ಆ್ಯಪ್ನಗರ

ವಾಹನ ಸವಾರರ ನಿರ್ಲಕ್ಷ ್ಯದಿಂದ ರಸ್ತೆ ಅಪಘಾತ

ಬೆಳಗಾವಿ : ದೇಶದಲ್ಲಿ ನಡೆಯುತ್ತಿರುವ ರಸ್ತೆ ಅಪಘಾತಗಳಲ್ಲಿ ರಾಜ್ಯ ನಾಲ್ಕನೇ ಸ್ಥಾನದಲ್ಲಿದೆ. ಶೇ.10.82ಯುವಕರು ...

Vijaya Karnataka 3 Mar 2019, 5:00 am
ಬೆಳಗಾವಿ : ದೇಶದಲ್ಲಿ ನಡೆಯುತ್ತಿರುವ ರಸ್ತೆ ಅಪಘಾತಗಳಲ್ಲಿ ರಾಜ್ಯ ನಾಲ್ಕನೇ ಸ್ಥಾನದಲ್ಲಿದೆ. ಶೇ.10.82ಯುವಕರು 18ಕ್ಕಿಂತ ಕಡಿಮೆ ವಯಸ್ಸಿನಲ್ಲಿಯೇ ರಸ್ತೆ ಅಪಘಾತಗಳಲ್ಲಿ ಮರಣ ಹೊಂದುತ್ತಿದ್ದಾರೆ ಎಂದು ನಗರ ಪೊಲೀಸ್‌ ಆಯುಕ್ತ ಬಿ.ಎಸ್‌. ಲೋಕೇಶಕುಮಾರ ಕಳವಳ ವ್ಯಕ್ತಪಡಿಸಿದರು.
Vijaya Karnataka Web BLG-0203-2-52-2 POLICE


ಇಲ್ಲಿನ ಶಿವಬಸವ ನಗರದ ಎಸ್‌.ಜಿ. ಬಾಳೆಕುಂದ್ರಿ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಶನಿವಾರ ಪೊಲೀಸ್‌ ಕಮಿಷನರೇಟ್‌ ವ್ಯಾಪ್ತಿಯ ಸಂಚಾರ ಪೊಲೀಸ್‌ ವಿಭಾಗದಿಂದ ಆಯೋಜಿಸಿದ್ದ ಸಂಚಾರ ನಿಯಮಗಳ ಅರಿವು, ಬಹುಮಾನ ವಿತರಣೆ ಮತ್ತು ಅಭಿನಂದನಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ದೇಶದ ಒಟ್ಟು ಅಪಘಾತ ಪ್ರಕರಣಗಳಲ್ಲಿ 25 ರಿಂದ 35 ವಯೋಮಾನದವರ ಸಂಖ್ಯೆ ಶೇ.38.08ರಷ್ಟಿದೆ. ಈ ಎಲ್ಲ ಅಂಕಿಸಂಖ್ಯೆಗಳು ವಾಹನ ಸವಾರರ ಅಜಾಗರೂಕತೆಯನ್ನು ಎತ್ತಿ ತೋರಿಸುತ್ತಿವೆ ಎಂದರು.

ವಿದೇಶಗಳಿಗೆ ಹೋದಾಗ ಚಾಚೂ ತಪ್ಪದೆ ಕಾನೂನು ಪಾಲಿಸುವವರು ಮರಳಿ ಸ್ವದೇಶಕ್ಕೆ ಬಂದಾಗ ಸಂಚಾರ ಪೊಲೀಸರೊಂದಿಗೆ ವಾಗ್ವಾದಕ್ಕಿಳಿಯುವುದು ಕಾಣುತ್ತೇವೆ. ದೇಶದಲ್ಲಿ ಕಾನೂನು ಎಲ್ಲರ ಒಳಿತಿಗಾಗಿ ಮಾಡಲ್ಪಟ್ಟಿರುವುದರಿಂದ ಪ್ರತಿಯೊಬ್ಬರೂ ಕಾನೂನಿಗೆ ಗೌರವ ನೀಡಬೇಕು. ವಿಶೇಷವಾಗಿ ಪಾಲಕರು ಮಕ್ಕಳ ಕೈಗೆ ವಾಹನ ನೀಡುವಾಗ ಜೀವದ ಮಹತ್ವವನ್ನೂ ತಿಳಿಸಿಕೊಡಬೇಕು. ಲೈಸೆನ್ಸ್‌ ಹೊಂದಿರದ ವಿದ್ಯಾರ್ಥಿಗಳಿಂದ ಅಪಘಾತ ಸಂಭವಿಸಿದರೆ ಅದಕ್ಕೆ ಪಾಲಕರೇ ನೇರ ಹೊಣೆಗಾರರಾಗುತ್ತಾರೆ ಎಂದು ಅವರು ಎಚ್ಚರಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಎಸ್‌.ಜಿ. ಬಾಳೆಕುಂದ್ರಿ ತಾಂತ್ರಿಕ ಮಹಾದ್ಯಾಲಯದ ಪ್ರಾಚಾರ್ಯ ಡಾ.ಸಿದ್ಧರಾಮಪ್ಪ ಇಟ್ಟಿ ಮಾತನಾಡಿ, ಬೆಳೆಯುತ್ತಿರುವ ನಗರ ವ್ಯವಸ್ಥೆಯಲ್ಲೂ ಒಂದಿಷ್ಟು ನೆಮ್ಮದಿಯ ಜೀವನ ಕಂಡುಕೊಂಡಿದ್ದರೆ ಅದರಲ್ಲಿ ಯೋಧರು ಮತ್ತು ಪೊಲೀಸರ ಪಾತ್ರ ಹಿರಿದಾಗಿದೆ. ಯುವಕರು ಕಾನೂನು ಪಾಲನೆಗೆ ಮಹತ್ವ ನೀಡಬೇಕು ಎಂದರು.

ಡಿಸಿಪಿ ಎಂ.ಬಿ. ನಂದಗಾವಿ, ಎಸಿಪಿಗಳಾದ ನಾರಾಯಣ ಭರಮನಿ, ಆರ್‌.ಆರ್‌. ಕಲ್ಯಾಣಶೆಟ್ಟಿ, ಸಮಿತಿ ಕಾಲೇಜಿನ ಪ್ರಾಚಾರ್ಯ ನಿಖಿಲ ರಂಗಶೆಟ್ಟಿ ಉಪಸ್ಥಿತರಿದ್ದರು. ಪೊಲೀಸ್‌ ನೀರಿಕ್ಷಕ ಆರ್‌.ಆರ್‌. ಪಾಟೀಲ ಸ್ವಾಗತಿಸಿದರು. ಡಾ.ವೀರಣ್ಣ ಡಿ.ಕೆ. ಮತ್ತು ಪ್ರೊ.ಪ್ರಸಾದ ಕಲ್ಲೋಳಿಮಠ ಕಾರ್ಯಕ್ರಮ ಆಯೋಜಿಸಿದ್ದರು. ಅಖಿಲ ಲಿಂಗೇರಿ ನಿರೂಪಿಸಿದರು. ಸೌಮ್ಯ ಸೊಂಡೂರ ಪ್ರಾರ್ಥಿಸಿದರು.

ಕಿರುಚಿತ್ರ ಪ್ರದರ್ಶನ :
ಇದೇ ಸಂದರ್ಭದಲ್ಲಿ ರಸ್ತೆ ಸುರಕ್ಷತಾ ವಿಷಯದ ಕಿರುಚಿತ್ರ ಪ್ರದರ್ಶನ ಮಾಡಿ, ಹೆಲ್ಮೆಟ್‌ ಮಹತ್ವ ಮತ್ತು ಸಂಚಾರ ನಿಯಮಗಳ ಕುರಿತು ಮಾಹಿತಿ ನೀಡಲಾಯಿತು. ಅಪಘಾತ ಸಂದರ್ಭದಲ್ಲಿ 108 ಸಹಾಯವಾಣಿಗೆ ಕರೆ ಮಾಡಿ ಸಮಾಜಿಕ ಜವಾಬ್ದಾರಿ ಪ್ರದರ್ಶಿಸಬೇಕು ಎಂದು ತಿಳಿ ಹೇಳಲಾಯಿತು. ರಸ್ತೆ ಸುರಕ್ಷತಾ ಸಪ್ತಾಹ ಅಂಗವಾಗಿ ನಡೆದ ವಿವಿಧ ಸ್ಪರ್ಧೆಗಳಲ್ಲಿ ವಿಜೇತ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ