಸೆ ಇದ್ದವರು ಮಾಡಲಿ'', ಎಂದು ಮನು ಬಳಿಗಾರ 'ವಿಕ'ಕ್ಕೆ ಸ್ಪಷ್ಟಪಡಿಸಿದ್ದಾರೆ.

ಪಾಪು ಅಧ್ಯಕ್ಷತೆ: ಪಣಜಿಯ ದಯಾನಂದ ಬಾಂದೋಡ್ಕರ್‌ ಮಾರ್ಗದಲ್ಲಿರುವ ಕಲಾ ಅಕಾಡೆಮಿಯಲ್ಲಿ ಸೆ. 9ರ ಬೆಳಗ್ಗೆ 10ಕ್ಕೆ ಗೋವಾ ಕಸಾಪ ಘಟಕದ ಉದ್ಘಾಟನಾ ಕಾರ್ಯಕ್ರಮ ನಡೆಯಲಿದೆ. ಪಾಟೀಲ್‌ ಪುಟ್ಟಪ್ಪ ಅಧ್ಯಕ್ಷತೆ ವಹಿಸಲಿದ್ದು, ಮನು ಬಳಿಗಾರ್‌ ಉದ್ಘಾಟಿಸಲಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ